ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಅವರಿಗೆ ಏಮ್‌ಸ್ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಲಾಗುತ್ತಿದೆ. ಆದರೆ, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.
ಈ ಮೊದಲು ನಿಯಮಿತ ತಪಾಸಣೆಗಾಗಿ ಅಟಲ್ ಜೀ ಅವರನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಆಸ್ಪತ್ರೆಯ ಅಧಿಕೃತ ಹೇಳಿಕೆಯಿಂದ ತಿಳಿದುಬಂದಿತ್ತು. ಆದರೆ, ಪ್ರಸ್ತುತ ತಿಳಿದುಬರುತ್ತಿರುವ ಮಾಹಿತಿಯಂತೆ, ಅಟಲ್ ಜೀ ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಲೋಯರ್ ರೆಸ್ಪಿರೇಟರಿ ಟ್ರಾಕ್ ಇನ್ಫೆಕ್ಷನ್ ಸಹ ಅವರನ್ನು ಕಾಡುತ್ತಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಕಿಡ್ನಿ ಡಯಾಲಿಸಿಸ್ ಸಹ ಮಾಡಲಾಗುತ್ತಿದೆ ಎಂದು ಆಸ್ಪತ್ರೆ ಹೇಳಿಕೆಗಳಿಂದ ತಿಳಿದುಬಂದಿದೆ.
ಇನ್ನು, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಬಿಜೆಪಿ ಹಿರಿಯ ಮುಖಂಡ ಎಲ್.ಕೆ. ಆಡ್ವಾಣಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರುಗಳು ಆಸ್ಪತ್ರೆಗೆ ಭೇಟಿ ನೀಡಿ ಅಟಲ್ ಜೀ ಅವರ ಆರೋಗ್ಯ ವಿಚಾರಿಸಿದ್ದಾರೆ.
Discussion about this post