ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕೊರೋನಾ 4ನೆಯ ಅಲೆಯ Corona 4th Wave ಭೀತಿಯ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಜನರು ಸೇರುವ ವಿವಿಧ ಪ್ರದೇಶಗಳಲ್ಲಿ ಮಾಸ್ಕ್ Mask ಕಡ್ಡಾಯ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಇಂದು ಸಂಜೆ ವೇಳೆ ನೂತನ ಮಾರ್ಗಸೂಚಿ ಬಿಡುಗಡೆಯಾಗಲಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್, Minister Sudhakar ಚೀನಾದಲ್ಲಿ ಕೊರೋನಾ ಭೀಕರ ಪರಿಸ್ಥಿತಿಗೆ ಮರಳುತ್ತಿರುವ ಬೆನ್ನಲ್ಲೇ ಭಾರತದಲ್ಲೂ ಸಹ ಹೈಅಲರ್ಟ್ ಘೋಷಣೆ ಮಾಡಲಾಗಿದೆ. ಅಲ್ಲದೇ, ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ರಾಜ್ಯದಲ್ಲೂ ಸಹ ಹೊಸ ಮಾರ್ಗಸೂಚಿಯನ್ನು ಇಂದು ಸಂಜೆ ಬಿಡುಗಡೆ ಮಾಡಲಾಗುವುದು ಎಂದಿದ್ದಾರೆ.
ಜಾಗತಿಕ ಕೋವಿಡ್ ಸ್ಥಿತಿಗತಿಯ ವರದಿಯನ್ನು ತಾಂತ್ರಿಕಾ ಸಲಹಾ ಸಮಿತಿ ಇಂದು ಕೊಟ್ಟಿದೆ. ಸಭೆಯಲ್ಲಿ ಐಎಲ್’ಐ ಮತ್ತು ಸಾರಿ ಇರುವ ಎಲ್ಲಾ ಪ್ರಕರಣಗಳಿಗೂ ಕಡ್ಡಾಯ ತಪಾಸಣೆಗೆ ನಿರ್ಧರಿಸಿದೆ ಎಂದಿದ್ದಾರೆ.3 ನೇ ಡೋಸ್
ಕೋವಿಡ್ ಪ್ರಕರಣ ಕಡಿಮೆಯಾದ ಹಿನ್ನೆಲೆಯಲ್ಲಿ, ಜನರು ಮೂರನೇ ಡೋಸ್‌ನ ಲಸಿಕೆ ಪಡೆಯಲು ಆಸಕ್ತಿ ತೋರುತ್ತಿಲ್ಲ. ಇದರಿಂದಾಗಿ 3 ನೇ ಡೋಸ್ ಲಸಿಕಾಕರಣದಲ್ಲಿ ಶೇ.20 ರಷ್ಟು ಮಾತ್ರ ಪ್ರಗತಿಯಾಗಿದೆ. ಇದಕ್ಕಾಗಿ ಎಲ್ಲಾ ತಾಲೂಕುಗಳಲ್ಲಿ ವಿಶೇಷ ಲಸಿಕಾ ಶಿಬಿರ ಏರ್ಪಡಿಸಿ, 3 ನೇ ಡೋಸ್‌ನಲ್ಲೂ ಶೇ.100 ರಷ್ಟು ಗುರಿ ತಲುಪಲು ಸೂಚಿಸಲಾಗಿದೆ. ಇದಕ್ಕೆ ಪೂರಕವಾಗಿ ಲಸಿಕೆಯನ್ನು ಸಂಗ್ರಹಿಸಿಡಲು ಸೂಚಿಸಲಾಗುವುದು ಎಂದು ವಿವರಿಸಿದರು.
ಅಂತೆಕಂತೆ ಕೇಳಬೇಡಿ
ಜನರು ಆದಷ್ಟು ಬೇಗ ಮೂರನೇ ಡೋಸ್ ಪಡೆಯಬೇಕು. ಪರವಾಗಿಲ್ಲ ಎಂಬ ಉದಾಸೀನತೆ ಬಿಡಬೇಕು. ಮೂರನೇ ಡೋಸ್ ಪಡೆದರೆ ಅಡ್ಡ ಪರಿಣಾಮ ಇದೆಯೇ ಎಂಬುದು ಸದನದಲ್ಲೂ ಕೇಳಿಬಂತು. ಇಂತಹ ಅಂತೆಕಂತೆ ಮಾತುಗಳನ್ನು ಯಾರೂ ಕೇಳಬಾರದು. ಲಸಿಕೆಯಿಂದ ಅಪಾಯವಾಗುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ದಾಖಲೆ ಇಲ್ಲ. ಲಸಿಕೆ ಪಡೆದು ನಮ್ಮನ್ನು ನಾವು ಕೋವಿಡ್‌ನಿಂದ ರಕ್ಷಿಸಿಕೊಳ್ಳಬಹುದು. ಹಾಗೆಯೇ ಮಾಸ್ಕ್ ಕೂಡ ಧರಿಸಬೇಕು. ರೂಪಾಂತರಿ ವೈರಾಣು ಯಾವುದೇ ಪರಿಣಾಮ ಬೀರದಂತೆ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು ಎಂದು ಸಚಿವರು ಕೋರಿದರು.
ಸಾಮಾನ್ಯ ತಿಳಿವಳಿಕೆ ಇರಲಿ
ಕಾಂಗ್ರೆಸ್‌ನ ಪಾದಯಾತ್ರೆ ಆರಂಭವಾಗಿ 100 ದಿನ ಕಳೆದಿದೆ. ಈ ಮೂರು ತಿಂಗಳಲ್ಲಿ ಕೋವಿಡ್ ಬಗ್ಗೆ ಯಾರೂ ಮಾತಾಡಲಿಲ್ಲ. ಹಾಗಾದರೆ ಚೀನಾ, ಅಮೆರಿಕದಲ್ಲಿ ಕೋವಿಡ್ ಹೆಚ್ಚು ಮಾಡಿದ್ದು ನಾವೇ? ಕಾಂಗ್ರೆಸ್ ನಾಯಕರಿಗೆ ಸಾಮಾನ್ಯ ತಿಳಿವಳಿಕೆಯಾದರೂ ಇರಬೇಕು ಎಂದು ಸಚಿವರು ಟೀಕಿಸಿದರು.
ಸಚಿವ ಸುಧಾಕರ್ ಹೇಳಿದ್ದೇನು?
- ಎಸಿ ಇರುವ ಕ್ಲೋಸ್ ಡೋರ್ ಕೊಠಡಿಗಳಲ್ಲಿ ಮಾಸ್ಕ್ ಬಳಕೆ ಮಾಡಬೇಕು
- ಅರ್ಹ ಪ್ರತಿಯೊಬ್ಬರೂ ಮೂರನೆಯ ಡೋಸ್ ಪಡೆಯಬೇಕು
- ವಿದೇಶದಿಂದ ಬರುವ ಪ್ರಯಾಣಿಕರಿಗೆ ಟೆಸ್ಟ್ ಮಾಡಲಾಗುವುದು
- ಆಸ್ಪತ್ರೆಯಲ್ಲಿ ಆಕ್ಸಿಜನ್ ಪ್ಲಾಂಟ್’ಗಳ ಸಿದ್ಧತೆ ಆರಂಭಿಸಲಾಗಿದೆ
- ಜಿಲ್ಲಾಸ್ಪತ್ರೆಗಳಲ್ಲಿ ಕೋವಿಡ್ ಬೆಡ್ ಮೀಸಲಿಡಲು ಸೂಚನೆ
- ಖಾಸಗಿ ಆಸ್ಪತ್ರೆಗಳಲ್ಲಿಯೂ ಸಹ ಬೆಡ್ ಮೀಸಲಿಡಲು ಸೂಚನೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post