ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೊರೋನ ವೈರಸ್ ಸೋಂಕು ಹರಡದಂತೆ ದೇಶದಾದ್ಯಂತ ಲಾಕ್‌ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಹಾಲು ಖರೀದಿಯನ್ನು ತಾತ್ಕಾಲಿಕ ಅವಧಿಗೆ ಸ್ಥಗಿತಗೊಳಿಸುವುದಾಗಿ ಶಿಮುಲ್ ಘೋಷಿಸಿರುವುದನ್ನು ಗಂಭೀರವಾಗಿ ಪರಿಗಣಿಸಿ, ಹಾಲು ಉತ್ಪಾದಕರ ಹಿತ ಕಾಯುವ ನಿಟ್ಟಿನಲ್ಲಿ ಕರ್ನಾಟಕ ಹಾಲು ಮಹಾಮಂಡಳದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರೊಂದಿಗೆ ಸಮಾಲೋಚನೆ ನಡೆಸಿದ ಫಲವಾಗಿ ಶಿಮುಲ್ ಹಾಲು ಖರೀದಿಸಲು ಸಮ್ಮತಿಸಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಅವರು ಹೇಳಿದರು.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಲ್ಲಿ ಪ್ರತಿನಿತ್ಯ 5.21ಲಕ್ಷ ಲೀ. ಹಾಲು ಶೇಖರಿಸಲಾಗುತ್ತಿದೆ. ಕೊರೋನ ವೈರಸ್ ಸೋಂಕು ನಿಯಂತ್ರಣಕ್ಕಾಗಿ ದೇಶದಾದ್ಯಂತ ಲಾಕ್‌ಡೌನ್ ಘೋಷಿಸಿದ ನಂತರ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟದಲ್ಲಿ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡು ಬಂದಿತ್ತು. ಇದರಿಂದಾಗಿ ಶಿಮುಲ್‌ನಲ್ಲಿ ಲಕ್ಷಾಂತರ ಲೀ. ಹಾಲು ಮಾರಾಟಗೊಳ್ಳದೇ ಉಳಿಯುತ್ತಿತ್ತು. ಇದರಿಂದಾಗಿ ಹೈನೋದ್ಯಮಿಗಳು ಉತ್ಪಾದಿಸಿ ಸಹಕಾರ ಸಂಘಗಳ ಮೂಲಕ ಶಿಮುಲ್‌ಗೆ ಮಾರಾಟ ಮಾಡುತ್ತಿದ್ದ ರೈತರು ಹಾಲನ್ನು ಶಿಮುಲ್‌ಗೆ ನೀಡಲಾಗದೆ ಚಿಂತಾಕ್ರಾಂತರಾಗಿದ್ದರು.
ಪ್ರಸ್ತುತ 5.21ಲಕ್ಷ ಕೆಜಿ ಹಾಲಿನಲ್ಲಿ ಸ್ಥಳೀಯವಾಗಿ 1.92 ಲಕ್ಷ ಲೀ. ಹಾಲು ಮಾರಾಟಗೊಂಡು ಉಳಿದ 3.23 ಲಕ್ಷ ಕೆ.ಜಿ. ಹಾಲನ್ನು ಪರಿವರ್ತನೆಗೆ ಕಳುಹಿಸಲಾಗುತ್ತಿತ್ತು. ಹಾಲಿನ ಪುಡಿ ಪರಿವರ್ತನಾ ಡೇರಿಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಹಾಲು ರವಾನೆಯಾಗಿದ್ದರಿಂದ ಹೆಚ್ಚು ಹಾಲು ದಾಸ್ತಾನು ಮಾಡಲಾಗಿತ್ತು. ಈ ಕಾರಣದಿಂದಾಗಿ ಶಿಮುಲ್ ರೈತರಿಂದ ಹಾಲು ಖರೀದಿಸುವುದನ್ನು ಸ್ಥಗಿತಗೊಳಿಸಿ ನಿರ್ಧಾರ ಕೈಗೊಂಡಿತ್ತು. ಇದರಿಂದಾಗಿ ಜಿಲ್ಲೆಯ ಲಕ್ಷಾಂತರ ರೈತರಿಗೆ ಭಾರೀ ಪ್ರಮಾಣದ ನಷ್ಟ ಉಂಟಾಗುತ್ತಿತ್ತು ಎಂದವರು ತಿಳಿಸಿದ್ದಾರೆ.
ಕರ್ನಾಟಕ ಹಾಲು ಮಹಾಮಂಡಳದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರೊಂದಿಗೆ ಸುದೀರ್ಘವಾಗಿ ಚರ್ಚಿಸಿದ ನಂತರ ಹೆಚ್ಚುವರಿಯಾಗಿರುವ ಹಾಲನ್ನು ಮಹಾಮಂಡಳಿಯ ರಾಮನಗರ ಹಾಲಿನಪುಡಿ ಪರಿವರ್ತನ ಘಟಕ ಹಾಗೂ ರಾಜ್ಯದ ಇತರ ಕಡೆಗಳಲ್ಲಿರುವ ಹಾಲು ವಿಲೇವಾರಿ ಮಾಡಲು ಒಕ್ಕೂಟದ ಪರವಾದ ಕೋರಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿರುವುದಾಗಿ ಅವರು ತಿಳಿಸಿದ್ದಾರೆ.
ರೈತರ ಹಿತಕಾಯುವ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದ ಸಂಸದ ಬಿ.ವೈ. ರಾಘವೇಂದ್ರ ಮತ್ತು ಕರ್ನಾಟಕ ಹಾಲು ಮಹಾಮಂಡಳದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರಿಗೆ ಸಿದ್ದಲಿಂಗಪ್ಪ ನಿಂಬೇಗೊಂದಿ ಹಾಗೂ ಹಾಲು ಉತ್ಪಾದಕರ ಒಕ್ಕೂಟದ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post