ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಚಿಂಚೋಳಿ ಉಪಚುನಾವಣೆಯ ಸಂಧರ್ಭದಲ್ಲಿ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ನುಡಿದಂತೆ ವಿಧಾನಪರಿಷತ್ ಸದಸ್ಯರಾದ ಸುನೀಲ್ ವಲ್ಯಾಪುರೆ ಅವರನ್ನು ದಲಿತ ಕೋಟಾದಡಿಯಲ್ಲಿ ಮಂತ್ರಿ ಸ್ಥಾನ ನೀಡಬೇಕು ಎಂದು ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಭೋವಿ(ವಡ್ಡರ) ಸಮುದಾಯದ ಮುಖಂಡರುಗಳು ಮನವಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಕರ್ನಾಟಕ ಭೋವಿ(ವಡ್ಡರ) ಮಹಾಸಭಾ ಕಾರ್ಯಾಧ್ಯಕ್ಷ ರಾಘವೇಂದ್ರ ಧಾರವಾಡ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಸುಮಾರು 60 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಭೋವಿ (ವಡ್ಡರ) ಸಮುದಾಯವು ಬಿ.ಜೆ.ಪಿ. ಪಕ್ಷಕ್ಕೆ ಮೊದಲಿನಿಂದಲೂ ಬೆಂಬಲ ನೀಡುತ್ತಲೇ ಬಂದಿದೆ. ಅದರಲ್ಲೂ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದಲ್ಲಿ ಭೋವಿ (ವಡ್ಡರ) ಸಮುದಾಯ ಬಿ.ಜೆ.ಪಿ. ಪಕ್ಷಕ್ಕೆ ನಿರಂತರವಾಗಿ ಬೆಂಬಲ ಸೂಚಿಸಿದೆ. ಈ ಭಾಗದಲ್ಲಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯ ಸಂಧರ್ಭದಲ್ಲಿ ಪಕ್ಷದಿಂದ ಶಾಸಕರು ಮತ್ತು ಸಂಸದರಾಗಿ ಆಯ್ಕೆಯಾಗಲು ನಮ್ಮ ಸಮುದಾಯದ ಮಾಜಿ ಸಚಿವರು ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯ ಸುನೀಲ ವಲ್ಯಾಪುರೆ ಅವರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.
ಕಲಬುರ್ಗಿ ಜಿಲ್ಲಾ ಭೋವಿ (ವಡ್ಡರ) ಸಮಾಜ ಅಧ್ಯಕ್ಷ ತಿಪ್ಪಣ್ಣ ಒಡಿರಾಜ ಮಾತನಾಡಿ, 2 ಬಾರಿ ಶಾಸಕರಾಗಿ, 1 ಬಾರಿ ಸಚಿವರಾಗಿ ಸುನೀಲ್ ವಲ್ಯಾಪುರೆ ಉತ್ತಮ ಕೆಲಸ ಮಾಡಿದ್ದು ಉತ್ತಮ ಆಡಳಿತದ ಅನುಭವ ಹೊಂದಿದ್ದವರಾಗಿದ್ದಾರೆ. ಬಿ.ಎಸ್. ಯಡಿಯೂರಪ್ಪನವರು ಈ ರಾಜ್ಯದ ಮುಖ್ಯ ಮಂತ್ರಿಯಾಗಬೇಕೆಂದು ತಮ್ಮ ಮೀಸಲು ಕ್ಷೇತ್ರವಾದ ಚಿಂಚೋಳ ವಿಧಾನಸಭಾ ಕ್ಷೇತ್ರವನ್ನು ಉಪ ಚುನಾವಣೆ ಸಮಯದಲ್ಲಿ ಡಾ. ಅವಿನಾಶ ಜಾಧವರವರಿಗೆ ಬಿಟ್ಟುಕೊಡುವ ಮೂಲಕ ತ್ಯಾಗ ಮನೋಭಾವ ಮರೆದಿದ್ದಾರೆ. ಅಷ್ಟೆ ಅಲ್ಲದೆ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಗೆಲ್ಲಸುವ ಮುಖಾಂತರ .ಬಿ.ಎಸ್.ಯಡಿಯೂರಪ್ಪನವರ ಕೈ ಬಲಪಡಿಸಿದ್ದರು.
ಚಿಂಚೋಳಿ ಉಪ ಚುನಾವಣೆ ಪ್ರಚಾರಕ್ಕೆ ಬಂದ ಸಂದರ್ಭದಲ್ಲಿ ಬಿ.ಎಸ್.ಯಡಿಯೂರಪ್ಪನವರು ಸಾರ್ವಜನಿಕ ಸಮಾರಂಭದಲ್ಲಿ ಸುನೀಲ ವಲ್ಯಾಪುರವರನ್ನು ಎಂ.ಎಲ್.ಸಿ. ಮಾಡಿ ಮಂತ್ರಿಯನ್ನಾಗಿ ಮಾಡಿ ತಮ್ಮ ಪಕ್ಷದಲ್ಲಿಯೇ ಇಟ್ಟುಕೊಳ್ಳುತ್ತೇನೆ ಎಂದು ಸಭೆಯಲ್ಲಿ ಘೋಷಿಸಿದ್ದರು. ಅಂದು ಪಕ್ಷಕ್ಕಾಗಿ ತ್ಯಾಗ ಮಾಡಿದ ಸುನೀಲ್ ವಲ್ಯಾಪುರೆ ಅವರಿಗೆ ತಾವು ಕೊಟ್ಟ ಮಾತನ್ನು ನಿಕಟಪೂರ್ವ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಉಳಿಸಿಕೊಳ್ಳುತ್ತಾರೆ ಎನ್ನುವ ನಂಬಿಕೆ ನಮ್ಮದಾಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಭೋವಿ ಸಮಾಜ ವಿಜಯಪುರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಕಂದಗಲ್, ಮಹಿಳಾ ಭೋವಿ(ವಡ್ಡರ) ಮಹಾಸಭಾ ಬೆಂಗಳೂರು ರಾಜ್ಯಾಧ್ಯಕ್ಷೆ ಪದ್ಮಾ, ಬಾಗಲಕೋಟೆ, ಜಿಲ್ಲಾ ಬೋವಿ ಸಮಾಜದ ಯುವ ಮುಖಂಡ ಈರಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post