ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಾಮಾಜಿಕ ಮಾಧ್ಯಮ ಮತ್ತು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಇಂದಿನ ಯುವಜನತೆ ಜವಾಬ್ದಾರಿಯುತವಾಗಿ ಬಳಸಬೇಕು. ಸಾಮಾಜಿಕ ಜಾಲತಾಣಗಳಲ್ಲಿನ ಅನೈತಿಕ ಹಾಗೂ ಕಾನೂನುಬಾಹಿರ ಚಟುವಟಿಕೆಗಳು ವಿದ್ಯಾರ್ಥಿಗಳ ಭವಿಷ್ಯ ಮತ್ತು ವೃತ್ತಿಜೀವನದ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಶಿವಮೊಗ್ಗ (Shivamogga) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಎಚ್ಚರಿಕೆ ನೀಡಿದರು.
ಕುವೆಂಪು ವಿಶ್ವವಿದ್ಯಾಲಯದ ಬಸವ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವವಿದ್ಯಾಲಯದ 40ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.
ಡಿಜಿಟಲ್ ಹೆಜ್ಜೆಗುರುತು ಅಳಿಸಲು ಸಾಧ್ಯವಿಲ್ಲ.
ಇನ್‌ಸ್ಟಾಗ್ರಾಂ, ಎಕ್ಸ್, ವಾಟ್ಸಾಪ್ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸುವಾಗ ವಿದ್ಯಾರ್ಥಿಗಳು ಹೆಚ್ಚಿನ ಜಾಗ್ರತೆ ವಹಿಸಬೇಕು. ಕೆಲವರು ತಮ್ಮ ಗುರುತನ್ನು ಮರೆಮಾಚಿಕೊಂಡು ಅಥವಾ ಅರಿವಿಲ್ಲದೆ ಕಾನೂನುಬಾಹಿರ ಪೋಸ್ಟ್‌ಗಳು ಮತ್ತು ಕಾಮೆಂಟ್‌ಗಳನ್ನು ಮಾಡುತ್ತಾರೆ. ಇಂತಹ ಚಟುವಟಿಕೆಗಳು ಮುಂದೆ ಉದ್ಯೋಗಾವಕಾಶ ಹಾಗೂ ವೃತ್ತಿಜೀವನಕ್ಕೆ ಅಡ್ಡಿಯಾಗಬಹುದು ಎಂದು ತಿಳಿಸಿದರು.
ಒಮ್ಮೆ ಡಿಜಿಟಲ್ ಮಾಧ್ಯಮಕ್ಕೆ ಪ್ರವೇಶಿಸಿ ಯಾವುದೇ ಚಟುವಟಿಕೆ ನಡೆಸಿದರೆ ಅದರ ಡಿಜಿಟಲ್ ಹೆಜ್ಜೆಗುರುತು ಉಳಿಯುತ್ತದೆ. ಅವುಗಳನ್ನು ಸಂಪೂರ್ಣವಾಗಿ ಅಳಿಸಿಹಾಕುವುದು ಸುಲಭವಲ್ಲ. ಹೀಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ವಿಚಾರ ಹಂಚಿಕೊಳ್ಳುವ ಮೊದಲು ಅದರ ಪರಿಣಾಮಗಳ ಬಗ್ಗೆ ಯೋಚಿಸಬೇಕು. ಕಾನೂನುಬಾಹಿರ ಚಟುವಟಿಕೆಗಳಿಂದ ದೂರವಿದ್ದು ಜವಾಬ್ದಾರಿಯುತ ಡಿಜಿಟಲ್ ಬಳಕೆ ರೂಢಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
AI: ಎಐ ಸಾಧನಗಳ ಮೇಲೆ ಸಂಪೂರ್ಣ ಅವಲಂಬನೆ ಬೇಡ
ಪ್ರಸ್ತುತ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಎಲ್ಲ ಕ್ಷೇತ್ರಗಳನ್ನೂ ಆವರಿಸಿಕೊಳ್ಳುತ್ತಿದೆ. ಶೈಕ್ಷಣಿಕ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ. ಜೆಮಿನಿ, ಚಾಟ್‌ಜಿಪಿಟಿ, ಕ್ಲಾಡ್‌ನಂತಹ ಎಐ ಸಾಧನಗಳು ವಿದ್ಯಾರ್ಥಿಗಳ ಕಲಿಕೆ ಮತ್ತು ಜ್ಞಾನವೃದ್ಧಿಗೆ ಪೂರಕವಾಗಬೇಕು. ಆದರೆ, ಇವುಗಳ ಮೇಲೆಯೇ ಸಂಪೂರ್ಣವಾಗಿ ಅವಲಂಬಿತರಾಗಬಾರದು ಎಂದು ನಿಖಿಲ್ ಬಿ ಸಲಹೆ ನೀಡಿದರು.
ವಿದ್ಯಾರ್ಥಿಗಳು ಸ್ವತಂತ್ರವಾಗಿ ಆಲೋಚಿಸುವ, ಸಮಸ್ಯೆಗಳನ್ನು ವಿಶ್ಲೇಷಿಸುವ ಹಾಗೂ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಎಐ ಸಾಧನಗಳನ್ನು ಅತಿಯಾಗಿ ಅವಲಂಬಿಸಿದರೆ ಭವಿಷ್ಯದಲ್ಲಿ ಸರ್ಕಾರಿ ಮತ್ತು ಕಾರ್ಪೊರೇಟ್ ವಲಯದ ಉದ್ಯೋಗ ಆಯ್ಕೆ ಪ್ರಕ್ರಿಯೆಗಳಲ್ಲಿ ತೊಂದರೆ ಎದುರಾಗಬಹುದು ಎಂದು ಎಚ್ಚರಿಸಿದರು.
ಯಾವುದೇ ಕೆಲಸವಾದರೂ ಶ್ರದ್ಧೆಯಿಂದ ನಿರ್ವಹಿಸಿ
ಉನ್ನತ ಶಿಕ್ಷಣ ಪಡೆದ ಯುವಜನತೆ ಉನ್ನತ ಹುದ್ದೆಗಳನ್ನು ಪಡೆಯುವುದನ್ನೇ ದೊಡ್ಡ ಸಾಧನೆ ಎಂದು ಭಾವಿಸುವುದು ಸಹಜ. ಆದರೆ, ನಿರೀಕ್ಷಿತ ಹುದ್ದೆ ಅಥವಾ ಉದ್ಯೋಗ ದೊರೆಯದಿದ್ದರೆ ನಿರಾಶರಾಗುವ ಅಗತ್ಯವಿಲ್ಲ. ಯಾವುದೇ ಉದ್ಯೋಗವನ್ನು ಆಯ್ಕೆ ಮಾಡಿಕೊಂಡರೂ ಅದನ್ನು ಶ್ರದ್ಧೆ, ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ನಿರ್ವಹಿಸುವುದೇ ನಿಜವಾದ ಸಾಧನೆ ಎಂದು ಹೇಳಿದರು.
Also Read>> ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ CSR ಪಾಲುದಾರರು ಕೈಜೋಡಿಸಿ: ಸಚಿವ ಮಧು ಬಂಗಾರಪ್ಪ ಕರೆ
ಪಠ್ಯದ ಜತೆಗೆ ಸಾಂಸ್ಕೃತಿಕ ಚಟುವಟಿಕೆಗಳಿಗೂ ಆದ್ಯತೆ ನೀಡಿ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಪಠ್ಯ ಮತ್ತು ಪರೀಕ್ಷೆಗಳಿಗೆ ಸೀಮಿತವಾಗದೆ ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಇಂತಹ ಚಟುವಟಿಕೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತವೆ ಎಂದರು.
ಮುಂಬರುವ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ವಿಶಿಷ್ಟ ಕಲಿಕಾ ವಿಚಾರಗಳು ಹಾಗೂ ಹೊಸ ಅನುಭವಗಳನ್ನು ಪಡೆದುಕೊಳ್ಳಲು ವಿಶ್ವವಿದ್ಯಾಲಯದ ವತಿಯಿಂದ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕುಲಸಚಿವ ಪ್ರೊ. ಆರ್. ತಿಮ್ಮರಾಯಪ್ಪ, ವಿದ್ಯಾರ್ಥಿ ಕ್ಷೇಮಪಾಲನಾ ಡೀನ್ ಪ್ರೊ. ಜಿ. ಪ್ರಶಾಂತ್ ನಾಯಕ್, ಡೀನರುಗಳಾದ ಪ್ರೊ. ಎಸ್. ಕೆ. ನರಸಿಂಹಮೂರ್ತಿ, ಪ್ರೊ. ಗಜಾನನ ಪ್ರಭು, ಪಠ್ಯೇತರ ಚಟುವಟಿಕೆ ವಿಭಾಗದ ಸಂಚಾಲಕ ಡಾ. ತಳವಾರ ವೆಂಕಟೇಶ್, ವಿವಿಧ ವಿಭಾಗಗಳ ಅಧ್ಯಾಪಕರು, ಅಧ್ಯಾಪಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










