ಕಲ್ಪ ಮೀಡಿಯಾ ಹೌಸ್ | ಮೈಸೂರು |
ಮೈಸೂರಿನ #Mysore ಕೆ.ಆರ್. ಪುರಂನ ಶ್ರೀ ವ್ಯಾಸತೀರ್ಥ ವಿದ್ಯಾಪೀಠದಲ್ಲಿ ಬಲಿಪಾಡ್ಯ ಆಚರಣೆ ಸಡಗರ ಸಂಭ್ರಮದಿಂದ ನೆರವೇರಿತು.
ಮುಂಜಾನೆ 60ಕ್ಕೂ ಹೆಚ್ಚು ವಿದ್ಯಾರ್ಥಿಗಳ ಸುಪ್ರಭಾತ ಸೇವೆಯಿಂದ ಅರಂಭಗೊಂಡ ವೇದ- ಮಂತ್ರ ಘೋಷ, ಪಾರಾಯಣದಿಂದ ಆರಂಭಗೊಂಡ ಚಟುವಟಿಕೆಗಳಲ್ಲಿ ಹಿರಿಯ ವಿದ್ವಾಂಸರೂ ಪಾಲ್ಗೊಂಡಿದ್ದರು.
ಸೋಸಲೆ #Sosale ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಅವರು ಸಂಸ್ಥಾನ ಪೂಜೆ ನೆರವೇರಿಸಿದರು. ಸಂಸ್ಥಾನದ ಸಕಲ ಪ್ರತಿಮೆ ಮತ್ತು ಸಾಲಿಗ್ರಾಮಗಳಿಗೆ ಮಹಾ ಅಭಿಷೇಕ ನೆರವೇರಿತು. ಮುಖ್ಯ ಪ್ರತಿಮೆ ಶ್ರೀ ಗೋಪಾಲಕೃಷ್ಣ ದೇವರನ್ನು ರಜತ ಮಂಟಪದಲ್ಲಿ ಪ್ರತಿಷ್ಠಾಪಿಸಿ, ಪರಿಮಳ ಭರಿತ ಪುಷ್ಪಗಳಿಂದ ಅಲಂಕರಿಸಿ, ವಿಶೇಷ ಆರತಿಗಳನ್ನು ಬೆಳಗಿದರು. ನಂತರ ಶ್ರೀಗಳು ಮಠದ ಗೋಶಾಲೆಯ ಭಾರತೀಯ ಗೋವಿನ ತಳಿಗಳಿಗೆ ಪೂಜೆ ಮಾಡಿ ಗೋಗ್ರಾಸ ಸಮರ್ಪಣೆ ಮಾಡಿದರು. ನೂರಾರು ಭಕ್ತರು ಇದಕ್ಕೆ ಸಾಕ್ಷಿಯಾದರು. ನಂತರ ಭಕ್ತರಿಗೆ ತೀರ್ಥ ಪ್ರಸಾದ, ಮಹಾ ಸಂತರ್ಪಣೆ ನಡೆಯಿತು.
ತುಳಸಿ ಸಂಕೀರ್ತನೆ
ಮಂಗಳವಾರ ಸಂಜೆ ವಿದ್ಯಾಪೀಠದ ವಿದ್ಯಾರ್ಥಿಗಳ ಸಮ್ಮುಖ ತುಳಸಿ ಸಂಕೀರ್ತನೆ ನಡೆಯಿತು. ಕೃಷ್ಣನ ಕುರಿತಾದ ಗೀತೆಗಳನ್ನು ಹಾಡುತ್ತಾ ತುಳಸಿ ಬೃಂದಾವನದ ಸುತ್ತ ವಿದ್ಯಾರ್ಥಿಗಳು, ಭಕ್ತರು ಮತ್ತು ವಿದ್ಯಾಶ್ರೀಶ ತೀರ್ಥರು ಪ್ರದಕ್ಷಿಣೆ ಹಾಕಿ, ಗಾಯನ-ನರ್ತನ ಸೇವೆ ಸಲ್ಲಿಸಿದ್ದು ಬಹು ವಿಶೇಷವಾಗಿತ್ತು. (ಮುಂದಿನ 15 ದಿನಗಳ ಕಾಲ, ಉತ್ಥಾನ ದ್ವಾದಶಿವರೆಗೆ ನಿತ್ಯವೂ ಸಂಜೆ ತುಳಸಿ ಸಂಕೀರ್ತನೆ ಸೇವೆ ನಡೆಯಲಿದೆ).
ಬಲೀಂದ್ರ ಪೂಜೆ
ಗೋವರ್ಧನ ಪ್ರತಿಪದೆ ಅಂಗವಾಗಿ ಮಠದ ಆವರಣದಲ್ಲಿ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಬಲೀಂದ್ರ ಪೂಜೆ ನೆರವೇರಿಸಿದರು. ಈ ಸಂದರ್ಭ ವಾಮನ ಅವತಾರವನ್ನು ಆವಾಹನೆ ಮಾಡಿ, ನೈವೇದ್ಯ ಸಮರ್ಪಿಸಿ, ಬಲಿ ಚಕ್ರವರ್ತಿಯನ್ನು ಪಾತಾಳಕ್ಕೆ ತುಳಿದ ಸಂಕೇತವಾಗಿ ದೊಂದಿಗಳನ್ನು ಬೆಳಗಿಸಲಾಯಿತು.
ವಿದ್ಯಾರ್ಥಿಗಳು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು. ಲಕ್ಷ್ಮೀದೇವಿ ನೆಲೆಸಲಿ. ಜ್ಞಾನ ಬೆಳಗಲಿ ಎಂಬುದರ ಸಂಕೇತವಾಗಿ ನೂರಾರು ದೀಪಗಳನ್ನು ಬೆಳಗಲಾಯಿತು. ಯುವ ಕಲಾವಿದರ ಗಾಯನ ಗಮನ ಸೆಳೆಯಿತು. ವರುಣಾಚಾರ್ಯರು ಬಲೀಂದ್ರ ಪೂಜೆಯ ವಿಧಿ, ವಿಧಾನ ನೆರವೇರಿಸಿದರು.
ವ್ಯಾಸತೀರ್ಥ ವಿದ್ಯಾಪೀಠದ ಗೌರವ ಕಾರ್ಯದರ್ಶಿ ಡಾ. ಡಿ.ಪಿ. ಮಧುಸೂದನಾಚಾರ್ಯ, ಪ್ರಾಚಾರ್ಯ ಡಾ. ಶ್ರೀನಿಧಿ ಪ್ಯಾಟಿ, ಗುರುಗಳ ಆಪ್ತ ಕಾರ್ಯದರ್ಶಿ ಅಭಿಜಿತ್, ವಿದ್ಯಾಪೀಠದ ಉಪನ್ಯಾಸಕರು ಮತ್ತು ವಿದ್ವಾಂಸರು ಇದಕ್ಕೆ ಸಾಕ್ಷಿಯಾದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post