ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪ್ರತಿಷ್ಠಿತ ಬೆಂಗಳೂರು ಇಂಡಿಯಾ ನ್ಯಾನೋ ಸಮಿಟ್‌ನ #India Nano Summit 14 ನೇ ಆವೃತ್ತಿಯ ಆಹಾರ ಮತ್ತು ನೀರಿನ ಸುಸ್ಥಿರ ಭದ್ರತೆಗೆ ನ್ಯಾನೋ ಕೊಡುಗೆಯ ಕೋರ್ ಥೀಮ್ ಮೇಲೆ ಆಯೋಜಿಸಲಾಗುವುದು. ಕರ್ನಾಟಕ ರಾಜ್ಯವನ್ನ ಕ್ವಾಂಟಮ್ ತಂತ್ರಜ್ಞಾನ ಕ್ಷೇತ್ರದ ಜಾಗತಿಕ ಕೇಂದ್ರವನ್ನಾಗಿ ಅಭಿವೃದ್ದಿಪಡಿಸುವ ಉದ್ದೇಶದಿಂದ ಬೆಂಗಳೂರು ನ್ಯಾನೋ ಇಂಡಿಯಾ ಸಮಾವೇಶದ ರೀತಿಯಲ್ಲಿಯೇ ಬೆಂಗಳೂರು ಇಂಡಿಯಾ ಕ್ವಾಂಟಮ್ ಸಮಿಟ್ ಕೂಡಾ ಆಯೋಜಿಸಲಾಗುವುದು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್ ಎಸ್ ಭೋಸರಾಜು #Minister Bosaraju ತಿಳಿಸಿದರು.
ಬೆಂಗಳೂರು ಇಂಡಿಯಾ ನ್ಯಾನೋ 13 ನೇ ಆವೃತ್ತಿಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭಾರತ ರತ್ನ ಪ್ರೊ. ಸಿ.ಎನ್.ಆರ್ ರಾವ್ ಅವರ ಮಾರ್ಗದರ್ಶನದಲ್ಲಿ ಆರಂಭಿಸಲಾದ ಪ್ರತಿಷ್ಠಿತ ನ್ಯಾನೋ ಸಮಿಟ್ ಅಂತರಾಷ್ಟ್ರೀಯ ಮಟ್ಟದ ಖ್ಯಾತಿಯನ್ನು ಗಳಿಸಿದೆ. ನ್ಯಾನೋ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳು, ಇರುವ ಅವಕಾಶಗಳು, ಉದ್ದಿಮೆಗಳ ಪ್ರಾರಂಭಕ್ಕೆ ಇರುವ ಅವಕಾಶಗಳ, ನ್ಯಾನೋ ಕ್ಷೇತ್ರದ ವಿಫುಲ ಅವಕಾಶಗಳ ಬಗ್ಗೆ ವಿದ್ಯಾರ್ಥಿಗಳು, ಸ್ಟಾರ್ಟ್‌ಅಪ್, ಕೈಗಾರಿಕೋದ್ಯಮಿಗಳಿಗೆ ಅರಿವು ಮೂಡಿಸುವಲ್ಲಿ ಇದು ಯಶಸ್ವಿಯಾಗಿದೆ. ದೇಶ ವಿದೇಶಗಳ 700 ಕ್ಕೂ ಹೆಚ್ಚು ಪರಿಣಿತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಸಾವಿರಾರು ಜನ ವಿದ್ಯಾರ್ಥಿಗಳು ಇದರ ಲಾಭ ಪಡೆದುಕೊಂಡಿದ್ದಾರೆ ಎಂದರು.
Also read: ವಕ್ಫ್ ಮಂಡಳಿ ಪರಮಾಧಿಕಾರಕ್ಕೆ ಬ್ರೇಕ್! ಕಾಯ್ದೆಗೆ ತಿದ್ದುಪಡಿಗೆ ಮೋದಿ ಸರ್ಕಾರ ಮುಂದು | ಏನಿದು ಕಾಯ್ದೆ?
ಆಹಾರ ಮತ್ತು ನೀರಿನ ಭದ್ರತೆ ಹಾಗೂ ಸುಸ್ಥಿರ ಅಭಿವೃದ್ದಿ:
2026 ರಲ್ಲಿ ನಡೆಯಲಿರುವ 14 ನೇ ಬೆಂಗಳೂರು ಇಂಡಿಯಾ ನ್ಯಾನೋ ಸಮಾವೇಶವನ್ನ ಆಹಾರ ಮತ್ತು ನೀರಿನ ಭದ್ರತೆಯ ಥೀಮ್ ಅಡಿಯಲ್ಲಿ ಅಯೋಜಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ. ಜಗತ್ತನ್ನ ಇನ್ನಷ್ಟು ಸುಸ್ಥಿರಗೊಳಿಸುವ ನಿಟ್ಟಿನಲ್ಲಿ ನ್ಯಾನೋ ತಂತ್ರಜ್ಞಾನ ಪ್ರಮುಖ ಪಾತ್ರವಹಿಸಲಿದೆ. ಹವಾಮಾನ, ಶಕ್ತಿ ಹಾಗೂ ಆರೋಗ್ಯ ಕ್ಷೇತ್ರಗಳ ಜೊತೆಯಲ್ಲೇ, ಜಾಗತಿಕವಾಗಿ ಆಹಾರ ಮತ್ತು ನೀರಿನ ಭದ್ರತೆ ಪ್ರಮುಖ ಸವಾಲುಗಳಾಗಿವೆ. ಇವುಗಳ ಸಮರ್ಪಕ ನಿರ್ವಹಣೆಯಲ್ಲಿ ಸುಸ್ಥಿರ ಕ್ರಮಗಳನ್ನ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ನ್ಯಾನೋ ತಂತ್ರಜ್ಞಾನದ ಬಳಕೆಯ ಬಗ್ಗೆ ಮುಂದಿನ ಸಮಾವೇಶದಲ್ಲಿ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.
2025 ರಲ್ಲಿ ಬೆಂಗಳೂರು ಇಂಡಿಯಾ ಕ್ವಾಂಟಮ್ ಸಮಿಟ್ ಆಯೋಜನೆ:
ಇಂದು, ಕ್ವಾಂಟಮ್ ತಂತ್ರಜ್ಞಾನದಲ್ಲಿನ ಹೊಸ ಆವಿಷ್ಕಾರಗಳು ನಮ್ಮ ದೈನಂದಿನ ಜೀವನದಲ್ಲಿ ಗಮನಾರ್ಹ ಸುಧಾರಣೆಗಳನ್ನು ತಂದಿವೆ. ಕ್ವಾಂಟಮ್ ತಂತ್ರಜ್ಞಾನವು ಅನೇಕ ಕ್ಷೇತ್ರಗಳಲ್ಲಿ ಗಮನಾರ್ಹ ಬದಲಾವಣೆ ತರುವ ಸಾಮರ್ಥ್ಯವನ್ನು ಹೊಂದಿದೆ. ಕ್ವಾಂಟಮ್ ತಂತ್ರಜ್ಞಾನವು, ತಂತ್ರಜ್ಞಾನದಲ್ಲಿ ಸಾಧ್ಯವಿರುವ ಹೊಸ ಸಾಧ್ಯತೆಗಳನ್ನ ತಲುಪಲು ಸಹಾಯಕವಾಗಲಿದೆ, ಹೊಸ ಆವಿಷ್ಕಾರ ಹಾಗೂ ಅಭಿವೃದ್ದಿಗೂ ಕಾರಣವಾಗಲಿದೆ. ಈ ಪ್ರಮುಖ ಕ್ಷೇತ್ರದಲ್ಲಿ ನಮ್ಮ ನಾವೀನ್ಯತೆಯನ್ನು ಹೆಚ್ಚಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಈಗಾಗಲೇ ಐಐಎಸ್ಸಿ ಬೆಂಗಳೂರಿನಲ್ಲಿ ಸ್ಥಾಪಿಸಲಾಗಿರುವ ಕ್ವಾಂಟಮ್ ರಿಸರ್ಚ್ ಪಾರ್ಕ್ ಗೆ ಅಗತ್ಯ ಬೆಂಬಲ ನೀಡುತ್ತಿದೆ. ಕ್ವಾಂಟಮ್ ತಂತ್ರಜ್ಞಾನದ ಮೂಲಕ ಪ್ರಸ್ತುತ ಪಡಿಸಲಾಗಿರುವ ಅಗಾಧ ಅವಕಾಶಗಳನ್ನ ಉತ್ತಮವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗಬೇಕಾಗಿದೆ. ನಮ್ಮ ಜೀವನವನ್ನು ಸುಧಾರಿಸಲು, ಕೈಗಾರಿಕೆಗಳನ್ನು ಮತ್ತಷ್ಟು ಅಭಿವೃದ್ದಿಗೊಳಿಸಲು ಕ್ವಾಂಟಮ್ ತಂತ್ರಜ್ಞಾನದ ಸಾಮರ್ಥ್ಯವನ್ನು ಆವಿಷ್ಕರಿಸಲು, ಅಂತಿಮವಾಗಿ ಸಮಾಜಕ್ಕೆ ಅದರ ಪ್ರಯೋಜನವನ್ನು ನೀಡಲು ನಾವು ಬೆಂಗಳೂರು ಇಂಡಿಯಾ ನ್ಯಾನೋ ಸಮಾವೇಶದಂತೆಯೇ, ಬೆಂಗಳೂರು ಇಂಡಿಯಾ ಕ್ವಾಂಟಮ್ ಸಮಿಟ್ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಎನ್ ಎಸ್ ಭೋಸರಾಜು ತಿಳಿಸಿದರು.
ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಅವರ ನೇತೃತ್ವದ ಸರಕಾರ ರಾಜ್ಯವನ್ನ ಸಂಶೋಧನೆ ಹಾಗೂ ಅಭಿವೃದ್ದಿಯ ಪ್ರಮುಖ ರಾಜ್ಯವನ್ನಾಗಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಜನರಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಅರಿವು ಮೂಡಿಸುವಂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಚಿವರ ಇದೇ ಸಂಧರ್ಭದಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ನಾರಾಯಣ ಹೆಲ್ತ್‌ನ ಸಂಸ್ಥಾಪಕರಾದ ಡಾ. ದೇವಿ ಪ್ರಸಾದ್ ಶೆಟ್ಟಿ, ನ್ಯಾನೋ ಟೆಕ್ನಾಲಜಿ ವಿಷನ್ ಗ್ರೂಫ್‌ನ ಅಧ್ಯಕ್ಷರಾದ ಪ್ರೊ. ನವಕಾಂತ್ ಭಟ್, 13 ನೇ ಆವೃತ್ತಿಯ ಬೆಂಗಳೂರು ಇಂಡಿಯಾ ನ್ಯಾನೋ ಸಮಾವೇಶದ ಕಾರ್ಯನಿರ್ವಾಹಕ ಸಮಿತಿಯ ಅಧ್ಯಕ್ಷರಾದ ಪ್ರೊ. ಪಿ.ಎಸ್. ಅನಿಲ್ ಕುಮಾರ್, ಇಲಾಖೆಯ ಕಾರ್ಯದರ್ಶಿಗಳಾದ ಡಾ. ಎಕ್‌ರೂಪ್ ಕೌರ್, ಕೆಸ್ಟೆಪ್ಸ್ ವ್ಯವಸ್ಥಾಪಕ ನಿರ್ದೇಶಕರಾದ ಪವನ್ ಕುಮಾರ್ ಮಾಲಪಾಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post