ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಭರದ ಸಿದ್ಧತಾ ಕಾರ್ಯಗಳು ನಡೆಯುತ್ತಿದ್ದು, ಮಾರ್ಚ್ 3 ರಂದು ಉದ್ಘಾಟನೆಯಾಗಲಿದೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ತಿಳಿಸಿದರು.
ಅಕಾಡೆಮಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಗಾಂಧಿ ವಿಜ್ಞಾನ ಕೇಂದ್ರದಲ್ಲಿ ಮುಂದಿನ ತಿಂಗಳು 3 ರಂದು ಚಲನಚಿತ್ರೋತ್ಸವಕ್ಕೆ ಚಾಲನೆ ಸಿಗಲಿದ್ದು, ಮಾರ್ಚ್ 10 ರವರೆಗೂ ನಡೆಯಲಿದೆ. ಈ ಬಾರಿಯ ಚಲಚಿತ್ರೋತ್ಸವವನ್ನು ಕೋವಿಡ್ ಮಹಾಮಾರಿಯ ವಿರುದ್ದ ಸೆಣಸಿದ ಎಲ್ಲ ಕಾರ್ಯಕರ್ತರಿಗೆ ಸಮರ್ಪಿಸಲಾಗಿದೆ ಎಂದರು.
13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಹಲವು ವಿಶೇಷತೆಗಳನ್ನು ಹೊಂದಿದೆ. ಇಂಟರ್ ನ್ಯಾಷನಲ್ ಫೆಡರೇಷನ್ ಆಫ್ ಫಿಲಂ ಪ್ರೊಡ್ಯೂಸರ್ ಅಸೋಸಿಯೇಷನ್ ಮಾನ್ಯತೆ ಪಡೆದ ನಂತರ ನಡೆಯುತ್ತಿರುವ ಮೊದಲ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವಾಗಿದೆ ಎಂದು ವಿವರಿಸಿದರು.
ಸ್ಪರ್ಧಾ ವಿಭಾಗವಲ್ಲದೇ ಭಾರತಿ ವಿಷ್ಣುವರ್ಧನ್ ಅವರ ಸಿನಿ ಪಯಣ ವಿಶೇಷತೆ ತಿಳಿಸುವ ಕಾರ್ಯಕ್ರಮಗಳಿವೆ. ಈ ಬಾರಿ ಆಜಾದಿ ಕಿ ಅಮೃತ ಮಹೋತ್ಸವ ಅಂಗವಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಚಲನಚಿತ್ರಗಳ ವಿಶೇಷ ಪ್ರದರ್ಶನವಿದೆ. ವಿಶೇಷವಾಗಿ ಸಾಧನೆ- ಸ್ಮರಣೆಯಲ್ಲಿ ಪುನೀತ್ ರಾಜ್ ಕುಮಾರ್, ಸಂಚಾರಿ ವಿಜಯ್ ಅವರ ಗೌರವಾರ್ಥ ಕಾರ್ಯಕ್ರಮವಿದೆ. ಅಗಲಿದ ಸಾಧಕರಿಗೆ ನೆನಪಿನಾಂಜಲಿ ಕಾರ್ಯಕ್ರಮವಿದೆ. ಚಲನಚಿತ್ರಕ್ಕೆ ಸಂಬಂಧಿಸಿದ ಸಂವಾದ- ಕಾರ್ಯಾಗಾರ ಮತ್ತು ತಜ್ಞರಿಂದ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ಚಿತ್ರೋತ್ಸವದ ಜಾಲತಾಣದಲ್ಲಿ ಪ್ರತಿನಿಧಿಗಳ ನೋಂದಣಿ ಕಾರ್ಯ ಆರಂಭವಾಗಿದೆ. ಆಸಕ್ತರು ವೆಬ್ ಸೈಟ್ www.biffes.in ನಲ್ಲಿ ನೀತಿ ನಿಯಮಗಳನ್ನು ಅನುಸರಿಸಿ ಪ್ರತಿನಿಧಿ ಶುಲ್ಕ ಪಾವತಿಯೊಂದಿಗೆ ನೋಂದಾಯಿಸಿಕೊಳ್ಳಬಹುದು. ಸಾರ್ವಜನಿಕರಿಗೆ ರೂ.800, ಚಿತ್ರೋದ್ಯಮದ ಸದಸ್ಯರು, ವಿದ್ಯಾರ್ಥಿಗಳಿಗೆ ರೂ. 400 ನಿಗದಿಪಡಿಸಲಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ನಿರ್ದೇಶಕ ಪಿ. ಶೇಷಾದ್ರಿ, ರಿಜಿಸ್ಟ್ರಾರ್ ಹೇಮಂತ ರಾಜು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post