ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಎಚ್. ಎಂ. ರೇವಣ್ಣ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಮಾರ್ಚ್ 21ರಂದು ಎಚ್.ಎಂ. ರೇವಣ್ಣ ಅವರಿಗೆ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ ಮತ್ತು ಅವರ ಜೀವನ ಸಾಧನೆ ಕುರಿತ ಪರಿಚಯ ಗ್ರಂಥ ಬಿಡುಗಡೆ ಸಮಾರಂಭ ಆಯೋಜಿಸಲಾಗಿದೆ.
ಐದು ದಶಕಗಳಿಂದ ಸಾರ್ವಜನಿಕ ಜೀವನದಲ್ಲಿದ್ದು ಸಮಾಜದ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿರುವ ಹಿರಿಯ ಜನನಾಯಕ ಎಚ್.ಎಂ.ರೇವಣ್ಣ ಅವರ ಜೀವನ ಮತ್ತು ಸಾಧನೆಗಳ ವಿವರಗಳುಳ್ಳ ಪರಿಚಯ ಗ್ರಂಥ ಹಾಗೂ ಅವರ ಜೀವನದ ಪ್ರಮುಖ ಘಟಕಗಳ ದಾಖಲೆ ಹೊಂದಿರುವ ಚಿತ್ರಕೋಶ ಹಾಗೂ ಸಾಕ್ಷ್ಯಚಿತ್ರವನ್ನು ಮೈಸೂರು ರಸ್ತೆಯ ಪೂರ್ಣಿಮಾ ಪ್ಯಾಲೇಸ್ ಕನ್ ವೆನ್ಷನ್ ಸೆಂಟರ್‌ನಲ್ಲಿ ಬೆಳಿಗ್ಗೆ 10:30ಕ್ಕೆ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.
ಮಾಜಿ ಮುಖ್ಯಮಂತ್ರಿ ಮತ್ತು ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಮಾರಂಭವನ್ನು ಉದ್ಘಾಟಿಸಲಿದ್ದು, ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ.ಎಂ.ವೀರಪ್ಪ ಮೊಯಿಲಿ ಅವರು ಅಧ್ಯಕ್ಷತೆ ವಹಿಸುವರು.
‘ಸಂಗತ’ ಗ್ರಂಥವನ್ನು ಮಾಜಿ ರಾಜ್ಯಪಾಲರು ಮತ್ತು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಬಿಡುಗಡೆ ಮಾಡುವರು. ‘ದೃಶ್ಯಯಾನ’ ಚಿತ್ರಗುಚ್ಛವನ್ನು ರಾಜ್ಯಸಭೆಯ ವಿರೋಧ ಪಕ್ಷದ ನಾಯಕರು ಮತ್ತು ಮಾಜಿ ಕೇಂದ್ರ ಸಚಿವ ಎಂ.ಮಲ್ಲಿಕಾರ್ಜುನ ಖರ್ಗೆ ಅವರು ಲೋಕಾರ್ಪಣೆ ಮಾಡುವರು.
‘ಇಟ್ಟ ಹೆಜ್ಜೆ ದಿಟ್ಟ ನಿಲುವು’ ಕಿರುಚಿತ್ರವನ್ನು ಕರ್ನಾಟಕ ವಿಧಾನ ಪರಿಷತ್‌ನ ಸಭಾಪತಿ ಬಸವರಾಜ ಹೊರಟ್ಟಿ ಬಿಡುಗಡೆಗೊಳಿಸುವರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಮತ್ತು ಶಾಸಕ ರಾಮಲಿಂಗಾರೆಡ್ಡಿ ಅವರು ವಿಶೇಷ ಅತಿಥಿಗಳಾಗಿ ಪಾಲ್ಗೊಳ್ಳುವರು.
ಕಮ್ಯುನಿಟಿ ಸೆಂಟರ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ಎಂ.ನಾಗರಾಜ್ ಹಾಗೂ ಹಿರಿಯ ಕವಿ ಹಾಗೂ ವಿಧಾನ ಪರಿಷತ್ ನ ಮಾಜಿ ಸದಸ್ಯ ಡಾ.ಸಿದ್ದಲಿಂಗಯ್ಯ ಅವರು ಅಭಿನಂದನಾ ನುಡಿಗಳನ್ನು ಆಡುವರು. ಮಾಜಿ ಸಚಿವೆ ಮತ್ತು ಹಿರಿಯ ಸಾಹಿತಿ ಡಾ.ಬಿ.ಟಿ.ಲಲಿತಾ ನಾಯಕ್ ಗ್ರಂಥ ಪರಿಚಯ ಮಾಡುವರು.
ಸಮಾರಂಭದಲ್ಲಿ ಗ್ರಂಥ ಸಂಪಾದಕರಾದ ಕಾ.ತ.ಚಿಕ್ಕಣ್ಣ ಮತ್ತು ಲಕ್ಷ್ಮಣ ಕೊಡಸೆ, ಕಿರುಚಿತ್ರ ನಿರ್ದೇಶಕ ಹುಲಿ ಚಂದ್ರಶೇಖರ ಉಪಸ್ಥಿತರಿರುವರು ಎಂದು ಪ್ರತಿಷ್ಠಾನ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post