ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಪ್ರಸ್ತುತ ಒಟ್ಟು ಕೃಷಿ ಮತ್ತು ಸಂಬಂಧಿತ ಉತ್ಪನ್ನಗಳಲ್ಲಿ ಕೇವಲ ಶೇಕಡಾ 3-5 ರಷ್ಟು ಕೃಷಿ ಉತ್ಪನ್ನಗಳನ್ನು ಸಂಸ್ಕರಿಸಲಾಗುತ್ತಿದ್ದು, 2025ರ ವೇಳೆಗೆ ಅದನ್ನು ಶೇಕಡಾ 25 ಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ನಬಾರ್ಡ್ ಹಾಗೂ ಅಸ್ಸೋಚಾಮ್ (ಅಸೋಸಿಯೇಟೆಡ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಆಫ್ ಇಂಡಿಯಾ) ಆಯೋಜಿಸಿರುವ, “ಕರ್ನಾಟಕ ರಾಜ್ಯದಲ್ಲಿ ಕೃಷಿ ಮತ್ತು ಆಹಾರ ಸಂಸ್ಕರಣಾ ಉದ್ಯಮಗಳ ಮೇಲೆ ಕೋವಿಡ್ -19 ನ ಪರಿಣಾಮಗಳು ಇರುವ ಸವಾಲುಗಳು, ಅವಕಾಶಗಳು ಮತ್ತು ಉತ್ತಮ ಭವಿಷ್ಯಕ್ಕಾಗಿ ಮುಂದಿನ ದಾರಿ” ಎನ್ನುವ ವಿಷಯಾಧಾರಿತ ವೆಬಿನಾರ್ ಉದ್ಘಾಟಿಸಿ ಸಚಿವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮ ನಿರ್ಭರ್ ಯೋಜನೆಗಾಗಿ 10,000 ಕೋಟಿ ರೂ.ಗಳನ್ನು ಆಹಾರ ಸಂಸ್ಕರಣೆಗೆ ಮತ್ತು ಆರ್ಥಿಕ ಕೊರತೆಯನ್ನು ನೀಗಿಸಲು ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ನೀಡಿದ್ದಾರೆ. ಹಲವಾರು ಕೃಷಿ ಸುಧಾರಣೆಗಳನ್ನು ತರುವಲ್ಲಿ ಕರ್ನಾಟಕವು ಮೊದಲ ರಾಜ್ಯವಾಗಿದ್ದು ಎಪಿಎಂಸಿಗಳಿಗೆ ಇ-ಟ್ರೇಡಿಂಗ್ ಅನ್ನು ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕ ಎಂದು ಅವರು ಮಾಹಿತಿ ನೀಡಿದರು.
ವೈಜ್ಞಾನಿಕ ಸಂಗ್ರಹಣೆ, ಸಂಸ್ಕರಣೆ, ಪ್ಯಾಕೇಜಿಂಗ್, ಬ್ರ್ಯಾಂಡಿಂಗ್, ಮೌಲ್ಯವರ್ಧನೆ ಮತ್ತು ಮಾರ್ಕೆಟಿಂಗ್ ಬಗ್ಗೆ ಕೇಂದ್ರ ಮತ್ತು ಕರ್ನಾಟಕ ಸರ್ಕಾರಗಳೆರಡೂ ಗಮನಹರಿಸುತ್ತಿದ್ದು ಈ ವೆಬ್‌ನಾರ್ ಅನ್ನು ಸರಿಯಾದ ಸಮಯದಲ್ಲಿ ಆಯೋಜಿಸಿದ್ದಕ್ಕಾಗಿ ಮಾನ್ಯ ಸಚಿವರು ನಬಾರ್ಡ್ ಮತ್ತು ಅಸೋಚಮ್‌ಗೆ ಧನ್ಯವಾದಗಳನ್ನು ಅರ್ಪಿಸಿದರು.
ಕೋವಿಡ್ ಸಮಯದಲ್ಲಿ ರೈತರಿಗೆ ತೊಂದರೆಯಾಗದಿರಲು ಕೃಷಿ ಚಟುವಟಿಕೆಗಳು ಸಮರ್ಪಕವಾಗಿ ನಡೆಯಲು ಹಸಿರು ಪಾಸ್ಗಳನ್ನು ವಿತರಿಸಿ, ಅಗ್ರಿ ವಾರ್ ರೂಮ್ ಪ್ರಾರಂಭಿಸಿ, ಭತ್ತದ ಕೊಯ್ಲು ಯಂತ್ರಗಳು ಸೇರಿದಂತೆ ಕೃಷಿ ಉಪಕರಣಗಳ ಖರೀದಿ ಸರಬರಾಜಿಗೆ ಅನುಕೂಲ ಮಾಡಿಕೊಡಲಾಯಿತು. ಕೋವಿಡ್ -19 ನಿರ್ಬಂಧಿತ ಲಾಕ್ ಡೌನ್ ಅವಧಿಯಲ್ಲಿ, ಕರ್ನಾಟಕದಲ್ಲಿ ಎಫ್‌ಪಿಒಗಳು ಮತ್ತು ಹಾಪ್‌ಕಾಮ್ಸ್ ಮತ್ತು ಕೆವಿಕೆಗಳನ್ನು ಕೃಷಿ ಮತ್ತು ತೋಟಗಾರಿಕ ಉತ್ಪಾದನೆಗಳ ನೇರ ಮಾರುಕಟ್ಟೆಗಾಗಿ ಬಳಸಿಕೊಳ್ಳಲಾಯಿತು ಮತ್ತು ಗ್ರಾಹಕರಿಗೆ ಅದನ್ನು ಪೂರೈಸಲು ವ್ಯವಸ್ಥೆ ಮಾಡಲಾಯಿತು. ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೆ ಮೂವತ್ತು ದಿನಗಳ ಪ್ರವಾಸ ಕೈಗೊಂಡು ಆಹಾರ ಸಂಸ್ಕರಣಾ ಘಟಕಗಳು, ಶೀತಲ ಶೇಖರಣಾ ಘಟಕಗಳು ಮತ್ತು ಗೋದಾಮುಗಳು ಮತ್ತು ಕೆಸಿಸಿಗಳು, ಎಫ್‌ಪಿಒಗಳು ಮತ್ತು ಕೆವಿಕೆಗಳ ಮಹತ್ವವನ್ನು ಅರಿತು ಅವುಗಳನ್ನು ಕರ್ನಾಟಕದಲ್ಲಿ ಬಲಪಡಿಸಲು ನಿರ್ಧರಿಸಿದೆ ಎಂದರು.
ರಾಜ್ಯವು ಕೃಷಿ ಉತ್ಪನ್ನಗಳ ಮಾರುಕಟ್ಟೆ ಸಾಮರ್ಥ್ಯ ಸುಧಾರಣೆ ಗೋದಾಮುಗಳು ಮತ್ತು ಕೋಲ್ಡ್ ಸ್ಟೋರೇಜ್ಗಳಲ್ಲಿ ಪ್ಯಾಕಿಂಗ್ ಮಾಡುವಂತಹ ಮೌಲ್ಯವರ್ಧಿತ ಸೇವೆಗಳನ್ನು ನೀಡಲು ಚಿಂತನೆ ನಡೆದಿದೆ. ಕರ್ನಾಟಕ ಸರ್ಕಾರವು ಆಹಾರ ಉದ್ಯಾನವನಗಳು ಮತ್ತು ಕೃಷಿ ಉದ್ಯಾನವನಗಳಲ್ಲಿ ಉಗ್ರಾಣ ಮತ್ತು ಲಾಜಿಸ್ಟಿಕ್ ಹಬ್ ಅನ್ನು ಸ್ಥಾಪಿಸಲು ಚಿಂತನೆ ನಡೆಸುತ್ತಿರುವುದಾಗಿ ಸಚಿವರು ಮಾಹಿತಿ ನೀಡಿದರು.
ಆನ್‌ಲೈನ್ ವ್ಯಾಪಾರ ಮಾರುಕಟ್ಟೆ ವೇದಿಕೆಯೊಂದಿಗೆ ಉಪ ಮಾರುಕಟ್ಟೆಗಳಾಗಿ ಸಾಮಾಗ್ರಿಗಳ ಸಂಗ್ರಹಕ್ಕೆ ಕೋಲ್ಡ್ ಸ್ಟೋರೇಜ್‌ಗಳನ್ನು ನಿರ್ವಹಿಸಲು ಸಿದ್ಧತೆ ನಡೆಸಲಾಗಿದೆ. ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ಮಾರಾಟಕ್ಕಾಗಿ ಆನ್‌ಲೈನ್ ವೇದಿಕೆಗೆ ಸಿದ್ಧತೆ ನಡೆದಿದೆ ಎಂದು ವಿವರಿಸಿದರು.
ಈ ವೆಬ್‌ನಾರ್ ಭರವಸೆಯ ಭಾಗವಾಗಿದೆ. ಕರ್ನಾಟಕ ಕೃಷಿ ಉದ್ಯಾನವನಗಳು ಮತ್ತು ಆಹಾರ ಉದ್ಯಾನವನಗಳಲ್ಲಿ ಗೋದಾಮು ಮತ್ತು ಲಾಜಿಸ್ಟಿಕ್ ಹಬ್‌ಗಳನ್ನು ಸ್ಥಾಪಿಸಲು ಸಹಾಯ ಮಾಡುವ ಮೂಲಕ ಅವರು ಕರ್ನಾಟಕಕ್ಕೆ ಅಸೋಚಮ್ ಬೆಂಬಲವನ್ನು ನೀಡಲಿದ್ದಾರೆ ಎಂದರು.
ಪ್ರಸಕ್ತ 2020-21ರಲ್ಲಿ ಇನ್ನೂ 100 ಎಫ್‌ಪಿಒಗಳನ್ನು ಸ್ಥಾಪಿಸಲು ಕರ್ನಾಟಕ ಸರ್ಕಾರ ಚಿಂತನೆ ನಡೆಸುತ್ತಿದೆ. ಭಾರತದಲ್ಲಿ 10,000 ಎಫ್‌ಪಿಒಗಳನ್ನು ಸ್ಥಾಪಿಸಲು ಭಾರತ ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿದ ಮಾರ್ಗಸೂಚಿಗಳು ಕರ್ನಾಟಕದಲ್ಲಿ ಎಫ್‌ಪಿಒಗಳನ್ನು ಮತ್ತಷ್ಟು ಬಲಪಡಿಸಲಿವೆ. ಎಪಿಎಂಸಿ ಕಾಯ್ದೆಯಲ್ಲಿ ಇತ್ತೀಚೆಗೆ ತರಲಾದ ತಿದ್ದುಪಡಿಯು ಕೃಷಿ ಉದ್ಯಾನವನಗಳು ಮತ್ತು ಆಹಾರ ಉದ್ಯಾನವನಗಳನ್ನು ಖಾಸಗಿ ಮಾರುಕಟ್ಟೆಗಳಾಗಿ ಬಳಸಿಕೊಳ್ಳಲು ಅವಕಾಶವನ್ನು ಒದಗಿಸುತ್ತದೆ ಮತ್ತು ರೈತರು ಮತ್ತು ಎಫ್‌ಪಿಒಗಳನ್ನು ಕೃಷಿ ಉದ್ಯಾನವನಗಳು ಮತ್ತು ಆಹಾರ ಉದ್ಯಾನವನಗಳೊಂದಿಗೆ ಸಂಪರ್ಕಿಸಬಹುದು. ಇದರಿಂದ ರೈತರಿಗೆ ಸ್ಪರ್ಧಾತ್ಮಕ ಬೆಲೆಗಳು ಮತ್ತು ಪೂರೈಕೆ ಸಿಗುತ್ತದೆ. ಕೆಪೆಕ್ (ಕರ್ನಾಟಕ ರಾಜ್ಯ ಕೃಷಿ ಉತ್ಪಾದನಾ ಸಂಸ್ಕರಣೆ ಮತ್ತು ರಫ್ತು ನಿಗಮ) ದ ಅಧ್ಯಕ್ಷರೂ ಆಗಿರುವ ಅವರು, ಕೆಪೆಕ್ ಪ್ರಗತಿಯನ್ನು ಪರಿಶೀಲಿಸಿದ್ದು ರಾಜ್ಯದಲ್ಲಿ ಕೆಪೆಕ್‌ನ ಕೋಲ್ಡ್ ಸ್ಟೋರೇಜ್ ಸೌಲಭ್ಯಗಳ ಒಳಗೆ ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ನಿರ್ಧರಿಸಿರುವುದಾಗಿ ತಿಳಿಸಿದರು.
ಎಂಎಸ್‌ಎಂಇಗಳು ಮತ್ತು ಕೃಷಿ ಮೂಲಸೌಕರ್ಯಗಳನ್ನು ಬಲಪಡಿಸಲು ವಿಶೇಷವಾಗಿ ಒದಗಿಸಲಾಗಿರುವ ಆತ್ಮ ನಿರ್ಭರ್ ಅಭಿಯಾನದಲ್ಲಿ ಲಭ್ಯವಿರುವ ಹಣವನ್ನು ಬಳಸಿಕೊಳ್ಳಬಹುದು. ಅಗ್ರಿ ಪಾರ್ಕ್ , ಫುಡ್ ಪಾರ್ಕ್ ಸಮುದ್ರ ಆಹಾರ ಉದ್ಯಾನಗಳು, ಅಕ್ಕಿ ಮತ್ತು ಮೆಕ್ಕೆ ಜೋಳದ ತಂತ್ರಜ್ಞಾನ ಉದ್ಯಾನಗಳು, ಶೀತಲ ಶೇಖರಣಾ ಘಟಕಗಳು, ಗೋದಾಮುಗಳು, ಕೃಷಿ ಲಾಜಿಸ್ಟಿಕ್ ಹಬ್‌ಗಳು, ಲಾಜಿಸ್ಟಿಕ್ ಉದ್ಯಾನವನಗಳು, ಸರ್ಕಾರವನ್ನು ಸ್ಥಾಪಿಸಲು ಕರ್ನಾಟಕದ ಮೂಲಸೌಕರ್ಯ ಯೋಜನೆಗಳಿಗೆ ಹಣವನ್ನು ಬಳಸಿಕೊಳ್ಳಲು ಸರ್ಕಾರ ಚಿಂತನೆ ನಡೆಸಿದೆ ಎಂದು ಕೃಷಿ ಸಚಿವರು ಸ್ಪಷ್ಟಪಡಿಸಿದರು.
ಭಾರತ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಸಿಇಒ ಅಶೋಕ್ ದಳವಾಯಿ ಮಾತನಾಡಿ, ರೈತರ ಆದಾಯ ಹೆಚ್ಚಳಕ್ಕೆ ರೈತರಿಗೆ ಉತ್ಪನ್ನಗಳನ್ನ ಮಾರಾಟ ಮಾಡಲು ಅವಕಾಶ ನೀಡಬೇಕು. ಗ್ರಾಹಕ ಅಥವಾ ಗ್ರಾಹಕರು ಬಯಸಿದ ರೀತಿ, ಮುಕ್ತ ಮಾರುಕಟ್ಟೆ ಒದಗಿಸಿ ಮತ್ತು ರೈತರನ್ನು ಬಲಪಡಿಸಬೇಕು. ಎಲ್ಲಾ ಇಲಾಖೆಗಳು ಮತ್ತು ಮಾರ್ಕೆಟಿಂಗ್ ಸಂಸ್ಥೆಗಳನ್ನು ಸಂಯೋಜಿಸಬೇಕು ಎಂದರು.
ವೆಬಿನಾರ್‌ನಲ್ಲಿ ಕರ್ನಾಟಕ ಪ್ರಾದೇಶಿಕ ಕಚೇರಿ ಮುಖ್ಯಸ್ಥ ನೀರಜ್ ಕುಮಾರ್ ವರ್ಮಾ, ಕರ್ನಾಟಕ ಅಸೋಚಮ್ ಮುಖ್ಯಸ್ಥ ಬಿ.ವಿ. ನಾಯ್ಡು, ಪ್ರಮುಖರಾದ ಕೃಷ್ಣಕುಮಾರ್ ಜೋಷಿ, ಪ್ರಮೋದ್ ಹಳ್ದೆ, ಡಾ.ಸುರೇಶ್ ಕುಮಾರ್ ಕೆ.ಬಿ, ಶಿವಾನಂದ ರೈ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.
Get In Touch With Us info@kalpa.news Whatsapp: 9481252093
Discussion about this post