ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಗ್ರಾಹಕ ದೂರು ನಿರ್ವಹಣೆ ಪ್ರಕ್ರಿಯೆಯನ್ನು ಮತ್ತಷ್ಟು ಪಾರದರ್ಶಕವಾಗಿಸಲು ಡಿಜಿಟಲ್ ಪೋರ್ಟಲ್ ಪರಿಚಯಿಸಲು ಬೆಸ್ಕಾಂ #BESCOM ಮುಂದಾಗಿದೆ ಎಂದು ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಡಾ.ಎನ್.ಶಿವಶಂಕರ ತಿಳಿಸಿದ್ದಾರೆ.
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಮತ್ತು ಬೆಂಗಳೂರು ವಿದ್ಯುತ್ ಸರಬರಾಜು ನಿಗಮ ನಿಯಮಿತದ ಸಹಯೋಗದಲ್ಲಿ ಮಂಗಳವಾರ ಗ್ರಾಹಕರ ಕುಂದುಕೊರತೆಗಳ ನಿವಾರಣಾ ವೇದಿಕೆಯ ಅಧ್ಯಕ್ಷರು, ಸದಸ್ಯರು ಮತ್ತು ಅಧಿಕಾರಿಗಳಿಗೆ ಕೆಇಬಿ ಇಂಜಿನಿಯರ್ಸ್ ಅಸೋಸಿಯೇಷನ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

“ಕೆಇಆರ್‌ಸಿ ಆದೇಶದ ಸೂಚನೆ ಮೇರೆಗೆ ಗ್ರಾಹಕರ ಕುಂದುಕೊರತೆಗಳ ನಿವಾರಣಾ ವೇದಿಕೆಯನ್ನು ಸ್ಥಾಪಿಸಲಾಗಿದೆ. ಗ್ರಾಹಕರು ದೂರಿಗೆ ತ್ವರಿತವಾಗಿ ಸ್ಪಂದಿಸಿ, ಸೇವೆಯ ಗುಣಮಟ್ಟ ಹೆಚ್ಚಿಸಲು ಅಧಿಕಾರಿಗಳು ಮುಂದಾಗಬೇಕು,” ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಕರೆ ನೀಡಿದರು.
“ಗ್ರಾಹಕರ ಕುಂದುಕೊರತೆಗಳ ನಿವಾರಣಾ ವೇದಿಕೆ (ಸಿಜಿಆರ್‌ಎಫ್)ಯ ಸ್ಪಷ್ಟ ನಿರ್ದೇಶನದಂತೆ ಗ್ರಾಹಕರು ದೂರುಗಳು ಬಂದಲ್ಲಿ ನಿಗದಿತ ಕಾಲಮಿತಿಯೊಳಗೆ ಇತ್ಯರ್ಥಗೊಳಿಸಬೇಕಿದೆ. ಜಿಲ್ಲಾ ಹಂತದ ವೇದಿಕೆಯಲ್ಲಿ ಸೂಪರಿಂಟೆಂಡೆಂಟ್ ಇಂಜಿನಿಯರ್, ಇಇ ಹಾಗೂ ಸ್ವತಂತ್ರ ಸದಸ್ಯರು ಇರಲಿದ್ದಾರೆ. ಕಾರ್ಪೋರೇಟ್ ಕಚೇರಿಯ ಸಿಜಿಆರ್‌ಎಫ್ ವೇದಿಕೆಯಲ್ಲಿ ದೂರು ಇತ್ಯರ್ಥವಾಗದಿದ್ದರೆ ಕೆಇಆರ್‌ಸಿ ವಿದ್ಯುಚ್ಛಕ್ತಿ ಲೋಕಪಾಲರ (ಓಂಬುಡ್ಸ್‌ಮನ್) ಬಳಿ ದೂರು ಸಲ್ಲಿಸಿ ನಿಗದಿತ ಕಾಲಮಿತಿಯೊಳಗೆ ಪರಿಹಾರ ಪಡೆಯಬಹುದಾಗಿದೆ”, ಎಂದು ತಿಳಿಸಿದರು.
ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಕೆಇಆರ್‌ಸಿಯ ಅಧ್ಯಕ್ಷರೂ ಆದ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, “ದೂರಿನ ಇತ್ಯರ್ಥದ ಸಂದರ್ಭದಲ್ಲಿ ಗ್ರಾಹಕರಿಗೆ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ನ್ಯಾಯ ಒದಗಿಸಬೇಕು. ಮುಖ್ಯವಾಗಿ ಈ ಪ್ರಕ್ರಿಯೆ ತ್ವರಿತಗತಿಯಲ್ಲಿ ಆಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾದರೆ ಕಾರ್ಯಾಗಾರ ಯಶಸ್ವಿಯಾದಂತೆ,”ಎಂದರು.

ಕಾರ್ಯಾಗಾರದಲ್ಲಿ ಕೆಇಆರ್‌ಸಿಯ ತಾಂತ್ರಿಕ ನಿರ್ದೇಶಕರಾದ ಶ್ರೀನಿವಾಸಪ್ಪ, ನಿವೃತ್ತ ನ್ಯಾಯಾಧೀಶರಾದ ಕೃಷ್ಣಯ್ಯ ಹಾಗೂ ಐ.ಎಫ್.ಬಿದರಿ ಅವರು ಅಧಿಕಾರಿಗಳಿಗೆ ಗ್ರಾಹಕರ ಹಕ್ಕುಗಳ ಬಗ್ಗೆ ಇಲಾಖೆ ತಾಂತ್ರಿಕ ವಿಚಾರಗಳು ಹಾಗೂ ಸಾಮಾನ್ಯವಾಗಿ ಎದುರಾಗುತ್ತಿರುವ ದೂರುಗಳ ಬಗ್ಗೆ ವಿವರಿಸಿದರು.
ಕೆಇಆರ್‌ಸಿ ಕಾರ್ಯದರ್ಶಿ ಸಿದ್ದೇಶ್ವರ್, ಬೆಸ್ಕಾಂ ತಾಂತ್ರಿಕ ನಿರ್ದೇಶಕ ಹೆಚ್.ಜೆ.ರಮೇಶ್, ಬೆಸ್ಕಾಂ ಹಣಕಾಸು ವಿಭಾಗದ ನಿರ್ದೇಶಕ ಮಹಾದೇವ, ಬೆಸ್ಕಾಂ ಆಡಳಿತ ಮತ್ತು ಮಾನವ ಸಂಪನ್ಮೂಲ ವಿಭಾಗದ ಪ್ರಧಾನ ವ್ಯವಸ್ಥಾಪಕ ಡಾ.ದಯಾನಂದ್, ಗ್ರಾಹಕ ಸಂಬಂಧ ಶಾಖೆಯ ಪ್ರಧಾನ ವ್ಯವಸ್ಥಾಪಕ ರಾಜೋಜಿ ರಾವ್, ನಿಗಮ ವ್ಯವಹಾರಗಳ ಮುಖ್ಯ ಪ್ರಧಾನ ವ್ಯವಸ್ಥಾಪಕರಾದ ಪುಷ್ಪ ಎಸ್.ಎ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post