ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಕೊರೋನಾ ಎರಡನೆಯ ಅಲೆಯ ಹಿನ್ನೆಲೆಯಲ್ಲಿ ರಾಜ್ಯ ಜನರ ಸುರಕ್ಷತೆಗಾಗಿ ಕೈಗೊಂಡಿರುವ ನಿರ್ಧಾರಗಳಲ್ಲಿ ರಾಜಕೀಯ ಮಾಡಬೇಡಿ ಎಂದು ಆರೋಗ್ಯ ಸಚಿವ ಸುಧಾಕರ್ ಪ್ರತಿಪಕ್ಷಗಳಿಗೆ ಹೇಳಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಕಳೆದ ಕೆಲವು ದಿನಗಳಿಂದ ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ಕೆಲ ಮಾರ್ಗಸೂಚಿಗಳನ್ನು ಜಾರಿ ಮಾಡಲಾಗಿದೆ ಎಂದರು.
ಮುಖ್ಯಮಂತ್ರಿಗಳು ಸಚಿವ ಸಂಪುಟದ ಸದಸ್ಯರು, ತಾಂತ್ರಿಕ ಸಲಹಾ ಸಮಿತಿಯ ತಜ್ಞರು, ಮುಖ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಎಲ್ಲಾ ಆಯಾಮಗಳನ್ನು ಪರಿಗಣಿಸಿ ರಾಜ್ಯದ ಜನರ ಆರೋಗ್ಯ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದ್ದಾರೆ. ಕಳೆದ ವರ್ಷದ ಲಾಕ್ ಡೌನ್ ಮತ್ತು ನಂತರದ ನಿರ್ಬಂಧಗಳಿಂದ ಚಿತ್ರರಂಗ ಸೇರಿದಂತೆ ಅನೇಕ ಉದ್ದಿಮೆ, ವ್ಯಾಪಾರ, ವಹಿವಾಟುಗಳಿಗೆ ತೊಂದರೆ ಆಗಿರುವುದರ ಬಗ್ಗೆ ಸರ್ಕಾರಕ್ಕೆ ಅರಿವಿದೆ, ಕಳಕಳಿಯೂ ಇದೆ. ಆದರೆ ಒಲ್ಲದ ಮನಸ್ಸಿನಿಂದ ಅನಿವಾರ್ಯವಾಗಿ ಈ ಕಠಿಣ ನಿರ್ಧಾರ ತೆಗೆದುಕೊಳ್ಳುವ ಪರಿಸ್ಥಿತಿ ಮತ್ತೆ ಎದುರಾಗಿದೆ ಎಂದರು.
ಈಗ ಲಸಿಕೆ ಸಹ ಲಭ್ಯವಿರುವುದರಿಂದ ಹೆಚ್ಚು ಹೆಚ್ಚು ಮಂದಿ ಲಸಿಕೆ ಪಡೆದು, ಕೆಲವು ದಿನಗಳ ಕಾಲ ಕಠಿಣ ನಿಯಮಗಳನ್ನು ಪಾಲಿಸಿ ನಿಮ್ಮೆಲ್ಲರ ಸಹಕಾರದಿಂದ ಪ್ರಕರಣಗಳು ಕಡಿಮೆಯಾದರೆ ಮತ್ತೆ ಎಂದಿನಂತೆ ಪೂರ್ಣ ಪ್ರಮಾಣದಲ್ಲಿ ಚಟುವಟಿಕೆಗಳನ್ನು ಪುನರಾರಂಭಿಸಬಹುದು. ಈ ನಿರ್ಧಾರ ವೈಜ್ಞಾನಿಕ ನೆಲೆಗಟ್ಟಿಯಲ್ಲಿ ರಾಜ್ಯದ ಜನರ ಆರೋಗ್ಯ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ತೆಗೆದುಕೊಂಡಿರುವ ಆಡಳಿತಾತ್ಮಕ ನಿರ್ಧಾರವಾಗಿದ್ದು ಇದನ್ನು ರಾಜಕೀಯ ಅಥವಾ ಇನ್ಯಾವುದೇ ದೃಷ್ಟಿಯಿಂದ ಪರಿಗಣಿಸಬಾರದು ಎಂದು ಮನವಿ ಮಾಡುತ್ತೇನೆ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post