ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬೆಂಗಳೂರು ನಗರದಲ್ಲಿ ದಿನೇ ದಿನೇ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು, ರಸ್ತೆಗಳು ಸಣ್ಣದಾಗಿರುವುದರಿಂದ ಸಂಚಾರ ನಿಯಮ ಉಲ್ಲಂಘನೆ ಗಂಭೀರ ಅಪರಾಧವಾಗುತ್ತಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ ಮಂಜುನಾಥ್ ಹೇಳಿದರು.
ಶ್ರೀ ಕೃಷ್ಣ ಪದವಿ ಕಾಲೇಜು, ಬೆಂಗಳೂರು ನಗರ ಸಂಚಾರ ಪೊಲೀಸ್ ಬನಶಂಕರಿ ಠಾಣೆಯ ಸಹಯೋಗದಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕದ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ #National Road Safety Month at Shri Krishna Graduate College ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿ, ಪ್ರತಿ ವರ್ಷ ಜನವರಿ ತಿಂಗಳಲ್ಲಿ ನಗರಾದ್ಯಂತ ಶಾಲಾ–ಕಾಲೇಜುಗಳಲ್ಲಿ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳಿಗೆ ಸಂಚಾರ ನಿಯಮಗಳ ಅರಿವು ಮೂಡಿಸಲಾಗುತ್ತಿದೆ ಎಂದರು.
18 ವರ್ಷ ಪೂರೈಸಿದ ಬಳಿಕ ಮಾತ್ರ ವಾಹನ ಪರವಾನಗಿ ಪಡೆದು ಚಾಲನೆ ಮಾಡಬೇಕು, ಅತಿ ವೇಗವಾಗಿ ಚಲಾಯಿಸಬಾರದು, ಸಣ್ಣ ಮಕ್ಕಳ ಕೈಗೆ ವಾಹನ ನೀಡಬಾರದು ಎಂಬುದರ ಮಹತ್ವವನ್ನು ವಿವರಿಸಿದರು. ಮೆಟ್ರೋ ಹಾಗೂ ಸರ್ಕಾರಿ ಬಸ್ಸುಗಳಂತಹ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಹೆಚ್ಚು ಬಳಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸಂಚಾರಿ ದಕ್ಷಿಣ ವಿಭಾಗದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮುನಿರಾಜು ಹಾಗೂ ಮಹಿಳಾ ಸಂಚಾರಿ ವಿಭಾಗದ ಸಬ್ ಇನ್ಸ್ಪೆಕ್ಟರ್ ಆಶಾ ಅವರು ಕೂಡ ರಸ್ತೆ ನಿಯಮಗಳ ಪಾಲನೆಯ ಅಗತ್ಯತೆ ಕುರಿತು ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್. ಉಷಾಕುಮಾರಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ದ್ವಿಚಕ್ರ ವಾಹನದಲ್ಲಿ ಸಂಚರಿಸುವಾಗ ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು. ಬೈಕ್‌ಗಳಲ್ಲಿ ಹೆಚ್ಚುವರಿ ಪ್ರಯಾಣಿಕರನ್ನು ಕರೆದೊಯ್ಯಬಾರದು ಹಾಗೂ ನಿಯಮ ಉಲ್ಲಂಘನೆ ಮಾಡದಂತೆ ಜಾಗರೂಕರಾಗಿರಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಎನ್‌ಸಿಸಿ ಅಧಿಕಾರಿಗಳಾದ ಆಶಿಶ್ ಎನ್. ರಾವ್, ಶೈಕ್ಷಣಿಕ ನಿರ್ದೇಶಕರಾದ ಪ್ರೊ. ಮನೋಹರ್, ಎನ್‌ಎಸ್‌ಎಸ್ ಸಂಚಾಲಕ ಶ್ರೀ ಅವಿನಾಶ್, ಗಾಂಧಿ ಅಧ್ಯಯನ ಕೇಂದ್ರದ ಸಂಚಾಲಕ ಡಾ. ಚೌಡಯ್ಯ ಸೇರಿದಂತೆ ಎಲ್ಲಾ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















