ಈಗ ಚುನಾವಣಾ ಕಾವಿನ ಬಿಸಿ, ಹಲವು ಪಕ್ಷದ ಕಾರ್ಯಕರ್ತರಿಗೆ, ನಾಯಕರಿಗೆ ಅಷ್ಟೇಕೆ ಮಾಧ್ಯಮದವರಿಗೂ ಶಾಖ ತಾಗುವಂತೆ ಮಾಡಿದೆ.
ಇದು ನಿಜ. ಆದರೆ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಟಿಕೇಟ್ ನೀಡುವ ಪ್ರಕ್ರಿಯೆಯು ಆಯಾ ಪಕ್ಷಗಳಲ್ಲಿ ಅನೇಕರಿಗೆ ಅತೃಪ್ತಿ, ಅಸಮಾಧಾನ ಹೊಗೆಯಾಡುವಂತೆ ಮಾಡಿದೆ. ಅಚ್ಚರಿಯೆಂದರೆ ಪಕ್ಷಗಳು ಎಲ್ಲಾ ಚುನಾವಣೆಗಳಲ್ಲೂ ಗತಿಸಿದ ಸಿಟ್ಟಿಂಗ್ ಸಂಸದ/ಶಾಸಕರ ಪತ್ನಿಯರಿಗೆ ಮಣೆ ಹಾಕಿ ಒಂದು ರೀತಿಯಲ್ಲಿ ಸಂಪ್ರದಾಯವನ್ನೇ ಮಾಡಿಕೊಂಡು ಬಂದಿವೆ. ಇದು ಬಹುತೇಕ ನಿರೀಕ್ಷಿತ ಫಲಿತಾಂಶ ಕೂಡ ನೀಡಿದೆ. ಈ ಸಂಪ್ರದಾಯ ಎಷ್ಟು ಪರಿಣಾಮಕಾರಿ ಆಗಿದೆಯೆಂದರೆ ಸಮುದಾಯವೇ ಈ ನಿರೀಕ್ಷೆಯನ್ನಿಟ್ಟುಕೊಳ್ಳುವ ರೂಢಿಯಾಗಿಬಿಟ್ಟಿದೆ.
ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಅವರಿಗೆ ಅನಧಿಕೃತವಾಗಿ ಹಲವು ನಾಯಕರು ಪ್ರಾಮಿಸ್ ಮಾಡಿದ್ದರೋ ಏನೊ? ಅವರ ಬಗ್ಗೆ ಏನೂ ಪ್ರತಿಕ್ರಿಯಿಸಿದೇ ಏಕಾಏಕಿ ಯುವ ತಾರೆ ತೇಜಸ್ವಿ ಸೂರ್ಯ ಅವರನ್ನು ಕಣಕ್ಕಿಳಿಸಿರುವ ಬಿಜೆಪಿ ಹೈಕಮಾಂಡ್ ಕ್ರಮ ರಾಜ್ಯದ ಬಹುತೇಕ ಬಿಜೆಪಿ ವಲಯದಲ್ಲಿ ಅಚ್ಚರಿ ಮೂಡಿಸಿರುವುದಂತೂ ನಿಜ. ಬೆಂಗಳೂರಿನಂತಹ ಕ್ಷೇತ್ರದಲ್ಲಿ ಈ ರೀತಿ ಗೊಂದಲವೆಬ್ಬಿಸಬಾರದಿತ್ತು.
ರಾಜ್ಯದ ಬಹುತೇಕ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರತಿಸ್ಪರ್ಧಿಗಳ ಹುಡುಕಾಟ ನಡೆಸಿವೆ. ಕಾಂಗ್ರೆಸ್ ಕೆಲವೆಡೆ ಯುವಕರನ್ನು ಹುಡುಕಿದೆ. ಉದಾ: ಮಿಥುನ್ ರೈ, ರಿಜ್ವಾನ್.
ಬಿ.ಎಸ್. ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ, ಬಂಗಾರಪ್ಪ ಪುತ್ರ ಮಧು ಇವರೂ ಕೂಡ ಯುವ ಐಕಾನ್ ಗಳೇ. ಆದರೆ ಸಂಸದರಾಗಿ ಅನುಭವ ತೂಗಿನೋಡಿದಾದ ಯಾರು ತುಸು ಜಾಸ್ತಿ ತೂಗಬಹುದು ಮತದಾರರಿಗೆ ಬಿಟ್ಟವಿಷಯ.
ಈ ಕಡೆ ಜೆಡಿಎಸ್ ಯುವ ತಾರೆಗಳನ್ನು ಹುಡುಕುವಲ್ಲಿ ಎಡವಿದೆ ಎನ್ನಲಾಗುವುದಿಲ್ಲ. ಪ್ರಜ್ವಲ್ ಮತ್ತು ನಿಖಿಲ್ ಅವರು ಯುವ ಐಕಾನ್ ಗಳೇ. ಆದರೆ ವಿಧಾನಸಭಾ ಚುನಾವಣೆಯ ತಳಹದಿಯಿಂದ ನೋಡಿದಾಗ ಕುಟುಂಬ ರಾಜಕಾರಣ ಎಂಬ ಆಕ್ಷೇಪ ಬಹಳ ದಟ್ಟವಾಗಿ ಎದ್ದಿದೆ. ಇಲ್ಲಿ ಹಿರಿಯ ದೇವೇಗೌಡರು ತೀವ್ರ ಆಲೋಚಿಸಬಹುದಿತ್ತು.
ಅವರಾದರೂ ಈ ಹಿಂದೆ ಸಾಕು ನನಗೆ ರಾಜಕೀಯ ಇದು ಕೊನೇ ಚುನಾವಣೆ ಅಂತ ಹೇಳಿದ್ದುಂಟು. ಚುನಾವಣೆಗೆ ನಿಲ್ಲುವುದು ಅವರವರ ಹಕ್ಕು. ಆದರೆ ಹಾಲಿ ಸಂಸದ ಮುದ್ದಹನುಮೇಗೌಡರ ಕ್ಷೇತ್ರ ಕದಲಿಸಬಾರದಿತ್ತು. ಹಾಗೆ ನೋಡಿದರೆ ಹಿರಿಯ ಗೌಡರಿಗಿಂತ ಹಾಲಿ ಸಂಸದರೇ ಸಮರ್ಥರಿದ್ದರು. ಇದೊಂದು ಹಿರಿಯ ಗೌಡರ ಬಗ್ಗೆ ಮುತ್ಸದ್ದಿಗಳು ಮುಖ ಕಿವುಚುವಂತೆ ಮಾಡಿದೆ.
ತಮ್ಮ ಹಾಸನವನ್ನೇ ಅವರು ಮತ್ತೆ ಆಯ್ಕೆ ಮಾಡಿಕೊಂಡು ತುಸು ಆರಾಮ ಪಡೆಯಬಹುದಿತ್ತು. ಏಕೆಂದರೆ ಶಾಸಕ ಸ್ಥಾನಕ್ಕೆ ಸಂಬಂಧ ಪಡೆದ ಕ್ಷೇತ್ರಗಳಲ್ಲಿ ಸರಾಗ ಗೆಲುವು ಪಡೆವ ಶಕ್ತಿಯಿದ್ದ ಗೌಡರ ಕುಟುಂಬ ಈ ಬಗ್ಗೆ ಸೀರಿಯಸ್ ಆಗಿ ಚಿಂತಿಸಲಿಲ್ಲವೋ ಏನೊ? ಆದರೂ ಸಾಧ್ಯವಿತ್ತು.
ಸಿನಿಮಾ ಕ್ಷೇತ್ರದಲ್ಲಿ ಅತ್ಯಂತ ನಿಕಟವಾಗಿರುವ ನಮ್ಮ ಸಿಎಂ, ಆಪ್ತರಾದ ಸಿನಿಮಾ ಮಂದಿಯನ್ನೇ ಪರರಂತೆ ಕಂಡು ಕಾಮೆಂಟ್ ಮಾಡುತ್ತಿರುವುದು ಯಾಕೋ ಸೌಜನ್ಯ ವ್ಯಕ್ತಿಯಾದ ಕುಮಾರಣ್ಣ ಅವರ ಬಗ್ಗೆ ಕೊಂಚ ಕಿರಿಕಿರಿ ಹುಟ್ಟಿಸುವಂತಿದೆ. ಕಾಂಗ್ರೆಸ್’ನಲ್ಲಿದ್ದ ಅಂಬಿಗೆ ಗೌರವ ನೀಡುವುದೇ ಆಗಿದ್ದರೆ ಶ್ರೀಮತಿ ಸುಮಲತಾ ಅವರಿಗೇ ಮೈತ್ರಿ ಪಕ್ಷಗಳು ಬೇಷರತ್ ಬೆಂಬಲ್ ನೀಡಬೇಕಿತ್ತು.
ಆದರೆ, ಈ ಜಾಣತನವನ್ನೂ ತೋರಿಸಲಿಲ್ಲ ಎಂದು ಅಚ್ಚರಿಯಾಗುತ್ತದೆ. ಈಗಲೂ ಮತ್ತೆ ಅಸಮಾಧಾನ ಹೊಗೆಯಾಡುತ್ತಿದೆ. ಅದು ಕಾಂಗ್ರೆಸ್ ಬೇರುಗಳಿರುವೆಡೆ ಜೆಡಿಎಸ್ ಅಭ್ಯರ್ಥಿಗಳಿರುವುದು ಕೊಂಚ ಅಪ್ಪಟ ಕಾಂಗ್ರೆಸ್ಸಿಗರಿಗೆ ಹೊಟ್ಟೆ ತೊಳಸುವಂತೆ ಮಾಡಿದೆ. ಅಲ್ಲಿ ಗೆದ್ದ ಅಭ್ಯರ್ಥಿಗಳಿಗೂ ಎಂದಿಗೂ ಬೇರೆ ಪಕ್ಷಗಳ ಕಾರ್ಯಕರ್ತರೊಂದಿಗೆ ಸಮನ್ವಯ ಸಾಧಿಸುವುದಿಲ್ಲ. ಎಷ್ಟೆಂದರೂ ಇದು ರಾಜಕೀಯ ಚದುರಂಗ. ಯಾವ ಯಾವ ಸಮಯ ಸಂದರ್ಭಗಳು ಹೇಗೇಗೆ ಒದಗುವವೋ ಗೊತ್ತಿಲ್ಲ. ಆಗ ಮೈತ್ರಿ ಪಕ್ಷಗಳೇ ಪರಸ್ಪರ ದ್ವೇಷ ಕಾರಬಹುದು.
ಹಿಂದೆ ಬಿಜೆಪಿ+ಜೆಡಿಎಸ್ ಮೈತ್ರಿಯಾಗಿದ್ದು ಒಡೆದ ಉದಾಹರಣೆ ನಮ್ಮ ಕಣ್ಣೆದುರೇ ಇದೆ. ಹೀಗಾಗಿ ಯಾವುದನ್ನು ನಂಬುವುದು? ಅತ್ತ ಸಮನ್ವಯ ವ್ಯಕ್ತಿ ಸಿದ್ದರಾಮಯ್ಯನವರು ಕೆಲವಕ್ಕೆ ಸ್ಪಂದಿಸುತ್ತಾರೆ, ಮತ್ತೆ ಕೆಲವಕ್ಕೆ ಮೌನ. ಅವರೂ ಕೂಡ ಮೈತ್ರಿಯಿಂದ ಬಿಸಿ ಮುಟ್ಟಿಸಿಕೊಂಡವರೇ.
ಇಂತಹ ಸೂಕ್ಷ್ಮ ಸಂದರ್ಭಗಳು ಎಲ್ಲ ಪಕ್ಷಗಳಲ್ಲೂ ನಿರ್ಮಾಣಗೊಂಡಿವೆ. ಒಂದು ಚಿಂತಕರ ಚಾವಡಿ ಇಂತಹ ಸಿಕ್ಕು ಗೋಜಲುಗಳನ್ನು ಬಿಡಿಸುವ ವ್ಯವಸ್ಥೆ ಇದ್ದಲ್ಲಿ ಎಲ್ಲ ಪಕ್ಷಗಳಿಗೂ ಹಿತ.
ವಿಶ್ಲೇಷಣೆ: ಡಾ.ಸುಧೀಂದ್ರ(ಪಿಎಚ್‌ಡಿ)
Discussion about this post