ಕಲ್ಪ ಮೀಡಿಯಾ ಹೌಸ್ | ಬಳ್ಳಾರಿ |
ಪ್ರಪ್ರಥಮ ಬಳ್ಳಾರಿ ಉತ್ಸವದಲ್ಲಿ ವಿವಿಧ ಇಲಾಖೆಯ ವಸ್ತು ಪ್ರದರ್ಶನಗಳನ್ನು ಆಯೋಜಿಸಲಾಗಿತ್ತು. ಇವುಗಳಲ್ಲಿ ಸರಳವಾಗಿ ಮತ್ತು ವಿಶೇಷ ವಸ್ತುಗಳನ್ನು ಬಳಸಿಕೊಂಡು ಆರೋಗ್ಯ ಇಲಾಖೆ ಪ್ರದರ್ಶನ ಮಳಿಗೆ ಸಿದ್ದಪಡಿಸಲಾಗಿದ್ದ ವಸ್ತು ಪ್ರದರ್ಶನ ಸದ್ದು ಮಾಡದೇ ಜನರ ಮನಸ್ಸನ್ನು ಸೆಳೆದು ಪ್ರಶಂಸೆಗೆ ಪಾತ್ರವಾಗಿದೆ.
ಇಲಾಖೆಯ ಸೇವೆ ಮತ್ತು ಸೌಲಭ್ಯಗಳನ್ನು ಒದಗಿಸುವ ಸ್ಟ್ರಕ್ಚರ್ ಮತ್ತು ರೋಗಗಳ ನಿಯಂತ್ರಣ ಕ್ರಮಗಳ ಮಾದರಿಗಳು, ವಿಜಯನಗರ ವೈದ್ಯಕೀಯ ಮಹಾವಿದ್ಯಾಲಯದ ಶರೀರ ರಚನಾಶಾಸ್ತ್ರ ವಿಭಾಗದ ಸಹಕಾರದೊಂದಿಗೆ ಶರೀರ ಶಾಸ್ತ್ರದ ಅಂಗಾಂಗಗಳು, ವಿಶೇಷವಾಗಿ ಮಾನವನ ಅಸ್ಥಿಪಂಜರ, ಹೃದಯ, ಶ್ವಾಸಕೋಶ, ಮೂತ್ರಪಿಂಡ, ಮೆದುಳು ಹಾಗೂ ವಿವಿಧ ವಯಸ್ಸಿನ ಭ್ರೂಣಗಳನ್ನು ಪ್ರದರ್ಶಿಸಲಾಯಿತು. ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಪೋಸ್ಟರ್‍ನ ಲ್ಯಾಮಿನೇಷನ್ ಫೋಟೋಗಳ ಪ್ರದರ್ಶನ ಹಾಗೂ ಕರಪತ್ರಗಳ ವಿತರಣೆ ಕೈಗೊಳ್ಳಲಾಯಿತು.
ಮಳಿಗೆಗೆ ಭೇಟಿ ಕೊಟ್ಟ ಜನರು ನೋಡಿ ಒಬ್ಬರಿಂದೊಬ್ಬರಿಗೆ ವಿಷಯ ತಿಳಿಯುತ್ತಾ, ನಿಧಾನವಾಗಿ ಜನರ ಮನ ಸೂರೆಗೊಂಡಿತು. ವಿಶೇಷವಾಗಿ ವಿದ್ಯಾರ್ಥಿಗಳು, ಪೋಷಕರು, ಸಾರ್ವಜನಿಕರು ಮಾಹಿತಿ ತಿಳಿದುಕೊಂಡರು.
ಈ ಪ್ರದರ್ಶನವು ಆರೋಗ್ಯ ಇಲಾಖೆಗೆ ಆತ್ಮ ಸ್ಥೈರ್ಯವನ್ನು ಹೆಚ್ಚಿಸಿದೆ. ಇಂತಹ ವಸ್ತು ಪ್ರದರ್ಶನಗಳಿಂದ ಜನರು ತಮ್ಮ ಆರೋಗ್ಯವನ್ನು ಉನ್ನತೀಕರಿಸಿಕೊಳ್ಳುವ ಕಡೆ ಗಮನ ಹರಿಸಲು ಸಹಕಾರಿಯಾಗಲಿದೆ. ಅದಕ್ಕಾಗಿ ಜನರಿಗೆ ವಸ್ತು ಪ್ರದರ್ಶನ ಆಕರ್ಷಣೆಯಾಗಿದೆ ಎಂದು ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಹೆಚ್.ಎಲ್ ಜನಾರ್ಧನ ಅವರು ತಿಳಿಸಿದರು.
Also read: ಪ್ರತಿಯೊಬ್ಬರು ಶ್ರಮ ವಹಿಸಿದಲ್ಲಿ ಮಾತ್ರ ಸಮುದಾಯ ಸಂಘಟನೆ ಸಾಧ್ಯ
ತಾಲೂಕು ಆರೋಗ್ಯಾಧಿಕಾರಿಗಳಾದ ಡಾ. ಮೋಹನ್ ಕುಮಾರಿ ಅವರ ನೇತೃತ್ವದಲ್ಲಿ ಆಯುಷ್ಮಾನ್ ಭಾರತ್-ಪ್ರಧಾನಮಂತ್ರಿ ಜನಾರೋಗ್ಯ ಯೋಜನಾ -ಆರೋಗ್ಯ ಕರ್ನಾಟಕ ಕಾರ್ಡ್ ವಿತರಣೆಗೆ ನೋಂದಣಿ ಮಾಡಲಾಗಿದೆ. ಸಕ್ಕರೆ ಕಾಯಿಲೆ, ರಕ್ತದೊತ್ತಡ ಪರೀಕ್ಷೆಯನ್ನು ಕ್ಲಿನಿಕ್‍ಗಳಲ್ಲಿ ತಪಾಸಣೆ ಮತ್ತು ಚಿಕಿತ್ಸೆ, ಕೋವಿಡ್ ವ್ಯಾಕ್ಸಿನೇಷನ್, ಉತ್ಸವದ ಎಲ್ಲಾ ಸ್ಥಳಗಳಲ್ಲಿ ಆಂಬ್ಯುಲೆನ್ಸ್ ಸೇವೆ ಒದಗಿಸಲಾಗಿತ್ತು.
ವಸ್ತು ಪ್ರದರ್ಶನದ ಮಳಿಗೆಯ ಉಸ್ತುವಾರಿಯನ್ನು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್ ವಹಿಸಿಕೊಂಡು, ಮಾಹಿತಿ ನೀಡಲು ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿಗಳಾದ ಸಂಡೂರು ತಾಲೂಕಿನ ಶಿವಪ್ಪ, ಬಳ್ಳಾರಿ ತಾಲೂಕಿನ ಶಾಂತಮ್ಮ, ಮೊಹಮ್ಮದ್ ರಫಿ, ರಾಘವ ಶೆಟ್ಟಿ, ಕೋಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆಯರಾದ ಪರಿಮಳ, ಹುಲಿಗೆಮ್ಮ, ಪ್ರತ್ಯುಷ, ಜೆ.ಕೆ.ಲಕ್ಷ್ಮೀ, ಮಹಾಲಕ್ಷ್ಮೀ, ಶೋಭಾ ಮತ್ತು ಕೆಹೆಚ್‍ಪಿಟಿಯ ಪ್ರಕಾಶ ಅವರು ಕಾರ್ಯನಿರ್ವಹಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post