ಕರ್ನಾಟಕ ಎನ್ನುವುದು ಕೇವಲ ಒಂದು ರಾಜ್ಯವಲ್ಲ. ಹಲವು ಕವಿಗಳ, ಪ್ರತಿಭಾವಂತರ, ಮಹಾನ್ ಸಾಧಕರ ನೆಲೆವೀಡು. ಅಂತಹ ಸಾಧಕರಲ್ಲಿ ಯಕ್ಷಗಾನ ಕಲೆಯ ಧ್ರುವತಾರೆ, ಸಾಧಕಿ ಅಶ್ವಿನಿ ಕೊಂಡದಕುಳಿಯವರ ಹೆಸರು ಪ್ರಮುಖ.
ತಂದೆಯ ಲಕ್ಷಣಗಳು ಮಕ್ಕಳಿಗೆ ಬರುತ್ತದೆ ಎನ್ನುವ ಮಾತು ಇವರ ವಿಚಾರದಲ್ಲಿ ಅಕ್ಷರಶಃ ಸತ್ಯವಾಯಿತು. ತಂದೆಯಂತೆ ಯಕ್ಷಗಾನ ಕಲೆಯು ಇವರ ರಕ್ತದಲ್ಲೇ ಬಂದಿತ್ತು. ಆ ರಕ್ತಗತವಾಗಿ ಬಂದ ಕಲೆ ಹೆಮ್ಮರವಾಗಿ ಇಂದು ಬೆಳೆದಿದೆ. ತಂದೆಯಂತೆ ಮಹಾನ್ ಕಲಾವಿದರಾಗಿ ಇವರು ಗುರುತಿಸಿಕೊಂಡಿದ್ದಾರೆ.
ಯಕ್ಷಗಾನ ಕಲೆಯ ಮೇರು ಕಲಾವಿದರೆನಿಸಿದ ಶ್ರೀ ಕೊಂಡದಕುಳಿ ರಾಮಚಂದ್ರ ಮತ್ತು ಶ್ರೀಮತಿ ಪೂರ್ಣಿಮಾ ಹೆಗಡೆಯವರ ಮೊದಲ ಮಗಳಾಗಿ 1993ರ ಮಾರ್ಚ್ 25ರಂದು ಅಶ್ವಿನಿ ಜನಿಸಿದರು.
ಬೆಳೆಯುವ ಪೈರು ಮೊಳಕೆಯಲ್ಲಿ ಎನ್ನುವಂತೆ ಕೇವಲ ಏಳನೆಯ ವಯಸ್ಸಿಗೇ ಮುಖಕ್ಕೆ ಬಣ್ಣ ಹಚ್ಚುವ ಮೂಲಕ ರಂಗಭೂಮಿ ಪ್ರವೇಶಿಸಿ, ಬಾಲಚಂದ್ರಹಾಸ ಪಾತ್ರದಲ್ಲಿ ಮಿಂಚಿದವರು.
ಮುಂಬೈ ಮಹಾ ನಗರದಲ್ಲಿ ಕೊಂಡದಕುಳಿ ಮೇಳ ಬಂದಾಗ ಅದರಲ್ಲಿ ತಂದೆಯವರ ಜೊತೆಗೆ ಲೋಹಿತಾಶ್ವ ಪಾತ್ರದಲ್ಲಿ ಮಿಂಚು ಹರಿಸಿದ ಪ್ರತಿಭಾವಂತರು. ಇದು ಮುಂಬೈ ಜನರ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ.
ಇವರದು ಬಹುಮುಖ ಪ್ರತಿಭೆ. ನಾಟಕ, ಚಿತ್ರಕಲೆ, ಸಂಗೀತ, ಭರತನಾಟ್ಯ, ಓಡಿಸ್ಸಿ ಮೊದಲಾದಗಳನ್ನು ಅಧ್ಯಯನ ಮಾಡಿದರು. ಅಷ್ಟೇ ಅಲ್ಲದೆ ಭಾಗವತಿಕೆಯಲ್ಲೂ ಸಹ ಇವರು ಸಿದ್ಧಹಸ್ತರು. ತೆಂಕುತಿಟ್ಟು ಅಭ್ಯಾಸ ಮಾಡಿ ಪ್ರದರ್ಶನ ಕೊಟ್ಟ ಕೀರ್ತಿ ಇವರದು. ಕೇವಲ ರಾಜ್ಯದ (30)ಹದಿನೇಳು ಜಿಲ್ಲೆಯಷ್ಟೇ ಅಲ್ಲದೆ ದೇಶದ ನಗರಗಳಲ್ಲಿ ಮಾತ್ರವಲ್ಲದೆ ವಿದೇಶಗಳಾದ ದುಬೈ, ಅಭುದಾಭಿ, ಬೆಹೆರೈನ್, ಚೀನಾ, ಥೈಲ್ಯಾಂಡ್ ಗಳಲ್ಲಿ ಯಕ್ಷಗಾನ ಪ್ರದರ್ಶನ ಮಾಡಿ ಭಾರತದ ಕೀರ್ತಿ ಪತಾಕೆ ಹಾರಿಸಿದವರು. ಆಳ್ವಾಸ್ ವತಿಯಿಂದ ಸಾದರಗೊಂಡ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಇವರು ಪ್ರಮುಖ ಭೂಮಿಕೆಯಲ್ಲಿ ನಟಿಸಿದ ನಾಟಕ ಪ್ರಥಮ ಸ್ಥಾನವನ್ನು ಪಡೆದಿತ್ತು.
ಅಂತರಾಷ್ಟ್ರೀಯ ಯುವ ಸಮ್ಮೇಳನದಲ್ಲಿ ಭಾರತ ದೇಶದ ಪ್ರತಿನಿಧಿಯಾಗಿ ಚೀನಾದಲ್ಲಿ ಯಕ್ಷಗಾನ ಪ್ರದರ್ಶನ ಮಾಡಿದ ಕೀರ್ತಿ ಇವರಿಗಿದೆ. ಚಿಕ್ಕ ವಯಸ್ಸಿನಲ್ಲೇ ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿಯ ಸದಸ್ಯರಾದ ಇವರು ಈ ಪದವಿಗೇರಿದ ಮೊದಲ ಮಹಿಳೆಯೆಂಬ ಖ್ಯಾತಿ ಪಡೆದಿದ್ದಾರೆ. ಇವರ ಸಾಧನೆಗೆ ಇವರನ್ನು ಅರಸಿ ಬಂದ ಪ್ರಶಸ್ತಿಗಳು ಹಲವಾರು. ಕರ್ನಾಟಕ ರಾಜ್ಯದ ಯುವ ಪ್ರತಿಭಾ ರತ್ನ, ಮಂಗಳೂರು ವಿಶ್ವವಿದ್ಯಾನಿಲಯದಿಂದ ಹಾಗೂ ದುಬೈ ಕನ್ನಡ ಸಂಘದಿಂದ ಸನ್ಮಾನ ಪಡೆದಿದ್ದಾರೆ.
ಯಾವುದೇ ಪಾತ್ರಕ್ಕೆ ಸಮರ್ಥವಾಗಿ ಜೀವ ತುಂಬಬಲ್ಲ ಬಹುಮುಖ ಪ್ರತಿಭೆ ಇವರದು. ಇವರ ಶ್ರೀಕೃಷ್ಣ, ಅರ್ಜುನ ಮೊದಲಾದ ಪಾತ್ರಗಳು ಜನಮಾನಸದಲ್ಲಿ ನಿಂತಿವೆ.
ಆರತಿ ಬೆಳಗಲು ಪುತ್ರಿ ಬೇಕು ಕೀರ್ತಿ ಬೆಳಗಲು ಪುತ್ರ ಬೇಕು ಎಂಬ ಮಾತನ್ನು ತಲೆ ಕೆಳಗೆ ಮಾಡಿ ಮಗಳು ಕೂಡ ಕೀರ್ತಿ ಬೆಳಗಬಹುದು ಎಂಬುದನ್ನು ತೋರಿಸಿ ಕೊಟ್ಟವರು ಇವರು. ಇಂತಹವರನ್ನು ನಾವು ಸನ್ಮಾನ ಮಾಡುವದು ನಮಗೆ ಅತ್ಯಂತ ಸಂತಸದ ವಿಚಾರವಾಗಿದೆ.
ನಿಮ್ಮನ್ನು ಕಲಾ ಶಾರದೆಯ ಪ್ರತಿರೂಪ ಎಂದರೆ ತಪ್ಪಾಗಲಾರದು. ನಿಮ್ಮ ಕಲಾ ಸಾಧನೆ ಹೀಗೆ ಮುಂದುವರೆಯಲಿ. ಮುಂದಿನ ಕಲಾ ಜೀವನ ಯಶಸ್ಸಿನ ಉತ್ತಂಗಕ್ಕೇರಲಿ ಎಂದು ಕಲಾರಾಧಕರಾದ ನಾವು ಕಲಾ ದೇವಿಯನ್ನು ಬೇಡುತ್ತೇವೆ.
ಲೇಖನ ಮತ್ತು ಚಿತ್ರಕೃಪೆ: ಸತೀಶ್ ಶೆಟ್ಟಿ ಚೇರ್ಕಾಡಿ ದೊಡ್ಡಮನೆ
Discussion about this post