ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನಾವು ಚುನಾವಣೆಗೂ ಮುನ್ನ ನೀಡಿದ ವಾಗ್ದಾನದಂತೆ 5 ಗ್ಯಾರೆಂಟಿಗಳಿಗೆ ಮೊದಲ ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಪ್ರಮಾಣವಚನ ಸ್ವೀಕರಿಸಿದ ನಂತರ ಮೊದಲ ಸಚಿವ ಸಂಪುಟ ಸಭೆ ನಡೆಸಿ, ಆನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಐದು ವರ್ಷದಲ್ಲಿ ಈಡೇರಿಸುವ ಭರವಸೆಗಳೇ ಹೊರತು ಒಂದೇ ವರ್ಷದಲ್ಲಿ, ಒಂದೇ ಬಾರಿ ಈಡೇರಿಸುವ ಭರವಸೆಗಳು. ನಾವು ನೀಡಿದ ಐದು ಗ್ಯಾರೆಂಟಿಗಳಿಗೆ ಮೊದಲ ಸಚಿವ ಸಂಪುಟದಲ್ಲಿ ಅನುಮೋದನೆ ನೀಡುವುದಾಗಿ ಪ್ರಣಾಳಿಕೆಯಲ್ಲಿ ವಾಗ್ದಾನ ನೀಡಿದ್ದೆವು. ಅದರಂತೆ ಈಗ ಒಪ್ಪಿಗೆ ನೀಡಿದ್ದೇವೆ ಎಂದರು.
ಹಣ ಹೊಂದಾಣಿಕೆ ಹೇಗೆ?
ಐದು ಗ್ಯಾರೆಂಟಿ ಜಾರಿಗೆ 50 ಸಾವಿರ ಕೋಟಿ ರೂ. ಹಣ ಬೇಕು. ಇದಕ್ಕೆ ತೆರಿಗೆಯನ್ನು ಕಟ್ಟುನಿಟ್ಟಾಗಿ ವಸೂಲಿ ಮಾಡಿದರೆ ಆದಾಯ ಹೆಚ್ಚಾಗುತ್ತದೆ. ಅಲ್ಲದೇ, ಬಜೆಟ್’ನ ಗಾತ್ರ ಪ್ರತಿ ವರ್ಷ ಶೇ.10ರಷ್ಟು ಏರಿಕೆಯಾಗುತ್ತದೆ. ಕೇಂದ್ರದ 15ನೆಯ ಹಣಕಾಸು ಆಯೋಗದಿಂದ ರಾಜ್ಯಕ್ಕೆ 50 ಸಾವಿರ ಕೋಟಿ ರೂ. ಬರುತ್ತದೆ. ನನ್ನ ಪ್ರಕಾರ ರಾಜ್ಯಕ್ಕೆ 1 ಲಕ್ಷ ಕೋಟಿ ರೂ. ಬರಬೇಕು. ಈ ವಿಚಾರದಲ್ಲಿ ನಮ್ಮ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದರು.
ರಾಜ್ಯದಿಂದ ಕೇಂದ್ರಕ್ಕೆ ತೆರಿಗೆ ಹಣ 4 ಲಕ್ಷ ಕೋಟಿ ರೂ. ಪಾವತಿಸುತ್ತೇವೆ. ಕರ್ನಾಟಕಕ್ಕೆ 5 ಸಾವಿರದ 495 ಕೋಟಿ ರೂ. ವಿಶೇಷ ಸಹಾಯಧನ ನೀಡುವಂತೆ 15ನೆಯ ಹಣಕಾಸು ಆಯೋಗ ಶಿಫಾರಸ್ಸು ಮಾಡಿದೆ. ಆದರೆ, 15ನೆಯ ಹಣಕಾಸು ಆಯೋಗದ ಅಂತಿಮ ಸಭೆಯಲ್ಲಿಯಲ್ಲಿ ಇದರ ಪ್ರಸ್ತಾಪವೇ ಆಗಲಿಲ್ಲ. ನಮಗೆ ನ್ಯಾಯಯುತವಾಗಿ ಬರಬೇಕಾದ ಹಣ ಬರಲಿಲ್ಲ. ಈ ವಿಚಾರದಲ್ಲಿ ನರೇಂದ್ರ ಮೋದಿ ಸರ್ಕಾರ ಅನ್ಯಾಯ ಮಾಡಿದೆ. ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್, ಜಿಎಸ್’ಟಿ ಸದಸ್ಯರಾಗಿದ್ದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸಹ ತುಟಿ ಬಿಚ್ಚಲಿಲ್ಲ ಎಂದು ಕಿಡಿ ಕಾರಿದರು.
Also read: ನೂತನ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅವರಿಗೆ ಬಿಜೆಪಿ ಅಭಿನಂದನೆ
ಈ ಹಿಂದೆಯೂ ಸಹ ನಾವು ನುಡಿದಂತೆ ನಡೆದಿದ್ದೇವೆ. ನಾವು ಆಗ ನೀಡಿದ್ದ ಪ್ರಣಾಳಿಕೆಯಲ್ಲಿನ 165 ಭರವಸೆಗಳಲ್ಲಿ 150ನ್ನು ಈಡೇರಿಸಿದ್ದೆವು. ಅಲ್ಲದೇ, ನಾವು ಪ್ರಣಾಳಿಕೆಯಲ್ಲಿ ನೀಡಿದರ ಹಲವು ಯೋಜನೆಗಳನ್ನೂ ಸಹ ಜಾರಿಗೊಳಿಸಿದ್ದೆವು ಎಂದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















