ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಇತಿಹಾಸದ ಅಧ್ಯಯನ ಮಾಡುವುದರಿಂದ ಮಾತ್ರ ಭವಿಷ್ಯದ ಸಮಾಜವನ್ನು ಸದೃಢವಾಗಿ ಮತ್ತು ಶಿಸ್ತುಬದ್ಧವಾಗಿ ಕಟ್ಟಲು ಸಾಧ್ಯ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ Minister Shivaraj Thangadagi ಹೇಳಿದ್ದಾರೆ.
ಅವರು ಇಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಪದ್ಮಶಾಲಿ ನೇಕಾರ ಸಮುದಾಯದ ಸಮ್ಮಿಲನ ಕಾರ್ಯಕ್ರಮದಲ್ಲಿ ಡಾ. ಕೆ.ಜಿ ಲಕ್ಷ್ಮಿ ನಾರಾಯಣಪ್ಪ ಅವರ ‘ಪದ್ಮಶಾಲಿ ನೇಕಾರ ಇತಿಹಾಸ ಮತ್ತು ಸಂಸ್ಕೃತಿ ದರ್ಶನ ‘ಕೃತಿಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಪ್ರತಿಯೊಂದು ಸಮುದಾಯಕ್ಕೂ ಅದರದೇ ಆದ ಚಾರಿತ್ರಿಕ ಮಹತ್ವವಿರುತ್ತದೆ. ಪ್ರತಿಯೊಂದು ಸಮಾಜದ ಆಚಾರ, ವಿಚಾರ, ಸಂಸ್ಕೃತಿ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿರುತ್ತದೆ .ಇದನ್ನು ಅಧ್ಯಯನ ಮಾಡಿ ದಾಖಲು ಮಾಡಿದರೆ ಮುಂದಿನ ಪೀಳಿಗೆ ತನ್ನ ಸಮುದಾಯದ ಇತಿಹಾಸವನ್ನು ಅರಿತುಕೊಳ್ಳಲು ಹಾಗೂ ಭವಿಷ್ಯವನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
Also read: ಆ.30ರಂದು ಗೃಹಲಕ್ಷ್ಮಿ ಯೋಜನೆಗೆ ಚಾಲನೆ
ಪದ್ಮಶಾಲಿ ನೇಕಾರ ಸಮುದಾಯ ಸಮಾಜದಲ್ಲಿ ಅತ್ಯಂತ ಉನ್ನತವಾದ ಸ್ಥಾನವನ್ನು ಹೊಂದಿದೆ, ಏಕೆಂದರೆ ತಾನು ಕಷ್ಟಪಟ್ಟು ನೇಯುವ ಬಟ್ಟೆಯ ಮೂಲಕ ಅದು ಸಮಾಜದ ಪ್ರತಿಯೊಬ್ಬರ ಗೌರವವನ್ನು ಕಾಪಾಡುತ್ತದೆ, ಹಾಗಾಗಿ ಅದು ಇಡೀ ಸಮಾಜದ ಸಮ್ಮಾನವನ್ನು ಗೌರವಿಸುತ್ತಿದೆ ಎಂದ ಸಚಿವ ಶಿವರಾಜ ತಂಗಡಗಿ, ಪದ್ಮಶಾಲಿ ಸಮಾಜ ತುಂಬಾ ಕಷ್ಟಪಟ್ಟು ಬದುಕುವ ಸಮುದಾಯಗಳಲ್ಲಿ ಒಂದಾಗಿದೆ. ಜೊತೆಗೆ ತಮ್ಮ ಪಾಡಿಗೆ ತಾವು ಯಾರಿಗೂ ಉಪದ್ರವ ಕೊಡದೆ, ತಮ್ಮ ಇತಿಮಿತಿಯಲ್ಲಿ ಜೀವನ ರೂಪಿಸಿಕೊಂಡು ಬದುಕುತ್ತಿದೆ, ಇಂತಹ ಸಮುದಾಯಗಳ ಸರ್ವತೋಮುಖ ಬೆಳವಣಿಗೆಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಇಂತಹ ಸಮುದಾಯದ ಚಾರಿತ್ರಿಕ ಅಧ್ಯಯನವನ್ನು 2000 ಪುಟಗಳ ಬೃಹತ್ ಕೃತಿಯಲ್ಲಿ ದಾಖಲಿಸುವ ಮೂಲಕ ಡಾ. ಕೆ.ಜಿ ಲಕ್ಷ್ಮೀನಾರಾಯಣ ಅವರು ಬಹಳ ದೊಡ್ಡ ಕೆಲಸ ಮಾಡಿದ್ದಾರೆ. ಇದು ಸಾಮಾನ್ಯವಾದ ಸಂಗತಿಯಲ್ಲ ಅವರ ಈ ಸಾಹಸಕ್ಕಾಗಿ ಅವರಿಗೆ ನಾನು ಹಾರ್ದಿಕವಾಗಿ ಅಭಿನಂದಿಸುತ್ತೇನೆ ಎಂದು ಅವರು ತಿಳಿಸಿದರು.
ಸಮಾರಂಭದಲ್ಲಿ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಡಾ. ಶಿವರಾಜ ಪಾಟೀಲ್, ಪದ್ಮ ಶಾಲಿ ಸಮಾಜದ ಸ್ವಾಮೀಜಿಗಳಾದ ಶ್ರೀ ಪ್ರಭುಲಿಂಗ ಸ್ವಾಮೀಜಿ, ಮಾಜಿ ಲೋಕಸಭಾ ಸದಸ್ಯರು, ವಿಧಾನ ಪರಿಷತ್ತಿನ ಮಾಜಿ ಸದಸ್ಯರಾದ ಶ್ರೀ ಕೆ ಸಿ ಕೊಂಡಯ್ಯ, ಶಿಕ್ಷಣ ತಜ್ಞ ಪ್ರೊ. ಕೆ .ಇ. ರಾಧಾಕೃಷ್ಣ ಹಾಗೂ ಸಾಹಿತಿ ಮಲ್ಲೇಪುರಂ ಜಿ ವೆಂಕಟೇಶ್, ಪದ್ಮಶಾಲಿ ನೇಕಾರ ಸಮಾಜದ ಸಂಘದ ಅಧ್ಯಕ್ಷರಾದ ಕೊಂಗತಿ ಕಾಳಪ್ಪ ಹಾಗೂ ಕಾರ್ಯಾಧ್ಯಕ್ಷ ವೆಂಕಟೇಶ ಸಾಕಾ ಅವರು ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















