ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ಬರುವ ಅನುದಾನ ಪಡೆಯಲು ರಾಜ್ಯ ಸರ್ಕಾರ ಸರಿಯಾದ ಮಾದರಿಯಲ್ಲಿ ಮನವಿ ಸಲ್ಲಿಸದೇ, ರಾಜಕೀಯಕ್ಕಾಗಿ ಕೇಂದ್ರದ ವಿರುದ್ದ ಆರೋಪ ಮಾಡಿ ರಾಜ್ಯದ ಜನತೆಗೆ ಪಂಗನಾಮ ಹಾಕುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ತಿ ಬಸವರಾಜ ಬೊಮ್ಮಾಯಿ Basavaraja Bommai ರಾಜ್ಯ ಸರ್ಕಾರದ ವಿರುದ್ದ ಆರೋಪಿಸಿದ್ದಾರೆ.
ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ CM Siddaramaiah ಉತ್ತರ ನೀಡುತ್ತಿರುವಾಗ ಆಕ್ಷೇಪ ವ್ಯಕ್ತಪಡಿಸಿ ಮಾತನಾಡಿದ ಅವರು, ಬಜೆಟ್ ಬಗ್ಗೆ ಪತ್ರಿಕೆಗಳ ಸಂಪಾದಕೀಯಗಳಲ್ಲಿ ಬಂದಿರುವ ಹೊಗಳಿಕೆಗಳನ್ನು ಪ್ರಸ್ತಾಪ ಮಾಡಿ ಸಮರ್ಥನೆ ಮಾಡಿಕೊಂಡಿರುವುದಕ್ಕೆ ವ್ಯಂಗ್ಯವಾಡಿದ ಅವರು, ನೀವು ಮುಖ್ಯಮಂತ್ರಿ ಆಗಿದ್ದೀರ, ಹಿಂದೆ ವಿಪಕ್ಷ ನಾಯಕರೂ ಆಗಿದ್ದೀರ, ಆದರೆ, ನಿಮ್ಮ ಸಾಮರ್ಥ್ಯ ಬಗ್ಗೆ ಪತ್ರಿಕೆಗಳ ಸಂಪಾದಕೀಯಗಳ ಸಹಾಯ ತೆಗೆದುಕೊಂಡು ಮಾತಾಡುವಷ್ಟರ ಮಟ್ಟಿಗೆ ಅಸಹಾಯಕರಾಗಿದ್ದೀರಾ ಎಂದು ಪ್ರಶ್ನಿಸಿದರು.
15ನೇ ಹಣಕಾಸು ಆಯೋಗ ಶಿಫಾರಸು ಮಾಡಿದ್ದ 5495 ಕೋಟಿ, ಪೆರಿಫೆರಲ್ ರಸ್ತೆಗಳ 6300 ಕೋಟಿ ರೂ ಹಣ ಕೊಟ್ಟಿಲ್ಲ ನಮ್ಮ ರಾಜ್ಯದಿಂದ ಗೆದ್ದು ಹೋದ ನಿರ್ಮಲಾ ಸೀತಾರಾಮನ್ ಈ ಅನುದಾನಗಳನ್ನು ನಿರಾಕರಿಸಿದರು ಎಂದು ಸಿಎಂ ಸತ್ಯ ಮರೆ ಮಾಚಿ ಕಾನೂನು ತಿರುಚಿ ಹೇಳುತ್ತಿದಾರೆ ಎಂದು ಬೊಮ್ಮಾಯಿ ಆಕ್ಷೇಪ ವ್ಯಕ್ತಪಡಿಸಿದರು.
Also read: ಫೆ.22-23: ಸುಬ್ಬಯ್ಯ ಡೆಂಟಲ್ ಕಾಲೇಜಿಗೆ ನ್ಯಾಕ್ ಕಮಿಟಿ ಭೇಟಿ
15 ನೇ ಹಣಕಾಸು ಆಯೋಗದ ಮಧ್ಯಂತರ ವರದಿಯಲ್ಲಿ 5495 ಕೋಟಿ ಶಿಫಾರಸು ಮಾಡಿದ್ದು ನಿಜ. ಆದರೆ, ಅಂತಿಮ ವರದಿಯಲ್ಲಿ ಅದು ಇರಲಿಲ್ಲ, ಇರದ ಮೇಲೆ ಕೇಳುವುದು ಹೇಗೆ ಎಂದು ಪ್ರಶ್ನಿಸಿದರು.
ಇನ್ನು ಪೆರಿಫರಲ್ ರಸ್ತೆಗೆ 6000 ಕೋಟಿ ಈಗಲೂ ಇದೆ. ಆದರೆ, ಇಲ್ಲಿ ಪೆರಿಫರಲ್ ರಿಂಗ್ ರಸ್ತೆ ಯೋಜನೆಯೇ ಶುರು ಮಾಡಿಲ್ಲ, ಭೂಸ್ವಾಧೀನವೇ ಆಗಿಲ್ಲ ಯೋಜನೆ ಆರಂಭ ಮಾಡಿದರೆ ಕೇಂದ್ರದ ಅನುದಾನ ಬರುತ್ತದೆ ಎಂದರು.
ಕೇಂದ್ರದಿಂದ ಅನುದಾನ ಕೇಳಬೇಕು ಅಂದರೆ ನಿರ್ದಿಷ್ಟ ರೀತಿಯಲ್ಲಿ ಪ್ರಸ್ತಾವನೆ ಕಳಿಸಬೇಕು. ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಮಾನ್ಯತೆಯೂ ಸಿಗುತ್ತದೆ.
ಈ ವಿಚಾರದಲ್ಲಿ ನಮ್ಮ ಸರ್ಕಾರ ಯೋಜನೆಗೆ ಅಗತ್ಯ ಅನುಮತಿಗಳನ್ನು ಕೊಟ್ಟಿತ್ತು. ಈಗಲೂ ಕೇಂದ್ರದಿಂದ ಹಣ ಬರುತ್ತದೆ. ಅದಕ್ಕೆ ಹೋಗಿ ಕೇಳಬೇಕು. ಸರಿಯಾದ ಪ್ರಯತ್ನ ಮಾಡದೇ ಅನುದಾನ ಬಂದಿಲ್ಲ ಅನ್ನುವುದೂ ಸರಿಯಲ್ಲ. ಭದ್ರಾಮೇಲ್ದಂಡೆ ಯೋಜನೆ ಹೊಸ ಯೋಜನೆ ಆಗಿರುವುದುರಿಂದ ಎನ್ ಫಾರ್ಮ್ ನಡಿ ಪ್ರಸ್ತಾವನೆ ಸಲ್ಲಿಸಬೇಕು. ಅನುದಾನ ಕೇಳುವುದು ಹೇಗೆ ಅಂತ ಕಾಂಗ್ರೆಸ್ ಗೆ ಗೊತ್ತಿಲ್ಲ ಅಂತ ಬೊಮ್ಮಾಯಿ ಆರೋಪ ಮಾಡಿದರು.
ಈ ಸಂದರ್ಭದಲ್ಲಿ ಯಾವ ಮಾದರಿಯಲ್ಲಿ ಅರ್ಜಿ ಸಲ್ಲಿಸಬೇಕು ಎಂದು ತರಬೇತಿ ಕೊಡಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮನವಿ ಮಾಡಿದರು. ಸರಿಯಾದ ರೀತಿಯಲ್ಲಿ ಅರ್ಜಿಸಲ್ಲಿಸಿದರೆ ರಾಜ್ಯದ ಹಿತದೃಷ್ಟಿಯಿಂದ ನಾವು ನಿಮ್ಮ ಜೊತೆಗೆ ಬರುತ್ತೇವೆ ಎಂದು ಹೇಳಿದರು.
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post