ಬೆಂಗಳೂರು: ನೈಜ ಕಲೆಯು ಮನಸ್ಸನ್ನು ಅರಳಿಸುವ ಮೂಲಕ ಸಂತೃಪ್ತಿಗೊಳಿಸುತ್ತದೆ ಅಲ್ಲದೆ ಕಲೆಯು ಮನುಷ್ಯನ ಭಾವನೆಯನ್ನು ಅಭಿವ್ಯಕ್ತಿಗೊಳಿಸುವ ಮಾಧ್ಯಮವಾಗಿದೆ ಎಂದು ಕಲಾ ವಿಮರ್ಷಕ ಚಿ.ಸು. ಕೃಷ್ಣಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನೇಟಿವ್ ನರೇಟಿವ್ಸ್ ಹೆಸರಿನಲ್ಲಿ ಬೆಂಗಳೂರಿನ ಬನಶಂಕರಿ ಎರಡನೆಯ ಹಂತದಲ್ಲಿರುವ ಬ್ರಿಗೇಡ್ ಸಾಫ್ಟ್’ವೇರ್ ಪಾರ್ಕ್’ನಲ್ಲಿರುವ ಗ್ಯಾಲರಿಯಲ್ಲಿ ಆಯೋಜಿಸಲಾಗಿದ್ದ ಖ್ಯಾತ ಚಿತ್ರ ಕಲಾವಿದ ದಿವಂಗತ ಎಂ.ಬಿ. ಪಾಟೀಲ್ ಅವರ ಗೌರವಾರ್ಥವಾಗಿ ಅವರ ಕಲಾಕೃತಿಗಳ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ನನ್ನ ಹಾಗೂ ದಿ. ಎಂ.ಬಿ. ಪಾಟೀಲ್’ರ ಸಂಬಂಧ ಸರಿ ಸುಮಾರು 40 ವರ್ಷಗಳಷ್ಟು ಹಳೆಯದು. ಪಾಟೀಲರ ಸೃಜನಶೀಲತೆಯಲ್ಲಿ ತಮ್ಮ ಬಾಲ್ಯ ಹಾಗೂ ಗ್ರಾಮೀಣ ಪ್ರದೇಶದ ಸಂಸ್ಕೃತಿಯ ಅಂಶಗಳನ್ನು ಕಾಣಬಹುದಾಗಿದೆ ಎಂದರು.
ಅವರು ಬೆಂಗಳೂರು ನಗರದಲ್ಲಿ ವಾಸವಿದ್ದವರಾದರು ನಡೆ ನುಡಿ ಹಾಗೂ ಕಲಾಕೃತಿಗಳಲ್ಲಿ ಉತ್ತರ ಕರ್ನಾಟಕದ ಶೈಲಿಯನ್ನು ಕಾಣಬಹುದಾಗಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಅವರೊಬ್ಬ ಅಜಾತಶತ್ರುವಾಗಿದ್ದರು ಎಂದು ನೆನೆದರು.
ಕೆಲವು ದಶಕಗಳ ಹಿಂದೆ ದಕ್ಷಿಣ ಕರ್ನಾಟಕದ ಕಲಾವಿದರು ಮದ್ರಾಸ್ ಸ್ಕೂಲ್ ಆಫ್ ಆರ್ಟ್ಸ್ ಹಾಗೂ ಉತ್ತರ ಕರ್ನಾಟಕ ಕಲಾವಿದರು ಬಾಂಬೆಯ ಜೆ.ಜೆ. ಸ್ಕೂಲ್ ಆಫ್ ಆರ್ಟ್ಸ್’ನಲ್ಲಿ ಪ್ರವೇಶ ಪಡೆಯುತ್ತಿದ್ದರು. ಆದರೆ ಎಂ.ಬಿ. ಪಾಟೀಲರಿಗೆ ಅಂದು ಜೆ.ಜೆ. ಸ್ಕೂಲ್ ಆಫ್ ಆರ್ಟ್ಸ್’ಗೆ ಸೇರಲು ಸಾಧ್ಯವಾಗಿರಲಿಲ್ಲ. ಅದಕ್ಕಾಗಿ ಅವರು ಬಡವರ ಜೆ.ಜೆ. ಎನ್ನಿಸಿಕೊಂಡಿದ್ದ ನೂತನ ಕಲಾಮಂದಿರವನ್ನು ಸೇರಬೇಕಾಯಿತು. ಆದರೂ ಸಹ ಅವರ ಕಲಾಕೃತಿಗಳಲ್ಲಿ ಜೆ.ಜೆ. ಸ್ಕೂಲ್’ನ ಪ್ರಭಾವ ಕಾಣಬಹುದಾಗಿದೆ. ಎಂ.ಬಿ. ಪಾಟೀಲ್ ವಾರ್ತಾ ಇಲಾಖೆಯಲ್ಲಿ ವೃತ್ತಿಯಲ್ಲಿದ್ದಾಗ ಭಾರತದ ಗಣರಾಜ್ಯ ದಿನದಂದು ನಡೆಯುವ ಸ್ತಬ್ಧ ಚಿತ್ರಗಳ ಪ್ರದರ್ಶನದಲ್ಲಿ ಐದು ಬಾರಿ ಪ್ರಶಸ್ತಿ ವಿಜೇತರಾಗಿದ್ದರು. ಇಂದು ಎಂ.ಬಿ. ಪಾಟೀಲ್ ಅವರ ಚರಿತ್ರೆ ರಾಜ್ಯದ ಶಾಲೆಗಳಲ್ಲಿ ಪಠ್ಯಪುಸ್ತಕದಲ್ಲಿ ಪಾಠವಾಗಬೇಕು. ಆ ಮೂಲಕ ಇಂತಹ ಕಲಾವಿದರ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಬೇಕು ಎಂದರು.
ಇಂತಹ ಕಲಾವಿದರ ಚಿತ್ರಗಳನ್ನು ಪ್ರದರ್ಶಿಸುತ್ತಿರುವುದಕ್ಕೆ ಫಿಡಲಿಟಸ್ ಗ್ಯಾಲರಿ ಮುಖ್ಯಸ್ಥರಾದ ಅಚ್ಯುತ್ ಗೌಡ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ನಂತರ ಮಾತನಾಡಿದ ಅಚ್ಚುತ್ ಗೌಡ ಅವರು, ಕಲೆ ಹಾಗೂ ಕಲಾವಿದರಿಗೆ ಪ್ರೋತ್ಸಾಹಿಸುವುದು ಸಮಾಜದ ಜವಾಬ್ದಾರಿ. ನಮ್ಮ ಫಿಡಿಲಿಟಸ್ ಗ್ಯಾಲರಿಯು ಹಲವು ಕಲಾ ಪ್ರದರ್ಶನವನ್ನು ಏರ್ಪಡಿಸುವ ಮೂಲಕ ತನ್ನ ಅಳಿಲು ಸೇವೆಯನ್ನು ಕಲಾವಲಯಕ್ಕೆ ಸಲ್ಲಿಸುತ್ತಿದೆ. ದಿವಂಗತ ಕಲಾವಿದರ ಗೌರವಾರ್ಥ ಆಯೋಜಿಸಿರುವ ಈ ಕಲಾ ಪ್ರದರ್ಶನದಲ್ಲಿ ಮಾರಾಟವಾಗುವ ಕಲಾಕೃತಿಗಳ ಒಟ್ಟು ಮೊತ್ತದಲ್ಲಿ ಶೇ.25 ಪ್ರತಿಶತ ಹಣವನ್ನು ಶಿಲ್ಪಾ ಫೌಂಡೇಶನ್ ಮೂಲಕ ಗ್ರಾಮೀಣ ಪ್ರದೇಶದ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವ ಸಲುವಾಗಿ ಬಳಸಿಕೊಳ್ಳಲಾಗುತ್ತದೆ ಎಂದರು.
27 ನೆಯ ಅಕ್ಟೋಬರ್ 2019 ರವರೆಗೆ ಮುಂದುವರೆಯಲಿರುವ ಅಪರೂಪದ ಈ ಕಲಾ ಪ್ರದರ್ಶನವನ್ನು ಕಣ್ತುಂಬಿಕೊಳ್ಳುವ ಅವಕಾಶವನ್ನು ಕಲಾಪ್ರೇಮಿಗಳು ಸದುಪಯೋಗಪಡಿಸಿಕೊಳ್ಳಬೇಕು ಖ್ಯಾತ ಕಲಾವಿದರಾದ ಕೃಷ್ಣ ಶೆಟ್ಟಿಯವರು ರಾಜ್ಯ ಕಲಾವಿದರಿಗೆ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸುತ್ತಿರುವುದು ಹೆಮ್ಮೆಯ ವಿಚಾರ ಎಂದರು.
ಕಾರ್ಯಕ್ರಮದಲ್ಲಿ ಖ್ಯಾತ ಚಿತ್ರಕಲಾವಿದ ಹಾಗೂ ವಿಮರ್ಶಕ ಚಿ.ಸು. ಕೃಷ್ಣ ಶೆಟ್ಟಿಯವರು, ಕಲಾ ಪ್ರೇಮಿಗಳಾದ, ಪುಷ್ಪಗಿರಿ ಎಂಜಿನೀರ್ಸ್ ಇನ್ಫ್ರಾ ಪ್ರೈ.ಲಿ. ನ ಮುಖ್ಯಸ್ಥರಾದ ಬಿ.ಎಂ. ರವಿಶಂಕರ್, ನಮ್ಮ ಸ್ಪೇಸ್ ಪ್ರೈ.ಲಿ. ಸಂಸ್ಥೆಯ ಸಿಇಓ ತೇಜ್ ಮರಿಯಪ್ಪ, ಕಲಾವಿದ ಕೋಟೆಗದ್ದೆ ರವಿ ಹಾಗೂ ಫಿಡಿಲಿಟಸ್ ಕಾರ್ಪ್ ಸಂಸ್ಥೆಯ ಮುಖ್ಯಸ್ಥರಾದ ಅಚ್ಚುತ್ ಗೌಡ ಅವರು ಮುಖ್ಯ ಅತಿಥಿಗಳಾಗಿದ್ದರು.
ಕಲಾ ಪ್ರದರ್ಶನವು ಇಂದಿನಿಂದ ಅಕ್ಟೋಬರ್ 27ರವರೆಗೂ ನಡೆಯಲಿದೆ ಎಂದು ಆಯೋಜಕ ಹಾಗೂ ಸಂಸ್ಥಾಪಕರಾದ ಅಚ್ಚುತ್ ಗೌಡರವರು ತಿಳಿಸಿ ಕೊನೆಯಲ್ಲಿ ಪಾಟೀಲರ ಚಿತ್ರಕಲಾ ಕೈಪಿಡಿಯನ್ನು ಬಿಡುಗಡೆಗೊಳಿಸಿದರು.
ಎಂ.ಬಿ. ಪಾಟೀಲ್ (1939-2017) ಕುರಿತು ಮಾಹಿತಿ
ಬಿಜಾಪುರದ ತಿಕೋಟದಲ್ಲಿ 10 ಡಿಸೆಂಬೆರ್ 1939 ರಲ್ಲಿ ಜನಿಸಿದ ಮಲ್ಲಿಕಾರ್ಜುನ ಭೀಮನಗೌಡ ಪಾಟೀಲ್ ಕಲಾ ಜಗತ್ತಿನಲ್ಲಿ ಎಂ.ಬಿ. ಪಾಟೀಲ್ ಎಂದೇ ಪರಿಚಿತರು. 1960 ರಿಂದ 1964 ರವರೆಗೆ ಮುಂಬೈಯ ನೂತನ ಕಲಾ ಮಂದಿರದಲ್ಲಿ ಚಿತ್ರಕಲೆಯಲ್ಲಿ ಪದವಿ ಪಡೆದ ಪಾಟೀಲರು ಹುಬ್ಬಳಿ ಧಾರವಾಡ, ಗುಲಬರ್ಗಾ ಕಿತ್ತೂರು ಬೆಂಗಳೂರು ಸೇರಿದಂತೆ ಹಲವಾರು ಕಡೆ ತಮ್ಮ ಏಕ ವ್ಯಕ್ತಿ ಕಲಾ ಪ್ರದರ್ಶನವನ್ನು ನಡೆಸಿದ್ದರು ಹಾಗೆಯೇ ಚನ್ನೈ, ಕೇರಳ, ಪಾಂಡಿಚೆರಿ, ಬೆಂಗಳೂರು, ಮಂಗಳೂರು ಮೊದಲಾದೆಡೆ ಚಿತ್ರಕಲಾ ಶಿಬಿರಗಳಲ್ಲಿ ಭಾಗವಹಿಸಿದ್ದರು.
ಅವರು ಕರ್ನಾಟಕ ಲಲಿತಾ ಕಲಾ ಅಕಾಡೆಮಿ ಪ್ರಶಸ್ತಿ, ಕೇಂದ್ರ ಲಲಿತ್ ಕಲಾ ಅಕಾಡೆಮಿ ಪ್ರಶಸ್ತಿ, ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಪ್ರತಿಷ್ಠಿತ ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದರು. ಎಂ.ಬಿ. ಪಾಟೀಲರು 2017 ರಲ್ಲಿ ತಮ್ಮ 78 ನೆಯ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ನಿಧನರಾದರು.







Discussion about this post