ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನಮ್ಮ ಸುತ್ತಲೂ ನೀರಿದ್ದರೂ, ನೀರಿಗೆ ಅಭಾವವಿದೆ. ಎಲ್ಲಾ ಜೀವಿಗಳಿಗೂ ಜೀವಿಸಲು ನೀರಿನ ಅವಶ್ಯಕತೆ ಬಹಳ ಮುಖ್ಯವಾಗಿದೆ. ಹೀಗಾಗಿಯೇ ನಾವು ನೀರನ್ನು ಜೀವಜಲ ಎನ್ನುತ್ತೇವೆ. ವಿಶ್ವದಲ್ಲಿ ನಗರಗಳು ವೇಗವಾಗಿ ಬೆಳೆಯುತ್ತಿವೆ. ಅದರಲ್ಲಿ ಭಾರತ ಮತ್ತು ಕರ್ನಾಟಕವು ಹೊರತಾಗಿಲ್ಲ. ಸ್ವಾತಂತ್ರ್ಯಾ ನಂತರ ಭಾರತ ವೇಗವಾಗಿ ಬೆಳೆಯುತ್ತಿರುವ ದೇಶಗಳಲ್ಲಿ ಒಂದಾಗಿದೆ. ನಮ್ಮ ರಾಜ್ಯ ಕರ್ನಾಟಕವು ನಗರೀಕರಣದ ಬೆಳವಣಿಗೆಯಲ್ಲಿ ಹಿಂದೆ ಬಿದ್ದಿಲ್ಲ ಎಂದು ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ Minister B A Basavaraj ಹೇಳಿದರು.
ನಗರ ನೀರು ಸರಬರಾಜು ಸುಧಾರಣೆಗಳ ಅನುಭವಗಳು ಹಾಗೂ ಇವುಗಳನ್ನು ಕರ್ನಾಟಕದಲ್ಲಿ ಅನುಷ್ಠಾನಗೊಳಿಸುವ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭೂ ಮಂಡಲದ ಶೇ. 70ರಷ್ಟು ಭಾಗ ನೀರಿನಿಂದಲೇ ಆವರಿಸಿದೆ. ಮನುಷ್ಯ, ಪ್ರಾಣಿ ಸಂಕುಲ, ಸಸ್ಯ ಸಂಕುಲ, ಜೀವ ಸಂಕುಲ ಭೂಮಂಡಲದ ಮೇಲೆ ಜೀವಿಸುತ್ತಿರುವುದು ಕಾಲು ಭಾಗದಲ್ಲಷ್ಟೇ. ಕರ್ನಾಟಕದ ನಗರ ಪ್ರದೇಶಗಳಲ್ಲಿ ಸ್ಥಾಪಿತವಾಗಿರುವ ವಾಣಿಜ್ಯ, ಉದ್ಯಮ ಕೈಗಾರಿಕೆಗಳು, ವಾಸಿಸುತ್ತಿರುವ ನಗರ ವಾಸಿಗಳಿಗೆ ನೀರು ಸರಬರಾಜು ಮಾಡುವುದೇ ಒಂದು ದೊಡ್ಡ ಸವಾಲಾಗಿತ್ತು. ಪ್ರತಿಯೊಬ್ಬ ನಿವಾಸಿಗೂ ನೀರನ್ನು ಒದಗಿಸುವುದು ಮೂಲಭೂತ ಸೌಕರ್ಯಗಳಲ್ಲಿ ಒಂದು ಎಂದು ತಿಳಿದು ಅಧಿಕಾರಕ್ಕೆ ಬಂದಂತಹ ಸರ್ಕಾರಗಳು ಪ್ರಾಮಾಣಿಕ ಪ್ರಯತ್ನ ಮಾಡಿವೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯದ ಹಲವಾರು ನಗರಗಳಲ್ಲಿ ನೀರಿನ ಬೇಡಿಕೆಯನ್ನು ಆಧರಿಸಿ ಸರ್ಕಾರ ಹಲವಾರು ನೀರು ಸರಬರಾಜು ಯೋಜನೆಗಳನ್ನು ಜಾರಿಗೆ ತಂದಿದೆ. ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಸುಜಲ, ಜಲಜೀವನ್ ಯೋಜನೆಗಳನ್ನು ರೂಪಿಸಿದಂತೆ ನಗರ ಪ್ರದೇಶಗಳಲ್ಲಿ ಕರ್ನಾಟಕ ನಗರ ನೀರು ಸರಬರಾಜು ಸುಧಾರಣೆ ಯೋಜನೆಯನ್ನು 2008ರಲ್ಲಿ ಅನುಷ್ಠಾನಗೊಳಿಸಲಾಗಿತ್ತು. ಇದಕ್ಕೆ ಉದಾಹರಣೆ ಎಂಬಂತೆ ಬೆಳಗಾವಿ, ಕಲಬುರಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗಳ ಆಯ್ದ 20 ವಾರ್ಡ್ ಗಳಲ್ಲಿ ನಿರಂತರ ನೀರು (24×7) ಸರಬರಾಜು ಯೋಜನೆ ಜಾರಿಗೆ ತಂದು, ಅದು ಇಂದಿಗೂ ಯಶಸ್ವಿಯಾಗಿ ಕಾರ್ಯಾಚರಣೆ ಮತ್ತು ನಿರ್ವಹಣೆ ಮಾಡಲಾಗುತ್ತಿದೆ ಎಂದರು.
2013ರಲ್ಲಿ ವಿಶ್ವಬ್ಯಾಂಕ್ ನೆರವಿನೊಂದಿಗೆ ಕರ್ನಾಟಕ ನಗರ ನೀರು ಸರಬರಾಜು ಆಧುನೀಕರಣ ಯೋಜನೆಯಲ್ಲಿ ನಿರಂತರ ನೀರು (24×7) ಸರಬರಾಜು ಯೋಜನೆಯನ್ನು ಡಿ.ಬಿ.ಒ.ಟಿ. ಮಾದರಿಯಲ್ಲಿ ಅನುಷ್ಠಾನಗೊಳಿಸಲು ಅನುಮೋದನೆಯನ್ನು ಸರ್ಕಾರ ನೀಡಿರುತ್ತದೆ. ಕಾಮಗಾರಿ ಅನುಷ್ಠಾನದ ಅವಧಿ 5 ವರ್ಷವಾಗಿದ್ದು, ಕಾರ್ಯಾಚರಣೆ ಮತ್ತು ನಿರ್ವಹಣೆ ಜವಾಬ್ದಾರಿ 7 ವರ್ಷಗಳಾಗಿರುತ್ತದೆ. ಇದನ್ನು ಗುತ್ತಿಗೆದಾರರೇ ನಿರ್ವಹಿಸಬೇಕಾಗಿರುತ್ತದೆ. ಅದನ್ನು ಹಸ್ತಾಂತರಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
Also read: ಮದುವೆ ಎಂಬ ಬಾಂಧವ್ಯ ವ್ಯಕ್ತಿಯನ್ನು ಪರಿಪೂರ್ಣಗಿಸುತ್ತದೆ: ಡಾ. ಮಹೇಶ್ ಜೋಷಿ ಅಭಿಪ್ರಾಯ
ನೀರು ಸರಬರಾಜು ಯೋಜನಾ ಕಾಮಗಾರಿಗಳಾದ ನೀರು ಶುದ್ಧೀಕರಣ ಘಟಕ, ಜಲ ಸಂಗ್ರಹಾಗಾರ ಹಾಗೂ ಪೈಪ್ ಲೈನ್ ಅಳವಡಿಸುವ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಯೋಜನೆಯನ್ನು 2025ರೊಳಗೆ ಅನುಷ್ಠಾನಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ನಗರ ಪ್ರದೇಶಗಳು ದಿನೇ ದಿನೇ ಬೆಳೆಯುತ್ತಿವೆ. ಬಡಾವಣೆಗಳ ನಿರ್ಮಾಣಗಳು ಸಹಾ ಸಾಕಷ್ಟು ಹೆಚ್ಚಾಗಿದೆ. ಈ ಎಲ್ಲದಕ್ಕೂ ನೀರು ಪೂರೈಸುವುದೇ ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ನದಿ ಮೂಲಗಳಿಂದ ನೀರನ್ನು ತಂದು ನಗರ ಪ್ರದೇಶಗಳಿಗೆ ಪೂರೈಸಲಾಗುತ್ತಿದೆ. ನೂರಾರು ಕಿಲೋಮೀಟರ್ ದೂರದಿಂದ ತಂದು ಪೂರೈಸುವ ಶ್ರಮದ ಬಗ್ಗೆ ಜನಕ್ಕೆ ಅರ್ಥವಾಗಬೇಕಿದೆ ಎಂದರು.
ಲೀಟರ್ ಬಾಟಲಿ ನೀರಿಗೆ 20ರೂ. ಕೊಟ್ಟು ಕುಡಿಯುತ್ತಿದ್ದೇವೆ. ಆದರೆ ಮನೆ ತಾರಸಿ ಮೇಲೆ ಬೀಳುವ ಪರಿಶುದ್ಧ ಮಳೆ ನೀರನ್ನು ಸಂಗ್ರಹಿಸಿ ಬಳಕೆ ಮಾಡಲು ನಮ್ಮಿಂದ ಆಗುತ್ತಿಲ್ಲ. ಮಳೆ ನೀರು ಕೋಯ್ಲು (ರೈನ್ ವಾಟರ್ ಹರ್ವೆಸ್ಟಿಂಗ್) ಮಾಡಬೇಕೆಂದು ಸರ್ಕಾರದ ಆದೇಶ ಇದ್ದರೂ ಮನೆ ಕಟ್ಟುವ ಬಹುತೇಕರು ಮಾಡುತ್ತಿಲ್ಲ. ನೀರು ಎಷ್ಟು ಅತ್ಯಮೂಲ್ಯ ಎನ್ನುವ ಜಲಜ್ಞಾನ ಇಲ್ಲದಿರುವುದರಿಂದ ನೀರಿನ ಸದ್ಭಳಕೆ, ಸಂಗ್ರಹಣೆ ಮತ್ತು ಮರುಬಳಕೆಗೆ ನಮ್ಮಿಂದ ಸಾಧ್ಯವಾಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಇದೆಲ್ಲದರ ನಡುವೆಯೂ ನಮ್ಮ ಸರ್ಕಾರ ನಗರ ನಿವಾಸಿಗಳಿಗೆ ನೀರನ್ನು ಒದಗಿಸುವುದು ಒಂದು ಕರ್ತವ್ಯವೆಂದು ತಿಳಿದು ಹಲವಾರು ಯೋಜನೆಗಳನ್ನು ಹಾಗೂ ನೀರು ಸರಬರಾಜು ಮಾಡಲು ಸುಧಾರಣೆಗಳನ್ನು ಹಾಕಿಕೊಂಡು ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕದಲ್ಲಿ ನಗರ ನೀರು ಸರಬರಾಜನ್ನು ಅನುಷ್ಠಾನಗೊಳಿಸಿರುವ ಮತ್ತು ತಂದಿರುವ ಸುಧಾರಣೆಗಳ ಕುರಿತಂತೆ ಹೆಚ್ಚಿನ ಮಾಹಿತಿ ಮತ್ತು ಅನುಭವಗಳನ್ನು ಅಧಿಕಾರಿಗಳು ಇನ್ನು ಮುಂದೆ ಹಂಚಿಕೊಳ್ಳಲಿದ್ದಾರೆ. ನೀರಿನ ಬಳಕೆ, ಸದ್ಭಳಕೆಗೆ ಮಾಡಬೇಕಾಗಿರುವ ಸುಧಾರಣೆಗಳನ್ನು ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.
ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಎಂ.ಟಿ.ರೇಜು, ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಎಂ. ದೀಪಾ, ವರ್ಲ್ಡ್ ಬ್ಯಾಂಕ್ ನ ನೀರು ನಿರ್ವಹಣೆ ವ್ಯವಸ್ಥಾಪಕರಾದ ಸುಮಿಲ ಗುಲ್ಯಾನಿ, ಗುಸ್ಟೂವ ಸಾಲ್ಟೈಲ್, ಒಡಿಶಾ ರಾಜ್ಯದ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತಿವಣ್ಣನ್ ಸೇರಿದಂತೆ ಹಲ ನೀರು ಸುಧಾರಣೆ ತಜ್ಞರು ಉಪಸ್ಥಿತರಿದ್ದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post