ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ತಂತ್ರಜ್ಞಾನವೇ (AI) ಆರ್ಥಿಕ ಮೌಲ್ಯ ಸೃಷ್ಟಿಯ ಪ್ರಮುಖ ಸಾಧನವಾಗಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಅವಕಾಶಗಳು ಮತ್ತು ಸವಾಲುಗಳು ಸಮಾನವಾಗಿ ಬೆಳೆಯುತ್ತಿದ್ದು, ಬದಲಾಗುತ್ತಿರುವ ವ್ಯವಸ್ಥೆಗೆ ಹೊಂದಿಕೊಳ್ಳುವ ಕಲಿಕಾ ಸಾಮರ್ಥ್ಯ ಹೊಂದಿರುವ ಪದವೀಧರರ ಅಗತ್ಯ ಹೆಚ್ಚಾಗಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ (National Education Society) ಕಾರ್ಯದರ್ಶಿ ಎಸ್.ಎನ್. ನಾಗರಾಜ ಹೇಳಿದರು.
ನಗರದ ಜೆ.ಎನ್.ಎನ್. ಇಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ಪ್ರಥಮ ವರ್ಷದ ಎಂಬಿಎ ಮತ್ತು ಎಂಸಿಎ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಅಭಿವಿನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
AI: ಎಐ ತಂತ್ರಜ್ಞಾನ ಬಳಕೆಯಲ್ಲಿ ಎಚ್ಚರಿಕೆ ಅಗತ್ಯ
ಇಂದಿನ ಉದ್ಯೋಗ ಕ್ಷೇತ್ರದಲ್ಲಿ ಸಾಂಪ್ರದಾಯಿಕ ಗುಮಾಸ್ತ ಹುದ್ದೆಗಳ ಸ್ವರೂಪ ಬದಲಾಗುತ್ತಿದೆ. ಕೇವಲ ಮಾಹಿತಿ ಸಂಗ್ರಹಿಸುವುದಕ್ಕಿಂತ ವ್ಯವಸ್ಥೆಯ ಕಾರ್ಯನಿರ್ವಹಣೆ ಹಾಗೂ ಫಲಿತಾಂಶಗಳನ್ನು ವಿಶ್ಲೇಷಿಸಿ, ಸೂಕ್ತ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಹೊಂದಿರುವ ಪದವೀಧರರಿಗೆ ಹೆಚ್ಚಿನ ಬೇಡಿಕೆಯಿದೆ. ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವು ಭವಿಷ್ಯದ ಸಾಧ್ಯತೆಗಳನ್ನು ಊಹಿಸುವ ವ್ಯವಸ್ಥೆಯಾಗಿದ್ದು, ಅದರಿಂದ ತಪ್ಪು ಫಲಿತಾಂಶಗಳು ಬರುವ ಸಾಧ್ಯತೆಯೂ ಇದೆ.
ಹೀಗಾಗಿ ಎಐ ನೀಡುವ ಫಲಿತಾಂಶಗಳಲ್ಲಿನ ದೋಷಗಳನ್ನು ಗುರುತಿಸಿ, ಅವುಗಳನ್ನು ಸರಿಪಡಿಸುವ ಪರಿಣತಿಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಾಗ ಅದರ ಬಳಕೆಯಿಂದ ಸಂಭವಿಸಬಹುದಾದ ತಪ್ಪುಗಳು, ಅವುಗಳ ಪರಿಣಾಮ ಹಾಗೂ ವೆಚ್ಚದ ಬಗ್ಗೆಯೂ ಸಮಗ್ರ ಅರಿವು ಹೊಂದಿರಬೇಕು ಎಂದು ಸಲಹೆ ನೀಡಿದರು.
ಸ್ವಯಂ ಕಲಿಕೆಗೆ ವಿದ್ಯಾರ್ಥಿಗಳು ಆದ್ಯತೆ ನೀಡಲಿ
ಒಂದು ಕೆಲಸವನ್ನು ಸರಿಯಾಗಿ ಆರಂಭಿಸಿದರೆ ಅರ್ಧ ಕೆಲಸ ಪೂರ್ಣಗೊಂಡಂತೆ. ಅದರಂತೆ ಆಸಕ್ತಿಯ ಕೋರ್ಸ್ ಆಯ್ಕೆ ಮಾಡಿಕೊಂಡು ಸ್ನಾತಕೋತ್ತರ ಅಧ್ಯಯನದ ಹಂತಕ್ಕೆ ಪ್ರವೇಶಿಸಿರುವ ವಿದ್ಯಾರ್ಥಿಗಳು ತಮ್ಮ ಕಲಿಕೆಯ ಜವಾಬ್ದಾರಿಯನ್ನು ತಾವೇ ನಿರ್ವಹಿಸಬೇಕು. ಸ್ನಾತಕೋತ್ತರ ಶಿಕ್ಷಣದಲ್ಲಿ ಪ್ರತಿಯೊಂದು ಹಂತದಲ್ಲೂ ಇತರರಿಂದ ಮಾರ್ಗದರ್ಶನ ನಿರೀಕ್ಷಿಸುವ ಬದಲು, ಏನು ಕಲಿಯಬೇಕು, ಹೇಗೆ ಕಲಿಯಬೇಕು ಮತ್ತು ಎಲ್ಲಿ ಕಲಿಯಬೇಕು ಎಂಬುದನ್ನು ಸ್ವತಃ ನಿರ್ಧರಿಸುವ ಸ್ವಯಂ ಕಲಿಕೆಯ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಇಂದಿನ ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿ ಕೇಂದ್ರಿತವಾಗಿದೆ. ಶಿಕ್ಷಣ ಸಂಸ್ಥೆಗಳು ಕಲಿಕೆಗೆ ಅಗತ್ಯವಾದ ಸೌಲಭ್ಯ ಮತ್ತು ಅವಕಾಶಗಳನ್ನು ಒದಗಿಸುತ್ತವೆ. ವಿದ್ಯಾರ್ಥಿಗಳು ತರಗತಿಯೊಳಗಿನ ಪಾಠಗಳಿಗೆ ಮಾತ್ರ ಸೀಮಿತವಾಗದೆ, ಪ್ರಾಯೋಗಿಕ ಅನುಭವ ಹಾಗೂ ತರಗತಿಯ ಹೊರಗಿನ ಕಲಿಕೆಗೂ ಆದ್ಯತೆ ನೀಡಬೇಕು. ‘ಕಲಿಯುವುದನ್ನು ಹೇಗೆ ಕಲಿಯಬೇಕು’ ಎಂಬುದೇ ಇಂದಿನ ಶಿಕ್ಷಣದ ಮೂಲ ಆಶಯವಾಗಿದೆ ಎಂದು ತಿಳಿಸಿದರು.
ಸಂಸ್ಕೃತಿ, ಸಂಸ್ಕಾರಗಳ ಅರಿವು ಅಗತ್ಯ
ಎನ್ಇಎಸ್ ನಿರ್ದೇಶಕ ಟಿ.ಆರ್. ಅಶ್ವತ್ಥನಾರಾಯಣ ಶೆಟ್ಟಿ ಮಾತನಾಡಿ, ಯುವ ಸಮೂಹದಲ್ಲಿ ಸಂಸ್ಕೃತಿ ಮತ್ತು ಸಂಸ್ಕಾರಗಳು ಕಣ್ಮರೆಯಾಗುತ್ತಿರುವುದು ವಿಷಾದನೀಯ. ಭಾರತದ ಪ್ರತಿಯೊಂದು ಆಚರಣೆಗಳೂ ವೈಜ್ಞಾನಿಕ ತಳಹದಿಯಲ್ಲಿ ರೂಪುಗೊಂಡಿವೆ. ಅವುಗಳ ಹಿಂದಿರುವ ಮಹತ್ವವನ್ನು ಅರಿತು, ಸಂರಕ್ಷಿಸಿ ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಯುವ ಸಮೂಹದ ಮೇಲಿದೆ ಎಂದರು.
Also Read>> ಕುವೆಂಪು ವಿವಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ
ಎಂಬಿಎ ವಿಭಾಗದ ಮುಖ್ಯಸ್ಥ ಡಾ. ಶ್ರೀಕಾಂತ್ ಮತ್ತು ಎಂಸಿಎ ವಿಭಾಗದ ಮುಖ್ಯಸ್ಥ ಡಾ. ಹೇಮಂತ್ ಕುಮಾರ್ ತಮ್ಮ ವಿಭಾಗಗಳ ಶೈಕ್ಷಣಿಕ ಚಟುವಟಿಕೆಗಳು ಹಾಗೂ ಕೌಶಲ್ಯಾಧಾರಿತ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
ಎನ್ಇಎಸ್ ನಿರ್ದೇಶಕ ಎಚ್.ಸಿ. ಶಿವಕುಮಾರ್ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಡಾ. ವೈ. ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಪ್ರಾಧ್ಯಾಪಕ ಡಾ. ಬಿ.ವಿ. ಶ್ರೀನಿವಾಸಮೂರ್ತಿ ಸ್ವಾಗತಿಸಿದರು. ಪ್ರಶಾಂತ್ ಅಂಕಲಕೋಟಿ ವಂದಿಸಿದರು. ಡಾ. ಕವಿತಾ ಕ್ರಾಸ್ಟ ಕಾರ್ಯಕ್ರಮ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










