ನವದೆಹಲಿ: ಇತ್ತೀಚಿಗೆ ರಾಜಸ್ಥಾನದ ಅಳ್ವಾರ್ ನಲ್ಲಿ ನಡೆದ ಸಾಮೂಹಿಕ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಇದನ್ನು ತಡೆಗಟ್ಟಲು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿದೆ.
ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಗೌಬಾ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಗಿದ್ದು, ಸಾಮೂಹಿಕ ಹಲ್ಲೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲಹೆ ಸೂಚನೆ ನೀಡುವಂತೆ ತಿಳಿಸಲಾಗಿದೆ.
ಈ ಸಮಿತಿಯಲ್ಲಿ ಕಾನೂನು, ನ್ಯಾಯಾಂಗ, ಸಾಮಾಜಿಕ ಮತ್ತು ಸಬಲೀಕರಣ ಇಲಾಖೆಯ ಕಾರ್ಯದರ್ಶಿಗಳು, ತಜ್ಞರು ಸದಸ್ಯರಾಗಿದ್ದಾರೆ.
ಈ ನಡುವೆ ಗೃಹ ಸಚಿವ ರಾಜ್ನಾಥ್ ಸಿಂಗ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಚಿವರ ಸಮಿತಿಯನ್ನು ಸಹ ರಚಿಸಲಾಗಿದ್ದು, ಉನ್ನತ ಮಟ್ಟದ ಸಮಿತಿಯು ಸಲಹೆ, ಸೂಚನೆ, ಶಿಫಾರಸುಗಳನ್ನು ಸಚಿವರ ಸಮಿತಿಗೆ ಸಲ್ಲಿಸಲಿದೆ.
ಇನ್ನು, ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸುವಂತೆ ರಾಜಸ್ಥಾನ ಸರ್ಕಾರಕ್ಕೆ ಕೇಂದ್ರ ಗೃಹ ಸಚಿವಾಲಯ ಸೂಚನೆ ನೀಡಿದೆ.
ಜುಲೈ 21 ರಂದು ರಾಜಸ್ತಾನದ ಅಳ್ವಾರ್ ನಲ್ಲಿ ಗೋವು ಸಾಗಣೆ ಆರೋಪದ ಮೇರೆಗೆ ವ್ಯಕ್ತಿಯೊಬ್ಬರ ಮೇಲೆ ಸಾಮೂಹಿಕ ಹಲ್ಲೆ ನಡೆಸಲಾಗಿತ್ತು.
ಪ್ರಕರಣ ಸಂಬಂಧ ವಿರೋಧ ಪಕ್ಷಗಳಿಂದ ಹಲವು ಟೀಕೆಗಳು ವ್ಯಕ್ತವಾಗಿದ್ದವು. ಅಲ್ಲದೆ, ಲೋಕಸಭೆ ಕಲಾಪದಲ್ಲೂ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದವು.
ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಕೂಡಲೇ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.

















