ಹೈದರಾಬಾದ್: ಇಂದು ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ, ದಿವಂಗತರ ನಟ ನಂದಮೂರಿ ತಾರಕ ರಾಮರಾವ್(ಎನ್‌ಟಿಆರ್) ಅವರ ಪುತ್ರ ನಂದಮೂರಿ ಹರಿಕೃಷ್ಣ ದುರ್ಮರಣವನ್ನಪ್ಪಿದ್ದಾರೆ.
ಹೈದರಾಬಾದ್ ನಿಂದ ನೆಲ್ಲೂರಿಗೆ ತೆರಳುತ್ತಿದ್ದ ಕಾರು ನಲ್ಗೊಂಡ ಜಿಲ್ಲೆಯ ಅನ್ನೇಪರ್ತಿ ಬಳಿ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದು ಅವಘಡ ಸಂಭವಿಸಿದ್ದು, ಭೀಕರವಾಗಿ ಗಾಯಗೊಂಡಿದ್ದರು. ತತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಯಿತು. ಆದರೂ, ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ.
ಹರಿಕೃಷ್ಣ ಅವರು ಅಭಿಮಾನಿಯ ಪುತ್ರನ ಮದುವೆಗೆ ತೆರಳುತ್ತಿದ್ದರು. ಬೆಳಗ್ಗೆ 4.30ರ ಸುಮಾರಿನಲ್ಲಿ ಹೈದರಾಬಾದ್ ನಿಂದ ಆಂಧ್ರಪ್ರದೇಶದ ನಲ್ಲೂರಿಗೆ ತಾವೇ ಕಾರು ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ.
ಕಾರು ನಿಯಂತ್ರಣ ತಪ್ಪಿದ ಬಳಿಕ 10 ಅಡಿ ಎತ್ತರ ಗಾಳಿಯಲ್ಲಿ ಹಾರಿ ನೆಲಕ್ಕೆ ಅಪ್ಪಳಿಸಿದೆ ಎಂದು ಪ್ರತ್ಯಕ್ಷ್ಯದರ್ಶಿಯೊಬ್ಬರು ಮಾಧ್ಯಮಗಳಿಗೆ ಹೇಳಿದ್ದಾರೆ.
ಹರಿಕೃಷ್ಣ ಅವರ ನಿಧನದ ವಿಚಾರ ತಿಳಿದ ಬಳಿಕ ಬಾವ ಹಾಗೂ ಆಂಧ್ರ ಸಿಎಂ ಚಂದ್ರ ಬಾಬು ನಾಯ್ಡು ಎಲ್ಲ ಕಾರ್ಯಕ್ರಮಗಳನ್ನು ಬದಿಗೊತ್ತಿ ಆಸ್ಪತ್ರೆಗೆ ಧಾವಿಸಿದ್ದಾರೆ. ಹಲವು ಟಿಡಿಪಿ ಶಾಸಕರು, ಸಚಿವರು ಆಸ್ಪತ್ರೆಯತ್ತ ಧಾವಿಸುತ್ತಿದ್ದು, ನೂರಾರು ಜನರು ಆಸ್ಪತ್ರೆಯ ಮುಂದೆ ಜಮಾಯಿಸಿದ್ದಾರೆ.
1964 ರಲ್ಲಿ ಶ್ರೀಕೃಷ್ಣಾವತಾರಂ ಎಂಬ ಚಿತ್ರದಲ್ಲಿ ಬಾಲ ನಟನಾಗಿ ಬಣ್ಣದ ಬದುಕಿಗೆ ಕಾಲಿರಿಸಿದ್ದ ಹರಿಕೃಷ್ಣ, ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಅವರು ನಾಯಕ ನಟನಾಗಿ, ಪೋಷಕರ ಪಾತ್ರ, ಹಾಸ್ಯ ಪಾತ್ರಗಳು ಮತ್ತು ನಿರ್ಮಾಪಕನಾಗಿಯೂ ಗುರುತಿಸಿಕೊಂಡಿದ್ದರು. ಶ್ರಾವಣಮಾಸಂ ಅವರ ಕೊನೆಯ ಚಿತ್ರವಾಗಿತ್ತು.
ಹರಿಕೃಷ್ಣ ಮೊದಲ ಪತ್ನಿಯ ಮೂವರು ಮಕ್ಕಳಾದ ನಟ ಕಲ್ಯಾಣ್ ರಾಮ್, ಪುತ್ರಿ ಸುಹಾಸಿನಿ ಮತ್ತು 2 ನೆಯ ಪತ್ನಿಯ ಪುತ್ರ ಜ್ಯೂನಿಯರ್ ಎನ್‌ಟಿಆರ್ ಎಂದು ಪ್ರಖ್ಯಾತರಾಗಿರುವ ತಾರಕ ರಾಮ್ ಅವರನ್ನು ಅಗಲಿದ್ದಾರೆ.
Discussion about this post