ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ತಮ್ಮ ವಿರುದ್ಧ ವರಿಷ್ಠರಿಗೆ ಮತ್ತು ರಾಜ್ಯಪಾಲರಿಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಮೇಲೆ ಮುನಿಸಿಕೊಂಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಗತ್ಯಬಿದ್ದರೆ ಈಶ್ವರಪ್ಪ ಅವರನ್ನು ಸಚಿವ ಸ್ಥಾನದಿಂದ ಕೈಬಿಡುವುದಾಗಿ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.
ಮುಖ್ಯಮಂತ್ರಿ ಅವರ ಈ ನಡೆಯಿಂದ ಇನ್ನಷ್ಟು ಆಕ್ರೋಶಗೊಂಡಿರುವ ಸಚಿವ ಈಶ್ವರಪ್ಪ ಅವರು ತಾವೇ ರಾಜೀನಾಮೆ ನೀಡುವುದಾಗಿ ಹೇಳಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ತಾಜ್ ವೆಸ್ಟೆಂಡ್ ಹೋಟೆಲಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಬೆಂಬಲಿಗ ಸಚಿವರೊಂದಿಗೆ ರಹಸ್ಯ ಸಭೆ ನಡೆಸಿ, ಪ್ರಸಕ್ತ ಬೆಳವಣಿಗೆಯಿಂದ ತಮಗಾಗಿರುವ ನಷ್ಟವನ್ನು ಸರಿಪಡಿಸುವಂತೆ ಹಾಗೂ ಸಂಕಷ್ಟದಲ್ಲಿರುವ ತಮ್ಮ ಪರ ನಿಲ್ಲುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
ಈಶ್ವರಪ್ಪ ಅವರ ಈ ನಡೆಯಿಂದ ಪ್ರತಿಪಕ್ಷಗಳಿಗೆ ಉಪಯೋಗವಾಗುತ್ತಿದೆ. ಇದು ಸರ್ಕಾರದ ವರ್ಚಸ್ಸಿಗೆ ಧಕ್ಕೆ ತಂದಿದೆ ಎಂದು ಬಿಎಸ್‌ವೈ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂದರ್ಭದಲ್ಲಿ ಸಚಿವರಾದ ಬಸವರಾಜ್ ಬೊಮ್ಮಾಯಿ, ಆರ್.ಅಶೋಕ್, ಡಾ.ಸುಧಾಕರ್, ಬಿ.ಸಿ.ಪಾಟೀಲ್, ಶಾಸಕ ಎಂ.ಪಿ.ರೇಣುಕಾಚಾರ್ಯ ಮತ್ತಿತರರು ಭಾಗವಹಿಸಿದ್ದರು ಎನ್ನಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post