ಇದು ಬಹಳ ವರ್ಷಗಳ ಬೇಡಿಕೆ ಮತ್ತು ಅನಿವಾರ್ಯ ಬಯಕೆ? ಎಚ್.ಡಿ. ದೇವೇಗೌಡರು ಪ್ರಧಾನಿಗಳಾಗಿದ್ದಾಗ ರಾಜ್ಯದ ಮುಖ್ಯಮಂತ್ರಿಯಾಗಿ ಜೆ.ಎಚ್. ಪಟೇಲರು ಸೇವೆಯಲ್ಲಿದ್ದರು. ಆಗಿನ ಒಂದು ರೇಲ್ವೆ ಬಜೆಟ್’ನಲ್ಲಿ ಚನ್ನಗಿರಿ – ದಾವಣಗೆರೆ ರೈಲ್ವೆ ಮಾರ್ಗದ ಬಗ್ಗೆ ಸಮೀಕ್ಷೆ ಮಾಡುವ ಪ್ರಸ್ತಾವನೆ ಸೇರಿಸುವಂತೆ ಮಾಡಿದ್ದ ಬಗ್ಗೆ ಪತ್ರಿಕೆಗಳಲ್ಲಿ ವರದಿ ಬಂದದ್ದನ್ನು ನಾನು ಓದಿ ಖುಷಿಪಟ್ಟಿದ್ದೆ.
ಕೇಂದ್ರದಲ್ಲಿ ಆದ ರಾಜಕೀಯ ಮೇಲಾಟದಲ್ಲಿ ದೇವೇಗೌಡರು ಅಧಿಕಾರ ಕಳೆದುಕೊಂಡರು. ರೈಲ್ವೆ ಮಾರ್ಗ ಸಮೀಕ್ಷೆ ಪ್ರಸ್ತಾಪ ಕಡತ ಸೇರಿತು. ನಂತರ ಬಂದ ಯಾವ ಶಾಸಕರೂ, ಸಂಸದರೂ ಇದರ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸಲಿಲ್ಲ. ಇದರ ಪೂರ್ಣ ಆಕ್ಷೇಪಣೆಯನ್ನು ಕೇವಲ ಈ ಎರಡೂ ಜನಪ್ರತಿನಿಧಿಗಳ ಮೇಲೆ ಹೊರಿಸುವುದಕ್ಕೆ ಮುನ್ನ ನಮ್ಮ ತಾಲೂಕಿನ ಗಣ್ಯ ವರ್ತಕರು. ಉದ್ಯಮಿಗಳು ತಮ್ಮ ಅಜಾಗರೂಕತೆ, ಮೂರ್ಖಮೌನವನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಇಲ್ಲಿ ಯಾರನ್ನೂ ವೈಯಕ್ತಿಕವಾಗಿ ದೂರುತ್ತಿಲ್ಲ.
ಜನಪ್ರತಿನಿಧಿಗಳ ಸುತ್ತ ಗಿರಕಿ ಹೊಡೆಯುವ ಸ್ಥಳೀಯ ಪಟಾಣಿ ನಾಯಕರು ಕೇವಲ ಕೆಲಸ, ವರ್ಗಾವಣೆ ಮುಂತಾದ ಸ್ವಾರ್ಥದಲ್ಲೇ ತಮ್ಮ ರಾಜಕೀಯ ಜೀವನ ಸವೆಸುವುದರಿಂದ ಈ ಪರಿಸ್ಥಿತಿ ಚನ್ನಗಿರಿಗೆ ಉಂಟಾಗಿದೆ. ಇದಕ್ಕೆ ವಾಣಿಜ್ಯೋದ್ಯಮಿಗಳು, ಪ್ರಗತಿಪರ ಕೃಷಿಕರು ರಾಜಕೀಯ ಸಂಕಲ್ಪ ಮಾಡಿದರೆ ಇದು ಸಾಧ್ಯ.
ಅಡಿಕೆಯ ನಾಡಾಗಿರುವ ಚನ್ನಗಿರಿಗೆ ಈಗಲಾದರೂ ರೈಲ್ವೆ ಮಾರ್ಗ ಸಂಪರ್ಕವಾದಲ್ಲಿ ಗಣನೀಯ ಸೌಲಭ್ಯ ದೊರೆತಂತಾಗುತ್ತದೆ. ಅಡಕೆ, ಮೆಣಸಿನಕಾಯಿ, ಹತ್ತಿ, ಜೋಳ, ರಾಗಿ ಮುಂತಾದ ಧಾನ್ಯ ಮತ್ತು ಸರಕುಗಳನ್ನು ಸನಿಹದ ಜಿಲ್ಲಾ ಮಾರುಕಟ್ಟೆಗಳಿಗೆ ಸಾಗಿಸಲು ಸೂಕ್ತ ವ್ಯವಸ್ಥೆ ಲಭಿಸುತ್ತದೆ.
ಶಿವಮೊಗ್ಗದಿಂದ ಬೆಂಗಳೂರಿಗೆ ಈ ರೈಲ್ವೆ ಮಾರ್ಗ ಪ್ರಯಾಣದ ಅವಧಿಯನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ವ್ಯಾಪಾರಿಗಳಿಗೆ ವರ್ತಕರಿಗೆ ಸರಕು ಸರಂಜಾಮು ಸಾಗಿಸಲು ಸುಲಲಿತವಾಗುತ್ತದೆ. ಚಿತ್ರದುರ್ಗದಿಂದ ಹೈದರಾಬಾದ್’ಗೂ ಸಂಪರ್ಕ ಸಿಗುತ್ತದೆ.
ಪತ್ರಕರ್ತ (ಸಂತೇಬೆನ್ನೂರಿನ) ಶ್ರೀವತ್ಸನಾಡಿಗ್ ಈ ಕುರಿತಂತೆ ಮಾತನಾಡಿದ್ದು, ಸಂತೇಬೆನ್ನೂರು ಮೂಲಕ ಸಾಸಲು ಜಂಕ್ಷನ್ ಗೆ ಈ ರೈಲ್ವೆ ಮಾರ್ಗ ಚಿತ್ರದುರ್ಗಕ್ಕೆ ಸಂಪರ್ಕ ನೀಡಲಿ ಎಂದೂ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಇದೂ ಕೂಡ ಕೃಷಿಕರು, ನಾಗರಿಕರು, ವ್ಯಾಪಾರಸ್ಥರ ದೃಷ್ಟಿಯಿಂದ ಸ್ವಾಗತಾರ್ಹ.
ಈಗ ಚನ್ನಗಿರಿಗೆ ಆರ್ಥಿಕ ಸಬಲತೆ, ಚೈತನ್ಯ ತುಂಬಿರುವ ‘ತುಮ್ಕೋಸ್ ಅಧ್ಯಕ್ಷ ಶಿವಕುಮಾರ್ ಮತ್ತು ಇತರರು ಕ್ರಿಯಾಶೀಲ ಶಾಸಕ ಮಾಡಾಳು ವಿರೂಪಕ್ಷಪ್ಪ ಅವರಿಗೆ ಒತ್ತಾಸೆ ತಂದು ಪ್ರಸ್ತುತ ರೈಲ್ವೆ ಮಾರ್ಗ ಸಂಪರ್ಕ ಸಿಗುವಲ್ಲಿ ಸಾರ್ಥಕ ಕೆಲಸ ಮಾಡಲಿ ಎಂದು ಹಾರೈಸೋಣ.
ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಹೀಗೆ ಮೂರು ಜಿಲ್ಲಾ ಕೇಂದ್ರಗಳ ಮಧ್ಯೆ ಬರುವ ಚನ್ನಗಿರಿ ವಿಪುಲವಾಗಿ ಗ್ರಾಮಗಳನ್ನು ಹೊಂದಿದೆ. ಕೃಷಿಕರಿಗೆ, ನಾಗರಿಕರಿಗೆ ರೈಲ್ವೆ ಸಂಪರ್ಕ ದೊರೆತರೆ ಮುಂದಿನ ಪೀಳಿಗೆಯ ಐಟಿ-ಬಿಟಿಯ ನಮ್ಮ ಯುವಜನತೆ ಬಹುಷಃ ನಮ್ಮ ಪ್ರದೇಶದಲ್ಲಿಯೇ ಸ್ವಂತ ಉದ್ಯಮಗಳನ್ನು ಸ್ಥಾಪಿಸಲು ಮುಂದೆ ಬರುತ್ತಾರೆ.
ಈ ಬಗ್ಗೆ ಸಾರ್ವಜನಿಕರು ಧ್ವನಿಯೆತ್ತಬೇಕು.
ಚನ್ನಗಿರಿ ಬಾಳಲಿ.. ಚನ್ನಗಿರಿ ಬೆಳಗಲಿ…
ವಿಶೇಷ ವರದಿ: ಡಾ.ಚನ್ನಗಿರಿ ಸುಧೀಂದ್ರ

















