ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಸಾಸಲು ಹೋಬಳಿಯ ಹೊಸಹಳ್ಳಿಯಲ್ಲಿ ಇಂದು “ಜಿಲ್ಲಾಧಿಕಾರಿಗಳ ನಡೆ, ಹಳ್ಳಿಯ ಕಡೆ” ಎಂಬ ರಾಜ್ಯ ಮಟ್ಟದ ವಿನೂತನ ಕಾರ್ಯಕ್ರಮವನ್ನು ಉದ್ಘಾಟಿಸಲಿರುವ ಕಂದಾಯ ಸಚಿವ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್. ಅಶೋಕ ಅವರನ್ನು ಸ್ವಾಗತಿಸಲು ತಳಿರು ತೋರಣ ಹಾಗೂ ಹೂಗಳಿಂದ ಸಿಂಗರಿಸಿದ ಎತ್ತಿನಗಾಡಿ, ತಮಟೆ, ಮಂಗಳವಾದ್ಯ ವಾದನದ ಸಿದ್ಧತೆ ಮಾಡಿಕೊಳ್ಳಲಾಗಿದ್ದು ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ.
ಹೊಸಹಳ್ಳಿ ಗ್ರಾಮಕ್ಕಿಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ಖುದ್ದಾಗಿ ಭೇಟಿ ನೀಡಿ, ಗ್ರಾಮದ ಸ್ವಚ್ಛತೆ, ಶಾಲಾ ಆವರಣದಲ್ಲಿ ಸಿದ್ಧಪಡಿಸುತ್ತಿರುವ ವೇದಿಕೆ, ವಿವಿಧ ಇಲಾಖೆಯವರು ತೆರೆಯಲಿರುವ ಸ್ಟಾಲ್‌ಗಳು, ಸಚಿವರ ವಾಸ್ತವ್ಯದ ವ್ಯವಸ್ಥೆ ಸೇರಿದಂತೆ ಇನ್ನಿತರೆ ವ್ಯವಸ್ಥೆ ಕುರಿತು ಹಾಗೂ ಕಾರ್ಯಕ್ರಮಕ್ಕೆ ಕೈಗೊಳ್ಳಲಾಗುತ್ತಿರುವ ಸಕಲ ಸಿದ್ಧತೆ ಕುರಿತು ಪರಿಶೀಲಿಸಿ ಅವರು ಮಾತನಾಡಿದರು.
ಜಿಲ್ಲೆಯ ಗಡಿಭಾಗದ ಹಾಗೂ ಹಿಂದುಳಿದ ಹಳ್ಳಿಯಾಗಿರುವ ಹೊಸಹಳ್ಳಿ ಗ್ರಾಮಕ್ಕೆ ಕಂದಾಯ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ಅಶೋಕ, ದೊಡ್ಡಬಳ್ಳಾಪುರ ಶಾಸಕರಾದ ಟಿ.ವೆಂಕಟರಮಣಯ್ಯ, ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಾದ ನವೀನ್‌ರಾಜ್‌ಸಿಂಗ್, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಿ.ಹೇಮಲತ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿರಲಿದ್ದು, ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಲಿದ್ದಾರೆ ಎಂದು ಹೇಳಿದರು.
ಹೊಸಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿದ್ದ ನೀಲಗಿರಿ ಮರಗಳನ್ನು ತೆರವುಗೊಳಿಸಲಾಗಿದ್ದು, ಸಚಿವರು ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಾಲೆಯ ಆವರಣದಲ್ಲಿ ವಿಶಾಲವಾದ ವೇದಿಕೆ ನಿರ್ಮಿಸುವ ಮೂಲಕ ಅಧಿಕಾರಿಗಳು ಮತ್ತು ಸಾರ್ವಜನಿಕರು ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗಿದೆ ಎಂದರು.
ಗ್ರಾಮ ಪಂಚಾಯಿತಿ ವತಿಯಿಂದ ಹೊಸಹಳ್ಳಿಯಲ್ಲಿ ಸ್ವಚ್ಛತೆ ಕಾರ್ಯ ಮಾಡಲಾಗಿದ್ದು, ಸರ್ಕಾರಿ ಯೋಜನೆಗಳ ವಿವಿಧ ಸೌಲಭ್ಯಗಳ ಮಾಹಿತಿ ತಿಳಿಸುವ ನಿಟ್ಟಿನಲ್ಲಿ ರೇಷ್ಮೆ, ಕೃಷಿ, ಕಂದಾಯ, ಪೊಲೀಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಪಂಚಾಯತ್ ರಾಜ್ ಸೇರಿದಂತೆ ವಿವಿಧ ಇಲಾಖೆಗಳು ಸ್ಟಾಲ್‌ಗಳನ್ನು ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಹೊಸಹಳ್ಳಿಯಲ್ಲಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸುಣ್ಣ ಬಳಿದು ಶೃಂಗಾರ ಮಾಡಲಾಗಿದ್ದು, ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಸಲುವಾಗಿ ಆರೋಗ್ಯ ಇಲಾಖೆಯ ಪ್ರತ್ಯೇಕ ಕೌಂಟರ್ ನಿರ್ಮಿಸಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವ ವಿವಿಧ ಇಲಾಖೆ ಅಧಿಕಾರಿಗಳು ಸೇರಿದಂತೆ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಕಲ್ಪಿಸಲು ಪ್ರತ್ಯೇಕ ಕೌಂಟರ್ ನಿರ್ಮಿಸಲಾಗಿದೆ ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಸಚಿವರು, ಜಿಲ್ಲಾಧಿಕಾರಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪೊಲೀಸ್ ಅಧೀಕ್ಷಕರು ವಾಸ್ತವ್ಯ ಹೂಡಲಿದ್ದಾರೆ ಹಾಗೂ ಫೆ.21ರ ನಾಳೆ ಬೆಳಿಗ್ಗೆ ಹೊಸಹಳ್ಳಿ ಗ್ರಾಮದ ದಲಿತ ಕುಟುಂಬದವರ ಮನೆಯಲ್ಲಿ ಸಚಿವರು ಹಾಗೂ ಅಧಿಕಾರಿಗಳು ಉಪಹಾರ ಸೇವಿಸಲಿದ್ದಾರೆ ಎಂದು ತಿಳಿಸಿದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post