ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಪ್ರಸಕ್ತ ಶೈಕ್ಷಣಿದ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸುವ ಬಗ್ಗೆ ರಾಜ್ಯ ಸರ್ಕಾರ ತೆಗೆದುಕೊಂಡಿರುವ ನಿರ್ಧಾರವನ್ನು ಇಂದು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದಿದ್ದು, 2020-21ನೆಯ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಜುಲೈ 19 ಮತ್ತು 22ಕ್ಕೆ ನಡೆಯಲಿದೆ.
ಕೊರೋನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಕೋರಿ ಎಸ್.ವಿ. ಸಿಂಗ್ರೇ ಗೌಡ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಹಂಚಾಟೆ ಸಂಜೀವ್ ಕುಮಾರ್ ಅವರನ್ನೊಳಗೊಂಡ ನ್ಯಾಯಪೀಠ ವಜಾಗೊಳಿಸಿದೆ.
ಇನ್ನು ಕೆಲವು ದಿನಗಳಲ್ಲಿ ಪರೀಕ್ಷೆ ನಡೆಯಲಿದ್ದು, ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುವುದು ಎಂದು ರಾಜ್ಯದ ಪರ ಹಾಜರಾದ ಅಡ್ವೊಕೇಟ್ ಜನರಲ್ (ಎಜಿ) ನ್ಯಾಯಾಲಯಕ್ಕೆ ದಾಖಲೆಗಳನ್ನು ಸಲ್ಲಿಸಿದ್ದಾರೆ.
ಒಬ್ಬ ವಿದ್ಯಾರ್ಥಿಗೆ ಒಂದು ಮೇಜು ಹಾಗೂ ಒಂದು ತರಗತಿಯಲ್ಲಿ 12 ವಿದ್ಯಾರ್ಥಿಗಳನ್ನು ಮಾತ್ರ ಪರೀಕ್ಷೆಗೆ ಹಾಜರುಪಡಿಸಲಾಗುವುದು. ಸಾಮಾಜಿಕ ಅಂತರವಿರಲಿದ್ದು, ಆರೋಗ್ಯ ತಪಾಸಣೆಗಾಗಿ 2 ಅರೆವೈದ್ಯಕೀಯ ಸಿಬ್ಬಂದಿ ಉಪಸ್ಥಿತರಿರಲಿದ್ದಾರೆ ಎಂದು ಎಜಿ ಹೇಳಿದರು.
ರಾಜ್ಯ ಸರ್ಕಾರದ ವಾದವನ್ನು ಗಮನಿಸಿದ ನ್ಯಾಯಾಲಯವು, ಈ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ಒಲವು ತೋರುತ್ತಿಲ್ಲ. ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಎಲ್ಲಾ ಮಧ್ಯಸ್ಥಗಾರರಿಂದ ಪಾಲಿಸಬೇಕಾದ ಎಸ್‌ಒಪಿ ಅನ್ನು ಸುತ್ತೋಲೆ ರೂಪದಲ್ಲಿ ನೀಡುವ ಮೂಲಕ ಪರೀಕ್ಷೆಯನ್ನು ನಡೆಸಲು ರಾಜ್ಯವು ಕಾಳಜಿ ವಹಿಸಿದೆ ಎಂದು ನಾವು ಕಂಡುಕೊಂಡಿದ್ದೇವೆ. ಅರ್ಜಿಯಲ್ಲಿ ನಮಗೆ ಯಾವ ಗಮನಾರ್ಹ ಅಂಶಗಳು ಕಂಡುಬಂದಿಲ್ಲ ಎಂದು ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post