ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ಅಮೃತ ಭಾರತ ರೈಲು ನಿಲ್ದಾಣ ಪುನರ್ ಅಭಿವೃದ್ಧಿ ಯೋಜನೆ (ABSSAmrit Bharat Station Scheme) ಅಡಿಯಲ್ಲಿ ಪುನರ್ ಅಭಿವೃದ್ಧಿಗೊಂಡ ರೈಲು ನಿಲ್ದಾಣಗಳ ಲೋಕಾರ್ಪಣೆಗೆ ಮುನ್ನ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಹುಬ್ಬಳ್ಳಿ ರೈಲ್ವೆ ವಿಭಾಗವು ಶಾಲಾ ವಿದ್ಯಾರ್ಥಿಗಳಿಗಾಗಿ ಚಿತ್ರಕಲೆ, ಪ್ರಬಂಧ ಬರವಣಿಗೆ ಹಾಗೂ ಭಾಷಣ ಸ್ಪರ್ಧೆಗಳನ್ನು ಆಯೋಜಿಸಿದೆ.
Also Read>> Indian Railway | ವಿಶಾಖಪಟ್ಟಣಂ–ಬೆಂಗಳೂರು ವಿಶೇಷ ರೈಲು ಸೇವೆ ವಿಸ್ತರಣೆ
ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದ ಅಳ್ನಾವರ, ಕೊಪ್ಪಳ ಹಾಗೂ ಬಾದಾಮಿ ರೈಲು ನಿಲ್ದಾಣಗಳು ಜುಲೈ 17ರಂದು ಲೋಕಾರ್ಪಣೆಗೊಳ್ಳಲಿದ್ದು, ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಮಾದರಿ ರೈಲು ನಿಲ್ದಾಣಗಳಾಗಿ ಅಭಿವೃದ್ಧಿಗೊಂಡಿವೆ.
“ನನ್ನ ನಗರದ ಅಭಿವೃದ್ಧಿ ಹೊಂದಿದ ರೈಲು ನಿಲ್ದಾಣ ಹೇಗಿರಬೇಕು?” ಮತ್ತು “ವಿಕಸಿತ ಭಾರತ ನಿರ್ಮಾಣಕ್ಕಾಗಿ ನಾನು ಏನು ಮಾಡುತ್ತೇನೆ?” ಎಂಬ ವಿಷಯಗಳ ಕುರಿತು ವಿದ್ಯಾರ್ಥಿಗಳು ತಮ್ಮ ಕಲ್ಪನೆ, ಅಭಿಪ್ರಾಯ ಹಾಗೂ ರಾಷ್ಟ್ರ ನಿರ್ಮಾಣದ ಸಂಕಲ್ಪಗಳನ್ನು ಚಿತ್ರ, ಪ್ರಬಂಧ ಮತ್ತು ಭಾಷಣಗಳ ಮೂಲಕ ಅಭಿವ್ಯಕ್ತಿಪಡಿಸಿದರು.
Amrit Bharat Station Scheme | ವಿದ್ಯಾರ್ಥಿಗಳಿಗೆ ಸ್ಪರ್ಧೆ
ಸ್ಪರ್ಧೆಗಳಿಗೆ ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಕೊಪ್ಪಳದಲ್ಲಿ ವಿವಿಧ ಶಾಲೆಗಳು ಮತ್ತು ಕಾಲೇಜುಗಳಿಂದ 145 ವಿದ್ಯಾರ್ಥಿಗಳು, ಬಾದಾಮಿಯಲ್ಲಿ 139 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಅಳ್ನಾವರದಲ್ಲಿ ಎಂಟು ಶಾಲೆಗಳ ನೂರಾರು ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದು, ವಿದ್ಯಾರ್ಥಿಗಳಲ್ಲಿ ಭಾರತೀಯ ರೈಲ್ವೆಯ ಆಧುನೀಕರಣ ಮತ್ತು ದೇಶದ ಅಭಿವೃದ್ಧಿ ಕುರಿತು ಹೆಚ್ಚುತ್ತಿರುವ ಆಸಕ್ತಿಯನ್ನು ಈ ಕಾರ್ಯಕ್ರಮ ಪ್ರತಿಬಿಂಬಿಸಿದೆ.


‘ಸೆಲ್ಫಿ ವಿತ್ ಸ್ಟೇಷನ್’ ಅಭಿಯಾನ
ಜಾಗೃತಿ ಅಭಿಯಾನದ ಭಾಗವಾಗಿ ಜುಲೈ 15 ಮತ್ತು 16ರಂದು “ಸೆಲ್ಫಿ ವಿತ್ ಸ್ಟೇಷನ್” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅಮೃತ ಭಾರತ ಯೋಜನೆಯಡಿ ನೂತನ ರೂಪ ಪಡೆದ ಅಳ್ನಾವರ, ಕೊಪ್ಪಳ ಮತ್ತು ಬಾದಾಮಿ ರೈಲು ನಿಲ್ದಾಣಗಳೊಂದಿಗೆ ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಈ ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ಸಾರ್ವಜನಿಕರಿಗೆ ಆಹ್ವಾನ ನೀಡಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









