ಕಲ್ಪ ಮೀಡಿಯಾ ಹೌಸ್ | ಬಳ್ಳಾರಿ |
ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ಚೆಕ್ ಪೋಸ್ಟ್ ವ್ಯವಸ್ಥೆ ಮಾಡಲಾಗಿದೆ. ನೀತಿ ಸಂಹಿತೆ ಉಲ್ಲಂಘಿಸಿ ಸಾಗಿಸುತ್ತಿದ್ದ ನಗದು ಸೇರಿದಂತೆ ಚಿನ್ನಾಭರಣ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕುರಿತು ಜಿಲ್ಲಾ ಚುನಾವಣಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಅವರು ಮಾಹಿತಿ ನೀಡಿದ್ದಾರೆ.
ಜಿಲ್ಲೆಯಾದ್ಯಂತ ವಿವಿಧ ಚೆಕ್ ಪೋಸ್ಟ್’ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಕೈಗೊಳ್ಳಲಾಗುತ್ತಿದ್ದು, ದಾಖಲೆ ಇಲ್ಲದೇ ಸಾಗಿಸುತ್ತಿದ್ದ ನಗದು, ಚಿನ್ನಾಭರಣ ಸೇರಿದಂತೆ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಸೋಮವಾರ ಸಂಜೆ ರೂಪನಗುಡಿ ಚೆಕ್ ಪೋಸ್ಟ್ ಬಳಿ ತಪಾಸಣೆ ನಡೆಸುವ ವೇಳೆ ಆಂಧ್ರ ಪ್ರದೇಶ ಪರವಾನಿಗೆ ಹೊಂದಿದ ವಾಹನದಲ್ಲಿ 4.8 ಕೆಜಿ ಬೆಳ್ಳಿ ಅಂದಾಜು ಮೌಲ್ಯ 1.21 ಲಕ್ಷ, 405 ಗ್ರಾಂ ಚಿನ್ನ ಅಂದಾಜು ಮೌಲ್ಯ 23.92 ಲಕ್ಷ ರೂ. ಹಾಗೂ 24.5 ಸಾವಿರ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಆರೋಪಿತನ ಮೇಲೆ ಬ್ರೂಸ್‍ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಲು ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪವನ್ ಕುಮಾರ್ ಮಾಲಪಾಟಿ ತಿಳಿಸಿದ್ದಾರೆ.
51 ಪ್ರಕರಣ, 16.59 ಲಕ್ಷ ರೂ. ನಗದು ವಶಕ್ಕೆ: ಅಬಕಾರಿ ಇಲಾಖೆಯಿಂದ 45 ಪ್ರಕರಣ ಹಾಗೂ ಫ್ಲೈಯಿಂಗ್ ಸ್ಕ್ವಾಡ್(ಎಫ್‍ಎಸ್)3, ಸ್ಟಾಟಿಕ್ ಸರ್ವೈವ್‍ಲೆನ್ಸ್ ಟೀಮ್(ಎಸ್‍ಎಸ್‍ಟಿ) 2 ಹಾಗೂ ಪೋಲೀಸ್ ಇಲಾಖೆ 1 ಸೇರಿದಂತೆ ಒಟ್ಟು 51 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.
ನೀತಿ ಸಂಹಿತೆ ಕಟ್ಟುನಿಟ್ಟಿನ ಜಾರಿಗೆ ತಂಡಗಳು ಕಾರ್ಯಪ್ರವೃತ್ತ: ಜಿಲ್ಲೆಯಾದ್ಯಂತ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸಲು ವಿವಿಧ ತಂಡಗಳನ್ನು ರಚಿಸಲಾಗಿದ್ದು, ಈಗಾಗಲೇ ಕಾರ್ಯಪ್ರವೃತ್ತವಾಗಿದೆ. ಒಟ್ಟು 43 ಫ್ಲೈಯಿಂಗ್ ಸ್ಕ್ವಾಡ್, 27 ಎಸ್‍ಎಸ್‍ಟಿ ತಂಡ ಹಾಗೂ 7 ಅಬಕಾರಿ ತಂಡ ಕೆಲಸ ನಿರ್ವಹಿಸುತ್ತಿವೆ.
Also read: ಬಿಜೆಪಿಗೆ ಭದ್ರ ಬುನಾದಿ ನೀಡಿದ ಶಿವಮೊಗ್ಗ ಜಿಲ್ಲೆ 7 ಸ್ಥಾನಗಳಲ್ಲೂ ಗೆಲ್ಲಲಿದೆ: ತೇಜಸ್ವಿನಿ ಅನಂತಕುಮಾರ್
ಚುನಾವಣೆ ಕರ್ತವ್ಯದಲ್ಲಿ ಇಲ್ಲಿಯವರೆಗೆ ಜಿಲ್ಲೆಯಾದ್ಯಂತ ಎಫ್‍ಎಸ್ ತಂಡದಿಂದ 6 ಲಕ್ಷ ರೂ. ಎಸ್‍ಎಸ್‍ಟಿ ತಂಡದಿಂದ 10.35 ಲಕ್ಷ ರೂ. ಹಾಗೂ ಪೋಲೀಸ್ ಇಲಾಖೆಯಿಂದ 24.5 ಸಾವಿರ ರೂ. ಸೇರಿದಂತೆ ಒಟ್ಟು 16.59 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ.
312 ಲೀ. ಮದ್ಯ, 710 ಗ್ರಾಂ ಡ್ರಗ್ಸ್, ಮತದಾರರಿಗೆ ಆಮಿಷವೊಡ್ಡುವ 82 ವಿವಿಧ ಸರಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post