ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪರಿಪೂರ್ಣತೆಗೆ ಗಮನ ನೀಡಿದಾಗ ಮಾತ್ರ ನಾವು ಹತ್ತರಲ್ಲಿ ಹನ್ನೊಂದಾಗದೇ, ವಿಶಿಷ್ಟವಾಗಿ ಗುರುತಿಸಿಕೊಳ್ಳಲು ಸಾಧ್ಯ ಎಂದು ಬೆನ್ಜ್ ಕಂಪನಿಯ ಸಿಇಒ ಮನು ಸಾಲೆ ಹೇಳಿದರು.
ಹವ್ಯಕ ಭವನದಲ್ಲಿ ನಡೆದ ವಿಜಯೀಭವ ಕಾರ್ಯಕ್ರಮದಲ್ಲಿ ಸ್ಪೂರ್ತಿಯ ಮಾತುಗಳನ್ನಾಡಿದ ಅವರು, ಉದ್ಯಮ ಯಶಸ್ವಿಯಾಗಲು ಗ್ರಾಹಕ ಸಂತುಷ್ಟಿ ಹಾಗೂ ಉತ್ಪನ್ನದ ಗುಣಮಟ್ಟ ಮುಖ್ಯ. ಹಾಗೆಯೇ ಮನುಷ್ಯನಲ್ಲಿ ಉತ್ಸಾಹ ಇಲ್ಲದಿದ್ದರೆ ಗುರಿ ಮುಟ್ಟಲು ಅಸಾಧ್ಯ. ಯಶಸ್ಸಿನ ಹಿಂದೆ ನಾವು ಹೋಗಬಾರದು. ನಾವು ಕೆಲಸ ಮಾಡುತ್ತಾ ಹೋಗಬೇಕು. ಯಶಸ್ಸು ನಮ್ಮ ಕೆಲಸದ ಜೊತೆ ಬರುತ್ತದೆ ಎಂದು ಯುವ ಜನತೆಗೆ ಕಿವಿ ಮಾತು ಹೇಳಿದರು.

ಹೊರದೇಶಗಳಲ್ಲಿ ನಾವು ನಮ್ಮ ದೇಶವನ್ನು ಪ್ರತಿನಿಧಿಸುವಾಗ, ಮೊದಲು ನನ್ನ ದೇಶ, ನಂತರ ನನ್ನ ಕಂಪನಿ, ಆನಂತರ ನಾನು ಎಂಬ ವಿಚಾರವನ್ನು ಗಮನದಲ್ಲಿಟ್ಟುಕೊಂಡರೆ ದೇಶಕ್ಕೆ ಹೆಮ್ಮ ತರಲು ಸಾಧ್ಯ ಎಂದರು.
ಉದ್ಯಮದ ಕುರಿತಾದ ಪ್ರೀತಿಯೇ ಯಶಸ್ಸಿನ ಗುಟ್ಟಾಗಿದ್ದು, ವಾಹನದ ಮೇಲೆ ನನಗಿರುವ ಹುಚ್ಚೇ ಸಾರಿಗೆ ಉದ್ಯಮದಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು. ವಾಹನದ ಕುರಿತಾದ ಕಿಚ್ಚು ಹತ್ತಲು ನನ್ನ ತಂದೆಯೇ ಕಾರಣ ಎಂದು ಶ್ರೀಕುಮಾರ್ ರೋಡ್’ಲೈನ್ಸ್ ಹಾಗೂ ಟ್ರಾವೆಲ್ಸ್ ಮಾಲಿಕರಾದ ವೆಂಕಟರಮಣ ವಿ ಹೆಗಡೆ ಹೇಳಿದರು.

ಮೊದಲು ಸಾರಿಗೆ ಉದ್ಯಮ ಆರಂಭಿಸಿದಾಗ ಸ್ವಂತವಾಗಿ ವಾಹನ ಚಾಲನೆ ಮಾಡುತ್ತಿದೆ. ಉದ್ಯಮ ಬೆಳೆದು 50 ಕಮರ್ಷಿಯಲ್ ವಾಹನಗಳನ್ನು ನಡೆಸಿದೆ. ಉದ್ಯಮದಲ್ಲಿ ನಷ್ಟವಾದಾಗ ಕುಗ್ಗಿದ್ದೆ. ಆದರೆ ಸ್ನೇಹಿತರ ಬೆಂಬಲದಿಂದ ಹುಬ್ಬಳ್ಳಿಯಲ್ಲಿ ಕಚೇರಿ ಆರಂಭಿಸಿ, ಮತ್ತೆ ಉದ್ಯಮ ಬೆಳಸಿದೆ. ಈಗ 36 ಬಸ್ಸು ಹಾಗೂ 75 ಸರಕು ಸಾಗಣೆವಾಹನ ನಡೆಸುತ್ತಿದ್ದೇನೆ ಎಂದು ತಮ್ಮ ಸಾಧನೆಯ ಹಾದಿಯನ್ನು ತಿಳಿಸಿದರು.
Also read: ಪೂಜೆ ಮಾಡುವಾಗಲೇ ಕುಸಿದುಬಿದ್ದು ಕೊನೆಯುಸಿರೆಳೆದ ಮಹದೇಶ್ವರ ದೇಗುಲದ ಅರ್ಚಕ
ಕಾರ್ಯಕ್ರಮವನ್ನು ಉದ್ಘಾಟಿಸಿದ ಖ್ಯಾತ ಸಿನಿ ತಾರೆ ನೀರ್ನಳ್ಳಿ ರಾಮಕೃಷ್ಣ ಮಾತನಾಡಿ, ‘ವಿಜಯೀ ಭವ’ ದ ಮೂಲಕ ಹವ್ಯಕ ಮಹಾಸಭೆಯು ಸಾಧಕರ ಪರಿಚಯವನ್ನು ಸಮಾಜಕ್ಕೆ ಮಾಡುವ ಮೂಲಕ; ಸ್ಪೂರ್ತಿಯನ್ನು ತುಂಬುತ್ತಿರುವುದು ಶ್ಲಾಘನೀಯ. ಮಹಾಸಭೆಯು ಅನೇಕ ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದು, ನಾವೆಲ್ಲ ಕೈಜೋಡಿಸೋಣ ಎಂದರು.

ಪ್ರತಿಮಾ ಭಟ್, ಕೃಷ್ಣಾನಂದ ಶರ್ಮ ಸಾಧಕರ ಜೊತೆ ಸಂವಾದ ನಡೆಸಿಕೊಟ್ಟರು. ಕಾರ್ಯಕ್ರಮದ ಆರಂಭದಲ್ಲಿ ಮನು ಸಾಲೆ, ವೆಂಕಟರಮಣ ವಿ. ಹೆಗಡೆ ಹಾಗೂ ನೀರ್ನಳ್ಳಿ ರಾಮಕೃಷ್ಣ ಇವರನ್ನು ಮಹಾಸಭೆಯವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಹಿರಿಯ ತಾಳಮದ್ದಳೆ ಅರ್ಥದಾರಿ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಉಪಸ್ಥಿತರಿದ್ದರು.
ಶ್ರೀಕಾಂತ್ ಹೆಗಡೆ ಅಂತ್ರವಳ್ಳಿ ಕಾರ್ಯಕ್ರಮವನ್ನು ನಿರೂಪಿಸಿ, ಕಾರ್ಯದರ್ಶಿ ಆದಿತ್ಯ ಹೆಗಡೆ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪಾಧ್ಯಕ್ಷರಾದ ಶ್ರೀಧರ ಜೆ ಭಟ್ಟ ಕೆಕ್ಕಾರು, ಕಾರ್ಯದರ್ಶಿಗಳಾದ ಪ್ರಶಾಂತ ಕುಮಾರ ಜಿ ಭಟ್ಟ ಮಲವಳ್ಳಿ, ಕೋಶಾಧಿಕಾರಿ ಕೃಷ್ಣಮೂರ್ತಿ ಎಸ್ ಭಟ್ ಯಲಹಂಕ, ಕಾರ್ಯಕ್ರಮದ ಸಂಚಾಲಕ ರವಿನಾರಾಯಣ ಪಟ್ಟಾಜೆ ಉಪಸ್ಥಿತರಿದ್ದರು.










Discussion about this post