ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ: ಕೌಸಲ್ಯಾ ರಘುರಾಮ್ |
ಮೈಸೂರು ಕಲಾ ಪ್ರತಿಷ್ಠಾನ ಭರತನಾಟ್ಯ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆಂದೇ ಮೈಸೂರಿನಲ್ಲಿ 4 ದಿನಗಳ ವಿಶೇಷ ಕಾರ್ಯಾಗಾರವನ್ನು ಆಯೋಜಿಸಿತ್ತು. ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದ ವಿದ್ವಾನ್ ಸತ್ಯನಾರಾಯಣ ರಾಜು ಇದರ ಸಾರಥ್ಯ ವಹಿಸಿ ಹಲವು ವಿದ್ಯಾರ್ಥಿಗಳಿಗೆ ನೃತ್ಯದ ತಂತ್ರಗಳನ್ನು ಕಲಿಸಿಕೊಟ್ಟರು. ದೆಹಲಿ, ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರು, ಬೆಂಗಳೂರು- ಹೀಗೆ ರಾಜ್ಯದ ವಿವಿಧ ಭಾಗದ ಕಲಿಕಾರ್ಥಿಗಳು ಇಲ್ಲಿ ಸಮ್ಮಿಲನಗೊಂಡಿದ್ದರು. ವಿಶೇಷ ಪಾಠಾಂತರದೊಂದಿಗೆ ಮಕ್ಕಳಿಗೆ ಮೌಲ್ಯವನ್ನೂ ಬೋಧಿಸಿದ್ದು ಮಹತ್ತರ ಸಂಗತಿ. ಪ್ರತಿಷ್ಠಾನದ ಮುಖ್ಯಸ್ಥೆ ಮಾಧುರ್ಯ ಅಕ್ಕ ಈ ಕಾರ್ಯಾಗಾರದ ಬೆನ್ನೆಲುಬಾಗಿದ್ದರು. ಇಲ್ಲಿ ಸಂಗ್ರಹಿತವಾದ ಶುಲ್ಕವನ್ನು ದಿವಂಗತ ಕಲಾವಿದ ನಿಂಗರಾಜು ಕುಟುಂಬಕ್ಕೆ ಸಮರ್ಪಿಸಿದ್ದು ಮಾನವೀಯತೆಗೆ ದ್ಯೋತಕವಾಗಿತ್ತು. ರಾಷ್ಟ್ರ ಸಂಘದ ಹಿರಿಯ ಪ್ರಚಾರಕರಾದ ಸು. ರಾಮಣ್ಣ ಇದಕ್ಕೆ ಸಾಕ್ಷಿಯಾಗಿದ್ದು ಇನ್ನೊಂದು ವಿಶೇಷ. ಈ ಬಗ್ಗೆ ಭರತನಾಟ್ಯ ಅಭ್ಯಾಸ ಮಾಡುತ್ತಿರುವ ಮೈಸೂರು ವಿವಿ ಸ್ಕೂಲ್ ಆಫ್ ಇಂಜಿನಿಯರಿಂಗ್’ನ ವಿದ್ಯಾರ್ಥಿನಿ ಕೌಸಲ್ಯಾ ರಘುರಾಂ ಬರೆದ ವಿಶೇಷ ಲೇಖನ…..
ಕಲಾವಿದರಾಗಲು ಕೆಲವರು ಬಯಸುತ್ತಾರೆ. ಆದರೆ ಕಲಾದೇವತೆ ಕೆಲವರನ್ನು ಮಾತ್ರ ಕೈ ಹಿಡಿಯುತ್ತಾಳೆ ಎಂಬುದೊಂದು ನಾಣ್ಣುಡಿ. ಯಾರು ತಮ್ಮನ್ನು ತಾವು ಕಲಾರಂಗಕ್ಕೆ ಸಮರ್ಪಣೆ ಮಾಡಿಕೊಂಡು ಸತತವಾದ ಅಭ್ಯಾಸವನ್ನು ರೂಢಿಗತ ಮಾಡಿಕೊಂಡಿರುತ್ತಾರೋ ಅವರು ಕಲಾರಾಧಕರಾಗುತ್ತಾರೆ. ಕಲಿತದ್ದನ್ನು ಸಮರ್ಥವಾಗಿ ರಂಗದ ಮೇಲೆ ಪಡಮೂಡಿಸುವ ಕೌಶಲ ಅರಿತಿರುವವರು ಅಭಿನಯ ಚತುರರಾಗುತ್ತಾರೆ. ಕಲಿತದ್ದನ್ನು ಸೂಕ್ತವಾಗಿ ಮುಂದಿನ ಪೀಳಿಗೆಗೆ ತಲುಪಿಸುವ ಮೂಲಕ ಶಿಷ್ಯವಾತ್ಸಲ್ಯವನ್ನು ಯಾರು ಗಳಿಸಿಕೊಳ್ಳುತ್ತಾರೆಯೋ ಅವರು `ಗುರು’ ಆಗುತ್ತಾರೆ.
ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾದ ಭರತನಾಟ್ಯವನ್ನು ಸಮರ್ಥವಾಗಿ ಕಾಪಿಡುವ ಮತ್ತು ಶಿಷ್ಯಕೋಟಿಗೆ ಅದನ್ನು ಅಷ್ಟೇ ಸಮಗ್ರವಾಗಿ ಪ್ರೀತಿಯಿಂದ ಕಲಿಸಿಕೊಡುವ ಕಾಯಕ ಮಾಡುವವರು `ಅಂತರಂಗದ ಗುರು’ವಾಗಿ ವಿದ್ಯಾರ್ಥಿಗಳ ಹೃದಯದಲ್ಲಿ ಭವ್ಯ ಸ್ಥಾನ ಪಡೆದುಕೊಳ್ಳುತ್ತಾರೆ. ಈ ಎಲ್ಲ ವಿಶೇಷಣಗಳಿಗೆ ಭಾಜನರಾಗುವ ಅಪರೂಪದಲ್ಲಿ ಅಪರೂಪದ ಭರತನಾಟ್ಯ ವಿದ್ವಾಂಸರೆಂದರೆ ಶ್ರೀ ಸತ್ಯನಾರಾಯಣ ರಾಜು.
ಹೌದು. ಪ್ರಸ್ತುತ ಕಾಲಘಟ್ಟದಲ್ಲಿ ಪುರುಷ ಭರತನಾಟ್ಯ ಕಲಾವಿದರು ಅಪರೂಪವೇ ಆಗಿದ್ದು, ಅವರಲ್ಲಿ ಮೇರು ಸ್ಥಾನ ಗಳಿಸಿ, ಅಜಾತ ಶತ್ರು ಎಂದೇ ಹೆಸರಾದ ಸತ್ಯನಾರಾಯಣ ರಾಜು ಅಂತಾರಾಷ್ಟ್ರೀಯ ಖ್ಯಾತಿಗೆ ಪಾತ್ರರಾಗಿರುವ ನರ್ತನ ವರೇಣ್ಯ ಎಂದೇ ಹೇಳಬಹುದು.
ವರ್ತಮಾನದ ಖ್ಯಾತ, ಪ್ರಖ್ಯಾತ ಭರತನಾಟ್ಯ ಕಲಾವಿದೆಯರೊಂದಿಗೆ ಲೀಲಾಜಾಲವಾಗಿ ನೂರಾರು ಪ್ರಸ್ತುತಿಗಳನ್ನು ಮಾಡುವ ಮೂಲಕ ನರ್ತನ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ವಿದ್ವಾನ್ ಸತ್ಯನಾರಾಯಣ ರಾಜು 4 ದಿನ ಮೈಸೂರಿನಲ್ಲಿ ವಿಶೇಷ ಕಾರ್ಯಾಗಾರವೊಂದನ್ನು ನಡೆಸಿದ್ದು ನಮ್ಮೆಲ್ಲರ ಸುಕೃತವೆಂದೇ ಹೇಳಬೇಕು.
ಮೈಸೂರು ಕಲಾ ಪ್ರತಿಷ್ಠಾನದಿಂದ ಆಯೋಜಿಸಿದ್ದ ನಾಲ್ಕು ದಿನದ ನೃತ್ಯ ಕಾರ್ಯಾಗಾರಕ್ಕೆ ಸತ್ಯನಾರಾಯಣ ರಾಜು ಪ್ರಮುಖ ಕರ್ತಾರ. ಅವರ ಕಮ್ಮಟದಲ್ಲಿ ಒಂದಾದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ (ಈಗಾಗಲೇ ವಿವಿಧ ಕಲಾ ಶಾಲೆಗಳಲ್ಲಿ ಭರತನಾಟ್ಯ ಕಲಿಯುತ್ತಿರುವವರು) ನಾನೂ ಒಬ್ಬಳು ಎಂಬುದು ಹೆಮ್ಮೆ ಮತ್ತು ಪ್ರತಿಷ್ಠೆಯ ಸಂಗತಿ.
ಎರಡು ನೃತ್ಯ ಪ್ರಸ್ತುತಿಯನ್ನು ಕಾರ್ಯಾಗಾರಕ್ಕೆಂದೇ ಸರ್ ಆಯ್ಕೆ ಮಾಡಿಕೊಂಡಿದ್ದರು. ಕಾರ್ಯಾಗಾರ ಎಂದರೆ ಬರಿ ನೃತ್ಯ ಪ್ರಸ್ತುತಿಯನ್ನು ಕಲಿಯುವುದಲ್ಲ, ಅದರ ಜೊತೆಗೆ ಕೆಲವು ನೃತ್ಯದ ಮುಖ್ಯ ಅಂಶಗಳು ಮತ್ತು ಪ್ರಾರಂಭಿಕ ಹಂತದ ಕಲಿಕೆಯಲ್ಲಿ ತಿದ್ದುಪಡಿ, ಚಿಕ್ಕ ಪುಟ್ಟ ಅಂಶಗಳನ್ನೂ ಸೂಕ್ಷ್ಮವಾಗಿ ಕಲಿಯಲು ಅವಕಾಶ ಕಲ್ಪಿಸಿದ್ದು ವಿಶೇಷದಲ್ಲಿ ವಿಶೇಷ.
ಮೊದಲನೆಯದಾಗಿ `ಗಂಭೀರ ಗಣನಾಯಕ’ ಎಂಬ ಕೀರ್ತನೆಯನ್ನು ನಮಗೆ ಕಲಿಸಿಕೊಡಲಾಯಿತು. ಇದು ರಾಗ ಗಂಭೀರ ನಾಟ ಹಾಗೂ ಆದಿತಾಳದಲ್ಲಿ ನಿಬದ್ಧವಾದ ಮಹತ್ವದ ಕೃತಿ. (ರಚನೆ: ಮಧುರೈ ಜಿ.ಎಸ್. ಮಣಿ. ನೃತ್ಯ ಸಂಯೋಜನೆ: ಪರಮ ಗುರು ನರ್ಮದಾ) ನೃತ್ಯದ ಮುಖ್ಯ ಅಂಗ ಎಂದೇ ಹೆಸರಾದ `ವರ್ಣ’ವನ್ನು ಕಾರ್ಯಾಗಾರದಲ್ಲಿ ಬೋಧಿಸಲಾಯಿತು.
`ಶ್ರೀ ಕೃಷ್ಣ ಕಮಲಾನಾಥೋ … ವರ್ಣವನ್ನು ಕೃಷ್ಣ ಅಷ್ಟೋತ್ತರ ಶತನಾಮ ಸ್ತೋತ್ರದಿಂದ ಆರಿಸಿಕೊಳ್ಳಲಾಗಿತ್ತು. ರಾಗ ರೀತಿ ಗೌಳ, ಆದಿತಾಳದಲ್ಲಿ ಇದನ್ನು ನಿಬದ್ಧ ಗೊಳಿಸಲಾಗಿತ್ತು. ಸತ್ಯ ಸರ್ ತಮ್ಮ ನೃತ್ಯ ಕಲಿಕೆಯ ಅನುಭವವನ್ನು ಮತ್ತು ಗುರು ನರ್ಮದಾ ಅವರಿಂದ ಕಲಿತ ಪ್ರತಿ ಸಂಗತಿಗಳನ್ನು ನಮಗೆ ಪಾಠಾಂತರ ಮಾಡಿದ್ದು ಅದ್ಭುತವಾಗಿತ್ತು.
ಜೀವನ ಮೌಲ್ಯವನ್ನೂ ಕಲಿತೆವು
ನಾಲ್ಕು ದಿನಗಳಲ್ಲಿ ನೃತ್ಯ ಕಾರ್ಯಾಗಾರದಲ್ಲಿ ನಾವು ನೃತ್ಯದ ತಂತ್ರಗಳನ್ನು ಮಾತ್ರವಲ್ಲ, ಜೀವನ ಮೌಲ್ಯಗಳನ್ನೂ ಕಲಿತದ್ದು ಬಹಳ ವಿಶೇಷ. ಯಾವ ಶಾಲೆ, ಕಾಲೇಜು ಮತ್ತು ವಿವಿಗಳಲ್ಲೂ ಕಲಿಸಲಾಗದ ಬದುಕಿನ ಆದರ್ಶಗಳನ್ನು ಸತ್ಯ ಸರ್ ನರ್ತನದ ತಂತ್ರಗಳೊಂದಿಗೇ ಮಿಳಿತಗೊಳಿಸಿ ಬೋಧಿಸಿದ್ದು ಗಮನ ಸೆಳೆಯಿತು. ನೃತ್ಯ ಕಲಿಕಾರ್ಥಿಗಳು ಹೇಗೆ ಇರಬೇಕು, ಕಲೆಯನ್ನು ಹೇಗೆ ಪ್ರೋತ್ಸಾಹಿಸಬೇಕು, ಕಲಾವಿದರನ್ನು ಯಾವ ರೀತಿ ಬೆಳೆಸಬೇಕು, ಮುಂದಿನ ಪೀಳಿಗೆಗೆ ನೃತ್ಯದ ಮಹತ್ವ ಉಳಿಸಲು ನಾವು ನಮ್ಮ ಪರಿಧಿಯಲ್ಲಿ ಏನೆಲ್ಲಾ ಚಟುವಟಿಕೆ ಮಾಡಬಹುದು ಎಂಬುದನ್ನು ಅವರು ತಿಳಿಸಿಕೊಟ್ಟ ಪರಿ ಅನನ್ಯವಾಗಿತ್ತು.
ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಕಲಿತ ಪಟ್ಟುಗಳನ್ನು ತಮ್ಮ ತಮ್ಮ ಗುರುಗಳ ಬಳಿ ಚೆನ್ನಾಗಿ ಅಭ್ಯಾಸ ಮಾಡಬೇಕು. ಶಿಬಿರ ಮತ್ತು ಕಾರ್ಯಾಗಾರಗಳಲ್ಲಿ ನೃತ್ಯವನ್ನಷ್ಟೇ ಅಲ್ಲದೆ ನೃತ್ಯದ ಹಲವು ತಂತ್ರಗಳನ್ನು ಕರಗತ ಮಾಡಿಕೊಳ್ಳಬಹುದು. ಹಾಗಾಗಿ ಆಗಾಗ್ಗೆ ಇಂತಹ ಕಾರ್ಯಾಗಾರಗಳು ವಿದ್ಯಾರ್ಥಿಗಳಿಗಾಗಿ ಆಯೋಜನೆ ಗೊಳ್ಳುವುದು ಇಂದು ಅನಿವಾರ್ಯವಾಗಿದೆ. ಮೈಸೂರು ಕಲಾ ಪ್ರತಿಷ್ಠಾನ ಇದನ್ನು ಆಯೋಜಿಸಿದ್ದು, ಗೋಪಾಲಸ್ವಾಮಿ ಶಿಕ್ಷಣ ಸಂಸ್ಥೆ ಆವರಣವೇ ವೇದಿಕೆಯಾಗಿದ್ದು ನಮ್ಮ ಸೌಭಾಗ್ಯ. ನಾಳಿನ ಉತ್ತಮ ಕಲಾವಿದರನ್ನು ರೂಪಿಸುವಲ್ಲಿ ಸಹಕರಿಸಿದ ಎಲ್ಲ ಪಾಲಕರಿಗೆ ಮತ್ತು ಮೈಸೂರಿನ ವಿವಿಧ ಕಲಾ ಶಾಲೆಗಳ ನೃತ್ಯ ಗುರುಗಳಿಗೆ ನನ್ನ ನಮನ.
| ಗುರು ಸತ್ಯನಾರಾಯಣ ರಾಜು
ಹಿರಿಯ ಭರತನಾಟ್ಯ ವಿದ್ವಾಂಸ, ಬೆಂಗಳೂರು
ಕಾರ್ಯಾಗಾರದಲ್ಲಿ ಬೆಂಗಳೂರು, ಶಿವಮೊಗ್ಗ, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಭಾಗದಿಂದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸಮ್ಮಿಲನಗೊಂಡಿದ್ದರು. ಹಾಗಾಗಿ ಇದು ರಾಜ್ಯಮಟ್ಟದ ನರ್ತನ ಕಲಿಕಾ ಕಮ್ಮಟವೇ ಆಗಿತ್ತು ಎಂದರೆ ಅತಿಶಯೋಕ್ತಿಏನಲ್ಲ.
ಸತ್ಯ ಸರ್ ಅವರ ಹಿರಿಯ ಶಿಷ್ಯರಾದ ನಿಖಿತಾ, ತೇಜಸ್ವಿನಿ, ಸಂಯುಕ್ತ ಹಾಗೂ ಸುನಿಧಿ ಅಕ್ಕ ಬೆಂಗಳೂರಿನಿAದ ಆಗಮಿಸಿ ಗುರುಗಳ ಜತೆಜತೆಗೂ ಸಹಕರಿಸಿ ನಮಗೆ ಅನೇಕ ತಂತ್ರಗಳನ್ನು ಕಲಿಸಿಕೊಡಲು ನೆರವಾದರು. ಉನ್ನತ ಶಿಕ್ಷಣ ಕಲಿಯುತ್ತಲೇ ನೃತ್ಯವನ್ನೂ ಅವರೆಲ್ಲಾ ನಿರಂತರವಾಗಿ ಅಭ್ಯಾಸ ಮಾಡುತ್ತಾ ವಿದುಷಿಯರಾಗಿರುವುದು ಮಾದರಿ ಎನಿಸಿತು.
ಮೈಸೂರು ಕಲಾ ಪ್ರತಿಷ್ಠಾನದ ಮುಖ್ಯಸ್ಥೆ ಮಾಧುರ್ಯ ರಾಮಸ್ವಾಮಿ ಬಹಳ ಕಾಳಜಿಯಿಂದ ಕಾರ್ಯಾಗಾರ ಆಯೋಜನೆ ಮಾಡಿದ್ದರು. ನಮ್ಮೆಲ್ಲರ ಕಲಾಸಕ್ತಿ ಮತ್ತು ಶ್ರದ್ಧೆಗಳೇ ಅವರಿಗೆ ನಾವು ಕೊಡಬಹುದಾದ ಗೌರವ ಮತ್ತು ಕೃತಜ್ಞತೆಗಳಾಗಿವೆ.
ಸಮಾರೋಪದಲ್ಲಿ ಕಲಾಭಿವ್ಯಕ್ತಿ
ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ನಾವುಗಳು 4 ದಿನ ಕಲಿತ ನೃತ್ಯದ ಪ್ರಸ್ತುತಿಗೆ ವೇದಿಕೆ ಕಲ್ಪಿಸಲಾಗಿತ್ತು. ಇದು ನಮಗೆಲ್ಲಾ ಆನಂದಾನುಭೂತಿಯನ್ನೂ, ಅವಿಸ್ಮರಣೀಯ ಸಂಸತವನ್ನೂ ನೀಡಿತು. ಶ್ರೀ ಕೃಷ್ಣ ಕಮಲಾನಾಥೋ … ವರ್ಣವನ್ನು ಸತ್ಯ ಸರ್ ನಮಗಾಗಿ ವೇದಿಕೆಮೇಲೆ ಪ್ರಸ್ತುತಪಡಿಸಿದ್ದು ಅಮೋಘವಾಗಿತ್ತು. ವಸುದೇವನ ಬಂಧ ವಿಮೋಚನೆ, ಪೂತಣಿ ಸಂಹಾರ, ಕೃಷ್ಣ- ಅರ್ಜುನರ ಸಂವಾದ ಗೀತೋಪದೇಶ ಹಾಗೂ ವಿಶ್ವರೂಪ ದರ್ಶನ ಒಳಗೊಂಡ ದಿವ್ಯ ಪ್ರಸ್ತುತಿ ಬಹು ವರ್ಷಗಳ ವರೆಗೆ ಸ್ಮತಿ ಪಟಲದಲ್ಲಿ ಉಳಿಯುವಂಥದ್ದು. ವಿದುಷಿ ವಸುಧಾ ಬಾಲಕೃಷ್ಣರ ಗಾಯನ, ನಿಖಿತಾ ಮಂಜುನಾಥರ ನಟುವಾಂಗ, ವಿದ್ವಾನ್ ಎಸ್.ವಿ. ಬಾಲಕೃಷ್ಣರ ಮೃದಂಗ ಮತ್ತು ರಾಕೇಶ್ ಸುಧೀರ್ ಕೊಳಲು ಪಕ್ಕವಾದ್ಯ ಸಹಕಾರ ನೃತ್ಯ ಪ್ರಸ್ತುತಿಗೆ ಸೊಬಗು ನೀಡಿತು.
ಮೆರೆದಾಡಿದ ಮಾನವೀಯತೆ
ಕಲಾವಿದರು ಕಲಾವಿದರಿಗೇ ಸಹಾಯ ಮಾಡಬೇಕು. ಕಷ್ಟಗಳಲ್ಲಿ ಸ್ಪಂದಿಸಬೇಕು ಎಂಬುದು ವಿದ್ವಾನ್ ಸತ್ಯ ಸರ್ ಅವರ ಧ್ಯೇಯ. ಇದಕ್ಕೆ ಪೂರಕವಾಗಿ 4 ದಿನಗಳ ಕಾರ್ಯಾಗಾರಕ್ಕೆ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೀಡಿದ ಶುಲ್ಕದ ಮೊತ್ತವನ್ನು ಬೆಂಗಳೂರಿನ ಮೃದಂಗ ವಿದ್ವಾನ್ ನಿಂಗರಾಜು ಕುಟುಂಬಕ್ಕೆ ಸಮರ್ಪಿಸಲಾಯಿತು. (ಇತ್ತೀಚೆಗಷ್ಟೇ ವಿ. ನಿಂಗರಾಜು ಅಕಾಲಿಕ ಮೃತ್ಯವಶರಾದ ಕಾರಣ ಈ ಮೊತ್ತ ಅವರ ಕುಟುಂಬದ ನೆರವಿಗೆ ಕಿಂಚಿತ್ ನೆರವಾಗಲಿ ಎಂಬುದು ಆಶಯ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post