ಶಿವಮೊಗ್ಗ: ವಿಶ್ವದಲ್ಲೇ ಅತ್ಯಂತ ದೇಶಪ್ರೇಮ ಮತ್ತು ಕರ್ತವ್ಯ ನಿಷ್ಠತೆಗೆ ಹೆಸರಾಗಿದೆ ನಮ್ಮ ಭಾರತೀಯ ಸೇನೆ. ಸೈನಿಕರಲ್ಲಿ ಯಾವುದೇ ಜಾತಿಯಿಲ್ಲ, ಧರ್ಮವಿಲ್ಲ. ಸಂಕುಚಿತ ಮನೋಭಾವನೆಯಿಲ್ಲ. ನಮ್ಮಲ್ಲಿ ಹರಿಯುತ್ತಿರುವುದು ಭಾರತೀಯತೆಯೆಂಬ ರಕ್ತ. ನಾವು ಭಾರತೀಯರು ಎಂದು ಭಾರತೀಯ ಭೂಸೇನೆಯ ನಿವೃತ್ತ ಕರ್ನಲ್ ರಾಮಚಂದ್ರ ಅವರು ನಮ್ಮ ಸೇನಾಶಕ್ತಯ ವೈಶಿಷ್ಟ್ಯತೆ ಬಗ್ಗೆ ಹೆಮ್ಮೆಯಿಂದ ಹೇಳಿದರು.
ಶಿವಮೊಗ್ಗದ ಸಿಹಿಮೊಗೆ ಸಂಯುಕ್ತ ವಿಶ್ರಾಂತ ನೌಕರರ ಸಂಘದವರು ಏರ್ಪಡಿದ್ದ ವೀರಯೋಧರಿಗೆ ಗೌರವ ಅರ್ಪಣೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡುತ್ತಿದ್ದರು.
ನಮ್ಮ ದೇಶ ಈವರೆಗೆ ನಾಲ್ಕು ಯುದ್ಧವನ್ನು ಎದುರಿಸಿದೆ. ನಮ್ಮ ಸಂಸ್ಕೃತಿ ಅಹಿಂಸೆಗೆ ಹೆಸರಾಗಿದೆ. ನಮಗೆ ಸ್ವತಂತ್ರ ಲಭಿಸಿದ ನಂತರ ಕಾಶ್ಮೀರಕ್ಕೋಸ್ಕರ 22 ಅಕ್ಟೋಬರ್ 47 ರಲ್ಲಿ ಪಾಕಿಸ್ಥಾನ ನಮ್ಮ ದೇಶದ ಮೇಲೆ ಆಕ್ರಮಣ ಮಾಡಿತು. ಆ ಯುದ್ಧ ಒಂದು ವರ್ಷ ಎರಡು ತಿಂಗಳು ಎರಡು ವಾರ ನಡೆಯಿತು. ನಮ್ಮ ಸೈನ್ಯದ ಪರಾಕ್ರಮಕ್ಕೆ ಮೇರೆಯೇ ಇರಲಿಲ್ಲ, ಹಾಗೆ ಹೋರಾಟ ನಡೆಸಿದರು. ವಿಶ್ವಸಂಸ್ಥೆ ನಡುವೆ ಮಧ್ಯಸ್ತಿಕೆ ವಹಿಸಿದ್ದರ ಪರಿಣಾಮವಾಗಿ ಶಾಂತಿ ಸಂಧಾನ ನಡೆಯಿತು. ಹಾಗಾಗಿ ಕಾಶ್ಮೀರದ ಶೇ.37 ಈಗ ಪಾಕಿಸ್ತಾನದ ಕೈಯಲ್ಲಿದೆ. ಶೇ.41 ನಮ್ಮ ದೇಶದ ಕೈಲ್ಲಿದೆ. ಉಳಿದ ಶೇ. 20 ಚೀನಾದ ವಶದಲ್ಲಿದೆ. ಈಗಲೂ ಸಂಧಾನ ನಡೆಯುತ್ತಿದೆ ಎಂದರು.
ಪಾಕಿಗಳು ನಮ್ಮ ದೇಶದ ಮೇಲೆ ನಾಲ್ಕು ಬಾರಿ ದಾಳಿ ಮಾಡಿತು. 1947, 1965, 1971 ಮತ್ತು 1999 ರಲ್ಲಿ ಮಾಡಿದ ಎಲ್ಲ ಯುದ್ಧದಲ್ಲೂ ಪಾಕಿಸ್ತಾನ ಸೋಲುಂಡಿತು. 65 ರಲ್ಲಂತೂ ನಮ್ಮ ಸೇನೆ ಲಾಹೋರ್ ತನಕ ಹೋಗಿತ್ತು ನಮ್ಮ ಸೇನೆ. ನಮಗೆ ಯಾವುದಾದರೂ ಭೂಭಾಗದ ಆಸೆಯೇ ಇರಲಿಲ್ಲ. 1971 ರಲ್ಲಿಯೂ ಬಾಂಗ್ಲಾದೇಶ ಬಿಡುಗಡೆ ಮಾಡಿಕೊಟ್ಟೆವು. ಆಗಲೂ ನಾವು ಭೂಭಾಗವನ್ನು ಕೇಳಲಿಲ್ಲ. 90,000 ಪಾಕಿಸ್ಥಾನ ಸೈನಿಕರು ಆಗ ಸೆರೆಯಾಳಾಗಿದ್ದರು. ಅವರನ್ನೂ ಗೌರವಯುತವಾಗಿ ಬಿಟ್ಟು ಕೊಟ್ಟವು. ಈಗ ನಮ್ಮ ಒಬ್ಬ ಅಭಿನಂದನನ್ನು ಮೂರು ದಿನ ಇಟ್ಕೊಂಡು ಏನೋ ಬಹಳ ಮೆಹರುಬಾನಿ ಮಾಡ್ತಾ ಇದ್ದೇವೆ ಅಂತ ಬೇರೆ ದೇಶಗಳೆದುರು ತೋರಿಕೆ ಆಟ ಆಡಿದರು ಎಂದು ವರ್ತಮಾನದಲ್ಲಿ ನಮ್ಮ ದೇಶಕ್ಕೆ ಪಾಕಿಸ್ಥಾನವು ಕಾಲು ಕೆದರಿ ಕದನಕ್ಕಿಳಿಯುತ್ತಿರುವ ಬಗ್ಗೆ ಎಲ್ಲರ ಗಮನ ಸೆಳೆದರು.
ಡಾ. ಆರ್.ಎಸ್. ವಸಂತಕುಮಾರ್ ಅವರು ಮಾತನಾಡಿ, ದೇಶಭಕ್ತಿಗೀತೆಯ ವೀಡಿಯೋ ಕ್ಲಿಪ್ಪಿಂಗ್ ಅನ್ನು ತೆರೆಯ ಪ್ರದರ್ಶನಕ್ಕೆ ಅಣಿಗೊಳಿಸಿ ಚಾಲನೆ ನೀಡಿದರು. ನಮ್ಮ ಸೈನ್ಯದಲ್ಲಿ ನಮ್ಮ ಸೇನೆಯಲ್ಲಿ ಸೇವೆ ಸಲ್ಲಿಸುವವರಿಗೆ ಸಾಕಷ್ಟು ಸವಲತ್ತುಗಳಿವೆ. ಸರ್ಕಾರ ಯಾವ ಸೈನಿಕನನ್ನೂ ಏಕಾಂಗಿಯಾಗಿ ಬಿಡುವುದಿಲ್ಲ. ಊಟ ಉಪಾಹಾರ, ವಸತಿ ಮತ್ತು ಆತನ ಮನೆಕಡೆಯ ನಿರ್ವಹಣೆಯನ್ನೂ ವ್ಯವಸ್ಥಿತವಾಗಿ ನೋಡಿಕೊಳ್ಳುತ್ತದೆ ಎಂದರು.
ಒಂದು ರೆಜಿಮೆಂಟ್ ಅಂದರೆ ಅದು ಒಂದು ಕುಟುಂಬವಿದ್ದ ಹಾಗಿರುತ್ತದೆ. ಪರಸ್ಪರ ನೋವು ನಲಿವುಗಳನ್ನು ಹಂಚಿಕೊಳ್ಳಲಾಗುತ್ತದೆ. ಅದೇರೀತಿ ಕುಟುಂಬಕ್ಕೆ ಭದ್ರತೆ ಒದಗಿಸುವ ಎಲ್ಲ ವಿಷಯಗಳಿಗೂ ಗಮನ ಕೊಡಲಾಗಿರುತ್ತದೆ. ಮಕ್ಕಳ ವ್ಯಾಸಂಗದ ಬಗ್ಗೆಯೂ ಕಾಳಜಿ ವಹಿಸುತ್ತದೆ. ಹೀಗಾಗಿ ಮನೆ ಮತ್ತು ಕುಟುಂಬದ ಬಗ್ಗೆ ಯೋಚನೆ ಮಾಡಲು ಬಿಡದೇ ಅವರನ್ನು ದೇಶ ರಕ್ಷಣೆಯತ್ತ ಮನಸ್ಸು ಕೇಂದ್ರೀಕರಿಸುವಂತೆ ನಿಗಾವಹಿಸುತ್ತದೆ ಎಂದು ಸೈನಿಕರ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು.
ಪೋಲಿಸ್ ಉಪ ಅಧೀಕ್ಷಕ ಶೇಖರ್ ಎಸ್. ಟೆಕ್ಕನ್ನವರ್ ಮಾತನಾಡಿ, ನಮ್ಮ ದೇಶದ ಹೊರಗಿನ ಶತ್ರುಗಳನ್ನು ದಮನ ಮಾಡುವಲ್ಲಿ ನಮ್ಮ ಸೇನೆ ಸದಾ ಕಾರ್ಯಪ್ರವೃತ್ತವಾಗಿದೆ. ಅದೇ ರೀತಿ ಎಲ್ಲರೂ ಆ ಕೆಲಸ ಮಾಡಲಾಗುವುದಿಲ್ಲ. ಆದರೂ ನಾಗರಿಕರ ನಮ್ಮೆಲ್ಲರ ಮೇಲೆ ಮತ್ತೊಂದು ಜವಾಬ್ದಾರಿಯಿದೆ. ಅದೆಂದರೆ ದೇಶದ ಒಳಗಿನ ಶತ್ರುಗಳಂತಿರುವ ಕೊಲೆ, ಸುಲಿಗೆ, ದ್ವೇಷಾಸೂಯೆಗಳಿಂದ ಉಂಟಾಗುವ ಹಿಂಸೆ ಇತ್ಯಾದಿಗಳನ್ನು ನಾಗರಿಕರು ಪ್ರೋತ್ಸಾಹಿಸಬಾರದು ಎಂದರು.
ಮಕ್ಕಳಿಗೆ ಬೈಕ್ ಮತ್ತು ಮೊಬೈಲ್’ಗಳನ್ನು ವಿವೇಚನೆಯಿಂದ ಕೊಡಿಸಬೇಕು. ಅಪಘಾತ ಮತ್ತು ಸೈಬರ್ ಅಪರಾಧಗಳನ್ನು ನಿಯಂತ್ರಿಸುವಲ್ಲಿ ಪೋಲಿಸ್ ಇಲಾಖೆಯೊಂದಿಗೆ ಸಹಕರಿಸಬೇಕು. ರಸ್ತೆ ಅಪಘಾತವನ್ನು ಹಾಗೇ ಮುಂದೆ ಹೋಗದೇ ತಕ್ಷಣ ಗಾಯಾಳುವನ್ನು ಸನಿಹದ ಆಸ್ಪತ್ರೆಗೆ ಸೇರಿಸುವಲ್ಲಿ ನೆರವು ನೀಡಿ. ನಿಮಗೆ ಕಾನೂನಿನಿಂದ ಈಗ ಯಾವುದೇ ಅಡಚಣೆ ಅಥವಾ ಕಿರಿಕಿರಿಯಾಗುವ ಸಂದರ್ಭ ಬರುವುದಿಲ್ಲಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಉಪವಿಭಾಗಧಿಕಾರಿ ಟಿ.ವಿ. ಪ್ರಕಾಶ್ ಅವರು ಮಾತನಾಡಿ, ಸೈನಿಕರಾಗಿ ನಾವು ತೃಪ್ತಿಕರ ಸೇವೆಸಲ್ಲಿಸಿ ನಿವೃತ್ತಿ ಪಡೆದ ಮೇಲೆ ನಮ್ಮ ಜೀವನಕ್ಕೆ ಬೇಕಾದ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸಿರುತ್ತದೆ. ಮತ್ತೆ ಬೇರೆ ಹೆಚ್ಚಿನದನ್ನು ನಿರೀಕ್ಷಿಸುವುದು ಒಳಿತಲ್ಲ. ಗೌರವಯುತ ಬಾಳುವೆಗೇನೂ ಸರ್ಕಾರ ಕೊರತೆಮಾಡಿಲ್ಲ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಿಶ್ರಾಂತ ನೌಕರರ ಸಂಘದ ಆಧ್ಯಕ್ಷ ಪಿ.ಓ. ಶಿವಕುಮಾರ್ ವಹಿಸಿದ್ದರು. ಸಂಘದಲ್ಲಿ ವಿಶಿಷ್ಟವಾದ ಧ್ಯೇಯೋದ್ದೇಶಗಳನ್ನು ಇಟ್ಟುಕೊಂಡಿದ್ದೇವೆ. ಇಡೀ ದೇಶಕ್ಕೇ ಮಾದರಿಯಾಗಬಹುದಾದ ಡಿಫೆನ್ಸ್ ಮ್ಯೂಸಿಯಂ ಶಿವಮೊಗ್ಗದಲ್ಲಿ ಸ್ಥಾಪಿಸುವ ಬಯಕೆಯಿದೆ ಎಂದರು.
ಸಮಾರಂಭದ ಆಕರ್ಷಣೆಯಾಗಿ ದೇಶಭಕ್ತಿ ಬಿಂಬಿಸುವ ಸಿನಿಮಾ ದೃಶ್ಯಗಳ ತುಣುಕು ಮತ್ತು ದೇಶಭಕ್ತಿಗೀತೆಗಳ ವಿಡಿಯೊ ಪ್ರದರ್ಶನ ಸಾರ್ವಜನಿಕರ ಮೆಚ್ಚುಗೆ ಗಳಿಸಿತು.
ಪ್ರೇರಣಾ ಮಹಿಳಾ ಸಂಘ, ಭೂಮಿಕಾ ಮಹಿಳೆಯರ ಸಂಘ, ಗುರುಗುಹ ಗಾನ ವಿದ್ಯಾಲಯದ ಸದಸ್ಯರಿಂದ ದೇಶಭಕ್ತಿ ಗೀತೆಗಳ ಗಾಯನವಿತ್ತು. ವಿಡಿಯೋ ಪ್ರದರ್ಶನವನ್ನು ಸಹಕಾರ್ಯದರ್ಶಿ ತುಳಸಿರಾಂ ನಿರ್ವಹಿಸಿದರು.
ಸಮಾರಂಭದಲ್ಲಿ ಕರ್ನಲ್ ರಘುನಾಥ್, ಸಾರ್ಜೆಂಟ್ ಡಾ.ನಟರಾಜ್, ಮೇಜರ್ ರಾಮಚಂದ್ರ ತಿಲಾಂಗ್, ಜಿಲ್ಲಾ ಮಾಜಿಯೋಧರ ಸಂಘದ ಅಧ್ಯಕ್ಷ ಪಿ.ವಿ. ಕೃಷ್ಣಾರೆಡ್ಡಿ, ಕರ್ನಲ್ ಆನಂದರಾವ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ, ನಿವೃತ್ತ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ್‌ಉಪಸ್ಥಿತರಿದ್ದರು. ಕೊನೆಯಲ್ಲಿ ಸಾರ್ವಜನಿಕರು ಅಲ್ಲಿದ್ದ ಎಲ್ಲಾ ಮಾಜಿಯೋಧರೊಂದಿಗೆ ಆತ್ಮೀಯ ಸಂವಾದದಲ್ಲಿ ತೊಡಗಿಕೊಂಡಿದ್ದ ದೃಶ್ಯ ಅವಿಸ್ಮರಣೀಯವಾಗಿ ಕಂಡುಬಂದಿತು.
ಸಮಾರಂಭಕ್ಕೆ ಮುನ್ನ ಪೋಲಿಸ್ ಚೌಕಿಯಿಂದ ವಾಸವಿ ಶಾಲಾ ಮಕ್ಕಳ ಬ್ಯಾಂಡ್ ಪಥ ಸಂಚಲನವಿತ್ತು. ಈ ಶೋಭಾಯಾತ್ರೆಯಲ್ಲಿ ಒಂದು ನೂರು ಮಾಜಿ ಯೋಧರು ನಡೆದುಬಂದ ಅಪರೂಪದ ದೃಶ್ಯ ವಿಶೇಷವಾಗಿತ್ತು.
ಕಾರ್ಯಕ್ರಮದ ಆರಂಭದಲ್ಲಿ ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ವೀರಸ್ವರ್ಗ ಸೇರಿದ ಸಿಆರ್’ಪಿಎಫ್ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ಗೌರವ ಅರ್ಪಿಸಲಾಯಿತು.
ಅಲ್ಲದೇ ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ ಬಂದ ಸೂಚನೆಯಂತೆ 18 ವರ್ಷ ತುಂಬಿದವರೆಲ್ಲೇ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಂಡಿಲ್ಲ ಎಂದರೆ ತತಕ್ಷಣವೇ ಸೇರ್ಪಡೆ ಮಾಡಿ ಕಡ್ಡಾಯವಾಗಿ ಮತದಾನ ಮಾಡುತ್ತೇವೆ. ಹಾಗೂ ದೇಶದ ಪ್ರಜಾಪ್ರಭುತ್ವದ ಹಬ್ಬವಾಗಿರುವ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಸಹ ತಪ್ಪದೇ ಮತದಾನ ಮಾಡುತ್ತೇವೆ ಎಂಬ ಪ್ರತಿಜ್ಞಾ ವಿಧಿಯನ್ನು ಕಾರ್ಯಕ್ರಮದಲ್ಲಿ ಪಡೆಯಲಾಯಿತು.
ಗಿರೀಶ್ ಪ್ರಾರ್ಥಿಸಿ, ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಟಿ. ಶ್ರೀನಿವಾಸರಾವ್ ಎಲ್ಲರನ್ನೂ ಆದರದಿಂದ ಬರಮಾಡಿಕೊಂಡರು. ಕಾರ್ಯಕಾರಿ ಸಮಿತಿಯ ಡಾ. ಎನ್. ಸುಧೀಂದ್ರ ವಂದನೆ ಅರ್ಪಿಸಿದರು. ವಿನೋಬನಗರದ ಶಿವಾಲಯದ ಆವರಣದಲ್ಲಿ ಕಾರ್ಯಕ್ರಮ ನಡೆಯಿತು.
(ವರದಿ: ಡಾ.ಸುಧೀಂದ್ರ)
Discussion about this post