ದಿನ ತುಂಬುವ ಸಮಯ ಹತ್ತಿರವಾದಂತೆ ಗರ್ಭಿಣಿಯ ದೇಹದಲ್ಲಿ ಕೆಲವು ಬದಲಾವಣೆಗಳು ಕಂಡು ಬರಬಹುದು. ಆದರೆ ಭಯ ಪಡುವ ಅವಶ್ಯಕತೆ ಇಲ್ಲ. 37 ವಾರಗಳ ನಂತರ ಹೆರಿಗೆಯಾದರೆ ಅದೊಂದು ಆರೋಗ್ಯಕರ ಹೆರಿಗೆಯಾಗುತ್ತದೆ. ಮಗು ಸಹ ಆರೋಗ್ಯಪೂರ್ಣವಾಗಿರುತ್ತದೆ ಎಂಬ ನಂಬಿಕೆ ಇದೆ.
ಒಬ್ಬ ಮಹಿಳೆಯ ಜೀವನದಲ್ಲಿ ಗರ್ಭಾವಸ್ಥೆ ಹಾಗೂ ತಾಯಿಯಾಗುವುದು ಎಂಬುದು ಅತ್ಯಂತ ಮಹತ್ವವಾದ ಘಟ್ಟವಾಗಿದ್ದು, ಇದು ಪ್ರಕೃತಿ ಹೆಣ್ಣಿಗೆ ಮಾತ್ರ ನೀಡಿರುವ ವಿಶೇಷ ವರ. ವರ್ಷಗಳಿಂದ ಆಕೆ ಕಂಡಿರುವ ಕನಸು ನನಸಾಗುವ ಸಮಯವದು. ಈ ಹಂತದಲ್ಲಿ ಗರ್ಭಿಣಿಯರಿಗೆ ಕೆಲವೊಂದು ಆರೋಗ್ಯ ಸಮಸ್ಯೆಗಳು ಎದುರಾಗುರುವುದು ಸಹಜ. ಸಮಸ್ಯೆಯನ್ನು ತಜ್ಞವೈದ್ಯರ ಬಳಿ ಹೇಳಿಕೊಂಡು ಸೂಕ್ತ ಪರಿಹಾರ ಕಂಡುಕೊಳ್ಳುವ ಅಗತ್ಯವಿರುತ್ತದೆ.
ಈ ನಿಟ್ಟಿನಲ್ಲಿ ಸುಬ್ಬಯ್ಯವೈದ್ಯಕೀಯ ಮಹಾವಿದ್ಯಾಲಯದ ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞೆ ಡಾ. ಅಶ್ವಿನಿ ಹರೀಷ್ ಪೈ ಅವರೊಂದಿಗೆ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ನಡೆಸಿದ ಒಂದು ಕಿರು ಸಂದರ್ಶನದ ಆಯ್ದ ಭಾಗ ಇಲ್ಲಿದೆ.
ಡಾ.ಅಶ್ವಿನಿ ಪೈ ಕುರಿತು:
ಡಾ. ಅಶ್ವಿನಿ ಪೈ ಅವರು ಕಳೆದ 7 ವರ್ಷಗಳಿಂದ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದಕ್ಕೂ ಮುನ್ನಾ ಅವರು ಕೆಎಂಸಿ ಮಣಿಪಾಲದಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಗರ್ಭಿಣಿಯಾಗಿರುವುದು ತಿಳಿಯುವುದು ಹೇಗೆ?
ಮಹಿಳೆಯರಿಗೆ ಮುಟ್ಟು ನಿಲ್ಲುವಿಕೆ ಗರ್ಭಾವಸ್ಥೆಯ ಸೂಚಕ. ಮುಟ್ಟು ನಿಲ್ಲುತ್ತಿದ್ದಂತೆಯೆ ವೈದ್ಯರ ಬಳಿ ಬಂದು ತಪಾಸಣೆ ಮಾಡಿಸಬೇಕು. ಗರ್ಭಧಾರಣೆ ಪತ್ತೆಗೆ ಮೂತ್ರ ಪರೀಕ್ಷೆ, ರಕ್ತಪರೀಕ್ಷೆ, ಸ್ಕ್ಯಾನಿಂಗ್ ಮಾಡಿಸಬೇಕು. ಪ್ರತಿ ತಿಂಗಳಿಗೆ ಒಮ್ಮೆ ಪರೀಕ್ಷೆ ಇರುತ್ತದೆ. ನಂತರ 2 ವಾರಕ್ಕೊಮ್ಮೆ ಹಾಗೂ ದಿನಗಳು ಹತ್ತಿರ ಬರುತ್ತಿದ್ದಂತೆ ಪ್ರತಿ ವಾರಕ್ಕೊಮ್ಮೆ ಪರೀಕ್ಷೆ ಮಾಡಿಸಿಕೊಳ್ಳಬೇಕಾಗುತ್ತದೆ.
ಗರ್ಭಾವಸ್ಥೆಯಲ್ಲಿ ಯಾವೆಲ್ಲಾ ಪರೀಕ್ಷೆಗಳು ಅಗತ್ಯ?
ಒಂದು ಹೆಣ್ಣು ಗರ್ಭಾವಸ್ಥೆಗೆ ತಲುಪುತ್ತಿದ್ದಾರೆ ಎಂದರೆ ಆಕೆಯ ದೇಹದ ವ್ಯವಸ್ಥೆಯಲ್ಲಿ ಎಲ್ಲಾ ರೀತಿಯ ಬದಲಾವಣೆ ಆಗುತ್ತದೆ.ಆಕೆಯ ಸಂಪೂರ್ಣ ದೇಹ ಪರೀಕ್ಷೆ, ರಕ್ತಪರೀಕ್ಷೆ, ಹೆಚ್‌ಐವಿ ಪರೀಕ್ಷೆ, ರಕ್ತದೊತ್ತಡ, ರಕ್ತ ಗುಂಪು ತಪಾಸಣೆ ನಡೆಸಲಾಗುತ್ತದೆ.
ಗರ್ಭದಾರಣೆ ಪತ್ತೆ ಹಚ್ಚುವ ವೈದ್ಯಕೀಯ ವಿಧಾನ ಹೇಗೆ?
ಗರ್ಭಧಾರಣೆಯನ್ನು 5ನೆಯ ವಾರದಲ್ಲಿ ಮೂತ್ರ ಹಾಗೂ ರಕ್ತ ಪರೀಕ್ಷೆಯ ಮೂಲಕ ಪತ್ತೆ ಹಚ್ಚಬಹುದು ಹಾಗೂ 6ನೆಯ ವಾರದಲ್ಲಿ ಸ್ಕ್ಯಾನಿಂಗ್ ಮಾಡಿಸುವ ಮೂಲಕ ಮಗುವಿನ ಆಕಾರ, ಹೃದಯ ಬಡಿತವನ್ನು ತಿಳಿಯಬಹುದು. ಕೆಲವರು 4ನೆಯ ವಾರದಲ್ಲಿ ಗರ್ಭ ಪರೀಕ್ಷೆ ಮಾಡಿಸಲು ಆಸ್ಪತ್ರೆಗೆ ಬರುತ್ತಾರೆ. ಆದರೆ ಇದರಿಂದ ಗರ್ಭಧಾರಣೆಯ ಬಗ್ಗೆ ಯಾವ ವಿಚಾರವೂ ತಿಳಿಯುವುದಿಲ್ಲ.
ಗರ್ಭ ನಿರೋಧಕ ಮಾತ್ರೆಗಳು ಸುರಕ್ಷಿತವೇ?
ಗರ್ಭ ನಿರೋಧಕ ಮಾತ್ರೆಗಳು ಸಂಪೂರ್ಣ ಸುರಕ್ಷಿತವಾಗಿವೆ. ಇದರಿಂದ ಯಾವುದೇ ತೊಂದರೆಗಳು ಉಂಟಾಗುವುದಿಲ್ಲ. ಕಾಪರ್ ಟಿ ಎಂಬ ಸಾಧನವನ್ನು ಮಹಿಳೆಯರಿಗೆ ಬೇಡದ ಗರ್ಭಧಾರಣೆಯನ್ನು ತಡೆಯಲು ಗರ್ಭಕೋಶದಲ್ಲಿ ಅಳವಡಿಸಲಾಗುತ್ತದೆ. ಕಾಪರ್ ಟಿ ಧರಿಸಿದ್ದರೂ ಸಹ ಗರ್ಭಧಾರಣೆ ಆಗಿರುವ ಸಾಕಷ್ಟು ಉದಾಹರಣೆಗಳಿವೆ. ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸಿದರೆ ಬೇಡದ ಗರ್ಭಧಾರಣೆಯನ್ನು ತಡೆಯಬಹುದು. ಆದರೆ, ವೈದ್ಯರ ಸಲಹೆ ಮೇರೆಗೆ ತೆಗೆದುಕೊಳ್ಳುವುದು ಒಳಿತು.
ಗರ್ಭಿಣಿಯರ ಆಹಾರ ಪದ್ದತಿ ಹೇಗಿರಬೇಕು?
ಒಬ್ಬ ಮಹಿಳೆಗೆ ತಾನು ಗರ್ಭವತಿ ಆಗುತ್ತಿರುವ ವಿಷಯ ತಿಳಿದೊಡನೆ ಆಕೆಗೆ ಹಿರಿಯರು ಅವರದ್ದೇ ಆದ ಸಲಹೆಗಳನ್ನು ನೀಡಲು ಪ್ರಾರಂಭಿಸುತ್ತಾರೆ. ಗರ್ಭಿಣಿಯರು ಕೆಲವೊಂದು ಆಹಾರವನ್ನು ತಿನ್ನಬೇಕು, ಕೆಲವೊಂದು ಆಹಾರಗಳನ್ನು ತಿನ್ನಲೇ ಬಾರದು ಎಂದು ಕಟ್ಟುನಿಟ್ಟಾಗಿ ಹೇಳುವುದು ನಮ್ಮಲ್ಲಿ ನಡೆದುಬಂದ ಪದ್ದತಿ. ಗರ್ಭಾವಸ್ಥೆಯಲ್ಲಿ ಸಮತೋಲನ ಆಹಾರ ಸೇವಿಸಬೇಕು. ಹೈಪ್ರೋಟಿನ್ ಮತ್ತು ಫೈಬರ್ ಉಳ್ಳ ಮೊಳಕೆ ಕಾಳು, ಸೊಪ್ಪು, ಹಾಲು, ಮೊಸರು, ಹಣ್ಣು-ತರಕಾರಿ ಇತ್ಯಾದಿಗಳನ್ನು ಸೇವಿಸಬೇಕು. ನಿರ್ಜಲೀಕರಣದಿಂದ ತಪ್ಪಿಸಿಕೊಳ್ಳಲು ದಿನಕ್ಕೆ 2 ರಿಂದ 3 ಲೀಟರ್ ನೀರನ್ನು ಕುಡಿಯಬೇಕು.
ಕೆಲಸಕ್ಕೆ ಹೋಗುವ ಗರ್ಭಿಣಿಯರು ವಹಿಸಬೇಕಾದ್ದ ಮುಂಜಾಗ್ರತೆ?
ಇಂದಿನ ಆಧುನಿಕ ಯುಗದ ಮಹಿಳೆಯರು ಪುರುಷರನ್ನು ಮೀರಿಸುವಷ್ಟು ಮಟ್ಟಕ್ಕೆ ಬೆಳೆದಿದ್ದಾರೆ. ಗರ್ಭಿಣಿಯರು ಆರೋಗ್ಯ ಪೂರ್ಣವಾಗಿದ್ದರೆ 9 ತಿಂಗಳೂ ಸಹಾ ಕೆಲಸಕ್ಕೆ ಹೋಗಬಹುದು. ಕೆಲವರು ವೈದ್ಯರ ಸಲಹೆಯನ್ನು ಪಡೆದು 5ನೆಯ ತಿಂಗಳಿನಿಂದ ವಿಶ್ರಾಂತಿಯನ್ನು ಪಡೆದರೆ ಸೂಕ್ತ. ವೈದ್ಯರೂ ಸಹ ಕೆಲಸಕ್ಕೆ ಹೋಗುವ ಗರ್ಭಿಣಿಯರಿಗೆ ಹೆಚ್ಚು ವಿಶ್ರಾಂತಿಯನ್ನು ಪಡೆಯಲು ಸಲಹೆಯನ್ನು ನೀಡುತ್ತಾರೆ. ಗರ್ಭಿಣಿಯರು ತಮ್ಮ ಗರ್ಭಾವಸ್ಥೆಯ ದಿನಗಳನ್ನು ಸಂತೋಷದಿಂದ ಅನುಭವಿಸಬೇಕು. ಈ ಸಮಯದಲ್ಲಿ ಯಾವುದೇ ಮಾನಸಿಕ ಒತ್ತಡ, ಚಿಂತೆ, ನೋವು ಅನಭಿವಿಸಬಾರದು. ಗರ್ಭಿಣಿಯ ಪತಿ ಹಾಗೂ ಆಕೆಯ ಮನೆಯವರು ಪ್ರೀತಿಯಿಂದ ಆರೈಕೆ ಮಾಡಬೇಕು. ಪೌಷ್ಠಿಕ ಆಹಾರ, ಹಾಲು, ಮೊಸರು, ಪಾನಕ, ಮಜ್ಜಿಗೆ ಸೇವಿಸಬೇಕು, ಸದಾ ತೆಳುವಾದ ಹತ್ತಿಯ ಬಟ್ಟೆಯನ್ನು ಧರಿಸಬೇಕು ಹೀಗೆ ಹತ್ತು ಹಲವಾರು ಮುಂಜಾಗೃತಾ ಕ್ರಮಗಳನ್ನು ಗರ್ಭಿಣಿಯರು ವಹಿಸಬೇಕು. ಆಗ ಅವರ ಆರೋಗ್ಯ ಉತ್ತಮವಾಗಿರಲು ಸಹಕಾರಿಯಾಗುತ್ತದೆ.
ಗರ್ಭಿಣಿಯರು ಕೈಗೊಳ್ಳಬೇಕಾದ್ದ ಮುಂಜಾಗ್ರತೆಗಳಿವು:
ಗರ್ಭಾವಸ್ಥೆ ಎಂದರೆ ಮಹಿಳೆಯರ ಪಾಲಿಗೆ ಅದೊಂದು ಮಹತ್ವವಾದ ಕಾಲ. ಗರ್ಭಧಾರಣೆ ಅಥವಾ ಹೆರಿಗೆ ಎಂದರೆ ಸಾಮಾನ್ಯವಾದ ವಿಷಯವಲ್ಲ. ಗರ್ಭಾವಸ್ಥೆಯ ಸಂದರ್ಭದಲ್ಲಿ ಗರ್ಭಿಣಿಯರು ಸರಿಯಾದ ಮುತುವರ್ಜಿ ವಹಿಸಿಕೊಳ್ಳಲಿಲ್ಲವಾದರೆ ತಾಯಿ-ಮತ್ತು ಮಗು ಇಬ್ಬರಿಗೂ ಅಪಾಯವಿರುತ್ತದೆ.
ಮಗು ಗರ್ಭದಲ್ಲಿ ಯಾವ ರೀತಿ ಒತ್ತಡಗಳನ್ನು ಸಹಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ ಎಂದು ನಮಗೆ ಹೇಳಲು ಅಸಾಧ್ಯ. ಎಲ್ಲಾ ಸರಿಯಾಗಿದ್ದರೂ ಕೆಲವೊಮ್ಮೆ ತೊಂದರೆ ಉಂಟಾಗಬಹುದು. ಸ್ಕ್ಯಾನಿಂಗ್ ಮಾಡಿದರೂ ಕೆಲವೊಮ್ಮೆ ಎಲ್ಲವೂ ಸರಿಯಾಗಿದೆ ಎಂದು ಹೇಳಲು ಸಾಧ್ಯವಿಲ್ಲ.
ಗರ್ಭಿಣಿಯರಿಗೆ ಪದೇ-ಪದೇ ಸ್ಕ್ಯಾನಿಂಗ್ ಅಪಾಯ ತರುತ್ತದೆಯೇ?
ಸಾಮಾನ್ಯವಾಗಿ ಗರ್ಭಿಣಿಯರಿಗೆ ಪ್ರಾರಂಭದಲ್ಲಿ ಒಂದೂವರೆ ತಿಂಗಳಿಗೆ ಸ್ಕ್ಯಾನಿಂಗ್ ಮಾಡಲಾಗುತ್ತದೆ. ನಂತರ ಕ್ರಮವಾಗಿ 3 ಹಾಗೂ 5 ನೆಯ ತಿಂಗಳಿಗೆ ಮಾಡಬೇಕಾಗಿರುತ್ತದೆ. 5 ನೆಯ ತಿಂಗಳಿನಲ್ಲಿ ಮಾಡುವ ಸ್ಕ್ಯಾನಿಂಗ್ ಅತ್ಯಂತ ಮಹತ್ವದ್ದಾಗಿದ್ದು, ಈ ಪರೀಕ್ಷೆಯಲ್ಲಿ ಮಗುವಿನ ದೇಹದಲ್ಲಿ ಏನಾದರು ಊನಗಳು ಇವೆಯೇ ಎಂದು ಕಂಡುಹಿಡಿಯಲಾಗುತ್ತದೆ. ನಂತರ 7, 8 ಹಾಗೂ 9ನೆಯ ತಿಂಗಳಿನಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆಗಳು ಸುರಕ್ಷಿತವಾಗಿರುತ್ತದೆ. ಸ್ಕ್ಯಾನಿಂಗ್ ಮಾಡುವುದರಿಂದ ತಾಯಿ ಅಥವಾ ಮಗುವಿಗೆ ಯಾವುದೇ ತೊಂದರೆಯಾಗುವುದಿಲ್ಲ.
ಗರ್ಭಿಣಿಯರು ಯಾವೆಲ್ಲಾ ಮಾತ್ರೆಗಳನ್ನು ತೆಗೆದುಕೊಳ್ಳಬಹುದು?
ಗರ್ಭಿಣಿಯರು ಯಾವೆಲ್ಲ ಮಾತ್ರೆಗಳನ್ನು ತೆಗೆದುಕೊಳ್ಳಬೇಕು ಎಂಬ ಗೊಂದಲಗಳಿರುವುದು ಸಾಮಾನ್ಯ. ಗರ್ಭಿಣಿಯರಲ್ಲಿ ಕೆಲವರಿಗೆ ರಕ್ತಹೀನತೆ ಬಹಳಷ್ಠಿರುತ್ತದೆ. ಅವರಿಗೆ ಕ್ಯಾಲ್ಶಿಯಂ, ಐರನ್ ಮಾತ್ರೆಗಳನ್ನು ನೀಡಲಾಗುತ್ತದೆ. ಪ್ರಾರಂಭದ 3 ತಿಂಗಳು ವಾಂತಿ, ರುಚಿಯಲ್ಲಿ ಬದಲಾವಣೆಯಾಗುವಂತಹ ಲಕ್ಷಣಗಳು ಕಂಡು ಬರುತ್ತದೆ. ಗರ್ಭಿಣಿಯರಿಗೆ ಹೆಚ್ಚಾಗಿ ಫೋಲಿಕ್ ಆಸಿಡ್ ಮಾತ್ರೆಗಳನ್ನು ನೀಡುತ್ತೇವೆ.
ಪ್ರೋಟೀನ್ ಪೌಡರ್ ಹೆಚ್ಚಾಗಿ ನೀಡಲಾಗುತ್ತದೆ. ಒಂದು ವೇಳೆ ಜ್ವರ ಬಂದಲ್ಲಿ ವೈದ್ಯರ ಬಳಿ ತೆರಳಿ ಸಲಹೆಯನ್ನು ಪಡೆಯಬೇಕೇ ವಿನಾ ನಾವೇ ವೈದ್ಯರಾಗಲು ಪ್ರಯತ್ನಿಸಬಾರದು.








Discussion about this post