ಕಲ್ಪ ಮೀಡಿಯಾ ಹೌಸ್ | ಮೈಸೂರು |
ಮುಂಜಾಗ್ರತಾ ಕ್ರಮವಾಗಿ ದಸರಾ ಆನೆಗಳ ಬಳಿಯಲ್ಲಿ ರೀಲ್ಸ್ ಮಾಡುವುದು, ಫೋಟೋ ತೆಗೆದುಕೊಳ್ಳುವುದನ್ನು ರಾಜ್ಯ ಸರ್ಕಾರ ನಿಷೇಧಿಸಿದ್ದು, ಆನೆಗಳ ಬಳಿ ತೆರಳದಂತೆ ಕಮಾಂಡೋ ಪಡೆ ನಿಯೋಜಿಸುವಂತೆ ಸೂಚಿಸಿದೆ.
ಈ ಕುರಿತಂತೆ ಸಚಿವ ಈಶ್ವರ ಖಂಡ್ರೆ ಆದೇಶಿಸಿದ್ದು, ಮೈಸೂರು ಅರಮನೆಯಲ್ಲಿಂದು ಜಂಬೂಸವಾರಿಯ ಪ್ರಧಾನ ಆಕರ್ಷಣೆಯಾದ ದಸರಾ ಆನೆಗಳ ನಿರ್ವಹಣೆಯ ಜವಾಬ್ದಾರಿ ಹೊತ್ತ ಮಾವುತರು ಮತ್ತು ಕಾವಾಡಿಗಳು ಹಾಗೂ ಅವರ ಕುಟುಂಬ ವರ್ಗದವರಿಗೆ ಭೋಜನ ಬಡಿಸಿದ ಬಳಿಕ ಮಾತನಾಡಿದ್ದಾರೆ.
ಮೈಸೂರು ದಸರಾ ಆನೆಗಳ ಬಳಿಯಲ್ಲಿ ರೀಲ್ಸ್ ಮಾಡುವುದು ಹಾಗೂ ಫೋಟೋಗಳನ್ನು ತೆಗೆದುಕೊಳ್ಳುವುದನ್ನು ನಿಷೇಧಿಸಲಾಗಿದೆ ಎಂದಿದ್ದಾರೆ.
ಕಾರಣವೇನು?
ದಸರಾ ಆನೆಗಳ ಸೊಂಡಿಲು, ದಂತ ಹಿಡಿದುಕೊಂಡು ಫೋಟೋ ರೀಲ್ಸ್ ಮಾಡಿ ಸಾಮಾಜಿಕ ತಾಣಗಳಲ್ಲಿ ಹಾಕುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆನೆಗಳನ್ನು ಪಳಗಿಸಿದ್ದರೂ, ಕೆಲವೊಂದು ಸಂದರ್ಭದಲ್ಲಿ ಪ್ರಾಣಿಗಳ ವರ್ತನೆಯನ್ನು ಊಹಿಸುವುದೂ ಅಸಾಧ್ಯಆಗಿರುತ್ತದೆ. ಹೀಗಾಗಿ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿರುವ ಆನೆಗಳ ಬಳಿ ಯಾರಿಗೂ ಬಿಡದಂತೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.
ಯಾವುದೇ ಕಾರಣಕ್ಕೂ ದಸರಾ ಆನೆಗಳ ಬಳಿಯಲ್ಲಿ ಯಾರೂ ಸಹ ತೆರಳುವಂತಿಲ್ಲ. ರೀಲ್ಸ್ ಮಾಡುವುದು, ಆನೆಗಳ ಬಳಿ ಫೋಟೋ ತೆಗೆದುಕೊಳ್ಳುವುದನ್ನು ಮಾಡುವಂತಿಲ್ಲ. ಒಂದು ವೇಳೆ ಇಂತಹ ವರ್ತನೆಗಳು ಮುಂದುವರೆದರೆ ಅಂತಹವರಿಗೆ ನಿರ್ದಾಕ್ಷಿಣ್ಯವಾಗಿ ದಂಡ ಸೂಚಿಸಲಾಗಿದೆ ಎಂದರು.
ಕಳೆದ 18ರಂದು ಮಹಿಳೆಯೊಬ್ಬರು ಸಿಬ್ಬಂದಿಯ ಕಣ್ತಪ್ಪಿಸಿ ರೀಲ್ಸ್ ಮಾಡಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯನ್ನು ನೀಡಲಾಗಿದೆ. ಇದು ಮೇಲ್ನೋಟಕ್ಕೆ ಕರ್ತವ್ಯಲೋಪವಾಗಿದೆ ಎಂಬುದನ್ನು ಪುಷ್ಟೀಕರಿಸಿದ್ದು, ಅಧಿಕಾರಿ, ಸಿಬ್ಬಂದಿಗೂ ಕಾರಣ ಕೇಳಿ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















