ಕಲ್ಪ ಮೀಡಿಯಾ ಹೌಸ್
ಇತ್ತೀಚೆಗಷ್ಟೆ ಬಚ್ಚಲು ಮನೆಯಲ್ಲಿ ಕಾಲು ಜಾರಿಬಿದ್ದು ಸೊಂಟ ಮತ್ತು ಕಾಲಿಗೆ ಪೆಟ್ಟು ಮಾಡಿಕೊಂಡಿರುವ ಹಿರಿಯ ನಟಿ ಲೀಲಾವತಿ ಅವರನ್ನು ನಟಿಯರಾದ ಶ್ರುತಿ, ಮಾಳವಿಕಾ ಮತ್ತು ಸುಧಾರಾಣಿ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.
ಲೀಲಾವತಿಯವರ ನೆಲಮಂಗಲ ನಿವಾಸಕ್ಕೆ ಭೇಟಿ ನೀಡಿದ್ದ ನಟಿಯರು ಲೀಲಾವತಿ ಅವರ ಮನೆಯಲ್ಲಿ ಕೆಲ ಸಮಯ ಕಾಲ ಕಳೆದು ಅವರ ಜೊತೆ ಮಾತು ಕತೆ ನಡೆಸಿದ್ದಾರೆ.
ನಟಿ ಲೀಲಾವತಿ ಅವರು ಬೆಂಗಳೂರಿನ ಉತ್ತರ ತಾಲೂಕಿನ ಸೋಲದೇವನಹಳ್ಳಿಯ ತಮ್ಮ ತೋಟದ ಮನೆಯಲ್ಲಿ ಕಾಲು ಜಾರಿ ಬಿದ್ದು ಪೆಟ್ಟು ಮಾಡಿಕೊಂಡಿದ್ದರು. ತಕ್ಷಣ ಅವರನ್ನು ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಪುತ್ರ ವಿನೋದ್ ರಾಜ್ ಜೊತೆ ಆಸ್ಪತ್ರೆಗೆ ತೆರಳಿದ್ದ ಲೀಲಾವತಿ ಚಿಕಿತ್ಸೆ ನೀಡಿದ ವೈದ್ಯರು ಒಂದು ತಿಂಗಳು ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ.
ಲೀಲಾವತಿ ಅವರ ಅನಾರೋಗ್ಯದ ವಿಚಾರ ತಿಳಿದ ತಕ್ಷಣ ಹಿರಿಯ ನಟಿಯರು ಮನೆಗೆ ತೆರಳಿ ಆರೋಗ್ಯ ವಿಚಾರಿಸಿ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಈ ಬಗ್ಗೆ ನಟಿ ಸುಧಾರಾಣಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದು, ಲೀಲಾವತಿ ಅಮ್ಮ, ಕನ್ನಡ ಚಿತ್ರರಂಗ ಕಂಡ ಅತ್ಯದ್ಭುತ ಕಲಾವಿದೆ ಇವರು. ನೂರಾರು ಸಿನಿಮಾಗಳಲ್ಲಿ ಬೇರೆ ಬೇರೆ ರೀತಿಯ ಪಾತ್ರಗಳ ಮೂಲಕ ನಮ್ಮೆಲ್ಲರನ್ನು ರಂಜಿಸಿದ್ದಾರೆ.
ಲೀಲಾವತಿ ಎನ್ನುವುದು ದುರ್ಗಾದೇವಿಯ ಮತ್ತೊಂದು ಹೆಸರು, ಕನ್ನಡದಲ್ಲಿ ಲೀಲಾ ಎನ್ನುವ ಪದಕ್ಕೆ ಮತ್ತೊಂದು ಅರ್ಥ ವಿನೋದ. ಲೀಲಾವತಿ ಅಮ್ಮ ದುರ್ಗೆಯ ಅವತಾರವಾದರು, ಜೀವನದ ಎಲ್ಲಾ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಇಂದು ಎಲ್ಲಾ ಹೆಣ್ಣುಮಕ್ಕಳಿಗೆ ಮಾದರಿಯಾಗಿ ನಿಂತಿದ್ದಾರೆ. ಅವರು ವಾಸವಿರುವ ಊರಿನಲ್ಲಿ ಬಡಜನರಿಗಾಗಿ ಆಸ್ಪತ್ರೆ ಕಟ್ಟಿಸಿದ್ದಾರೆ, ಹಸು ಕರುಗಳಿಗೆ ನೀರಿನ ಟ್ಯಾಂಕ್ ಕಟ್ಟಿಸಿ ಅವುಗಳಿಗೆ ಮೇವು ನೀಡಿದ್ದಾರೆ, ಎಷ್ಟೋ ಜನರಿಗೆ ಊಟ ನೀಡಿ ಸಹಾಯ ಮಾಡುತ್ತಾ ಇರುವ ಇವರನ್ನು ಅನ್ನಪೂರ್ಣೇಶ್ವರಿಯ ಸ್ವರೂಪ ಎಂದು ಕರೆಯುವುದೋ ಅಥವಾ ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಅದೆಲ್ಲವನ್ನು ಭೂಮಿ ತಾಯಿಯ ಹಾಗೆ ತನ್ನಲ್ಲಿಯೇ ಹೊತ್ತು, ತಾಳ್ಮೆಯಿಂದ ಎಲ್ಲವನ್ನು ಸಹಿಸಿ, ಲೀಲಾಜಾಲವಾಗಿ ನಿಭಾಯಿಸಿರವ ಇವರನ್ನು ಭೂಮಿ ತಾಯಿಯ ಸ್ವರೂಪ ಎಂದು ಕರೆಯುವುದೋ..
ಇಂತಹ ವ್ಯಕ್ತಿತ್ವ ಹೊಂದಿರುವ ಲೀಲಾವತಿ ಅಮ್ಮನವರ ಜೊತೆ ಬಾಲನಟಿಯಾಗಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸುವ ಅವಕಾಶ ನನಗೆ ಸಿಕ್ಕಿತ್ತು, ನಾಯಕಿಯಾದ ಮೇಲು ಲೀಲಾವತಿ ಅಮ್ಮನವರ ಜೊತೆ ಸುಮಾರು ಸಿನಿಮಾಗಳಲ್ಲಿ ಕೆಲಸ ಮಾಡುವ ಸೌಭಾಗ್ಯ ಸಿಕ್ಕಿದ್ದು ನನ್ನ ಅದೃಷ್ಟ.
ಇಲ್ಲಿರುವ ಎರಡು ಫೋಟೋಗಳಲ್ಲಿ ಮೊದಲನೆಯದು ನಾನು ಬಾಲನಟಿಯಾಗಿ ನಟಿಸಿದ ಮೊದಲ ಸಿನಿಮಾ “ಕಿಲಾಡಿ ಕಿಟ್ಟು” ಚಿತ್ರೀಕರಣದ ಸಮಯದ ಫೋಟೋ ಮತ್ತೊಂದು ಇಂದು ಲೀಲಾವತಿ ಅಮ್ಮನವರನ್ನು ಭೇಟಿ ಮಾಡಿದ ಸಂದರ್ಭದ ಫೋಟೋ.. ವರ್ಷಗಳು ಉರುಳಿವೆ ಹೊರತು ನಮ್ಮ ನಡುವೆ ಇರುವ ಬಾಂಧವ್ಯವಲ್ಲ…
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post