ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಇದೇ ಅಕ್ಟೋಬರ್ 11 ಮತ್ತು 12 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ “ಉದ್ಯಮಿಯಾಗು ಉದ್ಯೋಗ ನೀಡು” ಒಂದು ದಿನದ ಕಾರ್ಯಾಗಾರದ ಪೂರ್ವ ಸಿದ್ದತೆಯ ಭಾಗವಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಅವರು ವಿವಿಧ ಕಾಲೇಜುಗಳ ಮುಖ್ಯಸ್ಥರ ಜತೆ ಗುರುವಾರ ಸಭೆ ನಡೆಸಿದರು.
ವೀಡಿಯೋ ಕಾನ್ಫರೆನ್ಸ್‌ನಲ್ಲಿ ಆರ್ ವಿ.ಇಂಜಿನಿಯರಿಂಗ್, ಎಪಿಎಸ್ ಪಾಲಿಟೆಕ್ನಿಕ್, ಆಕ್ಸ್‌ಫರ್ಡ್, ಸ್ವಾಮಿ ವಿವೇಕಾನಂದ ಕಾಲೇಜು ಸೇರಿದಂತೆ ವಿವಿಧ ಕಾಲೇಜುಗಳ ಮುಖ್ಯಸ್ಥರು ಮತ್ತು ಪ್ರಾಂಶುಪಾಲರ ಜತೆ ಸಂವಾದ ನಡೆಸಿ, ಅವರಿಂದ ಸಲಹೆ ಹಾಗೂ ಅಭಿಪ್ರಾಯಗಳನ್ನು ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಈಗಾಗಲೇ ಅಂದಾಜು ಮೂರು ಸಾವಿರ ವಿದ್ಯಾರ್ಥಿಗಳು ನೋಂದಣಿ ಮಾಡಿದ್ದಾರೆ.
“ವಿಶಿಷ್ಟ ಮತ್ತು ವಿನೂತನವಾಗಿ ರೂಪಿಸಿರುವ ಕಾರ್ಯಕ್ರಮದ ಮೂಲ ಉದ್ದೇಶ ಯುವ ಜನರ ಆರ್ಥಿಕ ಸ್ವಾವಲಂಬನೆ. ಅವರೇ ಉದ್ಯಮ ಸ್ಥಾಪಿಸಿ ಹಲವರಿಗೆ ಉದ್ಯೋಗ ನೀಡುವಂತಾಗಬೇಕು. ಉದ್ಯಮ ಸ್ಥಾಪನೆಗೆ ಬೇಕಾದ ಸಿದ್ದತೆ, ಉದ್ಯಮ ಆರಂಭಿಸಿದ ಬಳಿಕ ಭದ್ರತೆ, ಹಣಕಾಸಿನ ನೆರವಿನ ಮಾಹಿತಿಯನ್ನು ಕಾರ್ಯಕ್ರಮದಲ್ಲಿ ನೀಡಲಾಗುತ್ತದೆ,” ಎಂದು ವಿವರಿಸಿದರು.
“ಪ್ರತಿಯೊಬ್ಬ ಪ್ರಜೆಯು ಸ್ವಾವಲಂಬಿಯಾಗಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಆಕಾಂಕ್ಷೆಯಾಗಿದೆ. ಈ ಕಾರ್ಯಕ್ರಮದ ಮೂಲಕ ” ಕರ್ನಾಟಕದಿಂದಲೇ ದೇಶಕ್ಕೆ ಹೊಸ ಸಂದೇಶ” ಹೋಗಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸಿ,” ಎಂದು ಕೋರಿದರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಕಾಲೇಜು ಪ್ರಾಂಶುಪಾಲರು ಹಾಗೂ ಮುಖ್ಯಸ್ಥರು ಮುಕ್ತವಾಗಿ ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. “ಕಾಲೇಜಿನ ಎಲ್ಲನವಿಭಾಗದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು, ಕೊನೆಯ ವರ್ಷದ ವಿದ್ಯಾರ್ಥಿಗಳ ಜತೆಗೆ ಇತ್ತೀಚೆಗೆ ಉತ್ತೀರ್ಣಗೊಂಡ ವಿದ್ಯಾರ್ಥಿಗಳು ಹಾಗೂ ಅರ್ಧಕ್ಕೆ ಓದು ನಿಲ್ಲಿಸಿದ ಯುವ ಜನರೂ ಈ ಕಾರ್ಯಕ್ರಮದ ಅನುಕೂಲ ಪಡೆದುಕೊಳ್ಳಬಹುದು. ಕಾರ್ಯಾಗಾರದಲ್ಲಿ ಭಾಗಿಯಾಗುವ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು,” ಎಂದು ಸಚಿವರು ಸ್ಪಷ್ಟಪಡಿಸಿದರು.
ಬಹುತೇಕ ಕಾಲೇಜುಗಳ ಮುಖ್ಯಸ್ಥರು ಕಾರ್ಯಕ್ರಮಕ್ಕೆ ಆಗಮಿಸುವ ಜತೆಗೆ ತಮ್ಮ ಕಾಲೇಜಿನ ವಿದ್ಯಾರ್ಥಿಗಳನ್ನು ’ಮುಕ್ತ ಮನಸ್ಸಿನಿಂದ’ ಕಳುಹಿಸಿಕೊಡುವುದಾಗಿ ವಾಗ್ದಾನ ಮಾಡಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post