ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಒತ್ತುವರಿದಾರರು ಮತ್ತು ಭೂಕಬಳಿಕೆದಾರರಿಂದ ತನ್ನ ಆಸ್ತಿಗಳನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಮುಂದುವರಿಸಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಬುಧವಾರ ಎರಡು ಸ್ಥಳಗಳಲ್ಲಿ 75 ಕೋಟಿ ರೂಪಾಯಿಗೂ ಅಧಿಕ ಬೆಲೆ ಬಾಳುವ ಆಸ್ತಿಯನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ.
ಬನಶಂಕರಿ 3 ನೇ ಹಂತದಲ್ಲಿರುವ ಆವಲಹಳ್ಳಿಯಲ್ಲಿ 1 ಎಕರೆ 6 ಗುಂಟೆ ಮತ್ತು ಎಚ್ಆರ್ ಬಿಆರ್ ಬಡಾವಣೆಯಲ್ಲಿ 6000 ಚದರಡಿಯ ನಿವೇಶನವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಬನಶಂಕರಿಯ 3 ನೇ ಹಂತದಲ್ಲಿರುವ ಆವಲಹಳ್ಳಿಯಲ್ಲಿ ಬಿಡಿಎಗೆ ಸೇರಿದ 1 ಎಕರೆ 6 ಗುಂಟೆ ಜಾಗದಲ್ಲಿ 6 ತಾತ್ಕಾಲಿಕ ಶೆಡ್ ಗಳನ್ನು ಅಕ್ರಮವಾಗಿ ನಿರ್ಮಾಣ ಮಾಡಲಾಗಿತ್ತು. ಈ ಜಾಗದ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿ ವಿಚಾರಣೆ ನಡೆದ ನಂತರ ಬಿಡಿಎ ಪರವಾಗಿ ತೀರ್ಪು ಬಂದಿತ್ತು. ಇದರನ್ವಯ ಬಿಡಿಎ ಎಸ್ ಟಿಎಫ್ ಪೊಲೀಸ್ ವರಿಷ್ಠಾಧಿಕಾರಿ ಭಾಸ್ಕರ್ ಮತ್ತು ಇನ್ಸ್ ಪೆಕ್ಟರ್ ರವಿಕುಮಾರ್ ನೇತೃತ್ವದಲ್ಲಿ ಸ್ಥಳೀಯ ಪೊಲೀಸರ ಸಹಕಾರದಿಂದ 6 ತಾತ್ಕಾಲಿಕ ಶೆಡ್ ಗಳನ್ನು ನೆಲಸಮ ಮಾಡಿ ಸ್ವತ್ತನ್ನು ವಶಕ್ಕೆ ತೆಗೆದುಕೊಳ್ಳಲಾಯಿತು.
ಇದರ ಪ್ರಸ್ತುತದ ಮಾರುಕಟ್ಟೆ ದರ ಸುಮಾರು 65 ಕೋಟಿ ರೂಗಳು., 6000 ಚದರಡಿ ವಶಕ್ಕೆ ಮತ್ತೊಂದೆಡೆ, ಎಚ್ಆರ್ ಬಿಆರ್ 3 ನೇ ಹಂತದಲ್ಲಿರುವ ಕಾಚರಕನಹಳ್ಳಿಯ ಸರ್ವೇ ನಂಬರ್ 60/1 ರಲ್ಲಿನ 6000 ಚದರಡಿ ವಿಸ್ತೀರ್ಣದ ನಿವೇಶನದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣಕ್ಕೆ ಭೂಕಬಳಿಕೆದಾರರು ಯತ್ನಿಸಿದ್ದರು. ಇದನ್ನು ತಡೆದ ಕಾರ್ಯಪಾಲಕ ಎಂಜಿನಿಯರ್ ಕುಮಾರ್ ನೇತೃತ್ವದ ಅಧಿಕಾರಿಗಳ ತಂಡ ನಿವೇಶನವನ್ನು ಬಿಡಿಎ ಸ್ವಾಧೀನಕ್ಕೆ ಪಡೆದುಕೊಂಡಿತು. ಈ ನಿವೇಶನದ ಮಾರುಕಟ್ಟೆ ದರ ಸುಮಾರು 10 ಕೋಟಿ ರೂಪಾಯಿಗಳು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಅವರು, ನಗರದ ವಿವಿಧ ಬಡಾವಣೆಗಳಲ್ಲಿ ಬಿಡಿಎಗೆ ಸೇರಿದ ಸ್ವತ್ತುಗಳನ್ನು ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ. ಈಗಾಗಲೇ ಒಂದು ಸಾವಿರ ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಸ್ವತ್ತುಗಳನ್ನು ಗುರುತಿಸಲಾಗಿದ್ದು, ಅವುಗಳನ್ನು ವಶಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದರು.
ಯಾವುದೇ ಕಾರಣಕ್ಕೂ ಬಿಡಿಎ ಆಸ್ತಿ ಭೂಕಬಳಿಕೆದಾರರ ವಶವಾಗುವುದಕ್ಕೆ ಅವಕಾಶ ನೀಡುವುದಿಲ್ಲ. ಸ್ವತ್ತುಗಳನ್ನು ವಶಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆ ನಿರಂತರವಾಗಿ ಸಾಗುತ್ತದೆ. ಭೂಕಬಳಿಕೆದಾರರು ಎಷ್ಟೇ ಪ್ರಭಾವಿಗಳಾಗಿದ್ದರೂ ಮುಲಾಜಿಲ್ಲದೇ ನಮ್ಮ ಸ್ವತ್ತುಗಳನ್ನು ವಶಕ್ಕೆ ಪಡೆದು, ತಪ್ಪಿತಸ್ಥರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಲಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಹಂತ ಹಂತವಾಗಿ ಇನ್ನೂ 400 ಎಕರೆ ಸ್ವಾಧೀನ:
ಭೂಕಬಳಿಕೆದಾರರು ಸುಮಾರು 350 ರಿಂದ 400 ಎಕರೆಯಷ್ಟು ಬಿಡಿಎ ಜಾಗವನ್ನು ಅತಿಕ್ರಮಿಸಿಕೊಂಡಿರುವುದು ಸಮೀಕ್ಷೆಯಿಂದ ತಿಳಿದುಬಂದಿರುತ್ತದೆ. ಈ ಸ್ವತ್ತುಗಳ ಬೆಲೆ ಸುಮಾರು 25 ಸಾವಿರ ಕೋಟಿ ರೂಪಾಯಿಗಳು ಎಂದು ಅಂದಾಜಿಸಲಾಗಿದೆ. ಈ ಜಾಗಗಳನ್ನು ಹಂತ ಹಂತವಾಗಿ ಬಿಡಿಎ ತನ್ನ ವಶಕ್ಕೆ ತೆಗೆದುಕೊಳ್ಳಲಿದೆ ಎಂದು ಅವರು ತಿಳಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post