ಕಲ್ಪ ಮೀಡಿಯಾ ಹೌಸ್ | ಶ್ರೀಶಾವಾಸವಿ ತುಳುನಾಡ್ |
ಭಾರತ ದೇಶ ಕಲೆ, ಸಂಸ್ಕೃತಿಗಳ ಸಾಗರ. ರಾಗ ಲಯ ತಾಳಗಳ ಲಾಲಿತ್ಯ ಮೇಳೈಸಿದ ಸಂಗೀತದ ತವರೂರು. ಇಲ್ಲಿ ಹಾಡು ಎಂದರೆ ಸ್ವರ ಲಯ ತಾಳಗಳ ಮೇಳವೇ ಅಲ್ಲ. ಹಾಡು ಎಂದರೆ ಜಗವೂ ಅಹುದು, ನಗುವೂ ಅಹುದು. ನಿಶೆಯೂ ಹೌದು, ನಶೆಯೂ ಹೌದು, ನಾದ ವಿನೋದದ ನೊರೆ, ದೈವ ನಿನಾದದ ಸೂರೆಯೂ ಹೌದು. ಬೀಸೋ ಗಾಳಿ, ಹರಿಯೋ ನೀರು, ಹಕ್ಕಿಗಳ ಇಂಚರ, ಮೃಗಗಳ ಅಟ್ಟಹಾಸ, ಮಗುವಿನ ಅಳು, ಮನುಜನ ನಗು, ಉಸಿರೆಳೆತ, ಹೃದಯದ ಬಡಿತ, ನಡೆಯೋ ಹೆಜ್ಜೆ, ಗೆಜ್ಜೆಗಳ ಸಮ್ಮಿಳಿತದಲ್ಲಿ ಎಲ್ಲಿ ನೋಡಿದರೂ, ಎಲ್ಲಿ ಕೇಳಿದರೂ ಕಿವಿಗೆ ಇಂಪು ನೀಡಿ, ಮನಸಿಗೆ ತಂಪು ನೀಡಿ, ಮೈಮನ ನಿಮಿರಿಸುವುದು ಸರಿಗಮಪದನಿ ಅನ್ನುವ ಸಪ್ತಸ್ವರ. ಈ ಏಳು ಸ್ವರಗಳ ಲಾಲಿತ್ಯದಲ್ಲಿ ಲೋಕವನ್ನು ಆನಂದದ ಕಡಲಲ್ಲಿ ತೇಲಿಸುವ ಶಕ್ತಿಯಿದೆ. ಆ ಸಪ್ತ ಸ್ವರಗಳನ್ನು ಜೋಡಿಸಿ ಗಾಯನದ ಸವಿಯುಣಿಸುವ ಒಬ್ಬ ಪ್ರತಿಭಾನ್ವಿತನನ್ನು ಪರಿಚಯಿಸುವ ಪುಟ್ಟ ಪ್ರಯತ್ನ ನನ್ನದು.
1972ನೇ ಜುಲೈ 19ರಂದು ಅಂದಿನ ಪುತ್ತೂರು (ಇಂದಿನ ಕಡಬ) ತಾಲೂಕಿನ, ಕುಕ್ಕೆ ಸುಬ್ರಹ್ಮಣ್ಯಕ್ಕೆ ಒತ್ತಿಕೊಂಡಂತಿರುವ ಪುಟ್ಟ ಹಳ್ಳಿ ಶ್ರೀ ಗೋಪಾಲಕೃಷ್ಣ ದೇವರ ನೆಲವೀಡಾದ ಬಿಳಿನೆಲೆಯಲ್ಲಿ ಶಿಕ್ಷಕ, ಸಂಘಟಕ, ಧಾರ್ಮಿಕ ಮುಖಂಡ, ಸಾಹಿತಿಯಾಗಿ ಹೆಸರು ಮಾಡಿದ ಗೋರಾಕೆ ಕಡಬ ಎಂದೇ ಪ್ರಸಿದ್ಧರಾದ ಶ್ರೀಯುತ ಗೋಪಾಲ ರಾವ್ ಕಡಬ ಮತ್ತವರ ಧರ್ಮಪತ್ನಿ ಸದ್ಧರ್ಮ ಸಂಪನ್ನೆ ಶ್ರೀಮತಿ ಶಾಂತಿ ರಾವ್‌ರವರ ಪ್ರಥಮ ಸುಪುತ್ರರಾಗಿ ಕಲೆ ಸಾಹಿತ್ಯದಲ್ಲಿ ಮೇಲ್ಗೈ ಸಾಧಿಸಿದ ಕುಂಭಟ್ ಕುಟುಂಬದ ಕುಡಿಯಾಗಿ ಮಡಿಕೇರಿಯಲ್ಲಿ ಜನಿಸಿದವರು ಶರತ್ ಕುಮಾರ್ ಬಿಳಿನೆಲೆ.
ತನ್ನ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಿಳಿನೆಲೆಯಲ್ಲಿ ಪೂರೈಸಿದ ಬಳಿಕ ಮಡಿಕೇರಿಯ ಅಜ್ಜಿ ಮನೆಯಲ್ಲಿ ಇದ್ದುಕೊಂಡು ಮರಗೋಡು ಭಾರತಿ ಹೈಸ್ಕೂಲ್ನಲ್ಲಿ ಪ್ರೌಢ ಶಿಕ್ಷಣವನ್ನು ಪೂರೈಸಿ ಎಸ್.ಎಸ್.ಎಲ್.ಸಿಯಲ್ಲಿ ಉತ್ತಮ ಅಂಕದೊಂದಿಗೆ ತೇರ್ಗಡೆಯಾಗಿ ಬಂದು ಮತ್ತೆ ಹೆತ್ತವರ ತೆಕ್ಕೆಗೆ ಬಿದ್ದ ಶರತ್ ಕುಮಾರ್ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಪಿ.ಯು.ಸಿಯನ್ನು ಮುಗಿಸಿ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಡಿಪ್ಲೋಮಾ ಇನ್ ಸಿವಿಲ್ ಇಂಜಿನಿಯರಿಂಗ್ ಶಿಕ್ಷಣವನ್ನು ಪೂರೈಸಿದರು. ಆ ಬಳಿಕ ಬೆಂಗಳೂರಿನ ಆಟೋ ಕ್ಯಾಡ್ ಸೆಂಟರ್‌ನಲ್ಲಿ ಆಟೋಕ್ಯಾಡ್ ಡಿಪ್ಲೊಮಾ ಪೂರೈಸಿ, ಬಿಳಿನೆಲೆ ಪ್ರೌಢಶಾಲೆಯಲ್ಲಿ ಪಾರ್ಟ್‌ಟೈಮ್ ಕಂಪ್ಯೂಟರ್ ಶಿಕ್ಷಕರಾಗಿ ಒಂದಷ್ಟು ಕಾಲ ವೃತ್ತಿ ಮಾಡಿ, ಆ ಬಳಿಕ ಬೆಂಗಳೂರಿನ ಇಂಟೆಲ್ ಸಾಫ್ಟ್ ಕಂಪೆನಿಯಲ್ಲಿ ಡಿಸೈನರ್ ಆಗಿ ಕೆಲಸ ಮಾಡಿದರು.
ತಮ್ಮ ಸನತ್ ಕುಮಾರ್ ರಾವ್ ಮತ್ತು ತಂಗಿ ಸೌಮ್ಯ ಸತೀಶ್‌ರವರ ಮುದ್ದಿನ ಅಣ್ಣ ಶರತ್ ಕುಮಾರ್ ಎಳವೆಯಲ್ಲೇ ಸೂಕ್ಷ್ಮಮತಿ ಹಾಗೂ ಚುರುಕಿನ ಸ್ವಭಾವದ ಹುಡುಗ. ಹಿರಿಯ ಸಾಹಿತಿಯಾದ ತಂದೆಯನ್ನು ಆದರ್ಶವಾಗಿಟ್ಟುಕೊಂಡು ಸಣ್ಣ ಸಣ್ಣ ಚುಟುಕುಗಳನ್ನು ಬರೆಯುತ್ತಿದ್ದರು. ಕಲೆ ಮತ್ತು ಸಾಹಿತ್ಯದಲ್ಲಿ ಅತೀವ ಆಸಕ್ತಿ ಇರುವ ಶರತ್ ಕುಮಾರ್ ತನ್ನ ಏಳನೇ ತರಗತಿಯಲ್ಲಿಯೇ ನಾಟಕಕ್ಕೆ ವೇದಿಕೆಯೇರಿದವರು ನಾರದ ವಿಜಯ, ಶಿವ ಸಂಸಾರೊ ಮುಂತಾದ ಹಲವಾರು ನಾಟಕಗಳಲ್ಲಿ ಪಾತ್ರ ಮಾಡುತ್ತಾ ಆ ಬಳಿಕ ಹಿಂತಿರುಗಿ ನೋಡಲೇ ಇಲ್ಲ. ಭಜನೆಯನ್ನು ಹಾಡುತ್ತಿದ್ದ ಶರತ್ ಕುಮಾರ್ ಶ್ರೀ ಶ್ರೀ ವಿದ್ಯಾಭೂಷಣರಲ್ಲಿ ಭಕ್ತಿಸಂಗೀತದ ತರಬೇತಿ ಪಡೆದು, ಸಣ್ಣಪುಟ್ಟ ಭಜನಾ ಕಮ್ಮಟಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಆ ಬಳಿಕ ಬೆಂಗಳೂರಿನ ವೆಂಕಟ ರಾಘವನ್ ಎಂಬ ಗುರುಗಳಲ್ಲಿ ಸಂಗೀತ ಶಿಕ್ಷಣ ಪಡೆದು ಶಾಸ್ತ್ರೀಯ ಸಂಗೀತ ಮತ್ತು ಎಂ. ಎಸ್ ಗಿರಿಧರ್‌ರಿಂದ ಸುಗಮ ಸಂಗೀತವನ್ನು ಕಲಿತುಕೊಳ್ಳುವ ಜೊತೆಗೆ ನಾಟಕದ ಕಲೆಯನ್ನು ಕೂಡಾ ಕರಗತ ಮಾಡಿಕೊಂಡರು.
ಮುಂದಕ್ಕೆ ಕಡಬದಿಂದ ಬೇಲೂರಿಗೆ ದ್ವಿಚಕ್ರ ವಾಹನದಲ್ಲೇ ಹೋಗಿ ಬಂದು ವನಮಾಲ ಬೇಲೂರು ಅವರಿಂದ ಗಮಕ ಶಿಕ್ಷಣದ ತರಬೇತಿಯನ್ನು ಪಡೆದು ಮೂರು ವರ್ಷಗಳ ಗಮಕ ಡಿಗ್ರಿಯನ್ನು ಪೂರೈಸಿದರು. ಅಲ್ಲಲ್ಲಿ ರಸಮಂಜರಿ ದಾಸ ಸಾಹಿತ್ಯ ಕಾರ್ಯಕ್ರಮಗಳನ್ನು ನೀಡುತ್ತಿದ್ದ ಶರತ್ ಕುಮಾರ್ ಖ್ಯಾತ ಮದ್ದಳೆವಾದಕ ಕಾಸರಗೋಡು ಬಾಬು ರೈ ಮುಂತಾದವರ ಜೊತೆ ಕಾರ್ಯಕ್ರಮಗಳನ್ನು ನೀಡಿ ಸೈ ಎನಿಸಿಕೊಂಡರು. ತನ್ನ ದೊಡ್ಡಪ್ಪನ ಮಗ ಶಶಿ ಗಿರಿವನರವರ ಕಲಾತಂಡ ಗಿರಿವನ ನವರಸ ಗಾನಸಿರಿಯ ಕಲಾವಿದರಾಗಿ ಕನಕ ಕೀರ್ತನ ಗಾಯನ, ಭಕ್ತಿ ರಸಮಂಜರಿ, ಭಕ್ತಿಗಾನವೈಭವದಂತ ಅದೆಷ್ಟೋ ಕಾರ್ಯಕ್ರಮಗಳನ್ನು ನೀಡಿ ಮತ್ತೆ ಮತ್ತೆ ಹಾಡಿಸಿಕೊಂಡು ಚಪ್ಪಾಳೆಗಿಟ್ಟಿಸಿಕೊಂಡ ಗಟ್ಟಿಗ ಈ ಶರತ್ ಬಿಳಿನೆಲೆ.
ತಂದೆಯವರ ಆದರ್ಶವನ್ನಿಟ್ಟುಕೊಂಡು ನಾಯಕತ್ವದ ಗುಣ ಮೈಗೂಡಿಸಿಕೊಂಡ ಶರತ್ ಕುಮಾರ್ ಬಿಳಿನೆಲೆ ಗ್ರಾಮ ಪಂಚಾಯತಿಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಅಲ್ಲಿ ಗೆದ್ದರಾದರೂ, ಅಧ್ಯಕ್ಷಗಿರಿಯನ್ನು ಹಿರಿಯರಿಗೆ ಬಿಟ್ಟುಕೊಟ್ಟರು. ಸರಳ ಮತ್ತು ಸಜ್ಜನಿಕೆಯ ಜೊತೆಗೆ ತಪ್ಪನ್ನು ಖಂಡಿಸುವ ನೇರನಡೆಯ ಯುವಕ ಶರತ್ ಬಿಳಿನೆಲೆ ಒಂದಷ್ಟು ಸಮಾಜದ ಅಂಕುಡೊಂಕುಗಳನ್ನು ತಿದ್ದಿಕೊಂಡು ಸಮಾಜಮುಖಿಯಾಗಿ ಸಾಗುತ್ತ ಬೇರೆಯವರಿಗೆ ಮಾದರಿಯಾದರು. ಬಿಳಿನೆಲೆ ಬೈಲಡ್ಕ ಶಾಲೆಯ ಶಿಕ್ಷಕರಾಗಿದ್ದ ತಂದೆಯವರು ತರಬೇತಿಗಾಗಿ ಮೈಸೂರು, ಮಂಗಳೂರಿಗೆ ಹೋಗಿರುವ ಸಮಯ ಶಿಕ್ಷಕರ ಕೊರತೆಯಿದ್ದ ಆ ಶಾಲೆಯಲ್ಲಿ ತಂದೆಯವರ ಪರವಾಗಿ ಶಿಕ್ಷಕರಾಗಿ ಇದ್ದುಕೊಂಡು ಮಕ್ಕಳ ಮೆಚ್ಚುಗೆ ಗಳಿಸಿದರು. ತಂಗಿ ಸೌಮ್ಯ ಸತೀಶ್ ಮತ್ತು ಶರತ್ ಬಿಳಿನೆಲೆ ಜೊತೆಯಾಗಿ ಸುಬ್ರಹ್ಮಣ್ಯದಲ್ಲೊಂದು ಕಿಂಡರ್ ಗಾರ್ಡನ್ ಆರಂಭಿಸಿದರಾದರೂ ಮೊದಲೆರಡು ವರ್ಷ ಯಶಸ್ವಿಯಾಗಿ ಸಾಗಿದರೂ, ಹಲವಾರು ಸಮಸ್ಯೆಗಳ ಕಾರಣದಿಂದ ಮೂರನೇ ವರ್ಷಕ್ಕೆ ಸ್ಥಗಿತಗೊಳಿಸುವಂತಾಯಿತು.
ಚಿಕ್ಕಂದಿನಲ್ಲಿ ಹಾಸ್ಯ ಚುಟುಕು, ವ್ಯಂಗ್ಯ ಬರಹಗಳನ್ನು ಬರೆಯುತ್ತಿದ್ದ ಶರತ್ ಅಪ್ಪನಿಂದ ಬೈಸಿಕೊಂಡು ಬರಹ ನಿಲ್ಲಿಸುವ ಮನ ಮಾಡಿದರಾದರೂ, ಆ ಬಳಿಕ ಭಕ್ತಿ ಸಾಹಿತ್ಯದತ್ತ ಮನ ಮಾಡಿದರು. ಸುಬ್ರಹ್ಮಣ್ಯದ ಭಕ್ತರು ಒಮ್ಮೆಯಾದರೂ ‘ನಮೋ ನಮೋ ಶ್ರೀ ಸುಬ್ರಹ್ಮಣ್ಯ| ಪಾಲಿಸೆಮ್ಮನು ಅಮಿತವರಣ್ಯ| ನಾಗನರೂಪದಿ ನೆಲೆಸಿದ ದೇವ| ಸುಬ್ರಹ್ಮಣ್ಯ ನಮೋ ನಮೋ..’ ಅನ್ನುವ ಬಿ.ಆರ್ ಛಾಯಾರ ಸುಮಧುರ ಧ್ವನಿಯ ಕುಕ್ಕೆ ಸುಬ್ರಹ್ಮಣ್ಯ ಅಮೃತವಾಣಿಯನ್ನು ಕೇಳದವರು ಇರಲಾರರು. ಈ ಸಾಹಿತ್ಯದ ಹಿಂದಿನ ಸಾಹಿತಿ ಇದೇ ಶರತ್ ಬಿಳಿನೆಲೆ ಅನ್ನುವುದು ಎಷ್ಟೋ ಮಂದಿಗೆ ಇನ್ನೂ ತಿಳಿದಿಲ್ಲ. ಇಷ್ಟೇ ಅಲ್ಲದೆ ಅಶ್ವಿನಿ ಆಡಿಯೋ ಕಂಪೆನಿ, ಝೇಂಕಾರ್ ಆಡಿಯೋ ಕಂಪೆನಿ, ಸಾರೇಗಾಮ ಮ್ಯೂಸಿಕ್ಸ್, ಚಿತ್ತಾರ ಮ್ಯಾಗಜಿನ್‌ರವರ ಸಿ ಮ್ಯೂಸಿಕ್, ಟಿ ಸೀರಿಸ್, ಕುಕ್ಕೆ ಶ್ರೀ ಲೈವ್ ಕ್ಯಾಸೆಟ್ಸ್‌ರವರ ಖಾಯಂ ಸಾಹಿತಿಯಾದ ಶರತ್ ಬಿಳಿನೆಲೆ ಬರೆದ ಸಾಹಿತ್ಯಗಳಲ್ಲಿ ಕುಕ್ಕೆ ಭಕ್ತಿಗೀತಾ, ನಾಗರೂಪ ಕುಕ್ಕೆ ಸುಬ್ರಹ್ಮಣ್ಯ ಪ್ರಮುಖವಾದವುಗಳು.
ಧರ್ಮಸ್ಥಳ ಅಮೃತವಾಣಿ, ಗೊರವನಹಳ್ಳಿ ಅಮೃತವಾಣಿ, ಸಂಕಷ್ಟಹರ ಅಮೃತವಾಣಿ, ಘಾಟಿ ಸುಬ್ರಹ್ಮಣ್ಯ ಅಮೃತವಾಣಿ, ಮಾಣಿಲ ಮಹಾಲಕ್ಷ್ಮೀ, ಪುತ್ತೂರು ಮಹಾಲಿಂಗೇಶ್ವರ ದೇವರ ಭಕ್ತಿಗೀತೆ ಮುಂತಾದ ಹಲವಾರು ಭಕ್ತಿಗೀತೆಗಳ ಜೊತೆಗೆ ಹನುಮಾ ಲೈವ್ ಕ್ಯಾಸೆಟ್ಸ್‌ರವರ ಪಣೋಲಿಬೈಲು ಭಕ್ತಿಗೀತೆ, ಕೊರಗಜ್ಜ ದೈವದ ಭಕ್ತಿ ಸಾಹಿತ್ಯಗಳನ್ನು ಕೂಡಾ ಬರೆದ ಶರತ್ ಬಿಳಿನೆಲೆಯವರು ಹಲವಾರು ಭಕ್ತಿಗೀತೆಗಳ ಗಾಯನ ಮಾಡುವುದರ ಜೊತೆಗೆ ಹಲವಾರು ಭಕ್ತಿಗೀತೆಗಳಿಗೆ ಸಂಗೀತ ಸಂಯೋಜನೆಯನ್ನು ಕೂಡಾ ಮಾಡಿದ್ದಾರೆ. ಸಾಹಿತ್ಯ ಕಟ್ಟುವುದೇ ಅಲ್ಲದೆ ಭಕ್ತಿಗೀತಾಂಜಲಿ, ಶ್ರೀ ರಾಘವೇಂದ್ರ ಧರೆಗಿಳಿದ, ಗುರುಮಹಿಮಾ, ಕೈಲಾಸ ಗಿರಿವಾಸ, ಶಿವ ಲೋಕಾಮೃತ, ಶ್ರೀ ರಾಮಾನುಜ ಗೀತಮಾಲಿಕ, ಅಂಬಾ ಭವಾನಿ, ಜಗತ್ಪತೀಯ, ಅನಿಕೇತನ, ದಿವ್ಯ ದರ್ಶನ, ಶ್ರೀ ಹರಿಪಾದ, ಪಡುಮಲೆಯೊಡೆಯ ಭಕ್ತಿ ಗೀತಾಮೃತ, ಬಿಳಿನೆಲೆ ಭಕ್ತಿಗೀತೆಗಳು, ದಾಸರ ಪದಗಳು ಸೇರಿದಂತೆ ನೂರಕ್ಕೂ ಮಿಕ್ಕಿ ಭಕ್ತಿಗೀತೆಗಳಿಗೆ ಸಂಗೀತ ಸಂಯೋಜಿಸಿ, ಹಾಡಿದ ಶರತ್ ಬಿಳಿನೆಲೆ ಭಕ್ತಿಸಂಗೀತ ಮತ್ತು ಭಕ್ತಿಸಾಹಿತ್ಯದಲ್ಲಿ ಮೇರುಶಿಖರದಂತೆ ಜನಮಾನಸದಲ್ಲಿ ತನ್ನ ಛಾಪನ್ನು ಮೂಡಿಸಿದ್ದಾರೆ.
ಭಕ್ತಿಸಾಹಿತ್ಯಕ್ಕಷ್ಟೇ ತನ್ನನ್ನು ಸೀಮಿತಗೊಳಿಸಿಕೊಳ್ಳದ ಶರತ್ ಬಿಳಿನೆಲೆ 90ರ ದಶಕದಲ್ಲಿ ಕನ್ನಡ ಚಲನಚಿತ್ರದ ಗೀತೆಗಳಿಗೆ ತುಳುವಿನಲ್ಲಿ ಸಾಹಿತ್ಯ ಬರೆದ ‘ಮುಗುರು ತೆಲಿಕೆದ ಪೊಣ್ಣು’, ‘ಬೆಂಗ್ಳೂರುದ ಆಂಟಿ’, ‘ತುಳುನಾಡ್ ಎಂಕ್ ಮಲ್ಲೆ’ ಮುಂತಾದ ಆಲ್ಬಮ್‌ಗಳಿಗೆ ಪುತ್ತೂರು ನರಸಿಂಹ ನಾಯಕ್, ಎಲ್.ಎನ್ ಶಾಸ್ತ್ರೀ, ಅಜಯ್ ವಾರಿಯರ್, ರಮೇಶ್ಚಂದ್ರ, ಡಾ. ಶಮಿತಾ ಮಲ್ನಾಡ್, ಸುಜಾತ ದತ್ತ್, ಚಂದ್ರಿಕಾ, ಸುರೇಖಾರಿಂದ ಹಾಗೂ ಹಾಡಿಸಿ ಅಶ್ವಿನಿ ಆಡಿಯೋ ಕಂಪೆನಿಯ ಮೂಲಕ ರೆಕಾರ್ಡ್ ಮಾಡಿಸಿದ್ದಾರೆ. ಜೊತೆಗೆ ಮಿಮಿಕ್ರಿ ಕಲಾವಿದರೂ ಆಗಿರುವ ಇವರು ಹನುಮಾ ಲೈವ್ ಕ್ಯಾಸೆಟ್ಸ್‌ರವರ ‘ಹಲೋ ಪುಟಾಣಿ’ ಗೀತೆಗಳನ್ನು ಮಿಮಿಕ್ರಿ ಶೈಲಿಯಲ್ಲಿ ಹಾಡಿರುವುದೂ ಸೇರಿದಂತೆ ಒಂದಷ್ಟು ಕನ್ನಡ ಆಲ್ಬಮ್‌ಗಳಿಗೂ ಸಾಹಿತ್ಯ ಬರೆದು, ಗಾಯನ ಮಾಡಿದ ಶರತ್ ಬಿಳಿನೆಲೆಯವರ ಹಾಸ್ಯಭರಿತ ಹಾಡುಗಳು ಅಂದು ಬಲು ಬೇಡಿಕೆಯದ್ದಾಗಿದ್ದವು.
ನಾಟಕ, ಗೀತನಾಟಕಗಳನ್ನು ರಚಿಸಿ ನಿರ್ದೇಶಿಸುತ್ತಿದ್ದ ಶರತ್ ಬಿಳಿನೆಲೆಯವರು ‘ಶಬರಿಮಲೆ ಅಯ್ಯಪ್ಪ’, ‘ಶ್ರೀ ಗೋಪಾಲಕೃಷ್ಣ ವೈಭವ’ ನೃತ್ಯರೂಪಕ ರಚಿಸಿ, ಸಂಗೀತ ಸಂಯೋಜಿಸಿ ಹಾಡಿದ್ದಾರೆ. ತಂದೆ ಗೋರಾಕೆ ಕಡಬರವರು ಬರೆದ ‘ಭಕ್ತ ಸುಧಾಮ’ ಗೀತಾನಾಟಕವನ್ನು ನಿರ್ದೇಶಿಸುವ ಜೊತೆಗೆ ಹಿನ್ನಲೆ ಗಾಯಕರಾಗಿ ಸೇವೆ ಸಲ್ಲಿಸಿದ್ದಾರೆ. ಮಕ್ಕಳಿಗಾಗಿ ಜಯಪ್ರಕಾಶ್ ಮೋಂಟಡ್ಕ ನಿರ್ದೇಶನ ಮಾಡಿದ ‘ಮುಕ್ತದ್ವಾರ’ ನಾಟಕಕ್ಕೆ ಶರತ್ ಬಿಳಿನೆಲೆಯವರು ಸಂಗೀತ ಸಂಯೋಜಿಸಿ, ಗಾಯನ ಮಾಡಿದ್ದಾರೆ. ದೂರದರ್ಶನ ಚಂದನಕ್ಕೆ ‘ಗೌತಮ ಬುದ್ಧ’ ನಾಟಕಕ್ಕೆ ಸಂಗೀತ ಸಂಯೋಜಿಸಿ, ಗಾಯನ ಮಾಡಿದ್ದಾರೆ. ಹತ್ತಕ್ಕೂ ಮಿಕ್ಕಿ ತುಳು, ಕನ್ನಡ ನಾಟಕಗಳನ್ನು ನಿರ್ದೇಶಿಸುವುದರ ಜೊತೆಗೆ ಹಲವಾರು ನಾಟಕಗಳಿಗೆ ಹಿನ್ನಲೆ ಸಂಗೀತಗಾರರಾಗಿಯೂ ಕೆಲಸ ಮಾಡಿದ ಅನುಭವವನ್ನು ನೆನಪಿನ ಬುತ್ತಿಯಲ್ಲಿ ಕಟ್ಟಿಟ್ಟುಕೊಂಡಿದ್ದಾರೆ.
ತನ್ನ 25ನೇ ವಯಸ್ಸಿನಲ್ಲಿ ಕೀನ್ಯಾ ಪ್ರಜೆಯಾಗಿದ್ದ ಬಂಟ್ವಾಳ ನಂದಾವರ ಕುಟುಂಬದ ಹುಡುಗಿ ವಿನಯ ರಾವ್‌ರನ್ನು ವಿವಾಹವಾಗಿ ಕವನ ರಾವ್ ಎಂಬ ಹೆಣ್ಣುಮಗಳ ತಂದೆಯಾದರು. ಸಾಹಿತ್ಯ, ಸಂಗೀತ, ರಂಗನಿರ್ದೇಶನದ ಜೊತೆಗೆ ಕೃಷಿಯನ್ನೂ ಮಾಡಿಕೊಂಡು ಸಕಲಕಲಾವಲ್ಲಭ ಎನಿಸಿಕೊಂಡಿದ್ದವರು ಅನಿವಾರ್ಯ ಕಾರಣಗಳಿಂದ ಬೆಂಗಳೂರಿನತ್ತ ಮುಖ ಮಾಡಿದರು. ಅಲ್ಲಿ ಹಲವಾರು ಸಂಘಟನೆಗಳಲ್ಲಿ ಸಕ್ರಿಯರಾಗಿದ್ದ ಶರತ್ ಬಿಳಿನೆಲೆ ತುಳುವೆರೆ ಚಾವಡಿ (ರಿ) ಬೆಂಗಳೂರಿನ ಸ್ಥಾಪಕ ಸದಸ್ಯರಲ್ಲೊಬ್ಬರು ಆಗಿದ್ದರು.
ಆಡು ಮುಟ್ಟದ ಸೊಪ್ಪಿಲ್ಲ ಅನ್ನುವ ಹಾಗೆ ಹವ್ಯಾಸಿ ಯಕ್ಷಗಾನ ಕಲಾವಿದರಾಗಿರುವ ಶರತ್ ಬಿಳಿನೆಲೆಯವರು ದೇವಿಮಹಾತ್ಮೆಯ ದೇವಿ, ಕಂಸವಧೆಯ ರಜಕ, ಕೃಷ್ಣ ಲೀಲೆಯ ವಿಜಯ, ಶಬರಿಮಲೆ ಕ್ಷೇತ್ರ ಮಹಾತ್ಮೆಯ ಅಬ್ಬು-ಶೇಕು ಪಾತ್ರಗಳನ್ನು ಮಾತ್ರವಲ್ಲದೆ ಹಲವಾರು ಪ್ರಸಂಗಗಳಲ್ಲಿ ಹಾಸ್ಯ ಪಾತ್ರಗಳು ಹಾಗೂ ಸ್ತ್ರೀವೇಷಗಳನ್ನು ಸಮರ್ಥವಾಗಿ ನಿರ್ವಹಿಸಿ, ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸುವುದರ ಜೊತೆಗೆ ಕಲಾರಸಿಕರ ಮೆಚ್ಚುಗೆಯನ್ನು ಹೆಗಲೇರಿಸಿಕೊಳ್ಳುತ್ತಿದ್ದರು.
ಬೆಂಗಳೂರು ಶರತ್ ಬಿಳಿನೆಲೆಯವರ ಬದುಕನ್ನು ಬದಲಿಸಲು ಕಾದಿತ್ತೋ ಎನ್ನುವಂತೆ ಸಾಹಿತ್ಯದಲ್ಲಿ ಹೆಸರುಗಳಿಸಿದ್ದ ಅವರನ್ನು ಚಂದನವನ ಕೈಬೀಸಿ ಕರೆದಂತೆ ಸಿನಿಮಾರಂಗದಲ್ಲಿ ದುಡಿಯುವ ಹೊಸ ಅವಕಾಶಗಳು ಒದಗಿ ಬಂತು. ಸಾಯಿಪ್ರಕಾಶ್ ಹಾಗೂ ಡೈಲಾಗ್ ಕಿಂಗ್ ಸಾಯಿಕುಮಾರ್ ಮಾರ್ಗದರ್ಶನದಲ್ಲಿ ಮಳೆಗಾಲ, ಶೋಧ, ನಾಂದಿ, ಕಲಾತ್ಮಕ ಚಿತ್ರವಾದ ನವಿಲೇ ಓ ನವಿಲೇ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಶರತ್ ಬಿಳಿನೆಲೆ ಮುಂದಕ್ಕೆ ಸಾಯಿಕುಮಾರ್ ಅಭಿನಯದ ‘ನೀನೇನಾ ಭಗವಂತ’, ತುಷಾರ್ ಗೌಡ ಅಭಿನಯದ ‘ಓಂ ಶರಣಮಯ್ಯಪ್ಪ’, ಶ್ರೇಯಾ ಅಭಿನಯದ ‘ಸೀತಾನದಿ’, ಬಿರಾದಾರ್ ‘ಧಾಂಗಡಿ’, ರತ್ನಮಾಲ ನಿರ್ಮಾಣ ಮತ್ತು ಅಭಿನಯದ ‘ಅವಳು ಮತ್ತು ಪ್ರಕೃತಿ’ ಎಂಬ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಕಾರ್ಕಳದ ಶಾಸಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾಜಿ ಸಚೀವರಾದ ಸುನಿಲ್ ಕುಮಾರ್ ಅಭಿನಯಿಸಿದ ಇವರ ನಿರ್ದೇಶನದ ಸೀತಾನದಿ ಸಿನೆಮಾ ಯೂಟರ್ನ್ ನಿರ್ದೇಶಕ ಪವನ್ ಕುಮಾರ್, ಗೋಧಿ ಮೈಬಣ್ಣ ಸಾಧಾರಣ ಮೈಕಟ್ಟು ನಿರ್ದೇಶಕ ಹೇಮಂತ್ ಕುಮಾರ್, ಚೌಕಾಬಾರ ನಿರ್ದೇಶಕ ರಘು ಶಿವಮೊಗ್ಗ, ರಾಮ ರಾವಣ ನಿರ್ದೇಶಕ ಸತ್ಯಪ್ರಕಾಶ್, ಈರೇಗೌಡ, ಪ್ರಕಾಶ್ ರೈ ಮತ್ತು ಯೋಗರಾಜ್ ಭಟ್‌ರೊಂದಿಗೆ ಬೆಸ್ಟ್ ಮೂವೀಸ್ ವೇದಿಕೆ ಹಂಚಿಕೊಂಡಿದೆ. ಇವರ ‘ಅವಳು ಮತ್ತು ಪ್ರಕೃತಿ’ ಚಿತ್ರ ನವಕರ್ನಾಟಕ ಚಲನಚಿತ್ರ ಅಕಾಡೆಮಿ (ರಿ)ಯ ಕರ್ನಾಟಕ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2022ರ ಬೆಸ್ಟ್ ಎನ್ವಯರ್ಮೆಂಟ್ ರಾಜ್ಯ ಪ್ರಶಸ್ತಿ ಪಡೆದುಕೊಂಡಿದೆ.
ರಂಗನಟನೆ, ಯಕ್ಷಗಾನವೇ ಅಲ್ಲದೆ ಮಳೆಗಾಲ, ನಾಂದಿ, ಶೋಧ, ಮಲೆನಾಡ ಪ್ರೇಮಕಥೆ, ಕಾನನ, ತೀರ್ಪು, ಕಡಲ್ಗಳ್ಳರು ಕನ್ನಡ ಚಿತ್ರಗಳು ಮತ್ತು ಆರವಿ ಅನ್ನುವ ತಮಿಳು ಚಲನಚಿತ್ರಗಳಲ್ಲಿ ಪೋಷಕಪಾತ್ರಗಳಲ್ಲಿ ನಟಿಸಿದ ಶರತ್ ಕುಮಾರ್ ಕನ್ಯಾದಾನ, ವಾತ್ಸಲ್ಯ, ಎಲ್ಲಾ ಮರೆತಿರುವಾಗ, ಶಿವಲೀಲಾಮೃತ, ಅಕ್ಕಪಕ್ಕ ಧಾರವಾಹಿಗಳು ಹಾಗೂ ಝೇಂಕಾರ್ ಆಡಿಯೋದ ಹಲವಾರು ಆಲ್ಬಂಗಳಲ್ಲಿ ನಟಿಸಿದ್ದಾರೆ. ಜುಗ್ಗ ಸ್ವಾಮಿ ಜುಗ್ಗ, ಫ್ರೆಂಡ್ಶಿಪ್ ದ ಟ್ರುತ್, ನಗೆಯಲೋಕ ಮುಂತಾದ ಟೆಲಿಫಿಲ್ಮ್‌ಗಳನ್ನು ನಿರ್ದೇಶಿಸುವುದರ ಜೊತೆಗೆ ಹಲವಾರು ಸಾಕ್ಷ್ಯಚಿತ್ರಗಳನ್ನೂ ನಿರ್ದೇಶಿಸಿದ್ದಾರೆ. ಶಿರಡಿ ಸಾಯಿಬಾಬಾ ಧಾರಾವಾಹಿಯನ್ನೂ ನಿರ್ದೇಶನ ಮಾಡಿದ್ದಾರೆ. ಡಿಸೈನರ್ ಮತ್ತು ಸೃಜನಾತ್ಮಕ ನಿರ್ದೇಶಕರಾದ ಇವರು ಹಾಸನದ ಅಮೋಘ ಚಾನೆಲ್‌ಗೆ ಹಲವಾರು ಹಲವಾರು ಜಾಹೀರಾತುಗಳನ್ನೂ ನಿರ್ದೇಶಿಸಿದ್ದಾರೆ.
ಬಾನಿಗೆ ಹಾರೋ ಗರುಡ ತನ್ನ ಗಮ್ಯದ ಜೊತೆಗೆ ತನ್ನ ಮೂಲವನ್ನೂ ಮರೆಯದೇ ಇರುವಂತೆ ಚಂದನವನದಲ್ಲಿ ಚಲನಚಿತ್ರ ಮತ್ತು ಧಾರಾವಾಹಿ ನಿರ್ದೇಶನವನ್ನಷ್ಟೇ ಅಲ್ಲದೆ ತನ್ನ ಇಷ್ಟದ ಸಂಗೀತ ನಿರ್ದೇಶನವನ್ನೂ ಮಾಡುತ್ತಾ ಸಾಗಿದರು. ಶಿರಡಿ ಸಾಯಿಬಾಬಾರ ಭಕ್ತರಾಗಿದ್ದ ಶರತ್ ಬಿಳಿನೆಲೆಯವರು ಸಂಗೀತ ನಿರ್ದೇಶಿಸಿದ ಮೈಲಾರ ಸ್ವಾಮಿಯವರು ಬರೆದ ‘ದ್ವಾರಕಾಮಾಯಿ ಶ್ರೀ ಶಿರಡಿ ಸಾಯಿ’ ಎನ್ನುವ ಆಲ್ಬಮನ್ನು ಭಾರತ ಮೇರು ಗಾಯಕರಾಗಿದ್ದ ಸಂಗೀತ ದಿಗ್ಗಜರಾದ ಡಾ. ಎಸ್ ಪಿ ಬಾಲಸುಬ್ರಹ್ಮಣ್ಯಂ ತೆಲುಗಿನಲ್ಲಿ ಹಾಗೂ ರಮೇಶ್ಚಂದ್ರರವರು ಕನ್ನಡದಲ್ಲಿ ಹಾಡಿದ್ದಾರೆ. ಹಿರಿತೆರೆ ಕಿರುತೆರೆ ನಟಿ ಮುನಿರತ್ನ (ರತ್ನಮಾಲ)ರವರ ಸಾಹಸಿ ಮಕ್ಕಳು ಸಿನೇಮಾಕ್ಕೆ ಸಂಗೀತ ನಿರ್ದೇಶನ ಮಾಡಿದ ಶರತ್ ಬಿಳಿನೆಲೆ ತನ್ನ ಕೆಲವು ಚಿತ್ರಗಳಿಗೆ ಚಿತ್ರಕಥೆ, ಸಾಹಿತ್ಯದ ಜೊತೆಗೆ ಸಂಗೀತ ಸಂಯೋಜನೆಯನ್ನೂ ಮಾಡಿದ್ದಾರೆ.
ಅನುಷಾ ಅನುರಾಗ ಯೂಟ್ಯೂಬ್ ಚಾನೆಲ್‌ಗೆ ಕವಿ ಬಿ.ಎನ್ ಗೋಪಾಲಕೃಷ್ಣ ರಾವ್‌ರವರ ಸಾಹಿತ್ಯಗಳ ರಮೇಶ್ಚಂದ್ರರವರು ಹಾಡಿರುವ ಸೂರ್ಯಾಸ್ತಮ, ಅಜಯ್ ವಾರಿಯರ್ ಜೀವನವು ಸಾಗುತ್ತಿದೆ, ರಾಜೇಶ್‌ಕೃಷ್ಣನ್ ಹಾಡಿರುವ ಶಿವಪೂಜೆ, ಸರಿಗಮಪ ಖ್ಯಾತಿಯ ತನುಶ್ರೀ ರಾವ್ ಮಂಗಳೂರು ಹಾಡಿರುವ ಕವಿ, ಸಂತೋಷ್ ವೆಂಕಿ ಹಾಡಿರುವ ನಲ್ಲೆಗೆ, ಅನುರಾಧ ಭಟ್ ಹಾಡಿರುವ ಕೊಳಲಕೃಷ್ಣ, ಎಂ.ಡಿ ಪಲ್ಲವಿ ಹಾಡಿರುವ ತಾಯಿ ಎಂಬ ಕನ್ನಡ ಹಾಗೂ ಸಂತೋಷ್ ವೆಂಕಿ ಹಾಡಿರುವ ಪ್ರಿಯುಡು, ಅನುರಾಧ ಭಟ್ ಹಾಡಿರುವ ಕವಿ ಮತ್ತು ವೇಣು ಕೃಷ್ಣುಡು ತೆಲುಗು ಆಲ್ಬಮ್ ನಿರ್ದೇಶಿಸಿ, ಸಂಗೀತ ಸಂಯೋಜಿಸಿದ್ದಾರೆ. ಈ ಆಲ್ಬಮ್‌ಗಳಿಗೆ ಬಿಸ-2022 (ಬೆಂಗಳೂರು ಇಂಡಿಪೆಂಡೆಂಟ್ ಸ್ಟಾರ್ ಅವಾರ್ಡ್ 2022) ಅವಾರ್ಡ್ ಬಂದಿದೆ. ನಲ್ಲೆಗೆ ಆಲ್ಬಮ್ ಬೆಸ್ಟ್ ಆಲ್ಬಮ್ ಸಾಂಗ್ ಅವಾರ್ಡ್, ಬೆಸ್ಟ್ ಫಿಮೇಲ್ ಸಿಂಗರ್ ಅವಾರ್ಡ್ ಕೊಳಲ ಕೃಷ್ಣ ಆಲ್ಬಮ್‌ಗೆ ಹಾಡಿದ ಅನುರಾಧ ಭಟ್‌ರಿಗೆ, ಬೆಸ್ಟ್ ಮೇಲ್ ಸಿಂಗರ್ ಅವಾರ್ಡ್ ಶಿವಪೂಜೆ ಹಾಡಿದ ರಾಜೇಶ್‌ಕೃಷ್ಣರಿಗೆ ದೊರಕುವುದರ ಜೊತೆಗೆ ಬೆಸ್ಟ್ ಆಲ್ಬಮ್ ಸಾಂಗ್ ಡೈರೆಕ್ಟರ್ ಅವಾರ್ಡ್ ಶರತ್ ಬಿಳಿನೆಲೆಯವರ ಮಡಿಲು ಸೇರಿದೆ.
ಶ್ರೀ ಶಕ್ತಿಪೀಠಮ್ ಬಾಯಾರು ಇಲ್ಲಿನ ಶ್ರೀ ದುರ್ಗಾಮಹಾಕಾಳಿ ಸಹಸ್ರನಾಮಾವಳಿ, ಬಲ್ಪ ತ್ರಿಶೂಲಿನಿ ದೇವಾಲಯದ ಕನ್ನಡ ಶತನಾಮಾವಳಿ, ಪಡುಮಲೆಯೊಡೆಯ ತ್ರಿಭಾಷಾ (ತುಳು-ಕನ್ನಡ-ಸಂಸ್ಕೃತ) ಶತನಾಮಾವಳಿಗಳಿಗೆ ಹಾಗೂ ಅಲ್ಲಿನ ಭಕ್ತಿ ಹಾಡುಗಳಿಗೆ ಸಂಗೀತ ನಿರ್ದೇಶನದ ಜೊತೆಗೆ ತನ್ನ ಸ್ವರಲಾಲಿತ್ಯವನ್ನೂ ನೀಡಿದ ಶರತ್ ಬಿಳಿನೆಲೆಯವರು ‘ಬಿರ್ಸೆ’ ತುಳು ಸಿನಿಮಾಕ್ಕೆ ಎರಡು ಸಾಹಿತ್ಯ ಬರೆಯುವ ಮೂಲಕ ಕೋಸ್ಟಲ್‌ವುಡ್‌ನಲ್ಲೂ ತನ್ನ ಇರುವಿಕೆಯ ಅಚ್ಚೊತ್ತಿದ್ದಾರೆ.
ಸ್ಪರ್ಧೆಗಳಿಗೆ ನಿರ್ಣಾಯಕರಾಗಿಯೂ ಹೋಗುತ್ತಿದ್ದ ಶರತ್ ಬಿಳಿನೆಲೆ ಹಲವಾರು ಶಾಲೆಗಳ ಪ್ರತಿಭಾಕಾರಂಜಿ, ಜಿಲ್ಲಾ ಯುವಜನ ಮತ್ತು ಕ್ರೀಡಾ ಇಲಾಖೆಯ ಯುವಜನ ಮೇಳಗಳು, ನಾಟಕ ಸ್ಪರ್ಧೆ, ಯಕ್ಷಗಾನ ಸ್ಪರ್ಧೆ, ಸಂಗೀತ, ಸಾಹಿತ್ಯಗಳ, ಬೇರೆ ಬೇರೆ ಯೋಜನೆಗಳ ಸಾಂಸ್ಕೃತಿಕ ಸ್ಪರ್ಧೆಗಳಿಗೆ ವಲಯ ಮಟ್ಟ, ತಾಲೂಕು ಮಟ್ಟ, ಜಿಲ್ಲಾ ಮಟ್ಟ, ವಿಭಾಗೀಯ ಮತ್ತು ರಾಜ್ಯಮಟ್ಟದ ಸ್ಪರ್ಧೆಗಳ ನಿರ್ಣಾಯಕರಾಗಿ ಉತ್ತಮ ತೀರ್ಪುಗಾರರೆಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಜೊತೆಗೆ ಕೇಳಿದವರಿಗೆಲ್ಲ ಭಾಷಣಗಳನ್ನು ಬರೆದುಕೊಡುವುದು, ನಿರೂಪಣೆ ಮಾರ್ಗದರ್ಶನ ಮಾಡುವುದು, ಚಿತ್ರಕಥೆ – ಸಂಭಾಷಣೆ ಬರೆದುಕೊಡುತ್ತಿದ್ದ ಶರತ್ ಬಿಲಿನೆಲೆಯವರ ಸಾಹಿತ್ಯಗಳು ಅವರ ಹೆಸರಿಗಿಂತ ಬೇರೆಯವರ ಹೆಸರಲ್ಲೇ ಓಡಾಡುತ್ತಿದ್ದುದು ಅಲ್ಲದೆ ಈಗಲೂ ಹೆಸರಿಲ್ಲದೆಯೇ ಹರಡುವುದು ನೋಡುವಾಗ ಶರತ್ ಬಿಳಿನೆಲೆಯವರು ಒಂದು ತತ್ವ ಆದರ್ಶ ಇಟ್ಟುಕೊಂಡರೂ, ಹೆಸರು ಮಾಡಬೇಕು, ದುಡ್ಡು ಮಾಡಬೇಕೆಂದು ಬಯಸಿದವರಲ್ಲ ಮತ್ತು ಹೆಸರಿನ ಹಿಂದೆ ಓಡಿದವರಲ್ಲ ಅನ್ನುವುದು ಸ್ಪಷ್ಟವಾಗುತ್ತದೆ.
ಸಾಹಸ ಸಿಂಹ ವಿಷ್ಣುವರ್ಧನ್, ಸಂಚಾರಿ ವಿಜಯ್, ಬ್ಯಾಂಕ್ ಜನಾರ್ಧನ್, ಹೊನ್ನವಳ್ಳಿ ಕೃಷ್ಣ, ಪೃಥ್ವಿ ಅಂಬರ್, ಗುರುಕಿರಣ್, ದಿಯಾ ಖ್ಯಾತಿಯ ದೀಕ್ಷಿತ್, ಸುಧಾರಾಣಿ, ರೇಖಾದಾಸ್, ಎಮ್ ಎನ್ ಸುರೇಶ್, ಮಿಮಿಕ್ರಿ ದಯಾನಂದ್, ರತ್ನಮಾಲ, ದಿಲೀಪ್ ರಾಜ್, ವಿಜಯ್ ಕುಮಾರ್ ಕೊಡಿಯಾಲ್‌ಬೈಲ್, ಪುತ್ತೂರಿನ ಮಾಜಿ ಶಾಸಕಿ ಹಾಗೂ ಕಂಚಿಲ್ದ ಬಾಲೆ ಸಿನಿಮಾದ ನಟಿ ಟಿ ಶಕುಂತಲಾ ಶೆಟ್ಟಿ ಹಾಗೂ ಸಾಯಿಕುಮಾರ್ ಕುಟುಂಬದ ಒಡನಾಟ ಇರುವ ಶರತ್ ಬಿಳಿನೆಲೆ ಚಿತ್ರದ ಹಲವು ದಿಗ್ಗಜರೊಂದಿಗೆ ಕೆಲಸ ಮಾಡಿದ ಅನುಭವಿ.
ಕೊರೋನಾದ ಅಟ್ಟಹಾಸ ಶರತ್ ಬಿಳಿನೆಲೆಯವರ ವೇಗಕ್ಕೆ ಸ್ವಲ್ಪಮಟ್ಟಿಗೆ ತಡೆಯೊಡ್ಡಿ ಚಿತ್ರರಂಗದಿಂದ ಹೊರಗುಳಿಯುವಂತೆ ಮಾಡಿತಾದರೂ, ಅವರ ಸಂಗೀತದ ಪಾಂಡಿತ್ಯಕ್ಕೆ ಅಡ್ಡಿಯುಂಟು ಮಾಡುವಲ್ಲಿ ಸೋತು ಬಿಟ್ಟಿತು. ಅಣ್ಣನಾದ ಶಶಿ ಗಿರಿವನರವರ ಕಡಬ ನಾಲೂರಿನ ಗಿರಿವನ ಮ್ಯೂಸಿಕ್ ಸ್ಟುಡಿಯೋದಲ್ಲಿ ಅದೇಷ್ಟೋ ಹಾಡಿಗೆ ಧ್ವನಿ ನೀಡಿದ ಶರತ್ ಬಿಳಿನೆಲೆ ತಾನೇ ಸ್ವತಃ ಒಂದಷ್ಟು ಸಾಹಿತ್ಯ ಬರೆಯುತ್ತಾ, ಶಶಿ ಗಿರಿವನರ ಸಾಹಿತ್ಯದ ಜೊತೆಗೆ ಹಲವಾರು ಸಾಹಿತಿಗಳ ಬರಹಗಳಿಗೂ ಗಾಯನದ ಸವಿ ನೀಡಿದರು. ಹಲವಾರು ಭಕ್ತಿಗೀತೆ, ಭಾವಗೀತೆಗಳಿಗೆ ಸಂಗೀತ ಮತ್ತು ಸ್ವರ ನೀಡಿ, ಆಲ್ಬಮ್ ಸಾಂಗ್‌ಗಳನ್ನು ನಿರ್ದೇಶಿಸುವ ಮೂಲಕ ತನ್ನ ಇರುವಿಕೆಯನ್ನು ತೋರ್ಪಡಿಸಿಕೊಂಡು ಕೋಟಿಗಾಯನದಂತ ಹಲವು ಕಾರ್ಯಕ್ರಮಗಳಿಗೆ ಧ್ವನಿಗೂಡಿಸುತ್ತ ಜನಮನ್ನಣೆ ಗಳಿಸಿದರು.
ಕೊಂಚ ಬಿಡುವಿನಿಂದ ಚೇತರಿಸಿಕೊಂಡು ಮೈ ಕೊಡವೆದ್ದ ಶರತ್ ಬಿಳಿನೆಲೆ ಪ್ರಸ್ತುತ ಮೈಸೂರಿನ ಎಸ್.ಪಿ ಕೃಷ್ಣಪ್ಪರವರ ‘ರಾಗಿಗುಡ್ಡ’ ಕನ್ನಡ ಚಲನಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುವುದರ ಜೊತೆಗೆ ದೇಶಪ್ರೇಮದ ಕಿಡಿ ಗಂಗೂಬಾಯಿ ಎಂಬ ರೂಪಕಕ್ಕೆ ಸಂಗೀತ ಸಂಯೋಜನೆ ಜೊತೆಗೆ, ಹಿನ್ನಲೆ ಧ್ವನಿ ನೀಡುವ ತಯಾರಿಯಲ್ಲಿದ್ದಾರೆ. ಒಂದಷ್ಟು ಭಕ್ತಿಪ್ರಧಾನ, ಭಯಾನಕ, ಪ್ರೇಮಕಥೆಗಳ ಕಥಾ ಹಂದರದ ಕನ್ನಡ, ತುಳು, ಅರೆಭಾಷೆ ಸೇರಿದಂತೆ ಬಹುಭಾಷಾ ಚಿತ್ರಗಳ ಕಥೆಯನ್ನು ಕೈಯಲ್ಲಿ ಹಿಡಿದಿದ್ದೇ ಅಲ್ಲದೆ, ಹೊಸ ಯೋಜನೆಗಳಿಗೆ ನಿರ್ಮಾಪಕರ ಹುಡುಕಾಟದಲ್ಲಿದ್ದಾರೆ.
ತುಂಬಿದ ಕೊಡ ತುಳುಕುವುದಿಲ್ಲವೆಂಬುವಂತೆ ಸಕಲ ಕಲಾ ಪಾರಂಗತರಾದರೂ ಶರತ್ ಬಿಳಿನೆಲೆ ನೋಡುವವರಿಗೆ ಸರಳತೆಯ ಸಾಕಾರ ಮೂರ್ತಿ. ಹದವರಿತ ಮಾತು, ಮಿತವಾದ ಗಾಂಭೀರ್ಯ, ಎಲ್ಲರಲ್ಲೂ ಬೆರೆಯುವ ಗುಣ, ತಿಳಿಯದೆ ಇರುವುದನ್ನು ಬೇರೆಯವರಿಂದ ಕಲಿತುಕೊಳ್ಳುವ ತವಕ, ತಿಳಿದುದನ್ನು ಹೇಳಿಕೊಡುವಲ್ಲಿನ ಸೌಜನ್ಯ, ಸಿಕ್ಕಿದ್ದರಲ್ಲಿ ಸಂತೃಪ್ತಿ ಪಡುವ ಉದಾರತೆ, ನೋಯಿಸಿದವರನ್ನೂ ಕ್ಷಮಿಸಿ ಸಹಾಯಹಸ್ತ ಚಾಚುವ ಗುಣ, ಭೂಮಿ ತೂಕದ ತಾಳ್ಮೆಯ ಶರತ್ ತನ್ನಲ್ಲಿ ಏನಾದರೂ ಇದ್ದರೆ ಅದನ್ನು ಇಲ್ಲದ ಬೇರೆಯವರಿಗೆ ನೀಡಿ ತಾನು ಸುಮ್ಮನೆ ಕೂರುವಂತ ಮಹಾನುಭಾವ. ಬೇಡಿ ತಿಂದರೂ ಅಡ್ಡಿಯಿಲ್ಲ ಇನ್ನೊಬ್ಬನ ತಲೆ ಹೊಡೆದ ಬದುಕಿ ಬಾಳಬಾರದೆಂದು ತಿಳಿಹೇಳುತ್ತಾ, ತನ್ನ ಕೈಲಾದ ಸಹಾಯ ಮಾಡುತ್ತಾ ಸಜ್ಜನಿಕೆಯ ಬದುಕು ನಡೆಸುತ್ತಿರುವ ಕಡಬ, ಬಿಳಿನೆಲೆಯ ಸಂಗೀತ ಸಾಮ್ರಾಟನ ಬದುಕು ಬಂಗಾರವಾಗಲಿ. ತನ್ನ ಜೀವನದ ಅರ್ಧ ಭಾಗವನ್ನು ಸಂಗೀತ, ಸಾಹಿತ್ಯ, ಕಲೆ, ನಟನೆ, ನಿರ್ದೇಶನಕ್ಕೆ ನೀಡಿದ ಕಲಾಕುಸುಮ ಸರಳ ಸಜ್ಜನಿಕೆಯ ಸಾಕಾರಮೂರ್ತಿಯನ್ನು ಮುಂದಿನ ದಿನಗಳಲ್ಲಿಯೂ ಭಾಗ್ಯಲಕ್ಷ್ಮಿ ಕೈ ಹಿಡಿದು, ಕೈಯಲ್ಲಿರುವ ಯೋಜನೆಗಳೆಲ್ಲ ಯಶಸ್ವಿಯಾಗಿಸಲಿ. ಅವರ ಆರಾಧ್ಯ ಮೂರ್ತಿಯರಾದ ಕುಕ್ಕೆ ಪುರೀಶ, ಶಬರಿಗಿರಿವಾಸ, ಚಾಮುಂಡೇಶ್ವರಿ, ಶಿರ್ಡಿ ಸಾಯಿಬಾಬಾ ಹಾಗೂ ಜ್ಯೋತಿರ್ಮಾತೃ ಸ್ವರೂಪಿಣಿ ಅವರ ಬದುಕನ್ನು ಬೆಳಗಲಿ ಎನ್ನುವ ಹಾರೈಕೆಯೊಂದಿಗೆ ಜೀವನದ ಪಂಚ ದಶಕಗಳನ್ನು ಪೂರೈಸಿ ಮುಂದಕ್ಕೆ ಹೆಜ್ಜೆಯಿಡುತ್ತಿರುವ ಹುಟ್ಟುಹಬ್ಬದ ಹೊಸಿಲಲ್ಲಿರುವ ಶರತ್ ಬಿಳಿನೆಲೆಯವರ ಮುಂದಿನ ಬದುಕಿಗೆ ಸಮಸ್ತ ಕಲಾಭಿಮಾನಿಗಳ ಪರವಾಗಿ ಶುಭದ ಆಶಯಗಳು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post