ಈಗ ಸ್ವಲ್ಪದಿನಗಳು ಕಳೆದಿವೆ. ತುಂಗೆ ತುಸು ಆರ್ಭಟ ಕಡಿಮೆ ಮಾಡಿ, ಕೊಂಚ ಶಾಂತವಾಗಿದ್ದಾಳೆ.
ಶಿವಮೊಗ್ಗ ಕಂಡು ಕೇಳರಿಯದ ಪರಿಸ್ಥಿತಿಯ ವೇಳೆಯಲ್ಲಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಸಮಯಪ್ರಜ್ಞೆ ತೋರಿಸಿತು. ಸ್ವಯಂಸೇವಾ ಸಂಘಸಂಸ್ಥೆಗಳು ಹಾಗೂ ಸಾರ್ವಜನಿಕರು ಸಂಕಷ್ಟ ಪರಿಸ್ಥಿತಿಯಲ್ಲಿ ಮಾನವೀಯ ಪ್ರೀತಿ ತೋರಿಸಿದರು.
ಒಟ್ಟಾರೆ ನಗರದ ವಿವಿಧೆಡೆ ಕಾಳಜಿ ಕೇಂದ್ರಗಳನ್ನು ತೆರೆಯಲಾಯಿತು. ಸರ್ಕಾರದ ನೆರವೇ ಅಲ್ಲದೆ ದಾನಿಗಳು ಹೃದಯತುಂಬಿ ಸಾಮಗ್ರಿಗಳನ್ನು ದಾನ ಮಾಡಿದರು. ಕೊಡುಗೆಯ ಮಹಾಪೂರವೇ ಹರಿದುಬಂತು. ಜನ ಸ್ಪಂದಿಸಿದ ರೀತಿಯಂತೂ ಅಪೂರ್ವ, ಅನನ್ಯ.
ಈ ಎಲ್ಲ ಪರಿಸ್ಥಿತಿಯ ನಡುವೆಯೇ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದ ಸಾಮಾಜಿಕ ಬಾಧ್ಯತೆಯ ಭಾಗವಾಗಿ ರಿಯಾಲಿಟಿ ಚೆಕ್ ನಡೆಸಲು ಒಂದು ಭೇಟಿ ನೀಡಿತು. ನಿಜಕ್ಕೂ ಅಲ್ಲಿ ಮನೆಕಳೆದುಕೊಂಡವರ ಅಳಲು ಮನಕರಗುವಂತಿತ್ತು.
ಪ್ರವಾಹಕ್ಕೆ ತುತ್ತಾದ ಹಲವು ಭಾಗಗಳಲ್ಲಿ ಸುಮಾರು ಮನೆಗಳು ಭಾಗಷಃ ಹಾನಿಗೊಳಗಾಗಿದ್ದರೆ, ಇನ್ನು ಕೆಲವು ಮನೆಗಳು ಪೂರ್ಣಹಾನಿಯಾಗಿವೆ. ಇಂತಹ ಅನಿರೀಕ್ಷಿತ ಘೋರ ಪರಿಸ್ಥಿತಿಯಿಂದಾಗಿ ಬಹುತೇಕ ಸರ್ವಸ್ವವನ್ನೂ ಕಳೆದಕೊಂಡವರ ರೋಧನ ಮನಕಲುಕುವಂತಿತ್ತು.
ಪ್ರವಾಹ ಹಾನಿ ಚಿತ್ರಗಳನ್ನು ನೋಡಿ:
ಗೋಶಾಲೆಯಲ್ಲಿ 17 ಹಸುಗಳು ಮೃತಪಟ್ಟಿವೆ:
ಶಿವಮೊಗ್ಗದ ಬಹುದೊಡ್ಡ ಗೋಶಾಲೆ ತುಂಗಾ ನದಿಯ ದಡದಲ್ಲಿದೆ. ನಗರದ ಗೋಪ್ರಿಯರಾದ ಜೈನ ಸಮಾಜದವರು ಅತ್ಯಂತ ಪ್ರೀತಿ ಮತ್ತು ಕಾಳಜಿಯಿಂದ ಅಹಾಯಕ ಗೋವುಗಳ ರಕ್ಷಣೆಗಾಗಿ ಶ್ರೀಮಹಾವೀರ್ ಗೋಶಾಲೆಯನ್ನು ಬಹಳ ವರ್ಷಗಳಿಂದ ನಡೆಸಿಕೊಂಡು ಬಂದಿದ್ದಾರೆ.
ಈಗ ಅಚಾನಕ್ ವರ್ಷಾಧಾರೆಯ ಫಲವಾಗಿ ರಾತ್ರೋರಾತ್ರಿ ತುಂಗಾ ಪ್ರವಾಹದಿಂದ ಗೋಶಾಲೆಯಲ್ಲಿ ನೀರು ನುಗ್ಗಿತು. ಇದಕ್ಕೆ ಹದಿನೇಳು ಹಸುಗಳು ನೀರಿನಲ್ಲಿ ಮುಳುಗಿ ಪ್ರಾಣಬಿಟ್ಟಿವೆ.
ಪರಿಸ್ಥಿತಿ ಕುರಿತಾಗಿ ಕಲ್ಪ ನ್ಯೂಸ್ ಜೊತೆಯಲ್ಲಿ ಮಾತನಾಡಿದ ಗೋಶಾಲೆಯ ನಿರ್ವಾಹಕರಾದ ಶ್ರೀ ಹೀರಾಚಂದ್ ಜೈನ್, ತಗ್ಗು ಪ್ರದೇಶದಲ್ಲಿದ್ದು ಅವಗಳಿಗೆ ಕಟ್ಟಿದ ಹಗ್ಗವನ್ನು ಬಿಚ್ಚುವವರಿಲ್ಲದೆ ಅಪರಾತ್ರಿ ಈ ಗೋವುಗಳ ದುರ್ಮರಣ ಸಂಭವಿಸಿದೆ. ಗೋಶಾಲೆಯ ಸಿಬ್ಬಂದಿ ಎಂತಹ ಕೆಲಸವಾಯಿತು ದೇವರೆ ಎಂದು ಕಣ್ಣೀರಿಡುತ್ತಾರೆ.
ಭೇಟಿ ಹಾಗೂ ವರದಿ: ಡಾ.ಸುಧೀಂದ್ರ ಮತ್ತು ಕೆ.ಜಿ. ಮಂಜುನಾಥ ಶರ್ಮ
Discussion about this post