ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನೀವು ಮಲ್ಟಿಪ್ಲೆಕ್ಸ್’ನಲ್ಲಿ #Multiplex ಸಿನಿಮಾ ನೋಡ್ತೀರಾ? ಹಾಗಾದರೆ ಟಿಕೇಟ್ ಎಸೆಯಬೇಡಿ, ನಿಮ್ಮ ಬಳಿಯೇ ಇಟ್ಟುಕೊಳ್ಳಿ.. ಟಿಕೇಟ್’ನ ಅರ್ಧ ಹಣ ವಾಪಾಸ್ ಬಂದರೂ ಬರಬಹುದು… ಇಂತಹ ಒಂದೂ ಸೂಚನೆಯನ್ನು ರಾಜ್ಯ ಸರ್ಕಾರವೇ ನೀಡಿದೆ.
ರಾಜ್ಯದ ಮಲ್ಟಿಪ್ಲೆಕ್ಸ್’ಗಳಲ್ಲಿ ಚಲನಚಿತ್ರ ವೀಕ್ಷಣೆಗೆ ಸರ್ಕಾರ ಗರಿಷ್ಠ 200ರೂ. ಟಿಕೆಟ್ ದರವನ್ನು ನಿಗದಿಪಡಿಸಿರುವ ಕುರಿತಂತೆ ಕರ್ನಾಟಕ ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಈ ಕುರಿತು ಅಂತಿಮ ತೀರ್ಪು ಬರುವವರೆಗೆ, ಪ್ರತಿ ವೀಕ್ಷಕರೂ ತಮ್ಮ ಟಿಕೆಟ್ ಮತ್ತು ಪಾವತಿ ದಾಖಲೆಗಳನ್ನು ಸುಸ್ಥಿತಿಯಲ್ಲಿ ಇರಿಸಿಕೊಳ್ಳಬೇಕು ಎಂದು ರಾಜ್ಯ ಸರ್ಕಾರ ಸೂಚನೆ ನೀಡಿದೆ.
ಸಿನಿಮಾ ವೀಕ್ಷಣೆಗೆ ಅನಾವಶ್ಯಕ ದುಬಾರಿ ದರ ವಿಧಿಸುವುದನ್ನು ನಿಯಂತ್ರಿಸಲು, ರಾಜ್ಯ ಸರ್ಕಾರ ಮಲ್ಟಿಪ್ಲೆಕ್ಸ್’ಗಳಲ್ಲಿ ಗರಿಷ್ಠ 200 ರೂ. ಟಿಕೆಟ್ ದರ ನಿಗದಿಪಡಿಸಿ ಆದೇಶಿಸಿತ್ತು. ಆದರೆ ಭಾರತೀಯ ಮಲ್ಟಿಪ್ಲೆಕ್ಸ್’ಗಳ ಸಂಘ ಮತ್ತು ಇತರರು ಈ ಮಿತಿಯನ್ನು ಪ್ರಶ್ನಿಸಿ ಹೈಕೋರ್ಟ್’ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ತಾತ್ಕಾಲಿಕ ತಡೆಯಾಜ್ಞೆ ಲಭಿಸಿದೆ.
ನ್ಯಾಯಾಲಯದ ನಿರ್ದೇಶನಗಳು ಏನು?
ಮಲ್ಟಿಪ್ಲೆಕ್ಸ್’ಗಳು ಪ್ರತಿಯೊಂದು ಟಿಕೆಟ್ ಮಾರಾಟದ ಲೆಕ್ಕಪತ್ರ ಮತ್ತು ಲೆಕ್ಕ ಪರಿಶೋಧಿಸಬಹುದಾದ ದಾಖಲೆಗಳನ್ನು ನಿರ್ವಹಿಸಬೇಕು.
ಮುಂದೆ ನ್ಯಾಯಾಲಯ ರಾಜ್ಯ ಸರ್ಕಾರದ ಪರ ತೀರ್ಪು ನೀಡಿದರೆ, ಮಿತಿಗಿಂತ ಹೆಚ್ಚು ಹಣ ಪಡೆದುಕೊಂಡಿರುವ ಮಲ್ಟಿಪ್ಲೆಕ್ಸ್’ಗಳು ಆ ಮೊತ್ತವನ್ನು ಪಾವತಿದಾರರ ಖಾತೆಗೆ ಮರುಪಾವತಿ ಮಾಡಬೇಕು.
ಟಿಕೇಟ್ ಬುಕ್ಕಿಂಗ್ ವೇಳೆ ಬಳಸಿದ ಪಾವತಿ ವಿಧಾನಗಳ ಮೂಲಕ ನೇರವಾಗಿ ಮರುಪಾವತಿ ನೀಡಬೇಕು.
ಸರ್ಕಾರ ಹೇಳಿರುವುದೇನು?
ಇನ್ನು, ಇದೇ ವೇಳೆ ಈ ಅವಧಿಯಲ್ಲಿ ಸಿನಿಮಾ ವೀಕ್ಷಿಸುವವರು ತಮ್ಮ ಟಿಕೇಟ್, ಪಾವತಿ ರಶೀದಿ ಅಥವಾ ಡಿಜಿಟಲ್ ಪಾವತಿ ಸ್ಕ್ರೀನ್ ಶಾಟ್’ಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಅತ್ಯಗತ್ಯ ಎಂದು ಸರ್ಕಾರ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post