ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭಕ್ತಿಪಂಥವು ಉದಯವಾಗಿ ಭಾರತದಲ್ಲೆಲ್ಲಾ ತುಂಬಿಕೊಂಡಾಗ ಶ್ರೀಸಾಮಾನ್ಯರಲ್ಲಿ ಭಜನಾಪದ್ಧತಿಯು ಬಹು ಜನಪ್ರಿಯವಾಯಿತು. ಇಡೀ ಭಾರತದಲ್ಲಿ ಅಪವಾದವಿಲ್ಲದೇ ಹಳ್ಳಿಹಳ್ಳಿಯಲ್ಲೂ ಒಂದು ಭಜನಾ ಮಂದಿರವಿರುತ್ತದೆ ಅಥವಾ ಭಜನಾ ಮಂಡಳಿಯು ಅಲ್ಲಿಯ ಮುಖ್ಯ ದೇವಸ್ಥಾನಕ್ಕೆ ಲಗತ್ತಾಗಿರುತ್ತದೆ.
ಭಜನಾ ಪದ್ಧತಿಯು ಲಘು ಭಕ್ತಿ ಸಂಗೀತ ಅಥವಾ ಧಾರ್ಮಿಕ ಸಂಗೀತಗಳಿಗೆ ಪರ್ಯಾಯವೆನಿಸಿತು. ಬೇರೆ ಬೇರೆ ಪ್ರಾಂತ್ಯಗಳಲ್ಲಿ ಇದು ಪದ, ಕೀರ್ತನ್, ಚರ್ಯಾಗೀತಿ ಎಂಬ ಹೆಸರುಗಳಲ್ಲಿ ರೂಢಿಸಿತು. ಇವುಗಳಲ್ಲಿ ಪರಸ್ಪರ ರಚನಾ ವಿನ್ಯಾಸ ಸಂಬಂಧಗಳೂ ಇಲ್ಲದಿಲ್ಲ, ಭಜನ ಗೋಷ್ಠಿಗಳ ಉದ್ದೇಶವು ಭಗವದ್ಭಕ್ತಿಯನ್ನೂ ಪಾರವಶ್ಯತೆಯನ್ನೂ ಪಾಲುಗೊಳ್ಳುವುದರಿಂದ ಉಂಟಾಗುವ ಆನಂದವನ್ನೂ ಸಾಮೂಹಿಕವಾಗಿ ಪ್ರಚೋದಿಸುವುದೇ ಆಗಿದೆ. ಇದನ್ನು ಪೂರೈಸಲೆಂದೇ ಅದು ಕೆಲ ಉಪಾಯಗಳನ್ನು ನಿರ್ಮಿಸಿಕೊಂಡಿದೆ.
ನಾಯಕ (=ಭಾಗವತ) ನು ಪುನಃ ಪುನಃ ಪುಂಡರೀಕವನ್ನು (ಉದಾ : ಪುಂಡರೀಕವರದ ಗೋವಿಂದ, ಪಾರ್ವತೀಕಾಂತ ಸ್ಮರಣೆ, ರಮಾರಮಣ ಗೋವಿಂದ, ಇತ್ಯಾದಿ) ಘೋಷಿಸುತ್ತಾನೆ. ಇದಕ್ಕೆ ಜವಾಬು ಸಾಮೂಹಿಕವಾಗಿರುತ್ತದೆ. (ಗೋವಿಂದ, ಹರಹರ ಮಹಾದೇವ ಇತ್ಯಾದಿ) ಎಲ್ಲ ಗಾಯನವೂ ಉಚ್ಛಧ್ವನಿಯಲ್ಲಿರುತ್ತದೆ. ಗಾಯನವು ಎರಡು ಭಾಗಗಳಲ್ಲಿರುತ್ತದೆ.
ಭಾಗವತನು ಹಾಡಿದ ಪಂಕ್ತಿಯ ಧಾತುಮಾತುಗಳನ್ನು ಗೋಷ್ಠಿಯು ಯಥಾವತ್ತಾಗಿ ಪುನರುಚ್ಚರಿಸುತ್ತದೆ ಅಥವಾ ಬೇರೊಂದು ನಿಯತವಾದ ಪಂಕ್ತಿಯನ್ನು ನಿಯತವಾದ ಒಂದೇ ಧಾತುಮಾತುಗಳಲ್ಲಿ ಪುನರುಚ್ಛರಿಸುತ್ತದೆ. ಗಾನವನ್ನು ಸಾಮಾನ್ಯವಾಗಿ ಸುಲಭಶೈಲಿಯ ಮಾತುಗಳಲ್ಲಿ, ಹೆಚ್ಚಾಗಿ ನಾಮಾವಳಿಯಲ್ಲಿ, ಜಾನಪದ ಛಂದಸ್ಸು ಮತ್ತು ಮಟ್ಟುಗಳಲ್ಲಿ ಕನಿಷ್ಠ ಗಮಕವಿರುವ ಧಾತು ಪಂಕ್ತಿಗಳಲ್ಲಿ ಜನಸಾಮಾನ್ಯರಿಗೆ ಸುಪರಿಚಿತವಾದ, ಅನುಕರಿಸಲು ಸುಲಭವಾದ, ರಾಗಭಾವಗಳಲ್ಲಿ ರಚಿಸ ಲಾಗುತ್ತದೆ. ಹಾಡುಗಳನ್ನು ಆಯಾ ಭಾಷೆಗಳ ಮಹಾಭಕ್ತರ ಮತ್ತು ಸಂತರ ರಚನೆಗಳಿಂದ ಆಯ್ಕೆ ಮಾಡಲಾಗುತ್ತದೆ. ಅವರು ಹಲವು ವೇಳೆ ಭಕ್ತಿಪಂಥದ ಪ್ರವರ್ತಕರೋ ಸ್ಥಾಪಕರೋ ಆಗಿರುವುದೂ ಉಂಟು. ಗಾಯನದ ಜೊತೆಗೆ ಸರಳವಾದ ಹಸ್ತವಾದ ಚಲನೆಗಳನ್ನುಳ್ಳ ನರ್ತನದಲ್ಲಿಯೂ ಭಾಗವತನೂ ಗೋಷ್ಠಿಯೂ ತೊಡಗುತ್ತಾರೆ. ಮನಸ್ಸು, ದೇಹ, ಕಂಠಗಳು ಮೂರು ಒಂದೇ ಎಡೆಯಲ್ಲಿ ಕೇಂದ್ರೀಕೃತ ವಾಗುವ ಕ್ರಿಯೆಗಳಲ್ಲಿ ತೊಡಗುವುದರಿಂದ ಪಾರವಶ್ಯತೆಯು ಸುಲಭವಾಗುತ್ತದೆ.
ಭಜನೆ ಗೋಷ್ಠಿಗಳಲ್ಲಿ ವೃತ್ತಿವಂತರು ಅಲ್ಲದವರು ಎಂಬ ವಿಭಾಗವುಂಟು. ಜೋಗಿಗಳು, ಭೈರಾಗಿಗಳು, ಗೋಸಾಯಿಗಳು, ಗುಂಪುಗಳಲ್ಲಿ ಅಥವಾ ಏಕಾಂಗಿಯಾಗಿ ವಿಶೇಷವಾದ ಭಜನಗೀತೆಗಳನ್ನು ಹಾಡುತ್ತ ಊರಿಂದೂರಿಗೆ ಸಂಚರಿಸುತ್ತ ಭಿಕ್ಷಾಟನಚರ್ಯದಲ್ಲಿರುತ್ತಾರೆ. ಇಂತಹವರು ಸಾಮಾನ್ಯವಾಗಿ ಯಾವುದಾದರೊಬ್ಬ ಸಂತನ ರಚನೆಗಳನ್ನು ಮಾತ್ರ ಹಾಡುತ್ತಾರೆ. ಇಂತಹವರು ತತ್ತ್ವಪದಗಳನ್ನು ಮತ್ತು ಅನುಭಾವಗೀತೆಗಳನ್ನು ಹೆಚ್ಚಾಗಿಯೂ ನೀತಿ, ಸಮಾಜಪ್ರಜ್ಞೆ, ಅಪೇಕ್ಷಣೀಯವಾದ ಗುಣಗಳ ಸಂವರ್ಧನ ಮುಂತಾದವನ್ನು ಕುರಿತು ಒಮ್ಮೊಮ್ಮೆಯೂ ಹಾಡುತ್ತಾರೆ. ಇತ್ತೀಚೆಗೆ ನಗರಗಳಲ್ಲಿ ವೃತ್ತಿವಂತ ಸಂಗೀತಗಾರರು ಸಿನಿಮಾಗಳಲ್ಲಿರುವ ಭಕ್ತಿಗೀತಗಳನ್ನು ಭಜನೆಗಳ ರೂಪದಲ್ಲಿ ಹಾಡಿ, ಗೋಷ್ಠಿಗಳ ನಾಯಕತ್ವವನ್ನು ವಹಿಸಿ ಜನಪ್ರಿಯರಾಗುತ್ತಾರೆ.
ಭಜನಗೋಷ್ಠಿಗಳಲ್ಲಿ ನಿರ್ಗುಣೋಪಾಸನೆ ಹಾಗೂ ಸಗುಣೋಪಾಸನೆಯ ಎರಡು ಪಂಥಗಳಿವೆ. ನಿರ್ಗುಣೋಪಾಸನೆಯಲ್ಲಿ ಮುಖ್ಯವಾಗಿ ಬೋಧೆ, ತತ್ತ್ವ, ಪ್ರಮೇಯ, ಚರ್ಯಾ ಇವುಗಳ ಹಾಡುಗಳಿದ್ದು ಇವು ಅನೇಕವೇಳೆ ಅನುಭಾವಾತ್ಮಕವಾಗಿಯೋ ಸಂಕೇತಮಯವಾಗಿಯೋ ಇರುತ್ತದೆ. ಇವುಗಳಲ್ಲಿ ಕಬೀರ್ ಮತ್ತು ನಾನಕರ ಭಜನಾ ಪದ್ಧತಿಗಳು ಮುಖ್ಯವೆಂದು ಹೆಸರಿಸಬಹುದು. ಭಕ್ತಿಯ ಉದ್ವೇಗವಿಲ್ಲದಿದ್ದರೂ ನಿರುಪಾಧಿಕ ಸಂವಿತ್ತಿನ ಅನ್ವೇಷಣೆಯ ಸಾಹಸವಿದೆ. ಈ ಪದ್ಧತಿಯಲ್ಲಿ ಸಗುಣಭಕ್ತಿಯ ಭಜನಪದ್ಧತಿಯೇ ಹೆಚ್ಚು ಜನಪ್ರಿಯವಾಗಿದೆ.
ಹಿಂದಿಯಲ್ಲಿ ಅಷ್ಟಛಾಪಕವಿಗಳು ಮೀರಾಬಾಯಿ, ತುಲಸೀದಾಸ್, ಸೂರದಾಸ್; ಮರಾಠಿಯಲ್ಲಿ ಜ್ಞಾನದೇವ, ನಾಮದೇವ ಮೊದಲಾದ ಅಭಂಗಕಾರರು, ಗುಜರಾತಿನಲ್ಲಿ ನರಸೀ ಮೆಹತಾ; ತೆಲುಗಿನಲ್ಲಿ ವೇಮನ, ರಾಮದಾಸ, ತ್ಯಾಗರಾಜ ತಮಿಳಿನಲ್ಲಿ ನಾಯನ್ಮಾರರು, ಆಳ್ವಾರರು; ಕನ್ನಡದಲ್ಲಿ ಶಿವಶರಣರು, ಹರಿದಾಸರು; ಬೆಂಗಾಲಿಯಲ್ಲಿ ಚಂಡೀದಾಸ, ವಿದ್ಯಾಪತಿ, ಚೈತನ್ಯ ಮುಂತಾದ ಕೀರ್ತನಕಾರರು, ಸಗುಣಭಕ್ತಿಯ ನೇತಾರರೂ ಆಗಿ ಅದನ್ನು ನಾಡಿನ ಉದ್ದ ಅಗಲಗಳಲ್ಲಿ ಹರಡಿದರು. ಇದರಲ್ಲಿ ಭಕ್ತಿಯ ಎಲ್ಲಾ ಪ್ರಕಾರಗಳಿಗೂ ಸ್ಥಾನವಿದ್ದರೂ ಮಧುರಭಾವಕ್ಕೆ, ಎಂದರೆ ನಾಯಕ-ನಾಯಿಕಾಭಾವಕ್ಕೆ ಪ್ರಾಧಾನ್ಯವಿದೆ.
ಹೀಗೆ ನಾಯಿಕೆಯಂತೆ ವೇಷಭೂಷಣಭಾವಗಳನ್ನು ತಳೆದು ಪರಮಾತ್ಮನನ್ನು ವಿರಹಭಾವದಲ್ಲಿ ಅನುಭವಿಸುವ ಸಂತರೂ ಭಾರತದಲ್ಲಿ (ಉದಾ: ನಾಯಕೀಸ್ವಾಮಿ) ಇಲ್ಲದಿಲ್ಲ, ಇದಕ್ಕೆ ಪ್ರತಿಯಾಗಿ ತಾನೇ ಕೃಷ್ಣನೆಂಬ ಭಾವದಲ್ಲಿ ಚೈತನ್ಯಗೌರಾಂಗನು ಬಂಗಾಲದಲ್ಲಿ ಭಕ್ತಿಪಂಥವನ್ನು ಎತ್ತಿಹಿಡಿದು ನಡೆಸಿದುದನ್ನು ಸ್ಮರಿಸಬಹುದು. ಬಂಗಾಲದ ಕೀರ್ತನ, ನಾಮಕೀರ್ತನ, ಭಜನಪದ್ಧತಿಗಳು ಇವುಗಳಿಂದ ಅಲ್ಲಿನ ಮುಖ್ಯ ಭಕ್ತಿಚಳವಳಿಯು ರೂಪುಗೊಂಡಿತು. ಇಂದಿನ ಹರೇಕೃಷ್ಣ ಚಳವಳಿಗೆ ನಾಂದಿಯಾಯಿತು, ಎನ್ನಬಹುದು.
ದಕ್ಷಿಣ ಭಾರತದ ಎಲ್ಲಾ ಪ್ರಾಂತ್ಯಗಳಲ್ಲೂ ಭಜನ ಪದ್ಧತಿಯು ವ್ಯಾಪಕವಾಗಿ ರೂಢಿಸಿ ಭಜನೆಯೆಂದರೆ ಭಗವಂತನನ್ನು ಯಾವ ಭೇದಭಾವವೂ ಇಲ್ಲದೆ ಎಲ್ಲರೂ ಒಟ್ಟುಗೂಡಿ ಭಕ್ತಿಯಿಂದ ಸಂಗೀತ ಮಾಧ್ಯಮದಲ್ಲಿ ಆರಾಧಿಸುವ ಸುಲಭ ವಿಧಾನ. ಇದರಲ್ಲಿ ದೇವರ ನಾನಾರೂಪಗಳ ನಾಮಾವಳಿ, ನಾಮ ಸಂಕೀರ್ತನ, ಭಕ್ತಿಯನ್ನು ಭೋದಿಸುವ ಹಾಡುಗಳ ಮೂಲಕ ಸ್ತ್ರೋತ್ರ, ಇವೆಲ್ಲ ಸೇರಿರುತ್ತವೆ. ಇದರಲ್ಲಿ ಭಾಗವಹಿಸುವವರು ನಾಯಕನಾಗಿ ಎಂದರೆ ಭಾಗವತನಾಗಿ, ಗಾಯಕರಾಗಿ, ವಾದಕರಾಗಿ, ಶ್ರೋತೃಗಳಾಗಿ ಇರಬಹುದು. ಇದರಲ್ಲಿ ವಯಸ್ಸು, ಲಿಂಗ, ಜಾತಿಗಳ ಭೇದವಿಲ್ಲ ; ಮಕ್ಕಳು ಮುದುಕರು, ಗಂಡಸರು-ಹೆಂಗಸರು, ಬಡವರು-ಬಲ್ಲಿದರು, ಪಂಡಿತರು-ಪಾಮರರು ಎಲ್ಲರೂ ಭಾಗವಹಿಸಬಹುದು. ಉಪದೇಶ, ದೀಕ್ಷೆ ಮುಂತಾದವುಗಳ ಅವಶ್ಯಕತೆಯು ಇಲ್ಲಿಲ್ಲ. ಒಂದು ಭಜನಮಂಡಲಿಯಲ್ಲಿ ಭಾಗವತನೆಂಬ ನಾಯಕನಿರುತ್ತಾನೆ. ಗಾಯಕರಿರುತ್ತಾರೆ. ವಾದ್ಯಗಳನ್ನು ನುಡಿಸುವವರಿರುತ್ತಾರೆ, ಸುಮ್ಮನೆ ಕೇಳುವವರೂ ಇರುತ್ತಾರೆ. ಗಾಯಕರು ಭಾಗವತನು ಹಾಡಿದ್ದನ್ನು ನಂತರ ಪುನರುಚ್ಛರಿಸಬಹುದು. ಜೊತೆಯಲ್ಲಿಯೇ ಹಾಡಬಹುದು. ಪ್ರತ್ಯೇಕವಾಗಿ ಬೇರೆಯೇ ಹಾಡಬಹುದು. ವಾದಕರಲ್ಲಿ ಈ ಆಧಾರ ಶ್ರುತಿಯನ್ನು ಹಿಡಿಯಲೆಂದು ತಂಬೂರಿಯನ್ನೋ ಹಾರ್ಮೋನಿಯಂ ವಾದ್ಯವನ್ನೋ ನುಡಿಸುವವರು, ಪಿಟೀಲು, ಕೊಳಲು ಅಥವಾ ಹಾರ್ಮೋನಿಯಂ ವಾದ್ಯವನ್ನೋ ನುಡಿಸುವವರು, ಪಿಟೀಲು, ಕೊಳಲು ಅಥವಾ ಹಾರ್ಮೋನಿಯಂ ಪಕ್ಕವಾದ್ಯವನ್ನು ನುಡಿಸುವವರು, ತಬಲ, ಮೃದಂಗ, ಮದ್ದಳೆ, ಕಂಜರಿ, ಜಾಲರಾ, ಚಿಟಿಕಿ(ಚಿಪ್ಲಾ) ತ್ರಿಕೋಣ, ಕೈತಾಳ ಇವುಗಳಲ್ಲಿ ಕೆಲವನ್ನು ಅಥವಾ ಎಲ್ಲವನ್ನೂ ನುಡಿಸುವವರು ಇರುತ್ತಾರೆ. ಶ್ರುತಿಗಾಗಿ ಶ್ರುತಿಪೆಟ್ಟಿಗೆಯನ್ನು ಬಳಸುವುದೂ ಉಂಟು. ಒಂದು ಗೋಷ್ಠಿಯಲ್ಲಿ ಹಲವರು ಜಾಲರಾಗಳನ್ನೂ ಕೈತಾಳಗಳನ್ನೂ ಚಿಟಿಕೆಗಳನ್ನೂ ಉಪಯೋಗಿಸುವುದುಂಟು. ಇದರಿಂದ ಗೋಷ್ಠಿಯ ವಾತಾವರಣವು ಉದ್ದೀಪನಗೊಳ್ಳುತ್ತದೆ. ತನ್ಮಯತೆಯು ಹೆಚ್ಚಾಗುತ್ತದೆ. ಏಕೆಂದರೆ ಪಾಲುಗೊಳ್ಳುವಿಕೆಯ ಆತ್ಮೀಯತೆಯು ಇದರಿಂದ ಲಭಿಸುತ್ತದೆ. ಪಂಡರಾಪುರದ ಜಾಲರಾಗಳು ತಮ್ಮ ಸುನಾದಕ್ಕಾಗಿ ಪ್ರಸಿದ್ಧವಾಗಿವೆ. ಒಂದು ದೃಷ್ಟಿಯಿಂದ ಗ್ರಾಮೀಣ ಜನರಿಗೆ ಸಂಗೀತದ ಪ್ರಥಮ ಪರಿಚಯವು ಭಜನೆಗೋಷ್ಠಿಗಳಿಂದಲೇ ಎಂದರೂ ತಪ್ಪಿಲ್ಲ.
ಭಜನಗೋಷ್ಠಿಗಳು ಸಾಮಾನ್ಯವಾಗಿ ಯಾವುದಾದರೊಂದು ದೇವಸ್ಥಾನದಲ್ಲಿ ಸೇರುತ್ತವೆ ಅಥವಾ ಭಜನಮಂಡಲಿಗೆ ಸೇರಿದ ಅಥವಾ ಸೇರದಿರುವ ಒಬ್ಬ ಭಕ್ತರ ಮನೆಯಲ್ಲಿ ಕಲೆಯಬಹುದು; ಭಾಗವತರ ಮನೆಯಲ್ಲೂ ಗೋಷ್ಠಿಯು ನಡೆಯಬಹುದು. ಶುಕ್ರವಾರ, ಶನಿವಾರ, ಅಮಾವಾಸ್ಯೆ, ಹುಣ್ಣಿಮೆ, ಏಕಾದಶೀ ತಿಥಿಗಳು, ಕೃತ್ತಿಕಾ, ರೋಹಿಣೀ, ಪುನರ್ವಸೂ ನಕ್ಷತ್ರಗಳಿರುವ ತಿಥಿಗಳು ಇದಕ್ಕೆ ಪ್ರಶಸ್ತ, ಭಜನೆಗಳನ್ನು ಮಠಗಳಲ್ಲಿ ಅಥವಾ ಮಂದಿರಗಳಲ್ಲಿ, ಗರಡಿಗಳಲ್ಲಿ, ಊರಿನ ಚಾವಡಿಗಳಲ್ಲಿ ಸಹ ನಡೆಸಬಹುದು. ಎಷ್ಟೋ ಊರುಗಳಲ್ಲಿ ಜನರು ಪ್ರತ್ಯೇಕವಾದ ಭಜನ ಮಂದಿರವನ್ನೇ ಕಟ್ಟಿಸಿರುವುದೂ ಉಂಟು.
ಭಜನಗೋಷ್ಠಿಯು ಭಕ್ತಿಯ ಸಂಪ್ರದಾಯನಿಷ್ಠರೂ ಆಗಿರುವ ಸಂಗೀತ ವಿದ್ವಾಂಸರ ಮನೆಗಳಲ್ಲಿಯೂ ನಡೆಯುತ್ತದೆ. ಆದರೆ ಇಲ್ಲಿ ನಡೆಯುವುದು ಅತಿಥಿ-ಅಭ್ಯಾಗತ ಸಂಗೀತ ವಿದ್ವಾಂಸರ ಸಂಗೀತ ಕಛೇರಿ, ಪಕ್ಕವಾದ್ಯ ವಿದ್ವಾಂಸರೂ ಅತಿಥಿ, ಅಭ್ಯಾಗತರೇ ಆಗಿರುತ್ತಾರೆ. ಹೀಗೆ ‘ಭಜನೆಯಲ್ಲಿ ಪಾಲುಗೊಳ್ಳುವುದು ಸೌಜನ್ಯ, ಪುಣ್ಯಕರ ಎಂದು ವಿದ್ವಾಂಸರು ಭಾವಿಸುತ್ತಾರೆ. ಅಂತಹ ವಿದ್ವಾಂಸರು ಯಾರು ಬಾರದಿರುವಾಗ, ಅಥವಾ ಬಂದು ಹಾಡಿ ನುಡಿಸಿದಾಗ, ಮಂಗಳರೂಪದಲ್ಲಿ, ಅತಿಥೇಯ ವಿದ್ವಾಂಸನೇ ಹಾಡುತ್ತಾನೆ ಅಥವಾ ನುಡಿಸುತ್ತಾನೆ. ಇಂತಹ ಸಂಗೀತ ‘ಭಜನೆಗಳು ಸಾಮಾನ್ಯವಾಗಿ ಗುರುವಾರ, ಶುಕ್ರವಾರ, ಅಥವಾ ಶನಿವಾರಗಳ ಸಂಜೆ ನಡೆಯುತ್ತವೆ.
Get in Touch With Us info@kalpa.news Whatsapp: 9481252093
Discussion about this post