ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಡಿಜಿಟಲ್ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ (AI) ಪ್ರವಾಸೋದ್ಯಮ ಕ್ಷೇತ್ರದ ಕಾರ್ಯವೈಖರಿಯಲ್ಲಿ ಮಹತ್ವದ ಬದಲಾವಣೆಗಳನ್ನು ತರಬಲ್ಲದು ಎಂದು ಶಿವಮೊಗ್ಗದ (Shivamogga) ಮ್ಯಾಂಗೋ ಲೀಫ್ ಹಾಲಿಡೇಸ್ ಮಾಲೀಕರಾದ ಮಂಜುನಾಥ್ ಎಚ್.ಎಸ್. ಅಭಿಪ್ರಾಯಪಟ್ಟರು.
ನಗರದ ಪಿಇಎಸ್ ಐಎಎಂಎಸ್ ಕಾಲೇಜಿನ ಬಿಬಿಎ ಟಿ&ಟಿ ಹಾಗೂ ಹೆಚ್ಇಎಂ ವಿಭಾಗಗಳ ವತಿಯಿಂದ ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡಿದರು.
ಪ್ರವಾಸಿಗರ ಅಗತ್ಯ ಅರಿಯಲು ಡಿಜಿಟಲ್ ತಂತ್ರಜ್ಞಾನ ಸಹಕಾರಿ
ಪ್ರವಾಸಿಗರ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವುದು, ಪ್ರವಾಸಿ ತಾಣಗಳ ಆಯ್ಕೆ, ಪ್ರವಾಸ ಯೋಜನೆ ರೂಪಿಸುವುದು ಸೇರಿದಂತೆ ಪ್ರವಾಸೋದ್ಯಮದ ವಿವಿಧ ಹಂತಗಳಲ್ಲಿ ಡಿಜಿಟಲ್ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸಬಲ್ಲದು ಎಂದು ಮಂಜುನಾಥ್ ಎಚ್.ಎಸ್. ತಿಳಿಸಿದರು.
ಪ್ರವಾಸಿಗರಿಗೆ ಅನುಕೂಲಕರ ಹಾಗೂ ವೈಯಕ್ತಿಕ ಅಗತ್ಯಗಳಿಗೆ ತಕ್ಕ ಪ್ರವಾಸ ಯೋಜನೆಗಳನ್ನು ರೂಪಿಸುವಲ್ಲಿಯೂ ಕೃತಕ ಬುದ್ಧಿಮತ್ತೆ ಸೇರಿದಂತೆ ಆಧುನಿಕ ತಂತ್ರಜ್ಞಾನಗಳು ಸಹಕಾರಿಯಾಗಲಿವೆ ಎಂದರು.
Also Read>> ಸೆನ್ಸೆಕ್ಸ್-ನಿಫ್ಟಿ ಕುಸಿತ: ಭಾರತದ ಷೇರುಪೇಟೆ ಮೇಲೆ ಒತ್ತಡಕ್ಕೆ ಕಾರಣವೇನು?
AI: ಹೋಟೆಲ್, ಸಾರಿಗೆ ಮತ್ತು ಗ್ರಾಹಕ ಸೇವೆಯಲ್ಲಿ AI ಬಳಕೆ
ಹೋಟೆಲ್ ಹಾಗೂ ಸಾರಿಗೆ ವ್ಯವಸ್ಥೆ, ಗ್ರಾಹಕ ಸೇವೆ ಮತ್ತು ಪ್ರವಾಸೋದ್ಯಮದ ಮಾರುಕಟ್ಟೆ ವ್ಯವಸ್ಥೆಯಲ್ಲಿಯೂ ಡಿಜಿಟಲ್ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದಾಗಿದೆ ಎಂದು ಅವರು ಹೇಳಿದರು.
ಪ್ರವಾಸೋದ್ಯಮ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹೊಸ ತಂತ್ರಜ್ಞಾನಗಳ ಕುರಿತು ಜ್ಞಾನ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರವಾಸೋದ್ಯಮ ಮಾದರಿಗಳ ವಸ್ತು ಪ್ರದರ್ಶನ
ಕಾರ್ಯಕ್ರಮದ ಅಂಗವಾಗಿ ಬಿಬಿಎ ಹೆಚ್ಇಎಂ ಹಾಗೂ ಟಿ&ಟಿ ವಿಭಾಗದ ವಿದ್ಯಾರ್ಥಿಗಳು ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ವಿವಿಧ ಮಾದರಿಗಳ ವಸ್ತು ಪ್ರದರ್ಶನವನ್ನು ಆಯೋಜಿಸಿದ್ದರು. ವಿದ್ಯಾರ್ಥಿಗಳು ಸಿದ್ಧಪಡಿಸಿದ್ದ ಮಾದರಿಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದವು.
ಸಮಾರಂಭದ ಅಧ್ಯಕ್ಷತೆಯನ್ನು ಪಿಇಎಸ್ ಐಎಎಂಎಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುದರ್ಶನ್ ಜಿ.ಎಂ. ವಹಿಸಿದ್ದರು. ನಿರ್ವಹಣಾಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಮೋಹನ್ ಡಿ., ಸಹಾಯಕ ಪ್ರಾಧ್ಯಾಪಕರಾದ ಶ್ರೀ ಉತ್ಕರ್ಷ್ ಸಿಂಗ್, ರಶ್ಮಿ ಎಚ್.ಡಿ. ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












