ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ದುರ್ಯೋಧನನು ಯುದ್ಧದ ಪ್ರಾರಂಭದಲ್ಲಿಯೇ ಪಾಂಡವರ ಸೈನ್ಯದ ಬಲವನ್ನು ಕಂಡು ಹೆದರಿದ್ದನು. ಆದರೂ ಕೂಡ ತನ್ನ ದುರಾಸೆಯಿಂದ ಹಾಗೂ ಭೀಷ್ಮಚಾರ್ಯ, ದ್ರೋಣಾಚಾರ್ಯ, ಕೃಪಾಚಾರ್ಯ, ಕರ್ಣ ಮೊದಲಾದವರ ಮೇಲಿನ ನಂಬಿಕೆಯಿಂದ ಯುದ್ಧಕ್ಕೆ ಸಿದ್ಧನಾಗಿದ್ದನು. ಇದನ್ನು ಭಗವದ್ಗೀತೆಯಲ್ಲಿ ಬಂದಿರತಕ್ಕಂತಹ ದುರ್ಯೋಧನನ ಮಾತುಗಳಿಂದಲೇ ತಿಳಿಯಬಹುದು. ದುರ್ಯೋಧನನು ಮೊದಲು ದ್ರೋಣಾಚಾರ್ಯರ ಬಳಿ ಬಂದು ಹೇಳುವಂತಹ ಮಾತು;
ಅಪರ್ಯಾಪ್ತಂ ತದಸ್ಮಾಕಂ ಬಲಂ ಭೀಷ್ಮಾಭಿರಕ್ಷಿತಂ|
ಪರ್ಯಾಪ್ತಂ ತ್ವಿದಮೇತೇಷಾಂ ಬಲಂ ಭೀಮಾಭಿರಕ್ಷಿತಂ||
ಆ ನಮ್ಮ ಭೀಷ್ಮಾಚಾರ್ಯರಿಂದ ರಕ್ಷಿತವಾದ ಸೇನೆ ಪರಿಪೂರ್ಣವಾಗಿಲ್ಲ. ಆದರೆ ಭೀಮಸೇನನಿಂದ ರಕ್ಷಿತವಾದ ಈ ಪಾಂಡವ ಸೇನೆಯು ಪರಿಪೂರ್ಣವಾಗಿ ಸಮರ್ಥವಾಗಿದೆ ಎಂಬುದಾಗಿ.
ಇಲ್ಲಿ ದುರ್ಯೋಧನನು ತನ್ನ ಸೇನೆಯನ್ನು ಹೆಸರಿಸುವಾಗ ತದಸ್ಮಾಕಂ (ಆ ನಮ್ಮ ಸೇನೆ) ಎನ್ನುತ್ತಾನೆ. ಅದೇ ಪಾಂಡವಸೇನೆಯನ್ನು ಹೇಳುವಾಗ ಇದಮೇತೇಷಾಂ (ಈ ಪಾಂಡವ ಸೇನೆ) ಎಂಬುದಾಗಿ ಸಂಬೋಧಿಸುತ್ತಾನೆ. ವಸ್ತುತಸ್ತು ಸರಿಯಾದ ವ್ಯವಹಾರ ಎಂದರೆ, ನಮ್ಮ ವಸ್ತು ಅಥವಾ ನಮಗೆ ಹತ್ತಿರವಾದ ವಸ್ತುವನ್ನು ಹೇಳುವಾಗ ಈ ವಸ್ತು ಎಂಬುದಾಗಿ ವ್ಯವಹರಿಸುತ್ತೇವೆ. ಆದರೆ ನಮಗೆ ದೂರವಾದ ವಸ್ತುವನ್ನು ಆ ವಸ್ತು ಎಂಬುದಾಗಿ ಹೇಳುತ್ತೇವೆ. ಉದಾಹರಣೆಗೆ: ನಮಗೆ ವಸ್ತು ಹತ್ತಿರವಿದ್ದಾಗ, “ಈ ವಸ್ತುವನ್ನು ನನಗೆ ಕೊಡು” ಎನ್ನುತ್ತೇವೆ. ಅದೇ ದೂರವಿದ್ದಾಗ, “ಆ ವಸ್ತುವನ್ನು ನಮ್ಮ ಬಳಿ ತೆಗೆದುಕೊಂಡು ಬಾ” ಎಂಬುದಾಗಿ ವ್ಯವಹರಿಸುತ್ತೇವೆ.
ಇದೇ ರೀತಿ ದುರ್ಯೋಧನನು ನಿಜವಾಗಿ ಈ ನಮ್ಮ ಸೇನೆ ಹಾಗೂ ಆ ಪಾಂಡವ ಸೇನೆ ಎಂಬುದಾಗಿ ಸಂಬೋಧಿಸಬೇಕಿತ್ತು. ಬದಲಾಗಿ `ಆ ನಮ್ಮ ಸೇನೆ’ ಎಂದು ಹೇಳುವುದರ ಉದ್ದೇಶ: ಈ(ಕೌರವರ) ಸೇನೆ ಕೌರವರ ಪರವಾಗಿದ್ದರೂ ಕೂಡ ದುರ್ಯೋಧನನಿಗೆ ದೂರವಿದ್ದಂತೆ ಅನ್ನಿಸುತ್ತಿದೆ. ಕಾರಣ, ಪಾಂಡವರ ವಿರುದ್ಧ ಯುದ್ಧ ಮಾಡುವಷ್ಟು ಸಮರ್ಥವಾಗಿಲ್ಲ. ಅದೇ ಪಾಂಡವ ಸೇನೆಯ ಮೇಲೆ ದುರ್ಯೋಧನನಿಗೆ ಎಷ್ಟು ನಂಬಿಕೆ ಇತ್ತೆಂದರೆ ಈ ನಮ್ಮ ಸೇನೆ ಎಂಬುದಾಗಿ ಪ್ರಯೋಗ ಮಾಡುತ್ತಾನೆ. ಅಂದರೆ ಪಾಂಡವ ಸಮರ್ಥವಾಗಿದೆ ಎಂಬುದನ್ನು ತಿಳಿದಿದ್ದಾನೆ. ಹೀಗಾಗಿ ದುರ್ಯೋಧನನ ಇಂತಹ ಮಾತುಗಳನ್ನು ನೋಡಿದರೆ ದುರ್ಯೋಧನನು ಖಂಡಿತವಾಗಿಯೂ ಯುದ್ಧದ ಪ್ರಾರಂಭದಲ್ಲೇ ಆತಂಕಗೊಂಡಿದ್ದ ಎಂಬುದು ತಿಳಿದುಬರುತ್ತದೆ.
(ನಾಳಿನ ಲೇಖನ: ಕೃಷ್ಣನಿಗೆ ಬೆಣ್ಣೆಯ ಮೇಲೆ ಆಸೆ ಇತ್ತೇ?)ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post