ಕಲ್ಪ ಮೀಡಿಯಾ ಹೌಸ್ | ಬಳ್ಳಾರಿ |
ಪುಷ್ಪದಲ್ಲಿ ಅರಳಿದ ಬಳ್ಳಾರಿ ನಗರದ ಅಧಿದೇವತೆ ಕನಕದುರ್ಗಮ್ಮ ದೇವಸ್ಥಾನ ಪುಷ್ಪ ಕಲಾಕೃತಿ ಹಾಗೂ ಕಾಂತಾರ ಚಲನಚಿತ್ರ ಪಂಜುರ್ಲಿ ದೈವ ಜನಮೆಚ್ಚುಗೆ ಪಡೆಯುವಲ್ಲಿ ಸಫಲತೆ ಪಡೆಯಿತು.
ಬಳ್ಳಾರಿ ಉತ್ಸವದ ಅಂಗವಾಗಿ ಶನಿವಾರ ಮುನಿಸಿಪಲ್ ಕಾಲೇಜು ಮೈದಾನದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಆಯೋಜಿಸಲಾದ ಫಲಪುಷ್ಪ ಪ್ರದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿ, ಬೆಂಗಳೂರಿನ ಕಬ್ಬನ್ ಪಾರ್ಕ್’ನಲ್ಲಿ ನಡೆಯುವ ಪುಷ್ಪ ಪ್ರದರ್ಶನ ರೀತಿಯಲ್ಲಿ ಫಲಪುಷ್ಪ ಪ್ರದರ್ಶನ ಆಯೋಜಿಸಿರುವುದು ಜಿಲ್ಲಾ ಉತ್ಸವಕ್ಕೆ ವಿಶೇಷ ಮೆರಗು ನೀಡಿದೆ ಎಂದರು.
ಬಳ್ಳಾರಿ ನಗರ ಶಾಸಕರಾದ ಜಿ. ಸೋಮಶೇಖರ ರೆಡ್ಡಿ, ಮಹಾನಗರ ಪಾಲಿಕೆ ಮೇಯರ್ ಎಂ. ರಾಜೇಶ್ವರಿ, ಬುಡಾ ಅಧ್ಯಕ್ಷ ಮಾರುತಿ ಪ್ರಸಾದ್, ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ, ಜಿಪಂ ಸಿಇಒ ಜಿ. ಲಿಂಗಮೂರ್ತಿ, ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಸ್.ಪಿ. ಭೋಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಬಳ್ಳಾರಿ ಉತ್ಸವದ ಮುಖ್ಯ ವೇದಿಕೆಯ ಬಲ ಭಾಗದಲ್ಲಿ ಫಲಪುಷ್ಪ ಪ್ರದರ್ಶನಕ್ಕಾಗಿ ಬೃಹತ್ ಆಕಾರದ ಜರ್ಮನ್ ಟೆಂಟ್ ತಲೆಯೆತ್ತಿ ನಿಂತಿದ್ದು, ಅಲ್ಲಿ ವಿವಿಧ ಫಲಪುಷ್ಪಗಳಿಂದ ತಯಾರಿಸಿದ ಆಕೃತಿಗಳು ಜನರನ್ನು ವಿಸ್ಮಯಗೊಳಿಸುತ್ತಿವೆ.
ಬಳ್ಳಾರಿಯ ನಗರದ ಅಧಿದೇವತೆ ದೇವಸ್ಥಾನ ಮಾದರಿಯು ಪುಷ್ಪದಲ್ಲಿ ಅರಳಿದ್ದು, ಆಗಮಿಸುವ ನೋಡುಗರಿಗೆ ಆಸಕ್ತಿ ಮೂಡಿಸುತ್ತಿದೆ.
ಕಲ್ಲಂಗಡಿ ಹಣ್ಣುಗಳನ್ನು ಬಳಸಿ ನಟ ಪುನೀತ ರಾಜಕುಮಾರ ಅವರ ಬಾಲ್ಯದಿಂದ ಹಿಡಿದು ಇತ್ತೀಚೆಗಿನ ವರೆಗಿನ ಚಿತ್ರಗಳನ್ನು ರಚಿಸಲಾಗಿದೆ. ಜೊತೆಗೆ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರು, ಮಹಾಪುರುಷರು, ರಾಜಕುಮಾರ, ಅಬ್ದುಲ್ ಕಲಾಂ, ಡಾ.ಅಂಬೇಡ್ಕರ್, ಮಹಾತ್ಮಾ ಗಾಂಧೀಜಿ, ಭಗತ್ ಸಿಂಗ್, ಛತ್ರಪತಿ ಶಿವಾಜಿ, ವಿಶ್ವಗುರು ಬಸವಣ್ಣ, ಸ್ವಾಮಿ ವಿವೇಕಾನಂದ, ಡಾ.ವೀರೇಂದ್ರ ಹೆಗ್ಗಡೆಯವರು, ತಿರುಪತಿ ತಿಮ್ಮಪ್ಪ, ಈಶ್ವರ, ಗಣಪ, ಜಿಂಕೆಗಳು ವಿವಿಧ ಹಣ್ಣುಗಳಲ್ಲಿ ಕಲಾವಿದರ ಕೈಚಳಕದಿಂದ ಸುಂದರವಾಗಿ ಅರಳಿವೆ.
ತೆಂಗಿನ ಕಾಯಿ, ಸಿಪ್ಪೆ ಹಾಗೂ ನಾರಿನಲ್ಲಿ ಅರಳಿದ ಗಜರಾಜ, ಆಮೆ, ಸರ್.ಎಂ ವಿಶ್ವೇಶ್ವರಯ್ಯ, ಕ್ಷಿಪಣಿ ಮಾನವ ಅಬ್ದುಲ್ ಕಲಾಂ, ಗೌತಮಬುದ್ಧ ಕಲಾಕೃತಿ ಯುವಜನರ ಮನಸ್ಸನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿವೆ.
ಕಬ್ಬು ಹಾಗೂ ಅದರ ಸಿಪ್ಪೆಯಲ್ಲಿ ಮೂಡಿಬಂದ ಸ್ವಾಮಿ ಅಯ್ಯಪ್ಪ ದೇವಸ್ಥಾನ ಕಲಾಕೃತಿ, ಹೂಗಳಲ್ಲಿ ಮೂಡಿಬಂದ ಬಾತುಕೋಳಿ, ಕಾಂತಾರ ಚಲನಚಿತ್ರದ ಪಂಜುರ್ಲಿ ದೈವ ಕಲಾಕೃತಿ, ಬಾಳೆ ದಿಂಡು ಹಾಗೂ ಎಲೆ ಹೂವಿನಲ್ಲಿ ನಿರ್ಮಿಸಿದ ಗುಡಿ ಗೋಪುರ, ಕನ್ನಡ ನಾಡಿನ ನಕ್ಷೆಯಲ್ಲಿ ಮೂಡಿದ ಹೂಗಳ ಚಿತ್ತಾರ ಆಕರ್ಷಣೀಯವಾಗಿವೆ.
ಬಳ್ಳಾರಿಯ ಮುಖ್ಯ ವೃತ್ತದಲ್ಲಿ ನಿರ್ಮಿಸಲು ಉದ್ದೇಸಿದ ಗಡಿಯಾರ ಸ್ತಂಭ, ನೇಗಿಲ ಯೋಗಿ, ಪುನೀತ್ ರಾಜಕುಮಾರ, ಸಿದ್ದೇಶ್ವರ ಸ್ವಾಮೀಜಿ, ಒಂದು ಜಿಲ್ಲೆ ಒಂದು ಉತ್ಪನ್ನ ಪರಿಕಲ್ಪನೆ ನೋಡುಗರಿಗೆ ಅದ್ಬುತ ಅನುಭವ ನೀಡಿದವು.
ಫಲಪುಷ್ಪ ಪ್ರದರ್ಶನದಲ್ಲಿ ಮೇಕ್ ಇನ್ ಇಂಡಿಯಾ, ಜಿ 20 ಶೃಂಗ ಸಭೆ, ಐಎನ್‌ಎಸ್ ವಿಕ್ರಾಂತ್, ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಉಕ್ರೇನ್ ರಭಿಣ್ಯ ಯುದ್ದ ಕುರಿತ ಸಂದೇಶ ಇದು ಯುದ್ದ ಕಾಲವಲ್ಲ ಎಂಬುದು ದೇಶ ಜಾಗತಿಕವಾಗಿ ಪ್ರಗತಿ ಹೊಂದುತ್ತಿರುವುದನ್ನು ಅನಾವರಣಗೊಳಿಸಿದವು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post