ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ವಿಧಾನಸಭೆಯಲ್ಲಿ ಪ್ರತಿಪಕ್ಷ ಶಾಸಕರನ್ನು ಅಮಾನತು ಮಾಡಿದ ಕ್ರಮವನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ HDKumaraswamy ಕಠಿಣ ಶಬ್ದಗಳಲ್ಲಿ ಖಂಡಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು; ಒಂದು ದಿನದ ಹಿಂದೆ ‘ ಇಂಡಿಯಾ ‘ ಎಂದು ಬೆಂಗಳೂರಿನಲ್ಲಿ ಜಪ ಮಾಡಿದ್ದ ಕಾಂಗ್ರೆಸ್, 24 ಗಂಟೆ ಒಳಗಾಗಿ ಇದೇ ನಗರದಲ್ಲಿ ಇಂಡಿಯಾ ಎನ್ನುವ ಇಡಿಯಾದ ಆದರ್ಶ ಪರಿಕಲ್ಪನೆಗೆ ಎಳ್ಳುನೀರು ಬಿಟ್ಟಿದೆ. ಪ್ರಜಾಪ್ರಭುತ್ವದ ಮೇಲೆ ನಂಬಿಕೆಯೇ ಇಲ್ಲದ ಕಾಂಗ್ರೆಸ್, ಸಾಂವಿಧಾನಿಕ ಮೌಲ್ಯಗಳನ್ನು ಕಸಕ್ಕೆ ಸಮ ಎನ್ನುವಂತೆ ವರ್ತಿಸಿದೆ ಎಂದು ಕಿಡಿ ಕಾರಿದ್ದಾರೆ.

ಈ ಅಸಂವಿಧಾನಿಕ ನಡೆಯನ್ನು ಪ್ರಶ್ನಿಸಿದ ಪ್ರತಿಪಕ್ಷ ಶಾಸಕರನ್ನು ಸದನದಿಂದ ಅಮಾನತು ಮಾಡಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ. ಬರೀ ನಾಲಿಗೆಯ ಮೇಲೆ ಪ್ರಜಾಪ್ರಭುತ್ವ ಉಳಿಸುತ್ತೇನೆ ಎನ್ನುವ ಕಾಂಗ್ರೆಸ್, ತನ್ನದೇ ‘ಹಸ್ತ’ದಿಂದ ಅದೇ ಪ್ರಜಾಪ್ರಭುತ್ವವನ್ನು ಅಡ್ಡಡ್ಡ ಸಿಗಿದು ನಿರ್ನಾಮ ಮಾಡುತ್ತಿದೆ. ಇದೇನಾ ಕರ್ನಾಟಕ ಮಾಡೆಲ್? ಎಂದು ಅವರು ಪ್ರಶ್ನಿಸಿದ್ದಾರೆ.

ಶತಮಾನಕ್ಕೂ ಹೆಚ್ಚಿನ ಇತಿಹಾಸ ನನ್ನದು ಎಂದು ಕೊಚ್ಚಿಕೊಳ್ಳುವ ಕಾಂಗ್ರೆಸ್ ಪ್ರಜಾಸತ್ತೆಗೆ ಶಾಪ. ಜನತಂತ್ರದ ಮೇಲೆ ದರ್ಪ ತೋರಿಸಿದ ಆ ಪಕ್ಷಕ್ಕೆ ತಿಳಿದಿರಲಿ. ಇಂಡಿಯಾ ಎಂದರೆ ಇದಲ್ಲವೇ ಅಲ್ಲ, ಇಂಡಿಯಾ ಎಂದರೆ ಪ್ರಜಾಪ್ರಭುತ್ವ. ಇಂಡಿಯಾ ಎಂದರೆ ಇವರಷ್ಟೇ ಅಲ್ಲ, ನಾವೆಲ್ಲರೂ ಎಂದು ಮಾಜಿ ಮುಖ್ಯಮಂತ್ರಿ ಅವರು ತಿಳಿಸಿದ್ದಾರೆ.
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)











Discussion about this post