ಕಲ್ಪ ಮೀಡಿಯಾ ಹೌಸ್
ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆ ನಿಯಂತ್ರಿಸುವುದಕ್ಕಾಗಿ ಮುಂಬರುವ ಗೌರಿ-ಗಣೇಶ ಸೇರಿದಂತೆ ಹಬ್ಬ ಹರಿದಿನಗಳಲ್ಲಿ ಜನದಟ್ಟಣೆ ನಿಯಂತ್ರಿಸಲು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಮಾರ್ಗಸೂಚಿಯನ್ನು ಪ್ರಕಟಿಸಿದೆ.
ಹಾದಿ ಬೀದಿಗಳಲ್ಲಿ ಗಣೇಶ ಪ್ರತಿಮೆ ಪ್ರತಿಷ್ಠಾಪನೆ, ಮೆರವಣಿಗೆಗಳನ್ನು ನಿಷೇಧಿಸಿದೆ. ಹಾಗೂ ಮೆರವಣಿಗೆಗಳನ್ನು ನಡೆಸದಂತೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಆದೇಶ ಹೊರಡಿಸಿದ್ದಾರೆ.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಶ್ರಾವಣ ಮಾಸ ಆರಂಭವಾದ ಬಳಿಕ ಆಗಸ್ಟ್ ನಿಂದ ಅಕ್ಟೋಬರ್ ವರೆಗೂ ನಡೆಸುವ ಹಬ್ಬಗಳಾದ ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ದುರ್ಗಾ ಪೂಜೆ, ಮೊಹರಂ ಆಚರಣೆ ವೇಳೆ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಜನದಟ್ಟಣೆ ಮತ್ತು ಒಗ್ಗೂಡುವಿಕೆಯನ್ನು ನಿಯಂತ್ರಿಸುವಂತೆ ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಿದ್ದಾರೆ.
ಆಚರಣೆಯಲ್ಲಿ ಸಾಮಾಜಿಕ, ರಾಜಕೀಯ, ಧಾರ್ಮಿಕ, ಕ್ರೀಡಾ, ಮನರಂಜನೆ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಬೃಹತ್ ಸಮಾರಂಭಗಳನ್ನು ನಿಷೇಧಿಸಲಾಗಿದೆ. ದೇವಾಲಯಗಳು, ಮಸೀದಿ ಚರ್ಚ್ ಗಳು ಸೇರಿದಂತೆ ಧಾರ್ಮಿಕ ಕೇಂದ್ರಗಳಲ್ಲಿ ಪೂಜೆ ಮಾಡಲು ಮಾತ್ರ ಅವಕಾಶವಿದ್ದು, ಜಾತ್ರೆ, ಮೆರವಣಿಗೆ, ಸಭೆ- ಸಮಾರಂಭಗಳಿಗೆ ಅನುಮತಿ ನೀಡದಂತೆ ಸ್ಥಳೀಯ ಸಂಸ್ಥೆಗಳಿಗೆ ತಿಳಿಸಲಾಗಿದೆ.
ಗಣೇಶ ಚತುರ್ಥಿ ಮಾರ್ಗಸೂಚಿ:
- ಸೆ.10ರಂದು ನಡೆಯಲಿರುವ ಗೌರಿ-ಗಣೇಶ ಪ್ರತಿಷ್ಠಾಪನೆಯನ್ನು ಸಾರ್ವಜನಿಕ ಸ್ಥಳಗಳಲ್ಲಿ ಆಚರಿಸುವುದು, ಮೆರವಣಿಗೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಡಿವಾಣ ಹಾಕಿದೆ.
- ಗಣೇಶ ಪ್ರತಿಮೆಗಳನ್ನು ದೇವಸ್ಥಾನಗಳಲ್ಲಿ ಮತ್ತು ಮನೆಗಳಲ್ಲಿ ಮಾತ್ರ ಪ್ರತಿಷ್ಠಾಪಿಸಬೇಕು. ಗಣೇಶ ಮೂರ್ತಿಗಳನ್ನು ಬೀದಿಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸುವಂತಿಲ್ಲ, ಚಪ್ಪರ ಮತ್ತು ಪೆಂಡಾಲ್ ಹಾಕುವಂತಿಲ್ಲ.
- ಗಣೇಶ ಮೂರ್ತಿ ತರುವಾಗ ಮತ್ತು ವಿಸರ್ಜನೆ ಮಾಡುವಾಗ ಮೆರವಣಿಗೆ ಮಾಡುವಂತಿಲ್ಲ. ಗಣೇಶ ಹಬ್ಬದ ವೇಳೆ ಮನರಂಜನೆ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ.
- ಮನೆಯಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡುವವರು ಸಾಧ್ಯವಾದರೆ ಮೊಬೈಲ್ ಟ್ಯಾಂಕ್ ಗಳಲ್ಲಿಯೇ ವಿಸರ್ಜಿಸಬೇಕು ಅಥವಾ ಹೊಂಡ, ಕಲ್ಯಾಣಿಗಳಲ್ಲಿ ವಿಸರ್ಜಿಸಬಹುದು.
- ಗಣೇಶ ಪ್ರತಿಷ್ಠಾಪಿಸುವ ದೇವಾಲಯಗಳಲ್ಲಿ ಪ್ರತಿದಿನ ಸ್ಯಾನಿಟೈಸ್ ಮಾಡಬೇಕು. ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಕಡ್ಡಾಯವಾಗಿ ಥರ್ಮಲ್ ಸ್ಕ್ಯಾನ್ ಮಾಡಬೇಕು. ಮಾಸ್ಕ್ ಧರಿಸಿರುವಂತೆ ನೋಡಿಕೊಳ್ಳಬೇಕು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post