ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
1970-80ರ ದಶಕದ ಶಿವಮೊಗ್ಗ ಅನುಭವಗಳನ್ನು ಕಟ್ಟಿಕೊಡುವ ಹಾಫ್ ಪ್ಯಾಂಟ್ಸ್ ಫುಲ್ ಪ್ಯಾಂಟ್ಸ್ ವೆಬ್ ಸರಣಿ ಡಿ.16ರ ನಾಳೆ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆಯಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ತಿಳಿಸಿದ್ದಾರೆ.
ಈ ಕುರಿತಂತೆ ಮಾಹಿತಿ ನೀಡಿರುವ ಅವರು, ಲೇಖಕ ಆನಂದ ಸುಬ್ಬರಾವ್ ಅವರು ತಮ್ಮ ಬಾಲ್ಯದ ಅನುಭವಗಳನ್ನು ಮೆಲುಕು ಹಾಕುವ ಇಂಗ್ಲೀಷ್ ಪುಸ್ತಕ ಹಾಫ್ ಪ್ಯಾಂಟ್ಸ್ ಫುಲ್ ಪ್ಯಾಂಟ್ಸ್ ವೆಬ್ ಸರಣಿ ಇದಾಗಿದೆ. ಲೇಖಕರ ತಂದೆಯವರಾದ ಎನ್. ಸುಬ್ಬರಾವ್ ಅವರು 1972ರಿಂದ 1990ರ ವರೆಗೆ ಶಿವಮೊಗ್ಗದಲ್ಲಿ ರೈಲ್ವೆ ಇಲಾಖೆಯಲ್ಲಿ ನೌಕರರಾಗಿದ್ದರು. ಆ ಸಮಯದಲ್ಲಿ ಲೇಖಕರು ಕಾಲೇಜಿನವರೆಗೂ ವಿದ್ಯಾಭ್ಯಾಸ ಮಾಡಿದ್ದರು.
ನಂತರ ಬೇರೆ ಬೇರೆ ಉದ್ಯೋಗಗಳನ್ನರಸಿ ವಿವಿಧ ಸ್ಥಳಗಳಲ್ಲಿ ನೆಲೆಸಿ ಕಳೆದ 25 ವರ್ಷಗಳಿಂದ ಜಾಹೀರಾತು ಜಗತ್ತಿನಲ್ಲಿ ಪ್ರಖ್ಯಾತ ಸ್ಕಿಪ್ಟ್ ಬರಹಗಾರರಾಗಿ ಈಗ ದೆಹಲಿಯಲ್ಲಿ ತಮ್ಮದೇ ಆದ ಸ್ವಂತ ಜಾಹೀರಾತು ಸಂಸ್ಥೆಯನ್ನು ಕಟ್ಟಿದ್ದಾರೆ ಎಂದರು.
ಲೇಖಕರು ಪುಸ್ತಕದಲ್ಲಿ 1ರಿಂದ 7ನೇ ತರಗತಿಯವರೆಗಿನ ವಿಶಿಷ್ಟ ಅನುಭವಗಳನ್ನು ದಾಖಲಿಸಿದ್ದಾರೆ. ನಂತರದ 2ನೆಯ ಭಾಗದಲ್ಲಿ 8ರಿಂದ ದ್ವಿತೀಯ ಪಿಯುಸಿವರೆಗಿನ ಅನುಭವಗಳನ್ನು ದಾಖಲಿಸಿದ್ದಾರೆ. ಬಾಲಿವುಡ್ ಖ್ಯಾತ ಚಿತ್ರ ಸಾಹಿತಿ ಹಾಗೂ ನಿರ್ದೇಶಕ ಆರ್. ಬಾಲ್ಕಿಯವರು ಈ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದು, ಪುಸ್ತಕದ ಕಥಾಹಂದರವನ್ನು ಆರ್.ಕೆ. ನಾರಾಯಣ್ ಅವರ ಮಾಲ್ಗುಡಿ ಡೇಸ್’ಗೆ ಹೋಲಿಸಿದ್ದಾರೆ. 2017ರ ಜನವರಿಯಲ್ಲಿ ಈ ಪುಸ್ತಕವನ್ನು ಜ್ಯುಯಲ್ ರಾಕ್ ಹೋಟೆಲ್’ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಲೇಖಕರ ಅಪಾರ ಸಂಖ್ಯೆಯ ಸ್ನೇಹಿತರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು ಎಂದು ತಿಳಿಸಿದರು.
ಪುಸ್ತಕ ಪ್ರಕಟವಾದ 2017ರಲ್ಲಿ ಅನೇಕ ರಸಕ್ಷಣಗಳನ್ನು ರಸವತ್ತಾಗಿ, ನಾಟಕೀಯವಾಗಿ ಹಾಗೂ ಹಾಸ್ಯಮಯವಾಗಿ ಈ ಪುಸ್ತಕ ಚಿತ್ರಿಸುತ್ತದೆ. ಹಾಗಾಗಿ ಎಲ್ಲಾ ಅನುಭವಗಳನ್ನು ದೃಶ್ಯಕಾವ್ಯವಾಗಿ ಹೊರತರುವ ಅಭಿಲಾಷೆ ಅನೇಕರಲ್ಲಿತ್ತು. ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆದು ಅಂತಿಮವಾಗಿ 2021ರಲ್ಲಿ ಅಮೆಜಾನ್ ಪ್ರೈಂ ಒಪ್ಪಿಗೆ ನೀಡಿ ಇದೀಗ ವೆಬ್ ಸರಣಿಗೆ ತಯಾರಾಗಿದೆ ಎಂದರು.
ಸುಮಾರು 10 ತಿಂಗಳುಗಳಲ್ಲಿ ಚಿತ್ರಕಥೆ ತಯಾರಿಸಿ 2022 ಜನವರಿ ಮತ್ತು ಫೆಬ್ರವರಿಯಲ್ಲಿ ಸಕಲೇಶಪುರ ಹಾಗೂ ದೋಣಿಗಲ್ ರೈಲ್ವೆ ನಿಲ್ದಾಣದ ಸುತ್ತಮುತ್ತಲು ಚಿತ್ರೀಕರಣ ನಡೆದಿದೆ. ಈ ಚಿತ್ರದ ನಿರ್ದೇಶನವನ್ನು 2 ಬಾರಿ ರಾಷ್ಟೀಯ ಪ್ರಶಸ್ತಿ ಪಡೆದ, ಸುಮಾರು 30 ಮಲೆಯಾಳಂ ಹಾಗೂ ಹಿಂದಿ ಚಲನಚಿತ್ರಗಳಲ್ಲಿ ನಿರ್ದೇಶಿಸಿರುವ ಈಗ ಬೆಂಗಳೂರಿನಲ್ಲಿ ನೆಲೆಸಿರುವ ಕೇರಳ ಮೂಲದ ವಿ.ಕೆ. ಪ್ರಕಾಶ್ ನಿರ್ದೇಶನ ಮಾಡಿದ್ದಾರೆ ಎಂದರು.
ಪುಸ್ತಕದಲ್ಲಿನ ಹೆಚ್ಚಿನ ಘಟನೆಗಳು ಶಿವಮೊಗ್ಗದಲ್ಲಿಯೇ ನಡೆದಿರುವುದರಿಂದ ಇಲ್ಲಿಯೇ ಚಿತ್ರೀಕರಣ ಮಾಡಬೇಕೆಂಬ ಒಲವಿತ್ತು. 1970-80ರ ದಶಕದಲ್ಲಿದ್ದ ಶಿವಮೊಗ್ಗದ ಚಿತ್ರಣವೇ ಬದಲಾಗಿರುವುದರಿಂದ ಚಿತ್ರೀಕರಣವನ್ನು ಸಕಲೇಶಪುರ, ದೋಣಿಗಲ್ ರೈಲ್ವೆನಿಲ್ದಾಣ ಸುತ್ತಮುತ್ತ ಮಾಡಬೇಕಾಯಿತು ಎಂದರು.
ಬಾಲಿವುಡ್ ಖ್ಯಾತ ನಟ ಆಶೀಷ್ ವಿದ್ಯಾರ್ಥಿ ಲೇಖಕ ಆನಂದ್ ಅವರ ತಂದೆ ಸುಬ್ಬರಾವ್ ಅವರ ಪಾತ್ರ ನಿರ್ವಹಿಸಿದ್ದು, ತಾಯಿಯ ಪಾತ್ರವನ್ನು ಬಾಲಿವುಡ್ ನಟಿ ಸೋನಾಲಿ ಕುಲಕರ್ಣಿ ನಿರ್ವಹಿಸಿದ್ದಾರೆ. ತಮಿಳು ಬಾಲನಟ ಅಶ್ವಥ್ ಅಶೋಕ್ ಕುಮಾರ್ ಆನಂದ್ ಅವರ ಪಾತ್ರ ನಿರ್ವಹಿಸಿದ್ದು, ಇವರಲ್ಲದೆ ಕನ್ನಡದ ಹರೀಶ್ ರಾಜ್, ಮ್ಯಾಜಿಕ್ ರಮೇಶ್, ಚಂದ್ರಕಾAತ್ ಹಾಗೂ ತಮಿಳಿನ ಅನೇಕ ಕಲಾವಿದರು ನಟಿಸಿದ್ದಾರೆ ಎಂದರು.
ವೆಬ್ ಸರಣಿಯ 30 ನಿಮಿಷಗಳ 8 ಎಪಿಸೋಡ್’ಗಳಲ್ಲಿ ಪ್ರಸಾರವಾಗಲಿದ್ದು, ಹಿಂದಿಯ ಈ ಚಿತ್ರವು ಕನ್ನಡವು ಸೇರಿದಂತೆ 8 ಭಾಷೆಗಳಲ್ಲಿ ಡಬ್ ಆಗಿದೆ. ಹಾಗೂ 240 ದೇಶಗಳಲ್ಲಿ ಪ್ರಸಾರವಾಗಲಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಲೇಖಕರ ಬಾಲ್ಯ ಸ್ನೇಹಿತರಾದ ಡಾ.ನಾಗಭೂಷಣ್, ನಿಜಗುಣ, ಚೇತನ್, ವಿಕ್ರಂ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post