ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ ನಿತ್ಯ ಹರಿದ್ವರ್ಣವನದ ತೇಗ ಗಂಧ ತರುಗಳಲ್ಲಿ ನಿತ್ಯೋತ್ಸವ ನಿನಗೆ ನಿತ್ಯೋತ್ಸವ ತಾಯಿ ನಿತ್ಯೋತ್ಸವ ಈ ಸಾಲುಗಳನ್ನು ಕೇಳದ ಕನ್ನಡದ ಮನಸ್ಸುಗಳು ಬಹುಷಃ ಇರಲಿಕ್ಕಿಲ್ಲ.
ಶಿವಮೊಗ್ಗದವನಾಗಿ ಕೆ.ಎಸ್. ನಿಸಾರ್ ಅಹಮದ್ ಅವರು ಬದುಕಿನ ಭಾಗವಾಗಿದ್ದಾರೆ. ಅದೆಷ್ಟೋ ಸಲ ಒಂದು ಸ್ವಾರ್ಥ ಕಾಡುತ್ತದೆ. ದೇವನಹಳ್ಳಿಯಲ್ಲಿ 1935ರಲ್ಲಿ ಹುಟ್ಟುವ ಬದಲು ನಮ್ಮೂರಲ್ಲೇ ಹುಟ್ಟುಬೇಕಿತ್ತು ಅಂತ. ನಿಸಾರ್ ಅಹಮದ್ ಅವರನ್ನು ಶಿವಮೊಗ್ಗದವರಲ್ಲ ಎಂದು, ಎಂದೂ ಮನಸ್ಸು ಒಪ್ಪಲಾರದು. ಆದರೆ, ಯಾಕೆ ಎನ್ನುವುದು ತಿಳಿಯದು.
ಶಿವಮೊಗ್ಗದಲ್ಲಿ 2006 ರಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಾಗ ಸಮ್ಮೇಳನಾಧ್ಯಕ್ಷರಾದವರು ನಮ್ಮ ಕೆ.ಎಸ್. ನಿಸಾರ್ ಅಹಮದ್. ಪ್ರತಿ ಅಧ್ಯಕ್ಷರ ಆಯ್ಕೆ ಮಾಡುವಾಗಲು ವದಂತಿ ಆರೋಪ ಪ್ರತ್ಯಾರೋಪ ಸಹಜ. ಆದರೆ ಇವರ ಆಯ್ಕೆ ಬಗ್ಗೆ ವಿವಾದ ಹುಟ್ಟಲಿಲ್ಲ. ಆಗಿನ ಸಮಯಕ್ಕೆ ಚಂದ್ರಶೇಖರ ಪಾಟೀಲರು ಸಾಹಿತ್ಯ ಪರಿಷತ್ತು ಅಧ್ಯಕ್ಷರು. ಸಂಪ್ರದಾಯದಂತೆ ಸಮ್ಮೇಳನ ಚಂಪಾ ಅವರ ನೇತೃತ್ವದಲ್ಲಿ ವಿಜೃಂಭಿಸಿತು. ಚಂಪಾ ಮಾತನಾಡಿದ್ರೆ ವಿವಾದ ಹುಟ್ಟುವಾಗ ಸಮ್ಮೇಳನ ಹೇಗೆ ಸಪ್ಪಳವಿಲ್ಲದೇ ಮುಗಿಯಲು ಸಾಧ್ಯ.
ಆಗಿನ್ನೂ ಸಮ್ಮಿಶ್ರ ಸರ್ಕಾರವನ್ನು ರಚಿಸಿ ನೆಂಟಸ್ಥಿಕೆಯ ಹೊಸ ಹುರುಪಿನಲ್ಲಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಇರುವಷ್ಟು ದಿನ ಒಬ್ಬ ಶಾಶ್ವತ ನಾಯಕನಾಗಬಲ್ಲರು ಎಂಬ ಭರವಸೆ ಮೂಡಿಸಿದ್ದೆ ಕೆ.ಎಸ್. ನಿಸಾರ್ ಅಹಮದ್ ಅಧ್ಯಕ್ಷರಾಗಿದ್ದ ಸಾಹಿತ್ಯ ಸಮ್ಮೇಳನದಲ್ಲಿ.
ಚಂದ್ರಶೇಖರ ಪಾಟೀಲರು ಹಾಗೂ ಕುಮಾರಸ್ವಾಮಿಗಳು ಸಾಹಿತ್ಯ ಸಮ್ಮೇಳನ ಶುರುವಾಗುವ ದಿನ ಹತ್ತಿರವಾದಂತೆ ವಾಗ್ವಾದಕ್ಕಿದರು. ಕೆಲವು ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ ಎನ್ನುವುದನ್ನು ಸ್ಪಷ್ಟ ಪಡಿಸಿದಕ್ಕೆ ಚಂಪಾ ಅವರ ಭಾಷೆ ಖಾರವಾಗಿತ್ತು.
ಯು.ಆರ್. ಅನಂತಮೂರ್ತಿಗಳು ಬರ್ತಾರಂತೆ ಎಂದು ಕೆಲವರು ಇನ್ನು ಕೆಲವರು ಈ ಚಂಪಾ ಸರಿಯಾಗಿ ಕರೆದಿಲ್ಲ, ಹೇಗೆ ಬರ್ತಾರೆ? ಎಂದವರು ಹಲವರು. ಸಮ್ಮೇಳನದ ಉದ್ಘಾಟನಾ ಅಧ್ಯಕ್ಷರಾಗಿ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರು ಸುದೀರ್ಘ ಭಾಷಣ ಮಾಡಿದನ್ನು ಕೊನೆದಾಗಿ ಕೇಳಿಕೊಂಡಿದ್ದು ಅವತ್ತೆ.
ಇಷ್ಟೆಲ್ಲದರ ಮಧ್ಯೆಯು ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಕೆಎಸ್’ಎನ್ ಒಂದೇ ಒಂದು ಮಾತು ಸಹ ಯಾರ ವಿರುದ್ಧವೂ ಚಕಾರ ಎತ್ತಲಿಲ್ಲ. ಅವರ ಭಾಷಣದಲ್ಲಿ ಶಿವಮೊಗ್ಗೆ ಅಂದಿನ ದಿನಗಳನ್ನು ಪ್ರಸ್ತಾಪಿಸಿ ಅನ್ಯೋನ್ಯತೆ ಕುರಿತು ಮನದಾಳದ ಮಾತುಗಳನ್ನು ಆಡಿದರು.
ಎಂದಿಗೂ ವಿವಾದಕ್ಕೆ ಒಳಗಾದೇ ಸಾಹಿತ್ಯ ರಂಗದಲ್ಲಿ ಉಳಿದ ಧೀಮಂತ ವ್ಯಕ್ತಿತ್ವದ ಅಜಾತಶತ್ರು ಕೆ.ಎಸ್. ನಿಸಾರ್ ಅಹಮದ್ ಇಂದು ನಮ್ಮ ಅಗಲಿರುವುದು ಕನ್ನಡದ ಮಟ್ಟಿಗೆ ಬಹುದೊಡ್ಡ ನಷ್ಟ. ಸರಳ ಸಜ್ಜನಿಕೆಯ ಮಗ್ದ ಹೃದಯದ ಕವಿ ಮನಸ್ಸು ಅವರ ಸಾಹಿತ್ಯ ಬಲ್ಲವರು ಹೇಳಿದ್ದುಂಟು. ಹುಟ್ಟಿಗೆ ಅಯ್ಕೆ ಇಲ್ಲ ಎಂಬುದನ್ನು ಮಾನವ ಕುಲ ಕೋಟಿ ಆದರ್ಶದ ನಡೆಯಲ್ಲಿ ತೋರಿಸಿಕೊಟ್ಟಿದ್ದಾರೆ.
ಅವರ ಸಾಹಿತ್ಯ ಎಷ್ಟು ನಾಟುತ್ತದೆ ಎನ್ನುವುದಕ್ಕೆ ರಾಮನ್ ಸತ್ತ ಸುದ್ದಿ ಕಳೆದ ಇಪತ್ತು ವರ್ಷದ ಹಿಂದೆ ಓದಿದ್ದ ನೆನಪು. ಕೆಎನ್’ಎನ್ ಅವರು ಶಿವಮೊಗ್ಗದಲ್ಲಿರುವ ನವುಲೆ ಕಡೆ ಬೆಳಗಿನ ವಾಕ್ ಮಾಡ್ತಾ ಇರುತ್ತಾರೆ. ಎಂದಿನಂತೆ ದೈನಂದಿನ ಪತ್ರಿಕೆ ಓದಿ ಅದೇ ಗುಂಗಲ್ಲಿ ವಾಕ್ ಮಾಡುವಾಗ ನವುಲೆ ಸಿಕ್ಕ ಹನುಮಂತಯ್ಯನಿಗೆ ಹೇಳ್ತಾರೆ ರಾಮನ್ ತೀರಿ ಹೋದರು ಎಂದು. ಯಾರು ಈ ಸಿವಿ ರಾಮನ್ ಎಂದು ಅರಿಯದ ಆತ ಸಂಬಂಧಿಸಿದ ಸಾವಿಗೆ ಉದಾಸೀನ ಭಾವದಿಂದ ಉತ್ತರಿಸುತ್ತಾನೆ.
ರಾಮನ್ ಹೋಗಿದ್ದು ತಂಬಲಾರದ ನೋವಿನ ಸಂಗತಿ ಅಂದರೆ ದಿನಗೂಲಿ ಮಾಡುವ ಆ ವ್ಯಕ್ತಿಗೆ ಏನ್ ಆಗಬೇಕಿದೆ ಎನ್ನುವುದನ್ನು ಕಾವ್ಯಾತ್ಮಕವಾಗಿ ನಿರೂಪಿದ್ದಾರೆ.
ಹೀಗೆ ಹತ್ತು ಹಲವು ನೆನಪು ಕೆ.ಎಸ್. ನಿಸಾರ್ ಅಹಮದ್ ಅವರ ಬಗೆಗೆ ತೆರೆದುಕೊಳ್ಳುತ್ತದೆ. ಅವರ ಅತ್ಮಕ್ಕೆ ಶಾಂತಿ ದೊರೆಯಲಿ. ಅವರ ಸಾಹಿತ್ಯ ಕನ್ನಡ ಭಾಷೆ ಇರುವವರೆಗೂ ಶಾಶ್ವತವಾಗಿರುತ್ತದೆ.
ಅವರು ನಮ್ಮೆಲ್ಲರ ಜೀವನದ ಭಾಗವಾಗಿದ್ದಾರೆ ಎಂದೂ ಮರೆಯದ ವಿಶ್ವಮಾನವ ನಮ್ಮ ಕೆಎನ್‌ಎನ್….
Get in Touch With Us info@kalpa.news Whatsapp: 9481252093
Discussion about this post