ಉಪ್ಪಿನಂಗಡಿ: ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದ ಶ್ರೀ ಸಹಸ್ರಲಿಂಗೇಶ್ವರ ದೇವಾಲಯಕ್ಕೆ ವಿವೇಕಾನಂದ ಅಧ್ಯಯನ ಕೇಂದ್ರ – ಯಶಸ್‍ನ ವಿದ್ಯಾರ್ಥಿಗಳು ಸಂಗಮ ವೀಕ್ಷಣೆ ಮತ್ತು ನೆರೆಪೀಡಿತ ಪ್ರದೇಶಗಳ ಅಧ್ಯಯನದಲ್ಲಿ ಶನಿವಾರ ಭಾಗವಹಿಸಿದರು.
ರಾಜ್ಯಾದ್ಯಂತ ಸುರಿದ ಭಾರೀ ಮಳೆಯ ಕಾರಣದಿಂದಾಗಿ ಹಲವು ಜಿಲ್ಲೆಗಳು ನೆರೆಗೆ ತುತ್ತಾಗಿವೆ. ಈ ಹಿನ್ನೆಲೆಯಲ್ಲಿ, ಮುಂದೆ ಆಡಳಿತಾತ್ಮಕ ಹುದ್ದೆಗಳಿಗೆ ಸೇರಲಿಚ್ಛಿಸಿರುವ ಯಶಸ್ ನ ವಿದ್ಯಾರ್ಥಿಗಳಿಂದ ನೆರೆ ಅಧ್ಯಯನ ಮತ್ತು ಇಂತಹ ಕ್ಲಿಷ್ಟಕರ ಸಂದರ್ಭಗಳಲ್ಲಿ ಅಧಿಕಾರಿಯಾಗಿ ಸಮಯೋಚಿತ ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳಬಹುದು ಎಂಬುದರ ಕುರಿತಾಗಿ ಪ್ರಾಯೋಗಿಕ ಪರಿಶೀಲನೆ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿಗಳಾದ ನೇತ್ರಾವತಿ ಮತ್ತು ಕುಮಾರಧಾರೆಯ ಮಿತಿಮೀರಿದ ನೀರಿನ ಹರಿವಿನಿಂದಾಗಿ ಜಿಲ್ಲೆಯ ಹಲವು ಕಡೆ ಹಲವು ಸಮಸ್ಯೆಗಳು ಉದ್ಭವಿಸಿ, ಉಲ್ಬಣಗೊಂಡಿವೆ. ಈ ಎರಡು ಜೀವನದಿಗಳ ಸಂಗಮ ಕ್ಷೇತ್ರವಾದ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಸುತ್ತಮುತ್ತಲಿನ ಪ್ರದೇಶಗಳಲ್ಲಾದ ಹಾನಿಯ ಕುರಿತು ತಿಳಿಯುವ ಉದ್ದೇಶದಿಂದ ಯಶಸ್ ವಿದ್ಯಾರ್ಥಿ ಸಮೂಹ ಅಲ್ಲಿಗೆ ತೆರಳಿತು.
ಉಪ್ಪಿನಂಗಡಿಯ ನಿವಾಸಿ ಹರೀಶ್ ನಟ್ಟಿಬೈಲು ತಮಗಾದ ತೊಂದರೆಗಳನ್ನು ಸೇರಿದ್ದ ವಿದ್ಯಾರ್ಥಿಗಳಿಗೆ ವಿವರಿಸಿದರು. ಒಟ್ಟು ನಾಲ್ಕರಿಂದ ಐದು ಎಕರೆಯ ತಮ್ಮ ತೋಟದಲ್ಲಿ ಮೂರು ಸಾವಿರದಷ್ಟು ಅಡಿಕೆ ಮರಗಳಿವೆ. ಕುಮಾರಧಾರಾ ನದಿಯ ಅತಿಯಾದ ಹರಿವಿನಿಂದಾಗಿ ಸಂಪೂರ್ಣ ತೋಟಕ್ಕೆ ಹಾನಿಯಾಗಿದೆ.
ಅದಲ್ಲದೆ ಸರ್ಕಾರದಿಂದ ಕೊಳೆ ರೋಗಕ್ಕೆ ಪರಿಹಾರ ಸಿಗುವುದನ್ನು ಬಿಟ್ಟರೆ ನೆರೆಪೀಡಿತ ಪ್ರದೇಶವೆಂದು ಯಾವುದೇ ಪರಿಹಾರ ಸಿಗುವುದಿಲ್ಲ. ಇದರಿಂದಾಗಿ ಬಹಳ ನಷ್ಟ ಉಂಟಾಗಿದೆ ಎಂದು ತಿಳಿಸಿದರು.
ಹಾಗೆಯೇ ನೇತ್ರಾವತಿ ನದಿಯ ನೀರಿನ ಮಟ್ಟ ಹೆಚ್ಚಾಗಿ ಅಲ್ಲಿನ ಜನವಸತಿಗಳಿಗೆ ನೀರು ನುಗ್ಗಿದ ಪರಿಣಾಮ ಅನೇಕ ಮನೆಗಳಿಗೆ ತೊಂದರೆ ಉಂಟಾಗಿದೆ. 1974ರ ಮಹಾನೆರೆಯ ನಂತರ ಮೂರನೇ ಬಾರಿಗೆ ಇಂತಹ ಪರಿಸ್ಥಿತಿ ಮರುಕಳಿಸಿದೆ. ನದಿಯ ಆಳ ಕಡಿಮೆಯಾಗಿ, ವಿಸ್ತಾರ ಹೆಚ್ಚಾದ ಕಾರಣ ಈ ಸಮಸ್ಯೆಗಳು ಹೆಚ್ಚಾಗುತ್ತಿದೆ ಎಂದು ನೆರೆ ಸಂತ್ರಸ್ತ ಜಗದೀಶ ಶೆಟ್ಟಿ ಹೇಳಿದರು.
ವಿದ್ಯಾರ್ಥಿಗಳ ಜೊತೆಗೆ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದ ಉಪ್ಪಿನಂಗಡಿಯ ನಿವಾಸಿ ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘದ ಸದಸ್ಯ ಯು.ಜಿ. ರಾಧ ನದಿಗಳ ನೀರಿನ ಮಟ್ಟ ಹೆಚ್ಚಾದ್ದರಿಂದ ಉಂಟಾಗುವ ಹಲವಾರು ಸಮಸ್ಯೆಗಳು ಹಾಗೂ ಅದರ ಪರಿಹಾರದ ಕುರಿತು ತಿಳಿಸಿದರು.
ವಿದ್ಯಾರ್ಥಿಗಳಿಂದ ಶ್ರಮದಾನ
ಸಂಗಮ ಕ್ಷೇತ್ರಕ್ಕೆ ಭೇಟಿ ನೀಡಿದ ಯಶಸ್ ವಿದ್ಯಾರ್ಥಿಗಳು ಸಂಗಮ ಸ್ಥಾನವನ್ನು ವೀಕ್ಷಿಸುವುದರ ಜೊತೆಗೆ, ಪುಣ್ಯನದಿಗಳ ಸಂಗಮದಿಂದಾಗಿ ದೇವಾಲಯದ ಒಳಾಂಗಣವು ಕಲುಷಿತಗೊಂಡಿದ್ದರಿಂದ ಶ್ರಮದಾನ ಮಾಡುವ ಮೂಲಕ ಸ್ವಚ್ಛಗೊಳಿಸಿದರು.
ಈ ಸಂದರ್ಭದಲ್ಲಿ ಯಶಸ್’ನ ಸಂಯೋಜಕ ಗೋವಿಂದ ರಾಜ ಶರ್ಮ, ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಎಂ.ಬಿ.ಎ ವಿಭಾಗ ಮುಖ್ಯಸ್ಥ ಡಾ. ಶೇಖರ್ ಅಯ್ಯರ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧಿಕಾರಿ ಲಕ್ಷ್ಮೀ ಪ್ರಸಾದ್ ಬೊಟ್ಯಾಡಿ, ವಿವೇಕಾನಂದ ವಸತಿನಿಲಯಗಳ ಮುಖ್ಯ ನಿಲಯಪಾಲಕ ಹರೇಕೃಷ್ಣ, ರೇಡಿಯೋ ಪಾಂಚಜನ್ಯದ ತಾಂತ್ರಿಕ ವಿಭಾಗದ ಪ್ರಶಾಂತ್, ದೇವಾಲಯದ ಸಿಬ್ಬಂದಿ ವರ್ಗ ವಿದ್ಯಾರ್ಥಿನಿ ನಿಲಯ ಪಾಲಕಿಯರಾದ ನಮಿತಾ, ಅಂಜಲಿ, ಚೇತನಾ, ವಿದ್ಯಾರ್ಥಿ ನಿಲಯಪಾಲಕ ಭರತ್ ಹಾಗೂ ಯಶಸ್ ಅಧ್ಯಯನ ಕೇಂದ್ರದ ಐದು ಬ್ಯಾಚಿನ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ: ಅರುಣ್ ಕಿರಿಮಂಜೇಶ್ವರ
Discussion about this post